ತನ್ನದೇ ಪಕ್ಷದ ಕುಕಿ ಶಾಸಕನನ್ನು ಮರೆತೇ ಬಿಟ್ಟ ಸಿಎಂ, ಮೋದಿ
ಈಶಾನ್ಯ ರಾಜ್ಯ ಮಣಿಪುರ ಅಗ್ನಿಕುಂಡವಾಗಿ ಮೂರು ತಿಂಗಳುಗಳೇ ಆಗುತ್ತಿವೆ. ಸುಂದರ ರಾಜ್ಯದಲ್ಲಿ ಜನಾಂಗೀಯ ಸಂಘರ್ಷದ ಬೆಂಕಿ ಹೊತ್ತಿಕೊಳ್ಳುವುದಕ್ಕೆ ಬಿಟ್ಟು, ಅಧಿಕಾರಕ್ಕೆ ಭದ್ರವಾಗಿ ಅಂಟಿಕೊಂಡಿರುವ ಬಿಜೆಪಿಗಾಗಲೀ, ಅದರ ಮಂದಿ ಹೊಣೆಗಾರಿಕೆಯೇ ಇಲ್ಲದ ಹಾಗೆ ವರ್ತಿಸುತ್ತಿದ್ದಾರೆ. ಅವರಿಗೆ ಮಾನವೀಯತೆಯೂ ಇಲ್ಲವೇ ?
ಮಣಿಪುರದ ತುಂಬ ಮಾರಣಹೋಮ ನಡೆಯುತ್ತಿದ್ದರೂ, ಅದರ ಬಗ್ಗೆ ಮಾತನಾಡಲಾರದ, ಅಲ್ಲಿಗೊಮ್ಮೆ ಹೋಗಲಾರದ ದೇಶದ ಪ್ರಧಾನಿಗೆ ಅಮೆರಿಕ, ಈಜಿಪ್ತ್, ಫ್ರಾನ್ಸ್ ಗಿಂತಲೂ ಮಣಿಪುರ ದೂರ. ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲಾಗಿಸಿ, ಕ್ರೂರವಾಗಿ ಅತ್ಯಾಚಾರವೆಸಗಿದ ಹೇಯ ಘಟನೆಯ ಬಗ್ಗೆ ಮಾತನಾಡಬೇಕಾದ ಪ್ರಧಾನಿ ಮತ್ತವರ ತಂಡ, ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲೂ ಅತ್ಯಾಚಾರಗಳು ಆಗುತ್ತಿವೆ ಎನ್ನುವ ಮೂಲಕ, ತಾವೆಷ್ಟು ಕ್ರೂರವಾಗಿ, ಅಮಾನವೀಯವಾಗಿ ಯೋಚಿಸಬಲ್ಲೆವು ಎಂಬುದನ್ನು ಸಾಬೀತುಪಡಿಸಿದ್ದಾರೆ.
ಅವರ ಈ ಅಮಾನವೀಯತೆ, ಅವರದೇ ಪಕ್ಷದ ಶಾಸಕರೊಬ್ಬರು ಇದೇ ಘರ್ಷಣೆಯಲ್ಲಿ ಹಲ್ಲೆಗೊಳಗಾಗಿ, ತನ್ನ ದೇಹದ ಮೇಲೆಯೇ ಸ್ವಾಧೀನವಿಲ್ಲದಂತಾಗಿ ತಿಂಗಳುಗಳಿಂದ ಹಾಸಿಗೆಯಲ್ಲಿ ಬಿದ್ದಿದ್ದರೂ ಬಂದು ನೋಡದಿರುವ ಮಟ್ಟಿಗೆ ಇದೆ. ತಮ್ಮದೇ ಪಕ್ಷದ ಶಾಸಕನನ್ನು ಅಲ್ಲಿನ ಸರಕಾರ ಹಾಗೂ ಬಿಜೆಪಿ ವರಿಷ್ಠರು ಈ ಮಟ್ಟಿಗೆ ಅನಾಥರನ್ನಾಗಿಸಿದ್ದಾರೆ ಎಂದರೆ, ಜನಸಾಮಾನ್ಯರ ವಿಚಾರದಲ್ಲಿ, ತಮಗಾಗದ ಬಡ ಬುಡಕಟ್ಟು ಸಮುದಾಯದವರ ವಿಚಾರದಲ್ಲಿ ಇವರು ಇನ್ನೆಷ್ಟು ಕಾಳಜಿ ತೋರಿಸಿಯಾರು ಎಂಬುದನ್ನು ಊಹಿಸಬಹುದು.
ಮಣಿಪುರದಲ್ಲಿ ಹಿಂಸಾಚಾರ ಶುರುವಾದ ಬೆನ್ನಲ್ಲೇ ಇಂಫಾಲ್ ನಲ್ಲಿ ಬಿಜೆಪಿ ಶಾಸಕ ಕುಕಿ ಸಮುದಾಯದ ವುಂಗ್‌ಜಾಗಿನ್ ವಾಲ್ಟೆ ಮೇಲೆ ಉದ್ರಿಕ್ತರ ಗುಂಪೊಂದು ದಾಳಿ ನಡೆಸಿತು. ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಜೊತೆಗಿನ ಸಭೆಯನ್ನು ಮುಗಿಸಿಕೊಂಡು ತಮ್ಮ ಅಧಿಕೃತ ನಿವಾಸಕ್ಕೆ ತೆರಳುತ್ತಿದ್ದ ದಾರಿಯಲ್ಲಿ ವಾಲ್ಟೆ ಮೇಲೆ ಹಲ್ಲೆ ನಡೆಯಿತು.
ಈ ಭೀಕರ ದಾಳಿಯಲ್ಲಿ ಅವರ ತಲೆಬುರುಡೆಯನ್ನೇ ಒಡೆಯಲಾಯಿತು. ಎಲೆಕ್ಟ್ರಿಕ್ ಶಾಕ್ ಕೊಡಲಾಯಿತು ಎಂದೂ ಅವರ ಪುತ್ರ ಆರೋಪಿಸುತ್ತಾರೆ. ಆದಿವಾಸಿಗಳು ಮತ್ತು ಬಹುಸಂಖ್ಯಾತ ಮೈತೇಯಿ ಸಮುದಾಯದ ನಡುವೆ ರಾಜ್ಯಾದ್ಯಂತ ಹಿಂಸಾಚಾರ ಭುಗಿಲೆದ್ದ ನಂತರ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿದ್ದಾಗಲೇ ಈ ಘಟನೆ ನಡೆಯಿತು.
ಶಾಸಕ ವಾಲ್ಟೆ ಮತ್ತವರ ಚಾಲಕನ ಮೇಲೆ ಗುಂಪು ಹಲ್ಲೆ ನಡೆದ ವೇಳೆ, ಅವರ ವಿಶೇಷ ಭದ್ರತಾ ಅಧಿಕಾರಿ ಹೇಗೋ ಪಾರಾಗಿದ್ದರು. ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ವಾಲ್ಟೆ ಪ್ರಾಣಾಪಾಯದಿಂದ ಪಾರಾದರೂ, ದೈಹಿಕ ಸ್ವಾಧೀನ ಕಳೆದುಕೊಂಡ ಸ್ಥಿತಿಯಲ್ಲಿ ಹಾಸಿಗೆಯಲ್ಲಿದ್ದಾರೆ.
ವಾಲ್ಟೆ, ಫೆರ್ಜಾಲ್ ಜಿಲ್ಲೆಯ ಥಾನ್ಲೋನ್‌ನಿಂದ ಮೂರು ಬಾರಿ ಶಾಸಕರಾಗಿರುವವರು. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮಣಿಪುರದ ಬುಡಕಟ್ಟು ವ್ಯವಹಾರಗಳು ಮತ್ತು ಹಿಲ್ಸ್ ಸಚಿವರಾಗಿದ್ದರು.
ಈ ಬಾರಿ ಅವರು ಮುಖ್ಯಮಂತ್ರಿ ಬಿರೇನ್ ಸಿಂಗ್ ಗೆ ಸಲಹೆಗಾರರಾಗಿದ್ದರು. ಅಂಥ ಒಬ್ಬ ಮುಖಂಡ ಘರ್ಷಣೆಯಲ್ಲಿ ಹಲ್ಲೆಗೊಳಗಾಗಿ ಅಕ್ಷರಶಃ ಅಂಗವೈಕಲ್ಯಕ್ಕೆ ತುತ್ತಾಗಿದ್ದರೆ, ಅವರ ವಿಚಾರದಲ್ಲಿ ಬಿಜೆಪಿ ನಡೆದುಕೊಳ್ಳುತ್ತಿರುವ ಈ ರೀತಿ ಎಷ್ಟು ಕ್ರೂರವಾಗಿದೆ ನೋಡಿ. ಅವರಿಂದು ಎದ್ದು ನಡೆಯಲಾರದ ಸ್ಥಿತಿ ಮುಟ್ಟಿದ್ದಾರೆ. ತಾವಾಗಿಯೇ ಆಹಾರ ತೆಗೆದುಕೊಳ್ಳಲಾರದ ಸ್ಥಿತಿಯಲ್ಲಿದ್ದಾರೆ. ಇಂಥ ಸ್ಥಿತಿಯಲ್ಲಿ ಅವರನ್ನು ಇಡೀ ಬಿಜೆಪಿ ಒಬ್ಬಂಟಿಯಾಗಿಸಿಬಿಟ್ಟಿದೆ. ಅವರ ಕುಟುಂಬ ಅನಾಥಭಾವದಿಂದ ನೋಯುವ ಹಾಗೆ ಮಾಡಿದೆ.
ಬಿಜೆಪಿಗಾಗಿ ದುಡಿದ ಈ ಕುಕಿ ಸಮುದಾಯದ ನಾಯಕ, ತನ್ನ ಸಮುದಾಯದ ವಿರುದ್ಧ ನಡೆದ ಜನಾಂಗೀಯ ಸಂಘರ್ಷಕ್ಕೆ ತಾವೂ ಬಲಿಪಶುವಾಗಿದ್ದಾರೆ. ದುಸ್ಥಿತಿಯಲ್ಲಿರುವ ಆ ಶಾಸಕನಿಗಾಗಿ ಮತ್ತವರ ಕುಟುಂಬಕ್ಕಾಗಿ ಬಿಜೆಪಿ ಏನಾದರೂ ಮಾಡಿತೆ ಎಂದು ಕೇಳಿದರೆ ..... ಇಲ್ಲ, ಅವರನ್ನು ಆ ಪಕ್ಷ ಪೂರ್ತಿ ಮರೆತೇಬಿಟ್ಟಿದೆ.
ಹಿರಿಯ ಪತ್ರಕರ್ತೆ ಮೊಜೊ ಸ್ಟೋರಿಯ ಪ್ರಧಾನ ಸಂಪಾದಕಿ ಬರ್ಖಾ ದತ್ ಅವರ ಜೊತೆ ಮಾತನಾಡಿರುವ ವಾಲ್ಟೆ ಪತ್ನಿ ಮತ್ತು ಪುತ್ರ ಅಳಲು ತೋಡಿಕೊಂಡಿರುವುದನ್ನು ನೋಡಿದರೆ, ತಮ್ಮ ಅನಾಥ ಸ್ಥಿತಿಯ ಬಗ್ಗೆ ಹೇಳಿಕೊಳ್ಳುತ್ತಿರುವುದನ್ನು ಕೇಳಿಸಿಕೊಂಡರೆ ಮನಸ್ಸು ಕಲಕಿಹೋಗುತ್ತದೆ.
ಹಲ್ಲೆಗೆ ಒಳಗಾದ ಬಳಿಕ ವಾರಗಟ್ಟಲೆ ಅವರು ಆಸ್ಪತ್ರೆಯಲ್ಲಿ ಮಲಗಿದ್ದರು. ತನಗೆ ಸಲಹೆಗಾರರಾಗಿದ್ದ ಶಾಸಕ ಆ ಸ್ಥಿತಿಯಲ್ಲಿದ್ದಾಗ ಮುಖ್ಯಮಂತ್ರಿ ಬಿರೇನ್ ಸಿಂಗ್ ಒಮ್ಮೆ ಮಾತ್ರ ಫೋನ್ ಮಾಡಿ ಮಾತನಾಡಿದ್ದು ಬಿಟ್ಟರೆ, ಮತ್ತೆ ವಿಚಾರಿಸಿಕೊಳ್ಳಲೇ ಇಲ್ಲ ಎನ್ನುತ್ತಾರೆ ವಾಲ್ಟೆ ಪತ್ನಿ ಮೊಯಿನು ಅವರು. ತನ್ನ ಜೊತೆಗಿದ್ದ ಶಾಸಕ ಈ ಸ್ಥಿತಿಯಲ್ಲಿ ಇರುವಾಗ ಒಮ್ಮೆ ಬಂದು ನೋಡಲೂ ಆಗದಷ್ಟು ಸಮಯವೂ ಮುಖ್ಯಮಂತ್ರಿಗೆ ಇಲ್ಲವಾಯಿತೆ?
ಸರ್ಕಾರ ಚಿಕಿತ್ಸೆಗಾಗಿ ಆರ್ಥಿಕ ಸಹಾಯವನ್ನೇನಾದರೂ ಮಾಡಿದೆಯೆ ಎಂಬ ಬರ್ಖಾ ದತ್ ಅವರ ಪ್ರಶ್ನೆಗೆ ಏನೂ ಇಲ್ಲವೆಂದು ಉತ್ತರಿಸಿದೆ ವಾಲ್ಟೆ ಕುಟುಂಬ. ಈಗ ಆರ್ಥಿಕವಾಗಿ ಕಷ್ಟಪಡುತ್ತಿರುವುದನ್ನೂ ಕುಟುಂಬ ಸಂಕೋಚದಿಂದಲೇ ಹೇಳಿಕೊಂಡಿದೆ. ತನ್ನದೇ ಪಕ್ಷದ ಶಾಸಕರ ಕುಟುಂಬದ ಆರ್ಥಿಕ ಸ್ಥಿತಿ ಹೇಗಿದೆ, ಚಿಕಿತ್ಸೆಗೆ ಏನು ಮಾಡುತ್ತಿದ್ದಾರೆ ಎಂದು ಯೋಚಿಸಲೂ ಆಗದಷ್ಟು ಸರ್ಕಾರ ಮತ್ತು ಬಿಜೆಪಿ ನಾಯಕತ್ವ ಕ್ರೂರವಾಯಿತೆ?
"ತಂದೆ ಇನ್ನೂ ನಡೆಯಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ" ಎನ್ನುವ ಅವರ ಪುತ್ರ ಜೋಸೆಫ್, "ಇನ್ನು ಮುಂದೆ ಆರೋಗ್ಯ ಸುಧಾರಿಸಿ ನಡೆಯುವಂತಾಗಬಲ್ಲರೆ" ಎಂದು ಕೇಳಿದರೆ, ದೇವರಿಗೇ ಗೊತ್ತು ಎಂದು ಬಹಳ ನೋವಿನಿಂದಲೇ ಹೇಳುತ್ತಾರೆ. ತಂದೆ ಮತ್ತೆ ನಡೆಯಲಾರರು ಎನ್ನುವ ಜೋಸೆಫ್, ತಾವು ಅನಾಥರಾಗಿಬಿಟ್ಟಿದ್ದೇವೆ ಎನ್ನುತ್ತಾರೆ.
ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ್ದ ಹೊತ್ತಲ್ಲಿ ಕೆಲವರು ಫೋನ್ ಮಾಡಿ ಆರೋಗ್ಯ ವಿಚಾರಿಸಿದ್ದು ಬಿಟ್ಟರೆ ಅನಂತರದ ವಾರಗಳಲ್ಲಿ ಯಾರೂ ಹೇಗಿದ್ದಾರೆ ಎಂದೂ ಕೇಳಿಲ್ಲ ಎಂದು ಬರ್ಖಾ ದತ್ ಅವರ ಬಳಿ ಹೇಳಿಕೊಂಡಿದ್ದಾರೆ ವಾಲ್ಟೆ ಪತ್ನಿ ಮತ್ತು ಮಗ.
ಇಂಥ ಸ್ಥಿತಿಯ ಬಗ್ಗೆ ಏನೆನನ್ನಿಸುತ್ತದೆ, ಇನ್ನು ರಾಜಕೀಯ ಬೇಡ ಎನ್ನಿಸುತ್ತದೆಯೆ? ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕೇ? ರಾಷ್ಟ್ರಪತಿ ಆಳ್ವಿಕೆ ಬರಬೇಕೆನ್ನುತ್ತೀರಾ? ಎಂದೆಲ್ಲ ಬರ್ಖಾ ದತ್ ಕೇಳಿದ್ದಕ್ಕೆ ಧೈರ್ಯವಾಗಿ ಉತ್ತರಿಸಲಾರದ ಅಸಹಾಯಕತೆ ಮತ್ತು ಭಯ ಆ ಕುಟುಂಬಕ್ಕಿದೆ ಎನ್ನುವುದು ಸ್ಪಷ್ಟ. ಅವರದೇ ಪಕ್ಷದ ಶಾಸಕರಾಗಿದ್ದರೂ ಕುಕಿ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕಾಗಿ ಹಲ್ಲೆಗೊಳಗಾಗಿ ಹಾಸಿಗೆಯಲ್ಲಿ ಅಸಹಾಯಕರಾಗಿ ಮಲಗಿರುವ ವಾಲ್ಟೆಯನ್ನು ಬಿಜೆಪಿ ನಾಯಕರು ನಿರ್ಲಕ್ಷಿಸಿದರೆ?
ಮುಖ್ಯಮಂತ್ರಿ ಬಿರೇನ್ ಸಿಂಗ್ ಸೇರಿದಂತೆ ಎಲ್ಲ ಬಿಜೆಪಿ ನಾಯಕರೂ ಬಹುಸಂಖ್ಯಾತ ಮೈತೇಯಿ ಸಮುದಾಯದ ಪರವಾಗಿದ್ದಾರೆ. ಅದೇ ಬಿಜೆಪಿಯಲ್ಲಿನ ಕುಕಿ ಸಮುದಾಯದ ನಾಯಕರ ದನಿ ಅಡಗಿಹೋಗಿದೆ. ಕುಕಿ ಸಮುದಾಯದ ಆಡಳಿತ ಪಕ್ಷದ ಹಿರಿಯ ನಾಯಕ, ಮಾಜಿ ಸಚಿವ, ಹಾಲಿ ಶಾಸಕ ಹಾಗು ಮುಖ್ಯಮಂತ್ರಿಯ ಸಲಹೆಗಾರರ ಪರಿಸ್ಥಿತಿಯೇ ಹೀಗಿದ್ದರೆ ಅಲ್ಲಿನ ಸಾಮಾನ್ಯ ಕುಕಿ ಜನರು ಅದೆಂತಹ ಸ್ಥಿತಿಯಲ್ಲಿರಬಹುದು ಎಂದು ಯಾರೂ ಊಹಿಸಬಹುದು.
ಇವರ ರಾಜಕಾರಣ ಒಂದಿಡೀ ಸಮುದಾಯವನ್ನೇ ದ್ವೇಷಿಸುತ್ತ ಹೇಗೆ ಬೆಂಕಿ ಹಚ್ಚಿದೆ ಎಂಬುದು ರಹಸ್ಯ ವಿಚಾರವೇನೂ ಅಲ್ಲ. ಆ ಬೆಂಕಿ ನೂರಾರು ಜನರ ಬದುಕನ್ನೂ ಸುಟ್ಟುಹಾಕಿದೆ. ಸಾವಿರಾರು ಮಂದಿಯ ಎದೆಯೊಳಗೆ ಭಯದ ಕಿಡಿಯನ್ನೂ ಹಚ್ಚಿದೆ. ನಾಳೆ ಹೇಗೆ ಎಂಬ ಕರಾಳ ಅನಿಶ್ಚಿತತೆಯ ಪ್ರಪಾತದಲ್ಲಿ ಅವರನ್ನೆಲ್ಲ ಬೀಳಿಸಿದೆ.
ಮೂರು ತಿಂಗಳಿಂದ ಹೀಗೆ ಹೊತ್ತಿ ಉರಿಯುತ್ತಿದ್ದ ರಾಜ್ಯ ಬಿಜೆಪಿಯೇತರ ಸರ್ಕಾರದ್ದಾಗಿದ್ದರೆ ಇವರು ಸುಮ್ಮನಿರುತ್ತಿದ್ದರೆ ? ಹಾಗಿರುವಾಗ ಮಣಿಪುರದಲ್ಲಿ ಸರ್ಕಾರ ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರಲು ಮುಂದಾಗದೆ ಇವರೇಕೆ ಮಣಿಪುರದ ಅಮಾಯಕರ ಬದುಕು ಕಸಿದುಕೊಳ್ಳುತ್ತಿದ್ದಾರೆ?. ಮಣಿಪುರ ಉರಿಯುತ್ತಿದ್ದರೂ ಮುಖ್ಯಮಂತ್ರಿ ರಾಜೀನಾಮೆಯಿಲ್ಲ, ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂಬ ಒತ್ತಾಯಕ್ಕೂ ಇವರು ಸಂಪೂರ್ಣ ಕಿವುಡಾಗಿ ಕೂತಿದ್ದಾರೆ.
ಇದೆಲ್ಲದರ ನಡುವೆ, ತಮ್ಮದೇ ಶಾಸಕನನ್ನು, ಅವರು ಕುಕಿ ಸಮುದಾಯಕ್ಕೆ ಸೇರಿದವರೆಂಬ ಕಾರಣಕ್ಕಾಗಿಯೇ ಅವರ ಅತ್ಯಂತ ದುಸ್ಥಿತಿಯಲ್ಲೂ ಅನಾಥರನ್ನಾಗಿಸಿದ್ದಾರೆ. ಬಿಜೆಪಿಗೆ ಅಧಿಕಾರ ಬೇಕು, ಆದರೆ ಅದರ ಜೊತೆ ಬರುವ ಜವಾಬ್ದಾರಿಯ ಅರಿವಿಲ್ಲ. ಈಗ ಅದಕ್ಕೆ ಹೃದಯವೂ ಇಲ್ಲ ಎಂಬುದರ ರೂಪವೇ ಆಗಿ ಮಣಿಪುರದ ಬೆಂಕಿ ಕಾಣಿಸುತ್ತಿದೆ.