ಅಮೆರಿಕದ ಯುದ್ಧಗಳ ರಕ್ತಚರಿತ್ರೆ ಮತ್ತು ಮಾಧ್ಯಮಗಳ ಮೌನ

ಕೃತಿಯೊಂದರೊಳಗಿಂದ...

Update: 2023-06-18 10:07 GMT

ಲೇಖಕ ನಾರ್ಮನ್ ಸೊಲೊಮನ್ ಅವರ ಹೊಸ ಕೃತಿ ""War Made Invisible: How America Hides the Human Toll of Its Military Machine” ಅಮೆರಿಕವು ಯುದ್ಧದ ನೆಪದಲ್ಲಿ ತೋರುವ ಪರಮ ದುರುಳತನಕ್ಕೆ ಅಲ್ಲಿನ ಮಾಧ್ಯಮಗಳು ಹೇಗೆ ಕುರುಡಾಗಿವೆ, ಹೇಗೆ ಅವನ್ನೆಲ್ಲ ಹೇಳದೆ ಅಡಗಿಸುತ್ತವೆ ಎಂಬುದನ್ನು ವಿವರಿಸುತ್ತವೆ. ಆ ಕೃತಿಯ ಒಂದು ಸಣ್ಣ ಭಾಗದ ಅನುವಾದ ಇಲ್ಲಿದೆ.


2022ರ ಮಾರ್ಚ್ 1ರಂದು ನ್ಯೂಯಾರ್ಕ್ ಟೈಮ್ಸ್ ವೆಬ್ ಮುಖಪುಟ ಗಮನಿಸಿದವರಿಗೆ ಮೇಲ್ಭಾಗದಲ್ಲಿ ದೊಡ್ಡ ಅಕ್ಷರಗಳಲ್ಲಿ ಕಂಡದ್ದು, ''ರಾಕೆಟ್ ಬ್ಯಾರೇಜ್ ನಾಗರಿಕರನ್ನು ಕೊಲ್ಲುತ್ತದೆ'' ಎಂಬ ಸಾಲು.
 ಇದು ಬ್ರೇಕಿಂಗ್ ನ್ಯೂಸ್ ಬ್ಯಾನರ್ ಹೆಡ್‌ಲೈನ್‌ನ ಒಂದು ಬಗೆ. ಅದು ಕಳೆದೆರಡು ದಶಕಗಳಲ್ಲಿನ ಅಮೆರಿಕ ಕ್ಷಿಪಣಿ ದಾಳಿಗಳು ಮತ್ತಿತರ ಮಿಲಿಟರಿ ದಾಳಿಗಳನ್ನು ಸೂಚಿಸುತ್ತಿತ್ತು. ಅಫ್ಘಾನಿಸ್ತಾನ, ಪಾಕಿಸ್ತಾನ, ಇರಾಕ್, ಸಿರಿಯಾ ಮತ್ತು ಇತರೆಡೆಗಳಲ್ಲಿನ ನಾಗರಿಕರ ಸಾವುಗಳನ್ನು ಕುರಿತು ಅದು ಹೇಳುತ್ತಿತ್ತು. ಆದರೆ ಆ 'ಭಯೋತ್ಪಾದನೆಯ ಮೇಲಿನ ಯುದ್ಧ' ಹತ್ಯೆಗಳು ದೊಡ್ಡ ಬ್ಯಾನರ್ ಹೆಡ್‌ಲೈನ್ ಆಗುವಂಥವೇನೂ ಆಗಿರಲಿಲ್ಲ. ನಾಗರಿಕರ ಸಾವುಗಳ ಬಗ್ಗೆ ಹಾಗೆ ತ್ವರಿತವಾಗಿ ಪ್ರಕಟಿಸಲು ಟೈಮ್ಸ್ ಅನ್ನು ಪ್ರಚೋದಿಸಿದ್ದು - ಅದರ ಮುದ್ರಣ ಆವೃತ್ತಿಯ ಮೊದಲ ಪುಟದಲ್ಲಿ ವರದಿ ಮಾಡಿದಂತೆ ''ಉಕ್ರೇನ್‌ನ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್‌ನ ಮೇಲಿನ ರಶ್ಯದ ಘಾತುಕ ರಾಕೆಟ್ ದಾಳಿ, ಕ್ರೆಮ್ಲಿನ್ ತನ್ನ ಸಣ್ಣ ನೆರೆ ರಾಜ್ಯಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಯಾವ ಮಟ್ಟಕ್ಕೂ ಹೋಗಲು ಸಿದ್ಧವಾಗಿರುವುದರ ಬಗೆಗಿನ ಮತ್ತೊಂದು ಎಚ್ಚರಿಕೆ.''

ಆನಂತರದ ತಿಂಗಳುಗಳಲ್ಲಿ ಉಕ್ರೇನ್ ಮೇಲಿನ ನ್ಯೂಯಾರ್ಕ್ ಯುದ್ಧ ಕುರಿತ ಸುದ್ದಿಗಳ ಪ್ರಸಾರಕ್ಕೆ ತೊಡಗಿಕೊಂಡ ಸಾವಿರಾರು ಅಮೆರಿಕದ ಮಾಧ್ಯಮ ಸಂಸ್ಥೆಗಳಲ್ಲಿ ನ್ಯೂಯಾರ್ಕ್ ಟೈಮ್ಸ್ ಕೂಡ ಒಂದಾಗಿತ್ತು. ಅಮೆರಿಕದ ಯುದ್ಧದ ಕುರಿತು ವರದಿ ಮಾಡುವಾಗ ಯೋಚಿಸಿಯೂ ಇರದ ರೀತಿಯಲ್ಲಿ ಅವುಗಳ ಈ ಯುದ್ಧ ಸುದ್ದಿಗಳಿರುತ್ತಿದ್ದವು. ಎಪ್ರಿಲ್ ಆರಂಭದಲ್ಲಿ, ರಶ್ಯದ ಆಕ್ರಮಣ ಪ್ರಾರಂಭವಾದ 40 ದಿನಗಳ ನಂತರ ಮತ್ತದೇ ದೊಡ್ಡಕ್ಷರಗಳಲ್ಲಿ ಆಘಾತಗೊಳಿಸುವ ಹೆಡ್‌ಲೈನ್, ಉಕ್ರೇನ್‌ನಲ್ಲಿ ಹತ್ಯಾಕಾಂಡದ ಭಯಾನಕ ಹೆಚ್ಚಳ ಟೈಮ್ಸ್ ಮುದ್ರಣ ಆವೃತ್ತಿಯ ಮೊದಲ ಪುಟದ ಮೇಲ್ಭಾಗವನ್ನು ವ್ಯಾಪಿಸಿತ್ತು. ಎಪ್ರಿಲ್‌ನಲ್ಲಿ, ವೃತ್ತಪತ್ರಿಕೆಯ ಮುಖಪುಟದಲ್ಲಿ 14 ಲೇಖನಗಳು ''ಮುಖ್ಯವಾಗಿ ರಶ್ಯದ ಆಕ್ರಮಣದ ಪರಿಣಾಮವಾಗಿ ಸಂಭವಿಸಿದ ನಾಗರಿಕರ ಸಾವುಗಳ ಕುರಿತಾಗಿದ್ದವು. ಅವೆಲ್ಲವೂ ಪುಟದ ಮೇಲ್ಭಾಗದಲ್ಲಿಯೇ ಪ್ರಕಟವಾಗಿದ್ದವು'' ಎಂಬುದನ್ನು 'ಫೇರ್‌ನೆಸ್ ಆ್ಯಂಡ್ ಅಕ್ಯೂರಸಿ ಇನ್ ರಿಪೋರ್ಟಿಂಗ್'ನ ಸಂಶೋಧಕರು ಗುರುತಿಸಿದ್ದಾರೆ. ಇಂಥದೇ ಇನ್ನೊಂದು ಸಂದರ್ಭದಲ್ಲಿ ಇರಾಕ್ ಮೇಲಿನ ಅಮೆರಿಕ ಆಕ್ರಮಣದ ನಂತರ ಟೈಮ್ಸ್ ಅಮೆರಿಕದ ಸೇನೆಯಿಂದಾದ ನಾಗರಿಕರ ಸಾವಿನ ಬಗ್ಗೆ ತನ್ನ ಮುಖಪುಟದಲ್ಲಿ ಪ್ರಕಟಿಸಿದ್ದು ಒಂದೇ ಒಂದು ಲೇಖನ.

ಯಾವುದೇ ನಿಖರ ಮಾನದಂಡದ ಪ್ರಕಾರ, 2001ರಿಂದ ಅಮೆರಿಕದ ಸೇನೆ ಅನೇಕ ನಾಗರಿಕರಿಗೆ ಕೊಟ್ಟ ಭಯಾನಕ ಉಪದ್ರವ ಉಕ್ರೇನ್‌ನಲ್ಲಿ ರಶ್ಯ ಮಾಡುತ್ತಿರುವುದಕ್ಕಿಂತ ಯಾವ ಲೆಕ್ಕದಲ್ಲಿಯೂ ಕಡಿಮೆಯಿರಲಿಲ್ಲ. ಆದರೆ ಅಮೆರಿಕದ ಮಾಧ್ಯಮಗಳು ಮಾತ್ರ ಅಮೆರಿಕವು ನಡೆಸಿದ ಹತ್ಯೆಗಿಂತ ರಶ್ಯದಿಂದಾದ ಹತ್ಯೆಗಳ ಬಗ್ಗೆ ಅತಿ ವೇಗದಲ್ಲಿ ಮತ್ತು ದೊಡ್ಡ ಮಟ್ಟದಲ್ಲಿ ತೀವ್ರ ಆಕ್ರೋಶಭರಿತ ಸುದ್ದಿ ಪ್ರಸಾರ ಮಾಡುತ್ತಿದ್ದವು. ಎಲ್ಲೋ ಅಪರೂಪಕ್ಕೊಮ್ಮೆ ಪ್ರಮುಖ ಅಮೆರಿಕ ಸುದ್ದಿವಾಹಿನಿಯು ಅಮೆರಿಕದ ಪಡೆಗಳಿಂದ ಸಂಭವಿಸಿದ ನಾಗರಿಕರ ಸಾವುಗಳ ಆಳವಾದ ವರದಿಗಳನ್ನು ಪ್ರಕಟಿಸಿದಾಗಲೂ, ಅಲ್ಲಿನ ವಿವರಗಳು ಅವಲೋಕನದ ಹಾಗೆ ಇರುತ್ತಿದ್ದವು ಮತ್ತು ಘಟನೆ ನಡೆದ ಬಹಳ ಸಮಯದ ಬಳಿಕ ಕಾಣಿಸಿಕೊಳ್ಳುತ್ತಿದ್ದವು. ಅವು ರಾಜಕೀಯವಾಗಿ ಅಂಥ ಪರಿಣಾಮವನ್ನೇನೂ ಬೀರುವಂಥವಾಗಿರುತ್ತಿರಲಿಲ್ಲ. ರಶ್ಯ ಎಷ್ಟೇ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರೂ, ಉಕ್ರೇನ್‌ನಲ್ಲಿನ ಅದರ ದೊಡ್ಡ ಪ್ರಮಾಣದ ಆಕ್ರಮಣ ಮಾತ್ರ ಅನಾಗರಿಕವಾಗಿದೆ. ಅಫ್ಘಾನಿಸ್ತಾನ ಮತ್ತು ಇರಾಕ್‌ನಲ್ಲಿನ ಅಮೆರಿಕ ಯುದ್ಧದ ಬಗ್ಗೆಯೂ ಇದನ್ನೇ ಹೇಳಬಹುದು. ಆದರೆ ಅಮೆರಿಕದ ಸಮೂಹ ಮಾಧ್ಯಮಗಳಲ್ಲಿ ಅದು ಬಹುತೇಕ ನಿಷೇಧಿತ ಸತ್ಯವಾಗಿದೆ. ಅಮೆರಿಕ ಮತ್ತು ರಶ್ಯ ಎರಡೂ ಅಂತರ್‌ರಾಷ್ಟ್ರೀಯ ಕಾನೂನನ್ನು ನಿರ್ಲಜ್ಜವಾಗಿ ಉಲ್ಲಂಘಿಸಿವೆ. ಗಡಿಗಳನ್ನು ದಾಟಿವೆ ಮತ್ತು ಬೃಹತ್ ಮಾರಕ ಶಕ್ತಿಯನ್ನಿಟ್ಟುಕೊಂಡು ಕ್ರೌರ್ಯ ಮೆರೆದಿವೆ. ತಾತ್ವಿಕವಾಗಿ ಈ ಪ್ರತಿಯೊಂದೂ ಅತ್ಯಂತ ಖಂಡನೀಯವಾದವುಗಳೇ. ಆದರೆ ಅಮೆರಿಕದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಹೊರತಾಗಿಯೂ, ಕೆಲವೇ ಕೆಲವು ಖ್ಯಾತ ಪತ್ರಕರ್ತರು ಮತ್ತು ವೃತ್ತಿಯಲ್ಲಿ ಅವರ ಸಹವರ್ತಿಗಳಾಗಿರುವವರು ಮಾತ್ರವೇ ವಾಶಿಂಗ್ಟನ್‌ನ ಅಧಿಕೃತ ಯುದ್ಧ ನಿರೂಪಣೆಗಳಿಗೆ ಹೊರತಾದ ವಾಸ್ತವವನ್ನು ಜನರೆದುರು ಇಡಬಲ್ಲರು.

ಪತ್ರಿಕೋದ್ಯಮದಂತೆಯೇ ಮರೆಮಾಚಬಲ್ಲ ರಾಷ್ಟ್ರೀಯತೆ ಕೂಡ ಯದ್ಧವನ್ನು ಕತ್ತಲೆ-ಬೆಳಕಿನಲ್ಲಿಡುತ್ತದೆ. ಆದ್ದರಿಂದ, ರಶ್ಯ ಉಕ್ರೇನ್ ಮೇಲೆ ಆಕ್ರಮಣ ಮಾಡಿದಾಗ ಮತ್ತು ಭಯಭೀತಗೊಳಿಸಲು, ಕೊಲ್ಲಲು, ದಮನಿಸಲು ಮುಂದಾದಾಗ ಅಮೆರಿಕದ ಮಾಧ್ಯಮಗಳು ಟಿವಿ, ರೇಡಿಯೊ, ಮುದ್ರಣ ಮತ್ತು ಆನ್‌ಲೈನ್ ವಾಹಿನಿಗಳ ಮೂಲಕ ತೀವ್ರ ಕಾಳಜಿಯುಳ್ಳವುಗಳಂತೆ ಕಟುವಾದ ವರದಿ ಮಾಡಿದವು. ಆದರೆ ಹಿಂದಿನ ಎರಡು ದಶಕಗಳಲ್ಲಿ ಅಮೆರಿಕದ ಕ್ಷಿಪಣಿಗಳು ಮತ್ತು ಬಾಂಬುಗಳು ಜನರನ್ನು ಕೊಂದುಹಾಕಿದಾಗ ಇದೇ ಅಮೆರಿಕದ ಮಾಧ್ಯಮಗಳಲ್ಲಿ ಅವುಗಳ ಬಗ್ಗೆ ಬಲು ಮೆಲ್ಲಗೆ ಮತ್ತು ಬಹಳ ತಡವಾಗಿ ಹೇಳಲಾಯಿತು. ಈ ಎರಡೂ ಸಂದರ್ಭಗಳ ವರದಿಗಾರಿಕೆಯ ನಡುವಿನ ಅಂತರವನ್ನು ಅವುಗಳ ವ್ಯಾಪ್ತಿ ಮತ್ತು ಪ್ರಸ್ತುತ ಪಡಿಸಿದ ರೀತಿಯಿಂದ ನೋಡಿಕೊಂಡರೆ, ವಾಶಿಂಗ್ಟನ್‌ನಲ್ಲಿ ನೆಲೆಗೊಂಡಿರುವ ಯುದ್ಧೋತ್ಸಾಹಿಗಳ ಅಜೆಂಡ ಏನೆಂಬುದು ಬಿಂಬಿತವಾಗುತ್ತದೆ.

 (ಕೃಪೆ: countercurrents.org)

Similar News