ಮೊದಲ ಆ್ಯಶಸ್ ಟೆಸ್ಟ್: ಎಲ್ಲ 5 ದಿನ ಬ್ಯಾಟಿಂಗ್ ಮಾಡಿ ವಿಶಿಷ್ಟ ದಾಖಲೆ ನಿರ್ಮಿಸಿದ ಉಸ್ಮಾನ್ ಖ್ವಾಜಾ
ಲಂಡನ್: ಆಸ್ಟ್ರೇಲಿಯದ ಆರಂಭಿಕ ಬ್ಯಾಟರ್ ಉಸ್ಮಾನ್ ಖ್ವಾಜಾ ಅವರು ಇಂಗ್ಲೆಂಡ್ ವಿರುದ್ಧ ಮಂಗಳವಾರ ಕೊನೆಗೊಂಡಿರುವ ಆ್ಯಶಸ್ ಸರಣಿ-2023 ರ ಆರಂಭಿಕ ಟೆಸ್ಟ್‌ನಲ್ಲಿ ವಿಶಿಷ್ಟ ದಾಖಲೆಯೊಂದನ್ನು ನಿರ್ಮಿಸಿದರು. ಈ ಮೂಲಕ ಇಂಗ್ಲೆಂಡ್ ದಿಗ್ಗಜ ಜೆಫ್ರಿ ಬಾಯ್ಕಾಟ್ ಅವರ ಸಾರ್ವಕಾಲಿಕ ದಾಖಲೆಯನ್ನು ಸರಿಗಟ್ಟಿದರು.
ಉಸ್ಮಾನ್ ಖ್ವಾಜಾ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಟೆಸ್ಟ್ ಪಂದ್ಯದ ಎಲ್ಲಾ ಐದು ದಿನಗಳಲ್ಲಿ ಬ್ಯಾಟಿಂಗ್ ಮಾಡಿ ಪಂದ್ಯವನ್ನು ಗೆದ್ದ ಎರಡನೇ ಕ್ರಿಕೆಟಿಗನೆಂಬ ಕೀರ್ತಿಗೆ ಭಾಜನರಾದರು.
ಒಟ್ಟಾರೆಯಾಗಿ, ಉಸ್ಮಾನ್ ಟೆಸ್ಟ್ ಪಂದ್ಯದ ಎಲ್ಲಾ ಐದು ದಿನಗಳಲ್ಲಿ ಬ್ಯಾಟಿಂಗ್ ಮಾಡಿದ ವಿಶ್ವದ 13 ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಆದರೆ ಖ್ವಾಜಾ ಹಾಗೂ ಜೆಫ್ರಿ ಬಾಯ್ಕಾಟ್ ಮಾತ್ರ ಟೆಸ್ಟ್‌ನ ಎಲ್ಲಾ ಐದು ದಿನಗಳಲ್ಲಿ ಬ್ಯಾಟಿಂಗ್ ಮಾಡಿ ಪಂದ್ಯವನ್ನು ಗೆದ್ದಿದ್ದಾರೆ.
ಖ್ವಾಜಾ ಎಲ್ಲ 5 ದಿನ ಬ್ಯಾಟಿಂಗ್ ಮಾಡಿದ ಆಸೀಸ್ ನ 2ನೇ ಬ್ಯಾಟರ್ ಆಗಿದ್ದಾರೆ. ಆಗಸ್ಟ್ 1980 ರಲ್ಲಿ ಲಾರ್ಡ್ಸ್‌ನಲ್ಲಿ ಒಂದೇ ತಂಡದ ವಿರುದ್ಧ (ಇಂಗ್ಲೆಂಡ್) ಎಲ್ಲಾ ಐದು ದಿನಗಳಲ್ಲಿ ಬ್ಯಾಟ್ ಮಾಡಿದ ಕಿಮ್ ಹ್ಯೂಸ್ ಈ ವಿಶಿಷ್ಟ ಸಾಧನೆಯನ್ನು ಮಾಡಿರುವ ಮೊದಲ ಆಸ್ಟ್ರೇಲಿಯ ಆಟಗಾರ.
ಒಟ್ಟು 796 ನಿಮಿಷಗಳ ಕಾಲ ಬ್ಯಾಟಿಂಗ್ ಮಾಡಿದ್ದ ಖ್ವಾಜಾ 518 ಎಸೆತಗಳನ್ನು ಎದುರಿಸಿ 206 ರನ್(141 ರನ್ ಹಾಗೂ 65 ರನ್)ಗಳಿಸಿದ್ದು ಅರ್ಹವಾಗಿಯೇ ಪಂದ್ಯಶ್ರೇಷ್ಠ ಗೌರವ ಪಡೆದರು.
ಟೆಸ್ಟ್‌ನ ಎಲ್ಲಾ ಐದು ದಿನಗಳಲ್ಲಿ ಬ್ಯಾಟ್ ಮಾಡಿದ ಆಟಗಾರರ ಸಂಪೂರ್ಣ ಪಟ್ಟಿ:
ಮೋಟ್ಗನಳ್ಳಿ ಜೈಸಿಂಹ (ಭಾರತ) ಆಸ್ಟ್ರೇಲಿಯ ವಿರುದ್ಧ- 1960ರಲ್ಲಿ
ಜೆಫ್ರಿ ಬಾಯ್ಕಾಟ್ (ಇಂಗ್ಲೆಂಡ್) ಆಸ್ಟ್ರೇಲಿಯ ವಿರುದ್ಧ - 1977
ಕಿಮ್ ಹ್ಯೂಸ್ (ಆಸ್ಟ್ರೇಲಿಯ) ಇಂಗ್ಲೆಂಡ್ ವಿರುದ್ಧ - 1980
ಅಲನ್ ಲ್ಯಾಂಬ್ (ಇಂಗ್ಲೆಂಡ್) ವೆಸ್ಟ್ ಇಂಡೀಸ್ ವಿರುದ್ಧ - 1984
ರವಿ ಶಾಸ್ತ್ರಿ (ಭಾರತ) ಇಂಗ್ಲೆಂಡ್ ವಿರುದ್ಧ - 1984
ಆಡ್ರಿಯನ್ ಗ್ರಿಫಿತ್ (ವೆಸ್ಟ್ ಇಂಡೀಸ್) ನ್ಯೂಝಿಲ್ಯಾಂಡ್ ವಿರುದ್ಧ - 1999
ಆಂಡ್ರ್ಯೂ ಫ್ಲಿಂಟಾಫ್ (ಇಂಗ್ಲೆಂಡ್) ಭಾರತ ವಿರುದ್ಧ - 2006
ಅಲ್ವಿರೋ ಪೀಟರ್ಸನ್ (ದಕ್ಷಿಣ ಆಫ್ರಿಕಾ) ನ್ಯೂಝಿಲ್ಯಾಂಡ್ ವಿರುದ್ಧ - 2012
ಚೇತೇಶ್ವರ ಪೂಜಾರ (ಭಾರತ) ಶ್ರೀಲಂಕಾ ವಿರುದ್ಧ - 2017
ರೋರಿ ಬರ್ನ್ಸ್ (ಇಂಗ್ಲೆಂಡ್) ಆಸ್ಟ್ರೇಲಿಯ ವಿರುದ್ಧ - 2019
ಕ್ರೈಗ್ ಬ್ರಾತ್ ವೈಟ್ (ವೆಸ್ಟ್ ಇಂಡೀಸ್) ಝಿಂಬಾಬ್ವೆ ವಿರುದ್ಧ - 2023
ತ್ಯಾಗನರೇನ್ ಚಂದ್ರಪಾಲ್ (ವೆಸ್ಟ್ ಇಂಡೀಸ್) ಝಿಂಬಾಬ್ವೆ ವಿರುದ್ಧ - 2023
ಉಸ್ಮಾನ್ ಖ್ವಾಜಾ (ಆಸ್ಟ್ರೇಲಿಯ) ಇಂಗ್ಲೆಂಡ್ ವಿರುದ್ಧ - 2023