ಹೃದಯಗಳನ್ನು ಬೆಸೆದ ಸಂಗೀತದ ನಂಟು

Update: 2023-08-03 12:48 GMT

ಹಿಂದಿ ಚಿತ್ರಲೋಕದ ಅಪರೂಪದ ಹಿನ್ನೆಲೆ ಗಾಯಕಿ ಜಗಜೀತ್ ಕೌರ್. ಗಝಲ್ ಹಾಗೂ ಜಾನಪದ ಸಂಗೀತ ಕ್ಷೇತ್ರದ ಮರೆಯಲಾಗದ ಹೆಸರು. ಅವರ ಕಣ್ಣಿಗೆ ಆಕಸ್ಮಿಕವಾಗಿ ಕಾಣಸಿಕ್ಕವರು ಅಷ್ಟೇ ಅಪರೂಪದ ಚಿತ್ರ ಸಂಗೀತ ನಿರ್ದೇಶಕ ಖಯ್ಯಿಮ್. ಅದೇ ‘‘ಕಭೀ ಕಭೀ’’ ಚಿತ್ರದ ಗೀತೆಗಳಿಗೆ ಜೀವ ತುಂಬಿದ, ಅಮರಗೊಳಿಸಿದ ಸಂಗೀತ ನಿರ್ದೇಶಕ ಖಯ್ಯಿಮ್. ಹಾಗೆಂದು ಅವರು ಸಿಕ್ಕ ಚಿತ್ರಗಳನ್ನೆಲ್ಲ ಒಪ್ಪಿಕೊಂಡವರಲ್ಲ. ಅವಳು ಸಹ ಹಾಡಿದ್ದು ಕೆಲವೇ ಕೆಲವು ಚಿತ್ರ ಗೀತೆಗಳನ್ನು. ಆಶ್ಚರ್ಯವೆಂದರೆ ಮುಂದೆ ಖಯ್ಯಿಮ್ ಮತ್ತು ಜಗಜೀತ್ ಜನುಮದ ಜೋಡಿಯಾಗಿಬಿಟ್ಟರು. ಜಗಜೀತ್ ಅವರ ತಾಯಿ ಸಿಖ್ಖ್ ಗುರುವಿನ ವಂಶಜರಾಗಿದ್ದರು. ಭಾರೀ ಜಮೀನ್ದಾರರಾಗಿದ್ದ ತಂದೆ ಪ್ರಸಿದ್ಧ ವಕೀಲರೂ, ಕಾಂಗ್ರೆಸ್ ನಾಯಕರೂ ಆಗಿದ್ದರು. ಹೀಗೆ ಆಕಸ್ಮಿಕ ಭೇಟಿಯಾದ ಎರಡು ಜೀವಗಳನ್ನು ಬಂಧಿಸಿದ್ದು ಸಂಗೀತಮಯ ಪ್ರೇಮ. ಹಿಂದಿ ಚಿತ್ರ ಲೋಕದಲ್ಲಿ ಆಗಷ್ಟೇ ನಡೆದ ಅಂತರ್ ಧರ್ಮೀಯ ಮದುವೆಗಳಲ್ಲಿ ಅವರದು ಒಂದೆನಿಸಿಕೊಂಡಿತು. ದೇಶ ವಿಭಜನೆಯ ಕಾಲದ ಯಾತನೆ, ಕಡು ವೈರದ ಭಾವನೆಗಳು ಇನ್ನೂ ಹಚ್ಚ ಹಸಿರಾಗಿದ್ದವು. ಮುಸ್ಲಿಮ್ ಯುವಕನೊಂದಿಗೆ ತಮ್ಮ ಮಗಳ ಮದುವೆಗೆ ತಂದೆಯೇ ಕಟ್ಟಾ ವಿರೋಧಿಯಾಗಿಬಿಟ್ಟರು. ಆದರೆ ಸಂಗೀತ ಪ್ರೇಮಿ ಹಾಗೂ ಕರುಣಾಮಯಿ ತಾಯಿಯ ಸಕಾಲಿಕವಾದ ಹಿತವಚನ ಹಾಗೂ ಸನ್ನಡತೆಯಿಂದಾಗಿ ಆ ಎಲ್ಲ ವೈರದ ಭಾವನೆಗಳು ಮಂಜಿನಂತೆ ಕರಗಿ ಹೋದವು.

ಖಯ್ಯಮ್ ವೃತ್ತಿ ಜೀವನವನ್ನು ಒಂಟಿಯಾಗಿ ಆರಂಭಿಸಿರಲಿಲ್ಲ. ಅವರ ಜೊತೆಗೂಡಿದವರು ರೆಹಮಾನ್ ಎನ್ನುವವರು. ಆ ಜೋಡಿಯ ಹೆಸರು ಶರ್ಮಾಜೀ-ವರ್ಮಾಜೀ ಎಂದಿತ್ತು. ಅದು ಹಿಂದಿ ಚಿತ್ರ ಜಗತ್ತಿನ ಸಂಗೀತ ನಿರ್ದೇಶಕರ ಎರಡನೆಯ ಜೋಡಿ ಎನಿಸಿಕೊಂಡಿತು. ಮೊದಲ ಸಂಗೀತ ನಿರ್ದೇಶಕರ ಜೋಡಿಯೆಂದರೆ ಪಂ.ಅಮರನಾಥರ ತಮ್ಮಂದಿರಾದ ಹುಸ್ನಲಾಲ್-ಭಗತರಾಮ ಅವರದಾಗಿತ್ತು. ಶರ್ಮಾಜೀ-ವರ್ಮಾಜೀ ಎನ್ನುವ ಆ ಜೋಡಿ ಸಹ ಜನಪ್ರಿಯವಾಗುವತ್ತ ದಾಪುಗಾಲು ಹಾಕತೊಡಗಿತ್ತು. ಆ ಜೋಡಿ ತಮ್ಮ ಹೆಸರುಗಳನ್ನು ತಾವೇ ಬದಲಾಯಿಸಿಕೊಂಡಿರಲಿಲ್ಲ. ಆಗ ಕೋಮುವಾದ ಎನ್ನುವ ಆಕ್ಟೋಪಸ್ ಬದುಕಿನ ವಿವಿಧ ಕ್ಷೇತ್ರಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳತೊಡಗಿತ್ತು. ಆ ಯುವ ಸಂಗೀತ ನಿರ್ದೇಶಕರ ವೃತ್ತಿಯನ್ನು ಸಹ ಕೋಮುವಾದಿಗಳು ಹಾಳುಗೆಡವದಿರಲಿ ಎಂದು ಅವರ ಗುರುಗಳಾದ ಪಂ.ಅಮರನಾಥ ಅವರು ಸೂಚಿಸಿದ್ದ ಈ ಹೆಸರುಗಳಲ್ಲಿ ತಮ್ಮ ವೃತ್ತಿಯನ್ನು ಆರಂಭಿಸಲು ಸಲಹೆ ನೀಡಿದ್ದರು. ಇದುವೇ ಶಿಷ್ಯವಾತ್ಸಲ್ಯ ಅಲ್ಲವೇ?

ಅಷ್ಟರಲ್ಲಿ ಕೋಮು ಶಕ್ತಿಗಳ ಹುನ್ನಾರದಿಂದಾಗಿ ದೇಶ ವಿಭಜನೆ ಆಯಿತು. ವರ್ಮಾ ಪಾಕಿಸ್ತಾನಕ್ಕೆ ವಲಸೆ ಹೋದರು. ಅಲ್ಲಿ ಹೋಗಿ ನೆಲೆಸಿದ ಮೇಲೆ ಅವರು ರೆಹಮಾನ್ ಎನ್ನುವ ತಮ್ಮ ನಿಜ ನಾಮಧೇಯದೊಂದಿಗೆ ವೃತ್ತಿಜೀವನ ಮುಂದುವರಿಸಿದರು. ಇತ್ತ ಚಿತ್ರಸಂಗೀತವನ್ನೇ ಉಸಿರಾಗಿಸಿಕೊಂಡ ಶರ್ಮಾಜಿಯವರು ಮುಹಮ್ಮದ್ ಜಹೂರ್ ಖಯ್ಯಿಮ್ ಹಾಶ್ಮಿ ಎನ್ನುವ ತಮ್ಮ ನಿಜ ನಾಮಧೇಯದಲ್ಲಿ ಒಂಟಿಯಾಗಿ ಬದುಕು ಕಟ್ಟಿಕೊಳ್ಳಲು ತೀರ್ಮಾನಿಸಿದರು.

1953ರಲ್ಲಿ ಸಂಗೀತ ನಿರ್ದೇಶಕರಾಗಿ ಅವರಿಗೆ ಖ್ಯಾತಿ ತಂದುಕೊಟ್ಟ ಚಿತ್ರವೆಂದರೆ ‘ಫುಟ್ ಪಾತ್’. ಈ ಚಿತ್ರವು ಸಂಗೀತದ ಹೊಸ ಶೈಲಿಯನ್ನೇ ಹುಟ್ಟುಹಾಕಿತು. ಅದರ ಅಭೂತ ಯಶಸ್ಸಿನಿಂದಾಗಿ ಹಲವಾರು ಚಿತ್ರ ನಿರ್ಮಾಪಕರು ಅವರನ್ನು ಸಂಪರ್ಕಿಸತೊಡಗಿದರು. ಈ ಚಿತ್ರದ ಯಶಸ್ಸಿನೊಂದಿಗೇ ಅವರ ಬಾಳಪಯಣದಲ್ಲಿ ಜಗಜೀತ್ ಕೌರ್ ಜೊತೆಯಾದರು. ಮುಂದೆ ರಾಜ್ ಕಪೂರ್ರ ‘ಫಿರ್ ಸುಬಹ್ ಹೋಗಿ’ ಚಿತ್ರ ನಿರ್ಮಾಣದ ಕುರಿತು ಯೋಚಿಸತೊಡಗಿದ್ದರು. ಆಗ ಈ ಚಿತ್ರದ ಸಂಗೀತ ಸಂಯೋಜನೆ ಜವಾಬ್ದಾರಿ ಯಾರಿಗೆ ವಹಿಸಿಕೊಡಲಾಗುವುದು ಎಂದು ನಿರ್ದೇಶಕ ರಮೇಶ್ಸೆಹಗಲ್ರು ಸಾಹಿರ್ ಲುಧಿಯಾನ್ವಿಯವರನ್ನು ಕೇಳಿದರು. ರಾಜ್ ಕಪೂರ್ ಚಿತ್ರವೆಂದರೆ ಶೈಲೇಂದ್ರ ಅವರಿಗೆ ಗೀತ ರಚನೆ ಹಾಗೂ ಶಂಕರ-ಜಯಕಿಶನ್ ಅವರಿಗೆ ಸಂಗೀತದ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ ಎಂದರು. ಆಗ ಸಾಹಿರ್ರು, ‘‘ಯಾರು ದಾಸ್ತೊವಸ್ಕಿಯವರ ಆ ಕಾದಂಬರಿ ‘ಕ್ರೈಮ್ ಆ್ಯಂಡ್ ಪನಿಶ್ಮೆಂಟ್’ ಓದಿರುವರೋ ಮತ್ತು ಅರ್ಥ ಮಾಡಿಕೊಂಡಿರುವರೋ ಅವರು ಈ ಚಿತ್ರಕ್ಕೆ ಸಂಯೋಜನೆ ಮಾಡಿದರೆ ಸೂಕ್ತ’’ ಎಂದು ಹೇಳಿದರು. ಅಂಥವರು ಯಾರಿದ್ದಾರೆ?

ಒಬ್ಬರೇ ಒಬ್ಬರು ಇದ್ದಾರೆ. ಅದುವೇ ಖಯ್ಯಮ್.

ಶಂಕರ-ಜಯಕಿಶನ್ ಬದಲಾಗಿ ಖಯ್ಯಮ್ ಅವರೇ ಆ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದರು. ಕೊನೆಗೆ ರಾಜ್ ಕಪೂರ್ ಚಿತ್ರದ ಸಂಗೀತವನ್ನು ಬಹುವಾಗಿ ಮೆಚ್ಚಿಕೊಂಡರು. ‘‘ನಾನಂತೂ ಇಂತಹ ಸಂಗೀತ ಕೇಳಿಯೇ ಇರಲಿಲ್ಲ. ಒಂದು ಜಗತ್ಪ್ರಸಿದ್ಧ ಲೇಖಕನ ಕೃತಿಯನ್ನು ಬೆಳ್ಳಿ ಪರದೆ ಮೇಲೆ ಪರಿಣಾಮಕಾರಿಯಾಗಿ ಮೂಡಿ ಬರುವಂತೆ ಮಾಡುವಲ್ಲಿ ಈ ಸಂಗೀತದ ಪಾತ್ರ ಮುಖ್ಯವಾಗಬಲ್ಲದು’’ ಎಂದರು. ಖಯ್ಯಿಮ್ ಒಂದು ಚಿತ್ರಕ್ಕೆ ಸಂಗೀತ ಸಂಯೋಜಿಸಲು ತೊಡಗುವ ಮುನ್ನ ಆ ಚಿತ್ರದ ಹಿನ್ನೆಲೆ ತಿಳಿದುಕೊಳ್ಳಲು ಅದಕ್ಕೆ ಸಂಬಂಧಿಸಿದ ಲಭ್ಯವಾದ ಇತಿಹಾಸದ ಅಧ್ಯಯನ ಮಾಡುತ್ತಿದ್ದರು. ಇದಕ್ಕೊಂದು ಒಳ್ಳೆಯ ಉದಾಹರಣೆ ‘ಉಮ್ರಾವ್ ಜಾನ್’. ಉರ್ದುವಿನ ಮೊದಲ ಕಾದಂಬರಿಯಾದ ‘ಉಮ್ರಾವ್ ಜಾನ್ ಅದಾ’ ಆಧರಿಸಿ ಮುಝಪ್ಫರ್ ಅಲಿಯವರು ಚಿತ್ರ ನಿರ್ಮಿಸುವವರಿದ್ದರು. ಅದಕ್ಕೆ ಸಂಗೀತ ಸಂಯೋಜಿಸಲು ಆರಂಭಿಸುವ ಮುನ್ನ ಮೊದಲೇ ಕಾದಂಬರಿಯನ್ನು ಓದಿದ್ದರೂ ಖಯ್ಯೆಮ್ ಅದನ್ನು ಮತ್ತೊಮ್ಮೆ ಓದಿದರು. ಅಷ್ಟು ಸಾಲದೆ ಉಮ್ರಾವ್ ಜಾನ್ ಕುರಿತ ಮಾಹಿತಿಯನ್ನೆಲ್ಲ ಕಲೆ ಹಾಕಿದರು.

ಖಯ್ಯಮ್ ಅವರು ಉಮ್ರಾವ್ ಜಾನ್ಳನ್ನು ಹಗಲೂ ರಾತ್ರಿ ಧ್ಯಾನಿಸಿ ಪುನರ್ಸೃಷ್ಟಿಸುವಲ್ಲಿ ಯಶಸ್ವಿಯಾದರು. ಇಂತಹ ಐತಿಹಾಸಿಕ ಕಥಾ ವಸ್ತುವುಳ್ಳ ಇನ್ನೊಂದು ಚಿತ್ರ ಕಮಾಲ್ ಅಮ್ರೋಹಿಯವರ ‘ರಝಿಯಾ ಸುಲ್ತಾನಾ’. ಎಂದೆಂದೂ ಮರೆಯಲಾಗದ ಅದರ ಕರ್ಣ ಮಧುರ ಸಂಗೀತವು ಚಿತ್ರದ ಜೀವಾಳವಾಗಿ ಪರಿಣಮಿಸಿತು.

ಒಮ್ಮೆ ಚೇತನ್ ಆನಂದ್ ಒಂದು ಚಿತ್ರದ ನಿರ್ಮಾಣಕ್ಕೆ ತೊಡಗಿದ್ದರು. ಅವರ ಸ್ನೇಹಿತರು ಖಯ್ಯೆಮ್ ಅವರನ್ನು ಚೇತನ್ ಆನಂದ್ರ ಬಳಿ ಕರೆ ತಂದರು. ಖಯ್ಯೆಮ್ ಅವರಿಗೆ ಸಂಗೀತ ನಿರ್ದೇಶನದ ಒಂದು ಒಳ್ಳೆಯ ಅವಕಾಶವಿತ್ತು. ಅವರ ಸಾಮರ್ಥ್ಯದ ಬಗ್ಗೆ ಚೇತನ್ ಅವರಿಗೆ ಸಂದೇಹವಿರಲಾರದೆಂದು ಅವರು ಭಾವಿಸಿದ್ದರು. ಆದರೆ ಚೇತನ್ ಖಯ್ಯೆಮ್ರ ಸಂಗೀತ ತುಂಬ ಔಟ್ ಡೇಟೆಡ್ ಎಂದುಬಿಟ್ಟರು. ಅವರ ರಚನೆಗಳನ್ನು ಕೇಳದೆಯೇ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಅವರಿಗೆ ನಗುನಗುತ್ತಲೇ ಖಯ್ಯಾಮ್ ವಂದಿಸಿ ಹೊರ ಬಂದರು. ಅವೇ ರಚನೆಗಳನ್ನು ಯಶ್ ಚೋಪ್ರಾ ತಮ್ಮ ‘ಕಭೀ ಕಭೀ’ ಚಿತ್ರದಲ್ಲಿ ಬಳಸಿಕೊಳ್ಳಲು ಉತ್ಸುಕರಾದರು. ಆ ಚಿತ್ರ ಸೂಪರ್ ಹಿಟ್ ಆಯಿತು. ‘ಕಭೀ ಕಭೀ ಮೇರೆ ದಿಲ್ ಮೇಂ ಖಯಾಲ್ ಆತಾ ಹೈ’, ‘ಮೈಂ ಪಲ್ ದೋ ಪಲ್ ಕಾ ಶಾಯರ್ ಹೋಂ’ದಂಥ ಹಾಡುಗಳು ಅಮರವಾದವು.

‘ಬಾಝಾರ್’ ಚಿತ್ರದಲ್ಲಿ ಕಾವ್ಯ ಮತ್ತು ಸಂಗೀತ ಪೈಪೋಟಿಗಿಳಿದಂತಿತ್ತು. ಸಾಗರ್ ಸರಹದಿಯವರ ನಿರ್ದೇಶನದಲ್ಲಿ ನಿರ್ಮಾಣಗೊಂಡ ಚಿತ್ರದಲ್ಲಿ ಉರ್ದುವಿನ ಸುಪ್ರಸಿದ್ಧ ಕವಿಗಳಾದ ಮೀರ್ ತಕೀ ಮೀರ್, ಮಖ್ದೂಂ ಮುಹಿಯುದ್ದೀನ್, ಬಶೀರ್ ಬದ್ರ್ ಅವರ ಗಝಲ್ಗಳಿಗೆ ಹಾಗೂ ಮಿರ್ಝಾ ಶೌಕ್ ಅವರ ‘ಜಹರ್-ಎ-ಇಶ್ಕ್’ (ಪ್ರೇಮದ ಹಾಲಾಹಲ) ಎನ್ನುವ ಪ್ರಸಿದ್ಧ ಮರ್ಸಿಯಾ (ಕಥನ ಕಾವ್ಯ)ಕ್ಕೆ ಸಂಗೀತ ಸಂಯೋಜನೆ ಮಾಡಿದ ಖಯ್ಯೆಮ್ ಕಾವ್ಯ ಗುಣಕ್ಕೆ ಹೆಚ್ಚಿನ ಕಳೆ ತರುವಲ್ಲಿ ಸಫಲರಾದರು. ಅದರಲ್ಲೂ ‘ದೇಖಲೋ ಆಜ್ ಹಮ್ ಕೋ ಜೀ ಭರ್ ಕೆ’ ಎನ್ನುವ ಮಿರ್ಝಾ ಶೌಕ್ ಅವರ ‘ಮರ್ಸಿಯಾ’ ಚಿತ್ರದ ಕತೆಯೋ ನಿಜ ಜೀವನದ ದುರಂತವೋ ಎನ್ನುವಂತೆ ಚಿತ್ರೀಕರಿಸಲ್ಪಟ್ಟಿತು. ಕಾವ್ಯದ ಮೆರುಗೂ ಜಾನಪದ ಕಸುವೂ ಮೇಳೈವಿಸಿ ಪರಿಣಾಮಕಾರಿ ಅಮರ ಸಂಗೀತವಾಗಿ ಹೊರಹೊಮ್ಮಿದೆಯೆಂದು ವಿಮರ್ಶಕರು ಅಭಿಪ್ರಾಯಪಟ್ಟರು. ಬ್ರಿಟಿಷ್ ಸರಕಾರ ಸ್ವಾತಂತ್ರ್ಯ ಹೋರಾಟದಿಂದ ಸಾಕಷ್ಟು ಕಂಗೆಟ್ಟು ಹೋಗಿತ್ತು. ಮಿರ್ಝಾ ಶೌಕ್ ಅವರ ಈ ‘ಮರ್ಸಿಯಾ’ ಬ್ರಿಟಿಷ್ ಆಡಳಿತವನ್ನು ಒಂದು ವಿಚಿತ್ರ ಸಾಮಾಜಿಕ ಪಿಡುಗಾಗಿ ಕಾಡಿತ್ತು. ‘ಮರ್ಸಿಯಾ’ ಅದೆಷ್ಟು ಹೃದಯವಿದ್ರಾವಕವಾಗಿತ್ತೆಂದರೆ ಹದಿ ಹರೆಯದ ಯುವಕ ಯುವತಿಯರು ಆ ಕೃತಿಯನ್ನೇ ಓದುತ್ತಿದ್ದರು, ಸದಾ ಗುನುಗುನಿಸುತ್ತಿದ್ದರು. ಪ್ರೇಮದ ದುರಂತವನ್ನು ಚಿತ್ರಿಸುವಲ್ಲಿ ಅದು ಸಫಲವಾಗಿತ್ತು. ಆದರೆ ಅದರ ಪರಿಣಾಮ ಮಾತ್ರ ಭೀಕರವಾಗಿತ್ತು. ಪ್ರೇಮಿಗಳು ತಮ್ಮ ಪ್ರೇಮವೂ ದುರಂತದಲ್ಲಿ ಕೊನೆಗೊಳ್ಳಲಿದೆಯೆಂದು ಬಲವಾಗಿ ನಂಬಿ ಬಿಡುತ್ತಿದ್ದರು. ಹಾಗಾಗಿ ಅವರು ಆತ್ಮಹತ್ಯೆಗೆ ಶರಣಾಗುತ್ತಿದ್ದರು. ಪ್ರೇಮಿಗಳ ಸರಣಿ ಆತ್ಮಹತ್ಯೆಗಳಿಂದ ಬ್ರಿಟಿಷ್ ಸರಕಾರಕ್ಕೆ ದಿಕ್ಕೇ ತೋಚದಾಯಿತು. ಆ ಭಯಂಕರ ಪಿಡುಗಿನ ಹಿನ್ನೆಲೆ, ಕಾರಣ ಹಾಗೂ ಪರಿಣಾಮ ಕುರಿತು ತನಿಖೆ ಮಾಡಲು ಒಂದು ಪರಿಣತರ ಸಮಿತಿಯನ್ನು ನೇಮಕ ಮಾಡಿತು. ಇದಕ್ಕೆ ಕವಿಯೊಬ್ಬ ಕಾರಣವೆನ್ನುವುದು ಆ ಸಮಿತಿಗೆ ಹೊಳೆಯಲಿಲ್ಲ, ಹಾಗಾಗಿ ಬಡಪಾಯಿ ಕವಿ ಶೌಕ್ ಬಚಾವಾದರು. ಆದರೆ ಅವರು ಬರೆದ ‘ಮರ್ಸಿಯಾ’ವನ್ನು ಸರಕಾರ ಮುಟ್ಟುಗೋಲು ಹಾಕಿಕೊಂಡಿತು.

ಆ ಕಾವ್ಯ ಕೃತಿ ಸ್ವಾತಂತ್ರ್ಯ ಬಂದ ನಂತರವೇ ವಿಮೋಚನೆ ಪಡೆಯಿತು. ಈ ‘ಮರ್ಸಿಯಾ’ ಸೃಷ್ಟಿಸಿದ್ದ ಮಿಥ್ ಅನ್ನು ಹುಸಿಗೊಳಿಸಲು ಸಾಧ್ಯವೆಂಬುದಕ್ಕೆ ಖಯ್ಯೆಮ್ ಮತ್ತು ಜಗಜೀತ್ ಅವರ ತುಂಬು ಜೀವನವೇ ಸಾಕ್ಷಿಯಾಯಿತು. ಜಗಜೀತ್ ಅವರು, ಎಲ್ಲ ಇದ್ದೂ ನಿರ್ಗತಿಕರಾಗಿದ್ದ ಸ್ವಾಭಿಮಾನಿ ಕಲಾವಿದ ಖಯ್ಯಾಮ್ ಅವರಿಗೆ ಯಾವ ಕೊರತೆಯೂ ಆಗದಂತೆ ಕೊನೆ ತನಕ ಆಸರೆಯಾಗಿ ನಿಂತರು. ಹೀಗೆ ಅವರು ಖಯ್ಯಾಮ್ರ ಬಾಳ ಸಂಗಾತಿಯೂ ಸಂಗೀತ ಯಾನದ ಜೋಡಿಯೂ ಆಗಿದ್ದರು. ಆದ್ದರಿಂದ ಬಹುಶ: ಅವರು ಹಿನ್ನೆಲೆ ಗಾಯಕಿಯಾಗಿ ಹೆಚ್ಚು ಹಾಡಲು ಸಾಧ್ಯವಾಗಲಿಲ್ಲ. ಈ ಕುರಿತು ಇಬ್ಬರೂ ಮನಬಿಚ್ಚಿ ಹಲವು ಸಂದರ್ಭಗಳಲ್ಲಿ ಮಾತಾಡಿದ್ದಾರೆ. ಎಲ್ಲಕ್ಕೂ ಹೆಚ್ಚಾಗಿ ಇಬ್ಬರೂ ಕೋಮು ಸೌಹಾರ್ದದ ರಾಯಭಾರಿಗಳಂತಿದ್ದರು, ಈಗಲೂ ಅವರ ಅಭಿಮಾನಿಗಳ ಪಾಲಿಗೆ ಖಯ್ಯಾಮ್ ಮತ್ತು ಜಗಜೀತ್ ಪ್ರೇಮ ದೇವತೆಗಳೇ ಆಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Contributor - ಹಸನ್ ನಯೀಂ ಸುರಕೋಡ

contributor

Similar News