ಆ್ಯಶಸ್ ಟೆಸ್ಟ್: ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಕ್ಕೆ ರೋಚಕ ಜಯ;ಹೆಲ್ಮೆಟ್, ಬ್ಯಾಟ್ ಕೈಬಿಟ್ಟು ಕಮಿನ್ಸ್ ಸಂಭ್ರಮ

Update: 2023-06-21 07:02 GMT

 ಬರ್ಮಿಂಗ್ ಹ್ಯಾಮ್, ಜೂ.21: ಆತಿಥೇಯ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯ ನಡುವಿನ ಮೊದಲ ಆ್ಯಶಸ್ ಟೆಸ್ಟ್  ಪಂದ್ಯವು ಎರಡೂ ತಂಡಗಳ ನಡುವೆ  ಕೊನೆಯ ತನಕದ ಹೋರಾಟಕ್ಕೆ ಸಾಕ್ಷಿಯಾಯಿತು.  ಅಂತಿಮವಾಗಿ  ಆಸ್ಟ್ರೇಲಿಯ ತಂಡವು  ನಾಯಕ ಪ್ಯಾಟ್ ಕಮಿನ್ಸ್ ಹಾಗೂ  ಸ್ಪಿನ್ನರ್ ನಥಾನ್  ಲಿಯಾನ್ ನಡುವಿನ ಅದ್ಭುತ ಜೊತೆಯಾಟದ ನೆರವಿನಿಂದ  281 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತು. ರೋಚಕ ಗೆಲುವಿನೊಂದಿಗೆ ಆಸ್ಟ್ರೇಲಿಯ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.

ಕಮಿನ್ಸ್  ಬೌಂಡರಿ ಗಳಿಸಿ ತನ್ನ ತಂಡಕ್ಕೆ ಗೆಲುವಿನ ರನ್‌  ಹೊಡೆದ ನಂತರ ತನ್ನ ಭಾವೋದ್ವೇಗವನ್ನು ನಿಯಂತ್ರಿಸಲಾಗದೆ  ಹೆಲ್ಮೆಟ್ ಹಾಗೂ ಬ್ಯಾಟ್ ಕೈಬಿಟ್ಟು ಮೈದಾನದಲ್ಲಿ ಓಡುತ್ತಾ ಸಂಭ್ರಮಾಚರಣೆ ಮಾಡಿದರು. ಸಹ ಆಟಗಾರ ಲಿಯೊನ್ ಅನ್ನು ತಮ್ಮ ತೋಳಲ್ಲಿ ಎತ್ತಿಕೊಂಡು ಸಂಭ್ರಮಿಸಿದರು.

5ನೇ ದಿನ ಮಳೆಯಿಂದ ತಡವಾಗಿ ಆರಂಭಗೊಂಡ ಪಂದ್ಯದಲ್ಲಿ ಇಂಗ್ಲೆಂಡ್ ಉತ್ತಮ ಪ್ರದರ್ಶನ ನೀಡಿತು. ಸ್ಕಾಟ್ ಬೋಲ್ಯಾಂಡ್, ಟ್ರಾವಿಸ್ ಹೆಡ್, ಕ್ಯಾಮರೂನ್ ಗ್ರೀನ್ ಹಾಗೂ  ಅಲೆಕ್ಸ್ ಕ್ಯಾರಿ ಬೇಗನೆ ಔಟಾಗುವುದರೊಂದಿಗೆ ಆತಿಥೇಯರು ಮೇಲುಗೈ ಸಾಧಿಸಿದರು.  ಆದರೆ ಕಮಿನ್ಸ್ ಹಾಗೂ  ಲಿಯಾನ್  ಇಂಗ್ಲೆಂಡ್ ಕೈಯಿಂದ ಗೆಲುವನ್ನು ಕಸಿದುಕೊಂಡರು.

ಕಮಿನ್ಸ್ 73 ಎಸೆತಗಳಲ್ಲಿ ಔಟಾಗದೆ 44 ರನ್ ಗಳಿಸಿದರೆ, ಲಿಯಾನ್ 28 ಎಸೆತಗಳಲ್ಲಿ ಔಟಾಗದೆ 16 ರನ್ ಗಳಿಸಿದರು. 9ನೇ ವಿಕೆಟ್‌ಗೆ 55 ರನ್‌ಗಳ ಜೊತೆಯಾಟದಲ್ಲಿ ಪಾಲ್ಗೊಂಡ ಕಮಿನ್ಸ್ ಹಾಗೂ ಲಿಯಾನ್  ಸರಣಿಯಲ್ಲಿ ಮುನ್ನಡೆ ಸಾಧಿಸುವ ಇಂಗ್ಲೆಂಡ್‌ನ ಆಸೆಗೆ ತಣ್ಣೀರೆರಚಿದರು.

Similar News