ಸಿಬಿಐ ದುರ್ಬಳಕೆಗೆ ಪ್ರತಿರೋಧ

Update: 2023-06-20 04:17 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಅಂದರೆ ಎನ್‌ಡಿಎ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಬಿಜೆಪಿಯೇತರ ರಾಜ್ಯ ಸರಕಾರಗಳನ್ನು ಅಸ್ಥಿರಗೊಳಿಸಲು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ)ಯನ್ನು ದುರುಪಯೋಗ ಮಾಡಿಕೊಳ್ಳುತ್ತಾ ಬಂದಿದೆ. ಈಗ ತಮಿಳುನಾಡು ಕೂಡಾ ಈ ಆರೋಪ ಮಾಡುತ್ತಿದೆ. ಇತ್ತೀಚೆಗೆ ಜಾರಿ ನಿರ್ದೇಶನಾಲಯ ತಮಿಳುನಾಡಿನ ಇಂಧನ ಸಚಿವ ವಿ. ಸೆಂಥಿಲ್‌ರನ್ನು ಬಂಧಿಸಿದೆ. ಇದರ ಬೆನ್ನಲ್ಲೇ ತಮಿಳುನಾಡಿನ ಡಿಎಂಕೆ ಸರಕಾರ ಸಿಬಿಐಗೆ ನಿಷೇಧ ಹೇರಿದೆ. ಸಿಬಿಐಗೆ ನಿರ್ಬಂಧ ಹೇರಿದ ಹತ್ತನೇ ರಾಜ್ಯ ತಮಿಳುನಾಡು ಎಂಬುದು ಗಮನಾರ್ಹ ಸಂಗತಿಯಾಗಿದೆ. ಹೇಗಾದರೂ ಮಾಡಿ ಈ ತಮಿಳು ರಾಜ್ಯವನ್ನು ವಶಪಡಿಸಿಕೊಂಡು ಇಡೀ ದಕ್ಷಿಣ ಭಾರತದಲ್ಲಿ ಪ್ರಾಬಲ್ಯ ಸಾಧಿಸಬೇಕೆಂಬುದು ಸಂಘ ಪರಿವಾರದ ಬಹುದಿನದ ಕನಸು. ಬಿಜೆಪಿ ಸಂಘ ಪರಿವಾರದ ಅಂಗ. ಒಕ್ಕೂಟ ಸರಕಾರದ ಸೂತ್ರ ಅದರ ಕೈಯಲ್ಲಿ ಇರುವುದರಿಂದ ಪ್ರತಿಪಕ್ಷ ಸರಕಾರಗಳನ್ನು ಅಸ್ಥಿರ ಗೊಳಿಸುತ್ತಾ ಬಂದಿದೆ. ಹೀಗಾಗಿಯೇ ಈಗ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಸಿಬಿಐ ಪ್ರವೇಶವನ್ನು ನಿರ್ಬಂಧಿಸಿದ್ದಾರೆ.

ಬಿಜೆಪಿ ಇಡೀ ಭಾರತವನ್ನು ವಶಪಡಿಸಿಕೊಂಡು ಪ್ರತಿಪಕ್ಷಗಳಿಲ್ಲದ ಪ್ರಜಾಪ್ರಭುತ್ವ ಹೆಸರಿನ ಆಡಳಿತ ವ್ಯವಸ್ಥೆಯನ್ನು ಹೇರಲು ಹೊರಟಿದೆ. ಹಾಗಾಗಿಯೇ ಯಾವುದೇ ರಾಜ್ಯದಲ್ಲಿ ಚುನಾವಣಾ ಫಲಿತಾಂಶ ಅನುಕೂಲಕರವಾಗಿರದಿದ್ದರೆ ಆ ರಾಜ್ಯಗಳಲ್ಲಿ ಆಪರೇಶನ್ ಕಮಲದ ಮೂಲಕ, ಇಲ್ಲವೇ ಚುನಾಯಿತ ಶಾಸಕರಿಗೆ ಹೆದರಿಸಿ, ಬೆದರಿಸಿ, ಕೇಂದ್ರೀಯ ತನಿಖಾ ಸಂಸ್ಥೆಗಳಾದ ಸಿಬಿಐ, ಜಾರಿ ನಿರ್ದೇಶನಾಲಯ, ಎನ್‌ಐಎ ಮುಂತಾದವುಗಳ ಮೂಲಕ ಆರ್ಥಿಕ ಅಪರಾಧದ ನೆಪ ತೋರಿಸಿ ದಾಳಿ ಮಾಡುವುದು ಸಾಮಾನ್ಯವಾಗಿದೆ. ಇಂತಹ ಅಪರಾಧ ಆರೋಪದ ಶಾಸಕರು ಬಿಜೆಪಿ ಸೇರಿದರೆ ದೋಷಮುಕ್ತರಾಗುತ್ತಾರೆ. ಇಲ್ಲದಿದ್ದರೆ ಅವರು ಜೈಲಿನಲ್ಲಿ ಕೊಳೆಯಬೇಕಾಗುತ್ತದೆ. ಇದಕ್ಕೆ ಮಧ್ಯಪ್ರದೇಶ, ಮಹಾರಾಷ್ಟ್ರ, ಕರ್ನಾಟಕ ಹೀಗೆ ನೂರಾರು ಉದಾಹರಣೆಗಳಿವೆ. ಕರ್ನಾಟಕದಲ್ಲಿ ಬಹುಮತ ಇಲ್ಲದಿದ್ದರೂ ಬಿಜೆಪಿ ಹೇಗೆ ಅಧಿಕಾರಕ್ಕೆ ಬಂದಿತ್ತು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ.

ಮೋದಿ ನೇತೃತ್ವದ ಬಿಜೆಪಿ ಸರಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದರಿಂದಲೇ ತಮಿಳುನಾಡು ಮಾತ್ರವಲ್ಲ ಪಶ್ಚಿಮ ಬಂಗಾಳ, ಬಿಹಾರ, ಕೇರಳ, ಮೇಘಾಲಯ, ಮಿಜೋರಾಂ, ಪಂಜಾಬ್, ರಾಜಸ್ಥಾನ, ತೆಲಂಗಾಣ ಹಾಗೂ ಛತ್ತೀಸ್‌ಗಡ ರಾಜ್ಯಗಳು ಸಿಬಿಐ ತನಿಖೆಗೆ ಸಮ್ಮತಿ ನೀಡಿಲ್ಲ. ಯಾವುದೇ ರಾಜ್ಯದಲ್ಲಿ ಸಿಬಿಐ ಏಕಾಏಕಿ ಪ್ರವೇಶಿಸಿ ತನಿಖೆ ಮಾಡಲು ಅವಕಾಶವಿಲ್ಲ. ದಿಲ್ಲಿ ವಿಶೇಷ ಪೊಲೀಸ್ ಕಾಯ್ದೆ-1946ರ ಅಡಿಯಲ್ಲಿ ಸಿಬಿಐ ಸ್ಥಾಪನೆಯಾಗಿದೆ. ಯಾವುದೇ ಪ್ರಕರಣದ ತನಿಖೆಗೆ ಮುನ್ನ ಸಿಬಿಐ ಸಂಬಂಧಿಸಿದ ರಾಜ್ಯ ಸರಕಾರಗಳ ಅನುಮತಿ ಪಡೆಯಬೇಕಾಗುತ್ತದೆ. ಸಾಮಾನ್ಯವಾಗಿ ರಾಜ್ಯ ಸರಕಾರಗಳು ಸಿಬಿಐ ತನಿಖೆಗೆ ಒಪ್ಪಿಗೆ ನೀಡುತ್ತವೆ. ಈ ಒಪ್ಪಿಗೆ ಪಡೆದರೆ ಮಾತ್ರ ಸಿಬಿಐ ಯಾವುದೇ ರಾಜ್ಯದಲ್ಲಿ ಪ್ರವೇಶಿಸಿ ತನಿಖೆ ಮಾಡಬಹುದಾಗಿದೆ. ಆದರೆ ಯಾವುದೇ ರಾಜ್ಯ ಒಪ್ಪಿಗೆ ನೀಡದಿದ್ದರೆ ಆಯಾ ರಾಜ್ಯ ಸರಕಾರದ ವಿಶೇಷ ಅನುಮತಿ ಪಡೆಯಲು ದುಂಬಾಲು ಬೀಳಬೇಕಾಗುತ್ತದೆ. ಅದು ಒಂದು ಸಲದ ತನಿಖೆಗೆ ಮಾತ್ರ ಸೀಮಿತವಾಗಿರುತ್ತದೆ. ಆದರೆ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಪ್ರತಿಪಕ್ಷಗಳು ಅಧಿಕಾರದಲ್ಲಿ ಇರುವ ರಾಜ್ಯ ಸರಕಾರಗಳನ್ನು ಅಸ್ಥಿರಗೊಳಿಸಲು ಸಿಬಿಐ ದುರುಪಯೋಗವಾಗುತ್ತಿರುವುದು ತಮಿಳುನಾಡಿನ ಪ್ರಕರಣದಿಂದ ಮತ್ತೆ ಸಾಬೀತಾಗಿದೆ.

 ತಮಿಳುನಾಡು ಚುನಾವಣೆಯಲ್ಲಿ ಅಣ್ಣಾ ಡಿಎಂಕೆ ಜೊತೆ ಕಾಟಾಚಾರದ ಹೊಂದಾಣಿಕೆ ಮಾಡಿಕೊಂಡು ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಅವರ ತಮಿಳು ರಾಜ್ಯವನ್ನು ಹಿಂದುತ್ವದ ಪ್ರಯೋಗಶಾಲೆಯನ್ನಾಗಿ ಮಾಡಲು ಸಂಘ ಪರಿವಾರ ಷಡ್ಯಂತ್ರ ರೂಪಿಸಿತ್ತು. ಆದರೆ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅಲ್ಲಿನ ಜನತೆ ಇವರನ್ನು ತಿರಸ್ಕರಿಸಿದರು. ಸ್ಟಾಲಿನ್ ನೇತೃತ್ವದ ಡಿಎಂಕೆ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂತು. ಇದರಿಂದ ಒಕ್ಕೂಟ ಸರಕಾರದ ಅಧಿಕಾರ ಸೂತ್ರ ಹಿಡಿದವರು ಸಹನೆ ಕಳೆದುಕೊಂಡಿದ್ದಾರೆ. ತಮಿಳುನಾಡಿನಲ್ಲಿ ಆಪರೇಶನ್ ಕಮಲ ಕೂಡ ಸಾಧ್ಯವಿಲ್ಲ. ಹೀಗಾಗಿಯೇ ಅಲ್ಲಿನ ಇಂಧನ ಸಚಿವ ಸೆಂಥಿಲ್ ಅವರನ್ನು ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಆರೋಪ ಹೊರಿಸಿ ಬಂಧಿಸಿದೆ ಎನ್ನಲಾಗುತ್ತಿದೆ. ಈ ಬಂಧನ ನಡೆದ ಕೆಲವೇ ತಾಸುಗಳಲ್ಲಿ ಸಿಬಿಐ ತನಿಖೆಗೆ ಹಿಂದೆ ನೀಡಲಾಗಿದ್ದ ಸಾಮಾನ್ಯ ಸಮ್ಮತಿಯನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ವಾಪಸ್ ಪಡೆದರು.

ಕೇಂದ್ರದ ಮೋದಿ ಸರಕಾರ ಯಾವಾಗ ತನ್ನ ರಾಜಕೀಯ ವಿರೋಧಿಗಳ ವಿರುದ್ಧ ಅವರನ್ನು ಹತ್ತಿಕ್ಕಲು ಸಿಬಿಐನಂಥ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳತೊಡಗಿತೋ ಆಗ ಪಶ್ಚಿಮ ಬಂಗಾಳ, ತೆಲಂಗಾಣ, ದಿಲ್ಲಿ ಸೇರಿದಂತೆ ಸುಮಾರು ಹತ್ತು ರಾಜ್ಯಗಳು ಸಿಬಿಐ ಪ್ರವೇಶವನ್ನು ನಿರ್ಬಂಧಿಸಿದವು. ಆದರೆ ಮೋದಿ ಸರಕಾರ ಸುಮ್ಮನಾಗಲಿಲ್ಲ ಆರ್ಥಿಕ ಅಪರಾಧದ ಹೆಸರಿನಲ್ಲಿ ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಜಾರಿ ನಿರ್ದೇಶನಾಲಯ(ಈ.ಡಿ.)ವನ್ನು ಬಳಸಿಕೊಳ್ಳತೊಡಗಿದೆ. ಈಗ ಅಕ್ರಮ ಹಣ ವರ್ಗಾವಣೆ ಸೇರಿದಂತೆ ಪ್ರತಿಯೊಂದು ಹಗರಣವನ್ನು ಜಾರಿ ನಿರ್ದೇಶನಾಲಯ ತನಿಖೆ ಮಾಡುತ್ತಿದೆ.

ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರಕಾರವಿರಬೇಕೆಂಬುದು ಮೋದಿ ನೇತೃತ್ವದ ಕೇಂದ್ರ ಸರಕಾರದ ಹೆಬ್ಬಯಕೆಯಾಗಿದೆ. ಅದಕ್ಕಾಗಿಯೇ ಡಬಲ್ ಇಂಜಿನ್ ಸರಕಾರ ಎಂದು ಚುನಾವಣೆಯಲ್ಲಿ ಪ್ರಚಾರ ಮಾಡುತ್ತದೆ. ಆದರೆ ಇದು ಪ್ರಜಾಪ್ರಭುತ್ವದ ಮೂಲಭೂತ ತತ್ವಗಳಿಗೆ ವ್ಯತಿರಿಕ್ತವಾಗಿದೆ. ಇದರಿಂದ ಭಾರತದ ಒಕ್ಕೂಟ ವ್ಯವಸ್ಥೆ ದುರ್ಬಲಗೊಳ್ಳುತ್ತಿದೆ. ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧ ಹದಗೆಡುತ್ತ ಹೋದರೆ ಅದು ಪ್ರತ್ಯೇಕತಾವಾದಿ ಶಕ್ತಿಗಳಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಇವೆಲ್ಲದರ ಒಟ್ಟು ಪರಿಣಾಮ ಭಾರತದ ಐಕ್ಯತೆ ಮತ್ತು ಸಮಗ್ರತೆಗೆ ಧಕ್ಕೆ ಉಂಟಾಗುತ್ತದೆ.

ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರದ ಬಿಜೆಪಿ ಸರಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ಜನತೆ ಚುನಾವಣೆಯಲ್ಲಿ ನೀಡಿರುವ ಆದೇಶವನ್ನೇ ನಿರರ್ಥಕಗೊಳಿಸಿದರೆ ಮುಂದೊಂದು ದಿನ ಚುನಾವಣೆಯಲ್ಲಿ ಜನತೆ ನಂಬಿಕೆ ಕಳೆದುಕೊಳ್ಳುತ್ತಾರೆ. ಈಗ ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸನ್ನು ಅಧಿಕಾರಕ್ಕೆ ತಂದಿದ್ದಾರೆ. ಬರುವ ದಿನಗಳಲ್ಲಿ ಇಲ್ಲಿನ ಸರಕಾರವನ್ನೂ ಅಸ್ಥಿರಗೊಳಿಸುವ ಮಸಲತ್ತು ನಡೆಯಬಹುದು. ಕರ್ನಾಟಕವೂ ಸಿಬಿಐಗೆ ನೀಡಿದ್ದ ಅನುಮತಿಯನ್ನು ವಾಪಸ್ ಪಡೆಯಬಹುದು. ಹಾಗಾಗಬಾರದೆಂದಿದ್ದರೆ ಬಿಜೆಪಿಯೇತರ ರಾಜ್ಯಗಳ ಬಗ್ಗೆ ಕೇಂದ್ರ ಸರಕಾರ ಹಗೆತನದ ಧೋರಣೆಯನ್ನು ಕೈ ಬಿಡಬೇಕು.

Similar News