ಶಕ್ತಿಗೆ ಇನ್ನಷ್ಟು ಶಕ್ತಿ ತುಂಬೋಣ

Update: 2023-06-22 16:19 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ 

Full View

ಶಕ್ತಿ ಯೋಜನೆ ಈ ನಾಡಿನ ಎಲ್ಲ ಮಹಿಳೆಯರ ಮನ ಗೆದ್ದಿದೆ. ಮಾತ್ರವಲ್ಲ, ಅವರಿಗೆ ಹೊಸ ಆತ್ಮವಿಶ್ವಾಸವೊಂದನ್ನು ನೀಡಿದೆ. ''ನನ್ನ ಅಗತ್ಯಕ್ಕೆ ಹೊರ ಹೋಗುವಾಗ ಯಾರ ಬಳಿಯೋ ಕೈಚಾಚುವ ಕಷ್ಟ ಈಗ ಇಲ್ಲ'' ಎಂದು ಗ್ರಾಮೀಣ ಪ್ರದೇಶದ ಮಹಿಳೆಯೊಬ್ಬಳು ಹೃದಯ ತುಂಬಿ ಹೇಳುತ್ತಾಳಾದರೆ, ಆ ಮಾತಿನ ಮುಂದೆ ಸರಕಾರ ಅನುಭವಿಸುವ ಉಳಿದೆಲ್ಲ ಕಷ್ಟ ನಷ್ಟಗಳು ನಗಣ್ಯ. ಮೊದಲ ದಿನವೇ 5 ಲಕ್ಷಕ್ಕೂ ಅಧಿಕ ಮಹಿಳೆಯರು ಈ ಪ್ರಯೋಜನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದೀಗ ಈ ಪ್ರಯೋಜನವನ್ನು ಪಡೆದ ಮಹಿಳಾ ಪ್ರಯಾಣಿಕರ ಸಂಖ್ಯೆ ನಾಲ್ಕು ಕೋಟಿಯನ್ನು ದಾಟಿದೆ ಎಂದು ಅಂಕಿ ಅಂಶಗಳು ಹೇಳುತ್ತಿವೆ. ಶಕ್ತಿ ಯೋಜನೆಯ ಯಶಸ್ಸು ಇಂದು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಶಕ್ತಿ ಯೋಜನೆಯ ಯಶಸ್ಸಿನಿಂದ ಬೆಚ್ಚಿ ಬಿದ್ದಂತಿರುವ ಪ್ರಧಾನಿ ಮೋದಿ, ಇನ್ನಷ್ಟು ಗ್ಯಾರಂಟಿಗಳು ಜಾರಿಗೊಳ್ಳದಂತೆ ತಡೆಯಲು ಯತ್ನಿಸುತ್ತಿದ್ದಾರೆ. ಬಣ್ಣದ ಭಾಷಣಗಳಿಂದ ಜನಸಾಮಾನ್ಯರ ಅಭಿವೃದ್ಧಿ ಸಾಧ್ಯವಿಲ್ಲ, ಸರಕಾರವೊಂದು ಈ ಕುರಿತಂತೆ ಇಚ್ಛಾಶಕ್ತಿಯನ್ನು ಪ್ರದರ್ಶಿಸಿದರೆ ಮಾತ್ರ ಸಾಧ್ಯ ಎನ್ನುವುದನ್ನು ರಾಜ್ಯ ಸರಕಾರ ಪ್ರಧಾನಿ ಮೋದಿಯವರಿಗೆ ಮನದಟ್ಟು ಮಾಡಿಸುತ್ತಿದೆ. ಹಾಗೆಂದು ಈ ಯೋಜನೆಯಲ್ಲಿ ವೈಫಲ್ಯಗಳಿಲ್ಲ ಎಂದಲ್ಲ. ಇಂತಹ ಬೃಹತ್ ಯೋಜನೆಯೊಂದನ್ನು ಸರಕಾರ ಅಸ್ತಿತ್ವಕ್ಕೆ ಬಂದ ಕೆಲವೇ ದಿನಗಳಲ್ಲಿ ಆತುರಾತುರವಾಗಿ ಘೋಷಣೆ ಮಾಡಿರುವುದರಿಂದ ಲೋಪಗಳಿರುವುದ ಬರುವುದು ಸಹಜವೇ ಆಗಿದೆ. ಆದರೆ ಆಗಿರುವ ಲಾಭಗಳಿಗೆ ಹೋಲಿಸಿದರೆ ಈ ಲೋಪಗಳು ಏನೇನೂ ಅಲ್ಲ.

ಮುಖ್ಯವಾಗಿ ಉಚಿತ ಪ್ರಯಾಣವಾಗಿರುವುದರಿಂದ ಒಂದೇ ಬಾರಿ ಲಕ್ಷಾಂತರ ಮಹಿಳೆಯರು ಬಸ್ ಏರಿದ್ದಾರೆ ಎನ್ನುವ ಆರೋಪಗಳಿವೆ. ಮಹಿಳೆಯರನ್ನು ನಾಲ್ಕು ಗೋಡೆಗಳಿಂದ ಪಾರು ಮಾಡಿ, ಅವರನ್ನು ಬಸ್ ಏರುವಂತೆ ಮಾಡಿರುವುದು ಶಕ್ತಿಯೋಜನೆಯ ಸಾಧನೆಗಳಲ್ಲೊಂದು. ಬಸ್‌ಗಳು ತುಂಬಿ ತುಳುಕುತ್ತಿರುವುದು ಯೋಜನೆಯ ಯಶಸ್ಸನ್ನು ಹೇಳುತ್ತಿದೆ. ಹೀಗೆ ಬಸ್ ಏರಿ ಪ್ರಯಾಣಕ್ಕೆ ಹೊರಟಿರುವವರು ಗ್ರಾಮೀಣ ಪ್ರದೇಶದ ಮಹಿಳೆಯರು. ಜೊತೆಗೆ ಬಹುತೇಕ ಜನರು ಮಧ್ಯಮವರ್ಗ ಮತ್ತು ಕೆಳ ಮಧ್ಯಮ ವರ್ಗಕ್ಕೆ ಸೇರಿದವರು. ಇದರಿಂದ ಮೇಲ್ಮಧ್ಯಮ ಮಹಿಳೆಯರಿಗೆ, ಪುರುಷ ಪ್ರಯಾಣಿಕರಿಗೆ ಸಮಸ್ಯೆಯಾಗಬಹುದು ನಿಜ. ಆದರೆ ಗ್ರಾಮೀಣ ಬಡ ಮಹಿಳೆಯರಿಂದ ತುಂಬಿ ತುಳುಕುತ್ತಿರುವ ಬಸ್‌ನ ಸಂಭ್ರಮವನ್ನು ನೋಡಿ ನಾವು ಸಮಸ್ಯೆಗಳನ್ನು ನುಂಗಿಕೊಳ್ಳಬೇಕು. ಯಾಕೆಂದರೆ, ತಲೆತಲಾಂತರಗಳಿಂದ ಈ ಬಡಮಹಿಳೆಯರು ನೂರಾರು ಸಮಸ್ಯೆಗಳನ್ನು, ನೋವು ಸಂಕಟಗಳನ್ನು ನುಂಗಿಕೊಂಡು ನಾಲ್ಕುಗೋಡೆಯೊಳಗೆ ಬದುಕುತ್ತಾ ಬಂದಿದ್ದಾರೆ. ಅದಕ್ಕಾಗಿ ಅವರು ಈ ನಾಡಿನ ಮೇಲ್ಮಧ್ಯಮ ವರ್ಗದ ಜನರನ್ನು ಯಾವತ್ತೂ ದೂಷಿಸಿಲ್ಲ.

ಬಡವರ್ಗವೂ ಅಭಿವೃದ್ಧಿಯ ಪಾಲನ್ನು ಪಡೆದಾಗ ಮಾತ್ರ ನಾಡು ಮುಂದಕ್ಕೆ ಚಲಿಸಲು ಸಾಧ್ಯ. ಮೊದಲ ಬಾರಿಗೆ ಈ ನಾಡಿನ ದುರ್ಬಲ ಸಮುದಾಯವೊಂದು ಬಸ್ ಹತ್ತಿದಾಗ, ಈವರೆಗೆ ಸುಖಕರ ಪ್ರಯಾಣ ಮಾಡುತ್ತಿದ್ದ ಇತರರು ಸೀಟು ಬಿಟ್ಟು ಕೊಟ್ಟು ನಿಂತುಕೊಂಡು ಪ್ರಯಾಣಿಸಿದರೆ ಅದು ಈ ನಾಡಿನ ಹಿರಿಮೆಯನ್ನು ಹೇಳುತ್ತದೆ. 'ಎಲ್ಲರೂ ಏಕಾಏಕಿ ಪುಣ್ಯಕ್ಷೇತ್ರಗಳಿಗೆ ಹೊರಟು ನಿಂತಿದ್ದಾರೆ' ಎಂಬ ಸಿನಿಕ ಮಾತುಗಳು ಕೇಳಿ ಬರುತ್ತಿವೆ. 'ಎಲ್ಲರೂ ಹೊರಟು ನಿಂತಿದ್ದಾರೆ' ಎನ್ನುವುದಕ್ಕಿಂತ 'ಈವರೆಗೆ ಆರ್ಥಿಕ ಒತ್ತಡದಿಂದ ಸಂದರ್ಶಿಸಲು ಸಾಧ್ಯವಾಗದವರು ಹೊರಟು ನಿಂತಿದ್ದಾರೆ' ಎಂದರೆ ಹೆಚ್ಚು ಸಹನೀಯವಾಗುತ್ತದೆ. ಗ್ರಾಮೀಣ ಪ್ರದೇಶದ ಬಡ ಮಹಿಳೆಯರು ಅನಕ್ಷರಸ್ಥರು. ಕನಿಷ್ಠ ತೀರ್ಥ ಕ್ಷೇತ್ರಗಳ ದರ್ಶನವೇ ಬಹುತೇಕ ಮಹಿಳೆಯರ ಬಹುದೊಡ್ಡ ಆಸೆಯಾಗಿರುತ್ತದೆ. ದೂರದ ಗದಗಿನ ಮಹಿಳೆಗೆ ಧರ್ಮಸ್ಥಳಕ್ಕೆ ಹೋಗಬೇಕು ಎಂಬ ಆಸೆಯಿದ್ದರೆ, ಬೀದರ್‌ನ ಇನ್ನೊಬ್ಬ ಮಹಿಳೆಗೆ ಉಳ್ಳಾಲದ ದರ್ಗಾಕ್ಕೆ ಭೇಟಿ ನೀಡಬೇಕೆಂದು ಆಸೆಯಿದ್ದರೆ ಅದನ್ನು ನಾವು ಅನಗತ್ಯ ಅಥವಾ ದುರಾಸೆ ಎಂದು ಹೀಯಾಳಿಸುವಂತಿಲ್ಲ. ಕಳೆದ ಒಂದು ವಾರದಿಂದ ಪುಣ್ಯ ಕ್ಷೇತ್ರಗಳು ತುಂಬಿ ತುಳುಕುತ್ತಿವೆ ಎನ್ನುವ ವರದಿಗಳು ಬರುತ್ತಿವೆ. ಅಷ್ಟೇ ಅಲ್ಲ, ಈ ಯಾತ್ರೆಯಿಂದಾಗಿ ರಾಜ್ಯಾದ್ಯಂತ ವ್ಯಾಪಾರಗಳು ಹೆಚ್ಚುತ್ತಿವೆ. ಆರ್ಥಿಕತೆ ಚುರುಕನ್ನು ಪಡೆದಿವೆ ಎಂದೂ ಮಾಧ್ಯಮಗಳು ವಿಶ್ಲೇಷಿಸುತ್ತಿವೆ.

ಈ ನೂಕು ನುಗ್ಗಲು ಯಾವತ್ತೂ ಇರುವುದಿಲ್ಲ. ನಿಧಾನಕ್ಕೆ ಜನರ ಉತ್ಸಾಹ ತಣ್ಣಗಾಗುತ್ತಾ ಹೋದಂತೆಯೇ, ಶಕ್ತಿ ಯೋಜನೆಯ ಫಲವನ್ನು ನಿಜವಾದ ಫಲಾನುಭವಿಗಳು ಪಡೆಯ ತೊಡಗುತ್ತಾರೆ. ಅಂದರೆ, ಉದ್ಯೋಗಗಳಿಗೆ ತೆರಳುವ, ಅಗತ್ಯ ಕೆಲಸಗಳಿಗಾಗಿ ಹೊರಡುವ ಮಹಿಳೆಯರಷ್ಟೇ ಈ ಯೋಜನೆಯನ್ನು ಬಳಸ ತೊಡಗುತ್ತಾರೆ. ಮನೆಯಲ್ಲಿರುವ ಗೃಹಿಣಿಯರೆಲ್ಲ ಉಚಿತ ಬಸ್ ಇದೆ ಎನ್ನುವ ಕಾರಣಕ್ಕಾಗಿ ಬಸ್ ಹತ್ತಿಕೊಂಡು ತಿರುಗಾಡುತ್ತಿರುತ್ತಾರೆ ಎನ್ನುವ ವಾದವೇ ಪೂರ್ವಾಗ್ರಹ ಪೀಡಿತವಾದುದು. ಕೆಲವು ಪುರುಷರು 'ಮಹಿಳೆಯರ ಉಚಿತ ಪ್ರಯಾಣ'ವನ್ನು ಟೀಕಿಸುವುದಿದೆ. ಆದರೆ ಈ ಮಹಿಳೆಯರು ಅನ್ಯಗ್ರಹದಿಂದ ಇಳಿದು ಬಂದವರಲ್ಲ. ಮಹಿಳೆಯರು ಪುರುಷರ ಒಂದು ಭಾಗವೇ ಆಗಿದ್ದಾರೆ. ಆಕೆ ಒಂದೋ ಒಬ್ಬ ಪುರುಷನ ಮಗಳಾಗಿರುತ್ತಾಳೆ ಅಥವಾ ಒಬ್ಬನ ಪತ್ನಿಯಾಗಿರುತ್ತಾಳೆ ಅಥವಾ ಒಬ್ಬನ ತಾಯಿಯಾಗಿರುತ್ತಾಳೆ. ಶಕ್ತಿ ಯೋಜನೆಯ ಲಾಭವನ್ನು ಮಹಿಳೆಯರು ಪಡೆಯುವುದೆಂದರೆ ಪರೋಕ್ಷವಾಗಿ ಪುರುಷರೂ ಆ ಲಾಭವನ್ನು ತಮ್ಮದಾಗಿಸಿಕೊಂಡಿರುತ್ತಾರೆ. ತಾಯಿಯೊಬ್ಬಳು ಉಚಿತ ಬಸ್ ಪ್ರಯಾಣದ ಲಾಭ ಪಡೆದಳೆಂದರೆ, ಪರೋಕ್ಷವಾಗಿ ಆಕೆಯ ಮಕ್ಕಳೂ ಅದರ ಲಾಭವನ್ನು ಪಡೆದುಕೊಳ್ಳುತ್ತಾರೆೆ. ಉಚಿತ ಬಸ್‌ನಲ್ಲಿ ಪ್ರಯಾಣಿಸಿ ಒಬ್ಬ ಮಹಿಳೆ ಸಂಭ್ರಮಿಸುತ್ತಿದ್ದಾಳೆ ಎಂದರೆ ಅವಳ ಜೊತೆಗೆ ಆಕೆಯ ತಂದೆ, ಗಂಡ, ಮಕ್ಕಳೂ ಸಂಭ್ರಮಿಸುತ್ತಿರುತ್ತಾರೆ. ಆದ್ದರಿಂದ ಶಕ್ತಿ ಯೋಜನೆಯ ಲಾಭವನ್ನು ಪರೋಕ್ಷವಾಗಿ ಪುರುಷರೂ ಪಡೆದುಕೊಳ್ಳುತ್ತಾರೆ.

ಸರಕಾರಕ್ಕೆ ಕೋಟ್ಯಂತರ ರೂ.ನಷ್ಟವಾಗುತ್ತದೆ. ಇದು ಜನರ ತೆರಿಗೆಯ ಹಣ ಎಂದು ಕೊರಗುವವರು ನೆನಪಿಟ್ಟುಕೊಳ್ಳಬೇಕು, ಈ ದೇಶ ನಡೆಯುತ್ತಿರುವುದು ನೇರ ತೆರಿಗೆಯನ್ನು ಕಟ್ಟುವವರಿಂದ ಅಲ್ಲ, ಪರೋಕ್ಷ ತೆರಿಗೆಯನ್ನು ಕಟ್ಟುವವರಿಂದ ಮತ್ತು ಪರೋಕ್ಷ ತೆರಿಗೆಯನ್ನು ಕಟ್ಟುವವರಲ್ಲಿ ದೊಡ್ಡ ಸಂಖ್ಯೆಯಲ್ಲಿರುವುದು ಮಧ್ಯಮ, ಕೆಳ ಮಧ್ಯಮ ಮತ್ತು ಬಡವರ್ಗ. ಆದರೆ ಅವರು ಕಟ್ಟುವ ತೆರಿಗೆಗೆ ಅವರಿಗೆ ಸಿಗುವ ಅಭಿವೃದ್ಧಿಯ ಫಲ ತೀರ ಅಲ್ಪ. ಅದರ ಬಹುತೇಕ ಪ್ರಯೋಜನಗಳನ್ನು ಪಡೆಯುತ್ತಿರುವುದು ಮೇಲ್ಮಧ್ಯಮ ವರ್ಗದ ಜನರು. ಶ್ರೀಮಂತರು ತಾವು ಕಟ್ಟುವ ನೇರ ತೆರಿಗೆಯ ದುಪ್ಪಟ್ಟನ್ನು ಬೇರೆ ಬೇರೆ ರೂಪದಲ್ಲಿ ಸರಕಾರದಿಂದ ಮರಳಿ ಪಡೆಯುತ್ತಿರುತ್ತಾರೆ. ಇದೇ ಸಂದರ್ಭದಲ್ಲಿ ಶಕ್ತಿ ಯೋಜನೆಗೆ ಇನ್ನಷ್ಟು ಶಕ್ತಿ ಕೊಡುವ ಹೊಣೆಗಾರಿಕೆಯೂ ಸರಕಾರದ ಮುಂದಿದೆ. ಮುಖ್ಯವಾಗಿ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕಾಗಿದೆ. ಜೊತೆಗೆ ಸಿಬ್ಬಂದಿಯ ಸಂಖ್ಯೆಯನ್ನು ಕೂಡ. ಎದುರಾಗುವ ಆರ್ಥಿಕ ಕೊರತೆಯನ್ನು ತುಂಬಿಸಲು ಪರ್ಯಾಯ ಮಾರ್ಗಗಳನ್ನೂ ಕಂಡುಕೊಳ್ಳಬೇಕು.

ಜೊತೆಗೆ ಸರಕಾರಿ ಬಸ್‌ಗಳು ಕೊರತೆಯಿರುವಲ್ಲಿ ಬಸ್‌ಗಳನ್ನು ಕೊಟ್ಟು, ಈ ಸವಲತ್ತು ಎಲ್ಲ ಮಹಿಳೆಯರಿಗೂ ತಲುಪುವಂತೆ ನೋಡಿಕೊಳ್ಳಬೇಕು. ಪ್ರಯಾಣಿಸುವ ಮಹಿಳೆಯರಿಗೂ ಹೊಣೆಗಾರಿಕೆಗಳಿವೆ. ಈ ಯೋಜನೆ ಯಾವ ರೀತಿಯಲ್ಲೂ ದುರುಪಯೋಗವಾಗದಂತೆ ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕು. ದುರುಪಯೋಗ ನಡೆದಂತೆಯೇ, ಮಹಿಳಾ ವಿರೋಧಿ ಮನಸ್ಥಿತಿಗಳು ಯೋಜನೆಯ ವಿರುದ್ಧ ಅಪಪ್ರಚಾರಗಳನ್ನು ಆರಂಭಿಸುತ್ತವೆ. ಈಗಾಗಲೇ ಯೋಜನೆಯನ್ನು ವಿಫಲಗೊಳಿಸಲು ಬಹುದೊಡ್ಡ ಆಂದೋಲನವೇ ನಡೆಯುತ್ತಿದೆ. ಆ ಆಂದೋಲನವನ್ನು ವಿಫಲಗೊಳಿಸುವುದು ನಾಡಿನ ಅಭಿವೃದ್ಧಿಯ ಬಗ್ಗೆ ಕಾಳಜಿಯಿರುವ ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದೆ. ಶಕ್ತಿ ಯೋಜನೆಯ ಪರವಾಗಿ ನಿಲ್ಲುವುದೆಂದರೆ ನಾವು ನಮ್ಮ ತಾಯಿ, ಪತ್ನಿ, ಮಗಳ ಜೊತೆಗೆ ನಿಲ್ಲುವುದು ಎನ್ನುವ ಪ್ರಜ್ಞೆ ಪ್ರತಿಯೊಬ್ಬ ಪುರುಷನಿಗೂ ಇರಬೇಕು.

Similar News