ಸಚಿವರ ವಿರುದ್ಧ ಕಾಂಗ್ರೆಸ್ ಶಾಸಕರೇ ಬರೆದಿದ್ದಾರೆ ಎನ್ನಲಾದ ಪತ್ರ ವೈರಲ್
ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದ ಬೆಳವಣಿಗೆಯೊಂದು ನಡೆದಿದೆ. ರಾಜ್ಯದಲ್ಲಿ ಹೊಸ ಸರಕಾರ ಬಂದು ಇನ್ನೂ ಮೂರು ತಿಂಗಳಾಗುವುದರೊಳಗೆ ಆ ಸರಕಾರದ ಬಗ್ಗೆ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಈ ಬಾರಿ ಆರೋಪ ಮಾಡಿದವರು ವಿಪಕ್ಷದವರಲ್ಲ, ಆಡಳಿತ ಪಕ್ಷದವರೇ ಆರೋಪ ಮಾಡಿದ್ದಾರೆ ಎಂದು ಸುದ್ದಿಯಾಗಿದೆ. ಇದು ಸರಕಾರಕ್ಕೆ ಮುಜುಗರ ತಂದಿದೆ. ವಿಪಕ್ಷದ ಕೈಗೆ ದೊಡ್ಡ ಅಸ್ತ್ರ ಸಿಕ್ಕಿದೆ. ಸಿಂಗಾಪುರದಲ್ಲಿ ರಾಜ್ಯ ಸರಕಾರ ಉರುಳಿಸಲು ಮಾಸ್ಟರ್ ಪ್ಲ್ಯಾನ್ ಆಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿಕೆ ಕೊಟ್ಟ ಬೆನ್ನಿಗೇ ಇಂತಹದೊಂದು ಬೆಳವಣಿಗೆ ಆಗಿರುವುದು ಸಿದ್ದರಾಮಯ್ಯ ಸರಕಾರಕ್ಕೆ ತೀವ್ರ ಕಸಿವಿಸಿ ಉಂಟು ಮಾಡಿದೆ.
"ಅನುದಾನ ಬಿಡುಗಡೆ ಮಾಡಲು ಮೂರನೇ ವ್ಯಕ್ತಿ ಮೂಲಕ ಸಚಿವರು ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ತಕ್ಷಣವೇ ಮಧ್ಯ ಪ್ರವೇಶಿಸಬೇಕು " ಎಂದು ಆಳಂದ ಶಾಸಕ ಬಿ ಆರ್ ಪಾಟೀಲ, ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಸೇರಿ ಹತ್ತಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೋಮವಾರ ಅಂದ್ರೆ ಜುಲೈ 24 ರಂದು ಬರೆದಿದ್ದಾರೆ ಎನ್ನಲಾದ ಪತ್ರವೊಂದು ಮಂಗಳವಾರ ಬಹಿರಂಗವಾಗಿದೆ.
ಇದು ರಾಜ್ಯ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿದೆ. ಗುರುವಾರ ಕಾಂಗ್ರೆಸ್ ಶಾಸಕಾಂಗ ಸಭೆ ಕರೆದ ಬೆನ್ನಿಗೇ ಈ ಪತ್ರ ಬಯಲಾಗಿರುವುದು ಕೈ ಪಕ್ಷಕ್ಕೆ ಇನ್ನಷ್ಟು ಕಿರಿಕಿರಿ ತಂದಿದೆ. ಈಗ ನಕಲಿ ಎಂದು ಹೇಳಲಾಗುತ್ತಿರುವ ಈ ಪತ್ರದಲ್ಲಿ ಮಳವಳ್ಳಿ ಶಾಸಕ ಪಿ ಎಂ ನರೇಂದ್ರಸ್ವಾಮಿ, ಮುದ್ದೇಬಿಹಾಳ ಶಾಸಕ ಸಿ ಎಸ್ ನಾಡಗೌಡ, ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಅವರ ಸಹಿಯೂ ಇದೆ.
ಪತ್ರದ ಬಗ್ಗೆ ಅದನ್ನು ಬರೆದಿದ್ದಾರೆ ಎನ್ನಲಾದ ಕಾಂಗ್ರೆಸ್ ಹಿರಿಯ ಶಾಸಕರು ನೀಡಿರುವ ಸ್ಪಷ್ಟನೆ ಇನ್ನಷ್ಟು ಗೋಜಲು ಗೋಜಲಾಗಿದೆ. "ಶಾಸಕರ ಕುಂದು ಕೊರತೆಗಳನ್ನು ಆಲಿಸಲು ಕಾಂಗ್ರೆಸ್ ಶಾಸಕಾಂಗ ಸಭೆ ಕರೆಯುವಂತೆ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ತಿರುಚಿ ಕಿಡಿಗೇಡಿಗಳು ನಕಲಿ ಪತ್ರ ಸೃಷ್ಟಿಸಿದ್ದಾರೆ. ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರ ಆರೋಪಗಳನ್ನು ಮಾಡುತ್ತಿರುವಂತೆ ಕುತಂತ್ರದಿಂದ ಸುಳ್ಳು ಹರಿಬಿಡಲಾಗಿದೆ. ಇದು ಬಿಜೆಪಿ ಕುತಂತ್ರ . ಹಳೆ ಮನೆಯ ವಿಳಾಸದ ನಕಲಿ ಪತ್ರ ಇದು. ಜುಲೈ 24ಕ್ಕೆ ನಾನು ಕಲಬುರಗಿಯಲ್ಲೇ ಇದ್ದೆ. ಹಾಗಾಗಿ ಮುಖ್ಯಮಂತ್ರಿಗೆ ಅಂದು ಪತ್ರ ನೀಡುವ ಪ್ರಶ್ನೆಯೇ ಬರುವುದಿಲ್ಲ. ಶಾಸಕಾಂಗ ಸಭೆ ಕರೆಯುವಂತೆ ಪತ್ರ ಬರೆದಿದ್ದೇನೆ. ಸಚಿವರ ವಿರುದ್ಧ ಯಾವುದೇ ಆರೋಪ ಮಾಡಿಲ್ಲ" ಎಂದು ಬಿ ಆರ್ ಪಾಟೀಲ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿ ಎಸ್ ನಾಡಗೌಡ "ಮುಖ್ಯಮಂತ್ರಿಗೆ ಬರೆದ ಮೂಲ ಪತ್ರದಲ್ಲಿ 33 ಶಾಸಕರು ಸಹಿ ಹಾಕಿದ್ದಾರೆ. ನಕಲಿ ಪತ್ರದಲ್ಲಿ ಏಳೆಂಟು ಶಾಸಕರ ಸಹಿ ಮಾತ್ರ ಇದೆ. ಅಲ್ಲದೆ ಮೂಲ ಪತ್ರದಲ್ಲಿ ಎಲ್ಲೂ ಸಚಿವರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿಲ್ಲ " ಎಂದು ಪ್ರಜಾವಾಣಿಗೆ ಹೇಳಿದ್ದಾರೆ.
ಆದರೆ ಪತ್ರ ಬರೆದಿದ್ದು ಹೌದು. ನಮಗೆ ಏನೂ ಅಸಮಾಧಾನವಿಲ್ಲ. ಸಿದ್ದರಾಮಯ್ಯ ಅವರು ಭಾರತದ ಉತ್ತಮ ಮುಖ್ಯಮಂತ್ರಿ. ಇದು ಸಹಜವಾಗಿಯೇ ವಿರೋಧ ಪಕ್ಷಕ್ಕೆ ಆಹಾರವಾಗುತ್ತದೆ. ಇದರಲ್ಲಿ ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಶಾಸಕ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
"ನಮ್ಮ ಕ್ಷೇತ್ರಕ್ಕೆ ಅನುದಾನ ನೀಡುವಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ 20 ಕ್ಕೂ ಹೆಚ್ಚು ಸಚಿವರಿಗೆ ಮನವಿ ಮಾಡಿದ್ದರೂ ಸ್ಪಂದಿಸುತ್ತಿಲ್ಲ. ಇದರಿಂದ ಜನರ ಆಶೋತ್ತರ ಈಡೇರಿಸಲು ಆಗುತ್ತಿಲ್ಲ. ನಾವು ಶಾಸಕರಾಗಿ ಮೂರನೇ ವ್ಯಕ್ತಿ ಮೂಲಕ ಅನುದಾನಕ್ಕೆ ಮೊರೆ ಹೋಗಬೇಕಾಗಿರುವುದು ಅತ್ಯಂತ ಬೇಸರದ ಸಂಗತಿ . ಅಲ್ಲದೆ ಸಚಿವರು ತಮಗೆ ಬೇಕಾದ ಅಧಿಕಾರಿಗಳಿಗೆ ಮಣೆ ಹಾಕಿ ಸ್ವಜನ ಪಕ್ಷಪಾತ ಮಾಡುತ್ತಿದ್ದಾರೆ. ನಮ್ಮ ಯಾವುದೇ ವರ್ಗಾವಣೆ ಶಿಫಾರಸು ಪತ್ರಗಳಿಗೆ ಮಾನ್ಯತೆ ನೀಡುತ್ತಿಲ್ಲ . ಇದರಿಂದಾಗಿ ಯಾವ ಅಧಿಕಾರಿಯೂ ನಮ್ಮ ಕೆಲಸಗಳನ್ನು ಮಾಡುತ್ತಿಲ್ಲ. ನಮ್ಮ ಮಾತಿಗೆ ಬೆಲೆಯೂ ನೀಡುತ್ತಿಲ್ಲ. ತಾವು ತಕ್ಷಣವೇ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು. ನಮ್ಮ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು" ಎಂದು ಈ ಪತ್ರದಲ್ಲಿದೆ.
ಈಗ ಈ ಪತ್ರದ ಆಧಾರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಗಳು ಸಿದ್ದರಾಮಯ್ಯ ಸರಕಾರದ ವಿರುದ್ಧ ಮುಗಿಬಿದ್ದಿವೆ. ತಮಗೊಂದು ದೊಡ್ಡ ಅಸ್ತ್ರ ಸಿಕ್ಕಿದ ಖುಷಿಯಲ್ಲಿ ಈ ಎರಡೂ ಪಕ್ಷಗಳಿವೆ. ಈಗಾಗಲೇ ಈ ಸರಕಾರ ಕಮಿಷನ್ ದಂಧೆಯಲ್ಲಿ ಮುಳುಗಿದೆ, ವರ್ಗಾವಣೆ ಧಾಂದೆ ನಡೀತಿದೆ ಎಂದು ಆರೋಪ ಮಾಡುತ್ತಿದ್ದ ಜೆಡಿಎಸ್ ಹಾಗು ಬಿಜೆಪಿ ಈಗ ಕಾಂಗ್ರೆಸ್ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ.
"ಮಾನ್ಯ ಸಿದ್ದರಾಮಯ್ಯ ರವರೇ, ನಿಮ್ಮ ಶಾಸಕರುಗಳೇ ವರ್ಗಾವಣೆ ದಂಧೆ ಹಾಗೂ ಸಚಿವರ ದುರ್ವರ್ತನೆ ವಿರುದ್ಧ ಪತ್ರ ಬರೆದು ಇದೀಗ ಅದು ಋಜುವಾತಾಗಿದೆ. ಪತ್ರದಲ್ಲಿ ಮೂರನೇ ವ್ಯಕ್ತಿ ಎಂದು ಪ್ರಸ್ತಾಪಿಸಿರುವುದು ಶ್ಯಾಡೋ ಸಿಎಂರವರ ಬಗ್ಗೆಯೇ..?? " ಎಂದು ಬಿಜೆಪಿ ಕೇಳಿದೆ.
‘ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಬಾಲಗ್ರಹ ಪೀಡೆ ಶುರುವಾಗಿದ್ದು, ಆಂತರಿಕ ಕಲಹ ಹೆಚ್ಚಾಗಿದೆ’ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ‘ಸಚಿವರ ಭ್ರಷ್ಟಾಚಾರ ಮತ್ತು ಅಭಿವೃದ್ಧಿ ಕಾರ್ಯಕ್ಕೆ ಅನುದಾನ ನೀಡದೇ ಇರುವುದರಿಂದ ಶಾಸಕರ ಅಸಮಾಧಾನ ಸ್ಫೋಟಗೊಳ್ಳುತ್ತಿದೆ’ ಎಂದು ಅವರು ಹೇಳಿದ್ದಾರೆ. ‘ಗ್ಯಾರಂಟಿಗಳಿಗೆ ಹಣ ನೀಡುವುದಕ್ಕೆ ಅನುದಾನ ಇಲ್ಲ ಎನ್ನುತ್ತಿದ್ದಾರೆ, ಆದರೆ, ವರ್ಗಾವಣೆಯಲ್ಲಿ ಭಾರಿ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದು ಸ್ಪಷ್ಟವಾಗಿದೆ. ಇದನ್ನು ಶಾಸಕರೇ ಬಹಿರಂಗವಾಗಿ ಹೇಳಿದ್ದಾರೆ. ಸಚಿವರ ವಿರುದ್ಧ ಕಾಂಗ್ರೆಸ್ ಶಾಸಕರು ಅಸಮಾಧಾನ ಹೊರ ಹಾಕಿದ್ದಾರೆ. ಮುಜುಗರಕ್ಕೆ ಒಳಗಾದ ಸಿದ್ದರಾಮಯ್ಯ ಅರ್ಧಸತ್ಯ ಹೇಳಿದ್ದಾರೆ’ ಎಂದಿದ್ದಾರೆ ಬೊಮ್ಮಾಯಿ.
ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿ ಕೆ ಶಿವಕುಮಾರ್ ಇಬ್ಬರೂ ಹೀಗೆ ಪತ್ರ ಬರೆದಿದ್ದಾರೆ ಎಂಬುದನ್ನು ನಿರಾಕರಿಸಿದ್ದಾರೆ. ಹಾಗೆ ಯಾರು ಸಚಿವರ ವಿರುದ್ಧ ದೂರು ನೀಡಿಲ್ಲ. ಶಾಸಕಾಂಗ ಸಭೆ ಕರೆಯುವಂತೆ ಮನವಿ ಮಾಡಿದ್ದಾರೆ ಅಷ್ಟೇ. ಇದೆಲ್ಲ ಊಹಾಪೋಹ ಎಂದಿದ್ದಾರೆ ಇಬ್ಬರೂ.
"ನಮ್ಮ ಸರ್ಕಾರವನ್ನು ವಿರೋಧಿಸಲು, ಆಪಾದಿಸಲು ಬಿಜೆಪಿಗೆ ಈಗ ವಾಸ್ತವ ವಿಷಯಗಳೇ ಇಲ್ಲದಾಗಿದೆ, ಹಾಗಾಗಿ ನಕಲಿ ಸೃಷ್ಟಿಯ ಮೊರೆ ಹೋಗಿದೆ. ಬಿಜೆಪಿಯ ಫೇಕ್ ಫ್ಯಾಕ್ಟರಿಯಲ್ಲಿ ತಯಾರಾದ ನಕಲಿ ಪತ್ರದ ಕುರಿತು ನಮ್ಮ ಶಾಸಕ ಬಿ ಆರ್ ಪಾಟೀಲ್ ಅವರು ಕಲ್ಬುರ್ಗಿ SP ಅವರನ್ನು ಭೇಟಿಯಾಗಿ ನಕಲಿ ಪತ್ರದ ಕುರಿತು ಸಮಗ್ರ ತನಿಖೆಯಾಗಬೇಕೆಂದು ದೂರು ಸಲ್ಲಿಸಿದರು." ಎಂದು ಈಗ ಕಾಂಗ್ರೆಸ್ ಟ್ವೀಟ್ ಮಾಡಿದೆ.
"ಜೆಡಿಎಸ್ ನಾಯಕರು ಬಿಜೆಪಿಯ ಲೆಟರ್ ಹೆಡ್ ಮೇಲೆ ಸಹಿ ಮಾಡಿ ತಮ್ಮದು ಅಡ್ರೆಸ್ ಇಲ್ಲದ ಪಕ್ಷ ಎಂದು ಸಾಬೀತು ಮಾಡಿದ್ದರು. ಬೊಮ್ಮಾಯಿಯವರು ಜೆಡಿಎಸ್ ಕಚೇರಿಗೆ ತೆರಳಿ, ಪತ್ರಿಕಾಗೋಷ್ಠಿಗೆ ಜೆಡಿಎಸ್ ನೆರವು ಪಡೆದು ತಮಗೆ ದಮ್ಮು ತಾಕತ್ತು ಇಲ್ಲ ಎಂದು ಸಾಬೀತು ಮಾಡಿದ್ದರು. ಒಬ್ಬರಿಗೆ ಹಲ್ಲಿಲ್ಲ, ಮತ್ತೊಬ್ಬರಿಗೆ ಕಡಲೆ ಇಲ್ಲ ಎಂಬಂತಹ ಸ್ಥಿತಿಯಲ್ಲಿರುವ ವಿಪಕ್ಷಗಳು ಕಾಂಗ್ರೆಸ್ ಸರ್ಕಾರವನ್ನು ಬೀಳಿಸುತ್ತೇವೆ ಎನ್ನುವುದು ನರಿಯೊಂದು ದ್ರಾಕ್ಷಿಗೆ ಆಸೆ ಪಟ್ಟಂತೆ! " ಎಂದೂ ಕಾಂಗ್ರೆಸ್ ಹೇಳಿದೆ.
ಬಿ. ಆರ್ ಪಾಟೀಲ್ ಅವರು ಹೇಳಿಕೆ ಕೊಡಿಸಿ, ಪೊಲೀಸ್ ದೂರು ದಾಖಲಿಸಿ ಕಾಂಗ್ರೆಸ್ ಈ ಪತ್ರ ಪ್ರಹಸನವನ್ನು ನಿಭಾಯಿಸಲಿದೆ.
ಆದರೆ ಈ ಪ್ರಕರಣ ಕಾಂಗ್ರೆಸ್ ಸರಕಾರಕ್ಕೆ ಎಚ್ಚರಿಕೆಯ ಗಂಟೆ. ಬಿಜೆಪಿ, ಜೆಡಿಎಸ್ ಎರಡೂ ಸೇರಿ ಸರಕಾರದ ವಿರುದ್ಧ ಹೋರಾಡಲು ಸಜ್ಜಾಗುತ್ತಿರುವಾಗ ಅವುಗಳಿಗೆ ಸರಕು ಸಿಗದಂತೆ ನೋಡಿಕೊಳ್ಳುವುದು ಕಾಂಗ್ರೆಸ್ ಜವಾಬ್ದಾರಿ. ಬಿಜೆಪಿ ವಿರುದ್ಧ 40% ಭ್ರಷ್ಟಾಚಾರದ ಆರೋಪ ಮಾಡಿ ಗೆದ್ದು ಸರಕಾರ ರಚಿಸಿರುವ ಕಾಂಗ್ರೆಸ್ ಗೆ ದೊಡ್ಡ ಹೊಣೆಗಾರಿಕೆಯೂ ಇದೆ. ಅದಕ್ಕಾಗಿ ಯಾವುದೇ ಆರೋಪ ಬರದಂತೆ ಪಾರದರ್ಶಕ, ಭ್ರಷ್ಟಾಚಾರ ರಹಿತ ಆಡಳಿತ ನೀಡುವುದು ಅದರ ಆದ್ಯತೆಯಾಗಬೇಕು.