ಸೌಜನ್ಯಾ ಪ್ರಕರಣ ಮರು ತನಿಖೆಯಾಗಲಿ
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಒಂದು ದಶಕದ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯನ್ನು ನಡುಗಿಸಿದ್ದ ಸೌಜನ್ಯಾ ಪ್ರಕರಣ ಮತ್ತೆ ಸುದ್ದಿಯಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಉಜಿರೆಯ ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಗುರುತಿಸಲ್ಪಟ್ಟಿದ್ದ ಸಂತೋಷ್ ರಾವ್‌ರನ್ನು ಸಿಬಿಐ ನ್ಯಾಯಾಲಯ ದೋಷಮುಕ್ತಗೊಳಿಸಿದೆ. ಸಂತೋಷ್ ರಾವ್ ಬಂಧನದಿಂದ ಸೌಜನ್ಯಾಳಿಗೆ ನ್ಯಾಯ ಸಿಕ್ಕಿದೆ ಎಂದು ಕರಾವಳಿ ಯಾವತ್ತೂ ಪೂರ್ಣ ಪ್ರಮಾಣದಲ್ಲಿ ನಂಬಿರಲಿಲ್ಲ. ಬದಲಿಗೆ ಆತನನ್ನು ಆರೋಪಿಯಾಗಿಸಿದ ತನಿಖಾ ಕ್ರಮವನ್ನೇ ವಿವಿಧ ಸಂಘಟನೆಗಳು ಕರಾವಳಿಯಲ್ಲಿ ಪ್ರಶ್ನಿಸುತ್ತಾ ಬಂದಿದ್ದವು. ಈ ಪ್ರಕರಣದ ತನಿಖೆ ನಿಷ್ಪಕ್ಷವಾಗಿ ನಡೆದಿಲ್ಲ ಎಂದು ಅವುಗಳು ಆರೋಪಿಸಿದ್ದವು. ಇದೀಗ ಅವರ ಅನುಮಾನ, ಆರೋಪಗಳನ್ನು ಸಿಬಿಐ ನ್ಯಾಯಾಲಯ ಎತ್ತಿ ಹಿಡಿದಿದೆ.
ದಕ್ಷಿಣ ಕನ್ನಡ ಜಿಲ್ಲೆ ಕೋಮುಗಲಭೆಗಳಿಗೆ ಸಂಬಂಧಿಸಿ ತುಂಬಾ ಸೂಕ್ಷ್ಮ ಪ್ರದೇಶ. ಇಲ್ಲಿ ಯಾವುದೇ ಕೊಲೆಗಳು ನಡೆದಾಗ ಕೊಲೆಯಾದವನ ಮತ್ತು ಕೊಲೆ ಆರೋಪಿಯ ಹೆಸರುಗಳು ಮಹತ್ವವನ್ನು ಪಡೆಯುತ್ತವೆ. ಕೊಲೆಯಾದವನು ಮತ್ತು ಕೊಲೆ ಆರೋಪಿಗಳ ಧರ್ಮ ಬೇರೆ ಬೇರೆ ಆಗಿದ್ದರೆ ಇಡೀ ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಕಿ ಬೀಳುವಂತಹ ಸ್ಥಿತಿ ನಿರ್ಮಾಣವಾಗುತ್ತದೆ. ನ್ಯಾಯಕ್ಕಾಗಿ ಸಂತ್ರಸ್ತರ ಪರವಾಗಿ ನಿರ್ದಿಷ್ಟ ರಾಜಕೀಯ ಪಕ್ಷವೊಂದು ಬೀದಿಗಿಳಿಯುತ್ತದೆ. ಆ ಪಕ್ಷದ ಉದ್ದೇಶ ಸಂತ್ರಸ್ತರ ಹೆಸರಲ್ಲಿ ಸಮಾಜದ ನೆಮ್ಮದಿಯನ್ನು ಕೆಡಿಸುವುದೇ ಹೊರತು ಸಂತ್ರಸ್ತರಿಗೆ ನ್ಯಾಯ ನೀಡುವುದಲ್ಲ. ಸಂತ್ರಸ್ತರು ಮತ್ತು ಆರೋಪಿಗಳು ಒಂದೇ ಧರ್ಮೀಯರಾಗಿದ್ದರೆ ಪತ್ರಿಕೆಗಳ ಒಳಪುಟಗಳಲ್ಲಿ ಸುದ್ದಿಗಳಾಗಿ ಮುಗಿದು ಹೋಗುತ್ತವೆ. ದುರದೃಷ್ಟಕ್ಕೆ ಸೌಜನ್ಯಳ ಕೊಲೆಗಾರ ಇತರ ಧರ್ಮಕ್ಕೆ ಸೇರಿದವನಲ್ಲವಾದುದರಿಂದ ಆಕೆಗೆ ನ್ಯಾಯ ದೊರಕುವಂತೆ ಒತ್ತಾಯಿಸಲು ಯಾವ ಪಕ್ಷಗಳೂ ವಿಶೇಷ ಆಸಕ್ತಿ ವಹಿಸಲಿಲ್ಲ. ಆದರೆ ಕರಾವಳಿಯ ಸಾಮಾಜಿಕ ಸಂಘಟನೆಗಳು ಮಾತ್ರ ಸೌಜನ್ಯಾಳ ಪರವಾಗಿ ಬಲವಾಗಿ ನಿಂತಿದ್ದವು.
ಸೌಜನ್ಯಾ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಆರಂಭದಲ್ಲಿ ಕೋಮುಬಣ್ಣ ನೀಡುವ ಪ್ರಯತ್ನ ನಡೆದಿತ್ತು. ಆದರೆ ಪ್ರಕರಣದಲ್ಲಿ ಕೆಲವು ಪ್ರತಿಷ್ಠಿತರ ಹೆಸರು ಕೇಳಿ ಬರುತ್ತಿದ್ದಂತೆಯೇ ಈ ಪ್ರಯತ್ನಕ್ಕೆ ಹಿನ್ನಡೆಯಾಯಿತು. ಆವರೆಗೆ ಸೌಜನ್ಯಾಳಿಗೆ ನ್ಯಾಯ ಬೇಕು ಎಂದು ಬೀದಿಗಿಳಿದಿದ್ದ ಬಿಜೆಪಿ ಮತ್ತು ಅದರ ಪರಿವಾರ ಕೂಡ ಪ್ರಕರಣದ ಬಗ್ಗೆ ಆಸಕ್ತಿಯನ್ನು ಕಳೆದುಕೊಂಡಿತು. ತನಿಖೆ ನಡೆಯುತ್ತಾ ಹೋದಂತೆಯೇ ಪ್ರಕರಣ ತಿರುವನ್ನು ಪಡೆದುಕೊಂಡಿತು. ಆರೋಪಿಗಳನ್ನು ಗುರುತಿಸಬೇಕಾದವರು ಆರೋಪಿಗಳನ್ನು ರಕ್ಷಿಸುವ ಕೆಲಸದಲ್ಲಿ ತೊಡಗಿದ್ದಾರೆ ಎಂಬ ಆರೋಪಗಳು ಕೇಳಿ ಬಂದವು. ಆರಂಭದಲ್ಲಿ ಕೇಳಿ ಬಂದ ಪ್ರತಿಷ್ಠಿತರ ಹೆಸರುಗಳು ನಿಧಾನಕ್ಕೆ ಮರೆಗೆ ಸರಿದವು. ಅಂತಿಮವಾಗಿ ಸಂತೋಷ್ ರಾವ್ ಎಂಬ ಮಾನಸಿಕ ಅಸ್ವಸ್ಥನನ್ನು ಬಂಧಿಸಿ ಸೌಜನ್ಯ ಪ್ರಕರಣದ ಆರೋಪಗಳನ್ನು ಆತನ ತಲೆಗೆ ಕಟ್ಟಲಾಯಿತು. ಇದೀಗ 11 ವರ್ಷಗಳ ಬಳಿಕ ಸಿಬಿಐ ವಿಶೇಷ ನ್ಯಾಯಾಲಯವೇ ಸಂತೋಷ್ ರಾವ್‌ರನ್ನು ನಿರ್ದೋಷಿ ಎಂದು ಘೋಷಿಸಿದೆ. ಸಂತೋಷ್ ರಾವ್ ನಿರ್ದೋಷಿಯಾಗಿದ್ದರೆ ಸೌಜನ್ಯಾ ಎನ್ನುವ ತರುಣಿಯನ್ನು ಅತ್ಯಾಚಾರಗೈದು ಕೊಲೆಗೈದವರಾರು? ಎನ್ನುವ ಪ್ರಶ್ನೆ ಮತ್ತೆ ಮಹತ್ವವನ್ನು ಪಡೆದುಕೊಂಡಿದೆ.
ಒಂದೋ, ಸೌಜನ್ಯಾ ಅವರ ಮೇಲೆ ಅತ್ಯಾಚಾರವೇ ನಡೆದಿಲ್ಲ, ಆಕೆಯನ್ನು ಯಾರೂ ಕೊಲೆ ಮಾಡಿಲ್ಲ ಎಂದು ನ್ಯಾಯಾಲಯ ಘೋಷಿಸಬೇಕಾಗುತ್ತದೆ. ಅಥವಾ ಸೌಜನ್ಯಾ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಬೇಕಾಗುತ್ತದೆ. ಸಿಬಿಐ ವಿಶೇಷ ನ್ಯಾಯಾಲಯ ಆರೋಪಿಯನ್ನು ನಿರ್ದೋಷಿ ಎಂದಾಗ, ಕುಟುಂಬಸ್ಥರು ನಿರಾಶರಾಗಬೇಕು. ಆದರೆ ಇಲ್ಲಿ ಹಾಗಾಗಿಲ್ಲ. ''ಈ ತೀರ್ಪು ನಮಗೆ ನಿರೀಕ್ಷಿತ'' ಎಂದು ಸಂತ್ರಸ್ತೆಯ ತಾಯಿಯೇ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ''ಸಿಬಿಐ ನ್ಯಾಯಾಲಯದ ತೀರ್ಪು ಸರಿಯಾಗಿಯೇ ಬಂದಿದೆ. ನಿರಪರಾಧಿಯಾಗಿದ್ದ ವ್ಯಕ್ತಿಯನ್ನು ನ್ಯಾಯಾಲಯ ಬಿಡುಗಡೆ ಮಾಡಿದೆ'' ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸೌಜನ್ಯಾ ಅವರ ಕುಟುಂಬಸ್ಥರಲ್ಲೊಬ್ಬರಾದ ವಿಠಲ ಗೌಡ ಎಂಬವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸುತ್ತಾ ''ಸಿಬಿಐ ನ್ಯಾಯಾಲಯದ ತೀರ್ಪು ನಮಗೆ ಮೊದಲ ಗೆಲುವಾಗಿದೆ. ನಾವು ಆರಂಭದಲ್ಲೇ ಸಂತೋಷ್ ರಾವ್ ಕೊಲೆಗಾರರಲ್ಲ ಎಂಬ ಅನುಮಾನ ವ್ಯಕ್ತಪಡಿಸಿದ್ದೆವು. ಅದು ಈಗ ಸಿಬಿಐ ನ್ಯಾಯಾಲಯದಿಂದ ದೃಢಪಟ್ಟಿದೆ'' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೊಲೆ ಆರೋಪಿಯೆಂದು ಗುರುತಿಸಲ್ಪಟ್ಟಿದ್ದ ಸಂತೋಷ್ ರಾವ್‌ರ ಬಿಡುಗಡೆಯನ್ನು ಸಂತ್ರಸ್ತರ ಕುಟುಂಬವೇ ಹೃತ್ಪೂರ್ವಕವಾಗಿ ಸ್ವಾಗತಿಸುತ್ತಿದೆ ಎಂದ ಮೇಲೆ, ತನಿಖೆಯಲ್ಲಿ ಆಗಿರುವ ಲೋಪ ಅದೆಷ್ಟು ದೊಡ್ಡದಿರಬೇಕು ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.
ತನಿಖೆಯ ಸಂದರ್ಭದಲ್ಲಿ ಹಲವು ಪ್ರಮುಖ ಸಾಕ್ಷಿಗಳ ಹೇಳಿಕೆಗಳನ್ನು, ಸಾಕ್ಷಗಳನ್ನು ಕೈ ಬಿಡಲಾಗಿದೆ ಎನ್ನುವ ಆರೋಪಗಳು ಆರಂಭದಲ್ಲೇ ಕೇಳಿ ಬಂದಿದ್ದವು. ಸೌಜನ್ಯಾ ಕೊಲೆ ಆರೋಪಿ ಸಂತೋಷ್ ರಾವ್‌ರನ್ನು ಹಿಡಿದುಕೊಟ್ಟ ವ್ಯಕ್ತಿಗಳಲ್ಲೇ ನಿಜವಾದ ಅಪರಾಧಿಗಳು ಸೇರಿಕೊಂಡಿದ್ದಾರೆ ಎನ್ನುವ ವದಂತಿ ಈಗಲೂ ಜೀವಂತವಿದೆ. ಡಿಎನ್‌ಎ ಸಾಕ್ಷವನ್ನು ತನಿಖಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ ತೆಗೆದುಕೊಂಡಿಲ್ಲ ಎನ್ನಲಾಗುತ್ತಿದೆ. ತನಿಖಾಧಿಕಾರಿಗಳು ಇನ್ಯಾರನ್ನೋ ರಕ್ಷಿಸುವ ಪ್ರಯತ್ನದಲ್ಲಿ ಸಂತೋಷ್ ರಾವ್‌ರನ್ನು ಉದ್ದೇಶಪೂರ್ವಕವಾಗಿ ಸಿಲುಕಿಸಿದ್ದಾರೆ ಎಂದು ಕೆಲವು ಸಂಘಟನೆಗಳು ದೂರಿವೆ. ಇದೀಗ ಸಿಬಿಐ ನ್ಯಾಯಾಲಯದ ತೀರ್ಪು ಅವುಗಳಿಗೆ ಪುಷ್ಟಿ ನೀಡಿವೆ. ತನಿಖೆಯನ್ನು ದಾರಿ ತಪ್ಪಿಸಲಾಗಿದೆ, ಕರಾವಳಿಯ ಪ್ರತಿಷ್ಠಿತ ವ್ಯಕ್ತಿಗಳನ್ನು ರಕ್ಷಿಸುವ ಪ್ರಯತ್ನ ನಡೆಸಿದೆ ಎನ್ನುವ ಆರೋಪ ಒಂದೆಡೆ ಇದ್ದರೆ, ಸೌಜನ್ಯಾ ಪ್ರಕರಣವನ್ನು ಬಳಸಿಕೊಂಡು, ಪ್ರತಿಷ್ಠಿತ ವ್ಯಕ್ತಿಗಳ ಮಾನಹರಣ ಮಾಡುವ ಪ್ರಯತ್ನ ನಡೆಯುತ್ತಿದೆ ಎನ್ನುವ ಆರೋಪಗಳೂ ಇವೆ. ಸಂತೋಷ್ ರಾವ್ ನಿರ್ದೋಷಿ ಎಂದು ಕೋರ್ಟ್ ಹೇಳಿರುವುದರಿಂದ, ಇದೀಗ ಜನರು ಮತ್ತೆ ನಿರ್ದಿಷ್ಟ ಪ್ರತಿಷ್ಠಿತ ವ್ಯಕ್ತಿಗಳ ಬಗ್ಗೆ ಅನುಮಾನ ಪಡುವಂತಾಗಿದೆ. ಈ ಪ್ರಕರಣದಲ್ಲಿ ಯಾವುದೇ ಅಮಾಯಕರಿಗೆ ಶಿಕ್ಷೆಯಾಗದಂತೆ ನೋಡಿಕೊಳ್ಳುವುದು ಅತ್ಯಗತ್ಯವಾಗಿದೆ. ಈ ಕಾರಣದಿಂದ ಮರು ತನಿಖೆ ನಡೆಯಬೇಕು. ಸೌಜನ್ಯಾ ಪ್ರಕರಣದ ಹೆಸರಿನಲ್ಲಿ ಕೋಮುಗಲಭೆಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ ಎನ್ನುವ ಒಂದೇ ಕಾರಣಕ್ಕಾಗಿ ಸೌಜನ್ಯಾಳಿಗೆ ನ್ಯಾಯ ಸಿಗದೇ ಇರಬಾರದು. ಈ ಹಿಂದೆ ದೇಶವನ್ನೇ ಬೆಚ್ಚಿ ಬಿಳಿಸಿದ 'ಸಯನೈಡ್ ಮೋಹನ' ಪ್ರಕರಣದಲ್ಲಿ ಆರೋಪಿ ಮೋಹನ ಪ್ರಕರಣವನ್ನು ಹಾದಿ ತಪ್ಪಿಸಲು ಬಹಳಷ್ಟು ಪ್ರಯತ್ನ ನಡೆಸಿದ್ದ. 20ಕ್ಕೂ ಅಧಿಕ ಹೆಣ್ಣು ಮಕ್ಕಳು ಈತನಿಂದ ಬರ್ಬರವಾಗಿ ಹತ್ಯೆಗೀಡಾಗಿದ್ದರು. ತರುಣಿಯರು ಒಬ್ಬೊಬ್ಬರಾಗಿ ನಾಪತ್ತೆಯಾಗುತ್ತಿರುವಾಗ ಇದನ್ನು 'ಲವ್ ಜಿಹಾದ್' ಎಂದು ಸಂಶಯಿಸಲಾಗಿತ್ತು. ತನಿಖೆ ಆಳಕ್ಕೆ ಹೋದಂತೆಯೇ ಸಯನೈಡ್ ಮೋಹನನ ಹೆಸರು ಮುನ್ನೆಲೆಗೆ ಬಂತು. ಸಯನೈಡ್ ಮೋಹನ ಈ ಸಮಾಜದ ಪ್ರತಿಷ್ಠಿತ ವ್ಯಕ್ತಿಯೇ ಆಗಿದ್ದರೆ ತನಿಖೆ ಸುಗಮವಾಗಿ ನಡೆಯುತ್ತಿತ್ತೆ? ಸೌಜನ್ಯಾ ಪ್ರಕರಣ ಹಿಡಿದ ಹಾದಿಯನ್ನು ಗಮನಿಸಿದರೆ ಉತ್ತರ ಸುಲಭವಿಲ್ಲ.
ಈ ಪ್ರಕರಣದಲ್ಲಿ ಸಂತೋಷ್ ರಾವ್‌ಗೂ ನ್ಯಾಯ ಸಿಗಬೇಕಾಗಿದೆ. ತನ್ನದಲ್ಲದ ತಪ್ಪಿಗೆ ಆತ ಸುಮಾರು ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸಿದ್ದಾರೆೆ. ಬರ್ಬರ ಅತ್ಯಾಚಾರ, ಕೊಲೆ ಪ್ರಕರಣದ ಕಳಂಕವನ್ನು ಅಂಟಿಸಿಕೊಂಡು ಸಮಾಜದಿಂದ ಬಹಿಷ್ಕೃತರಾಗಿದ್ದಾರೆ. ಮರು ತನಿಖೆ ನಡೆಸಿ ನಿಜವಾದ ಆರೋಪಿಗಳನ್ನು ಬಂಧಿಸಿದಾಗ ಮಾತ್ರ ಸಂತೋಷ್ ರಾವ್‌ಗೆ ಪೂರ್ಣ ಪ್ರಮಾಣದ ನ್ಯಾಯ ಸಿಗಲು ಸಾಧ್ಯ. ಸೌಜನ್ಯಾ ಪ್ರಕರಣದಲ್ಲಿ ಯಾರೂ ಆರೋಪಿಗಳೇ ಅಲ್ಲ ಎನ್ನುವುದು ದಕ್ಷಿಣ ಕನ್ನಡ ಜಿಲ್ಲೆಗೆ ಬಹುದೊಡ್ಡ ಅವಮಾನವಾಗಿದೆ. ಮಾತು ಮಾತಿಗೆ ಲವ್‌ಜಿಹಾದ್, ಹಿಂದೂ ಹೆಣ್ಣು ಮಕ್ಕಳ ಮಾನ, ಪ್ರಾಣ ಅಪಾಯದಲ್ಲಿದೆ ಎಂದು ಸಾರ್ವಜನಿಕ ವೇದಿಕೆಯಲ್ಲಿ ಕೂಗಾಡುವವರು ಪೈಶಾಚಿಕವಾಗಿ ಅತ್ಯಾಚಾರಕ್ಕೀಡಾಗಿ ಕೊಲೆಯಾದ ಹೆಣ್ಣು ಮಗಳು ಸೌಜನ್ಯಾ ಕೂಡ ಹಿಂದೂ ಧರ್ಮಕ್ಕೆ ಸೇರಿದ್ದಳು ಎನ್ನುವುದನ್ನು ಈ ಸಂದರ್ಭದಲ್ಲಿ ಮರೆಯಬಾರದು.