ಸಮರಕ್ಕಾಗಿ ಸಮರಸ ಸೂತ್ರ: ಪ್ರತಿಪಕ್ಷ ಮೈತ್ರಿಕೂಟದ ಮುಂದಿವೆ ಹಲವು ಸವಾಲುಗಳು

ಮೈತ್ರಿಕೂಟ ಈಗ ತನ್ನ ಸಮಸ್ಯೆಗಳಲ್ಲಿಯೇ ಮುಳುಗಿರುವಂತಿಲ್ಲ. ಅದಕ್ಕೆ ಸಮಯವೂ ಇಲ್ಲ. ಅಂತಿಮವಾಗಿ ಅದು ಚುನಾವಣೆ ಎದುರಿಸುವುದಕ್ಕೆ ಅಗತ್ಯ ದಾರಿಯನ್ನು ಕಂಡುಕೊಳ್ಳಲು ಎಲ್ಲ ಅಡ್ಡಿಗಳನ್ನು ನಿವಾರಿಸಿಕೊಳ್ಳಬೇಕಾದ ಹಂತದಲ್ಲಿದೆ. ಸೀಟು ಹಂಚಿಕೆ, ಸಾಮಾನ್ಯ ಅಭ್ಯರ್ಥಿ ಸೂತ್ರದ ರೂಪುರೇಷೆ, ಸಂಪನ್ಮೂಲಗಳ ಕ್ರೋಡೀಕರಣ ಮತ್ತು ಸಂಘಟಿತ ಪ್ರಚಾರ ತಂತ್ರ ಇವುಗಳ ವಿಚಾರದಲ್ಲಿ ಅದು ಸ್ಪಷ್ಟತೆ ಪಡೆಯಬೇಕಾಗಿದೆ.

Update: 2023-08-30 06:10 GMT

- ಆನಂದ್ ವರ್ಧನ್

26 ಪ್ರತಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ಘೋಷಣೆಯಾದ ಸುಮಾರು ಆರು ವಾರಗಳ ನಂತರ, ಅದರ ಜಟಿಲತೆಗಳನ್ನು ಬಗೆಹರಿಸುವ ಪ್ರಯತ್ನ ಈಗ ಜಾರಿಯಲ್ಲಿದೆ. ಮುಂಬೈನಲ್ಲಿ ಈ ವಾರ ಮೈತ್ರಿಕೂಟದ ಮತ್ತೊಂದು ಸಭೆ ನಡೆಯುತ್ತಿದೆ. ಎನ್ಸಿಪಿ, ಶಿವಸೇನೆ ಉದ್ಧವ್ ಠಾಕ್ರೆ ಬಣ (ಯುಬಿಟಿ) ಮತ್ತು ಕಾಂಗ್ರೆಸ್ ಪಕ್ಷಗಳಿರುವ, ಮಹಾರಾಷ್ಟ್ರದಲ್ಲಿನ ಮೈತ್ರಿಕೂಟವಾಗಿರುವ ಮಹಾ ವಿಕಾಸ್ ಅಘಾಡಿ ಈ ಸಭೆಯನ್ನು ಆಯೋಜಿಸಲಿದೆ.

ಪಾಟ್ನಾದಲ್ಲಿ ಜೂನ್ ತಿಂಗಳಲ್ಲಿ ನಡೆದ ಸಭೆಯಲ್ಲಿ ಮೈತ್ರಿ ಪರಿಕಲ್ಪನೆ ಔಪಚಾರಿಕವಾಗಿ ಪ್ರಸ್ತಾಪವಾಯಿತು. ಅಲ್ಲಿಂದ, ಮೈತ್ರಿಕೂಟದ ಎಲ್ಲ ಕುಂದುಕೊರತೆಗಳನ್ನು ಸರಿಪಡಿಸುವ, ಒಂದು ಸಮರಸದ ಸೂತ್ರಕ್ಕೆ ಎಲ್ಲವನ್ನೂ ಒಗ್ಗಿಸುವ ಕೆಲಸ ನಡೆದಿದೆ. ಸ್ಪಷ್ಟ ಒಪ್ಪಂದಕ್ಕೆ ಬರುವ ಪ್ರಯತ್ನವಾಗುತ್ತಿದೆ. ಇದು ಮುಂಬೈನಲ್ಲಿ ನಡೆಯುವಂಥ ಔಪಚಾರಿಕ ಸಭೆಗಳು ಮಾತ್ರವಲ್ಲದೆ ಪಕ್ಷ ಪಕ್ಷಗಳ ನಡುವಿನ ಅನೌಪಚಾರಿಕ ಮಾತುಕತೆಗಳೂ ಅಗತ್ಯವಿರುವ ಬಹು ದೊಡ್ಡ ಕಸರತ್ತಾಗಿದೆ.

ಮೈತ್ರಿಕೂಟ ಈಗ ತನ್ನ ಸಮಸ್ಯೆಗಳಲ್ಲಿಯೇ ಮುಳುಗಿರುವಂತಿಲ್ಲ. ಅದಕ್ಕೆ ಸಮಯವೂ ಇಲ್ಲ. ಅಂತಿಮವಾಗಿ ಅದು ಚುನಾವಣೆ ಎದುರಿಸುವುದಕ್ಕೆ ಅಗತ್ಯ ದಾರಿಯನ್ನು ಕಂಡುಕೊಳ್ಳಲು ಎಲ್ಲ ಅಡ್ಡಿಗಳನ್ನು ನಿವಾರಿಸಿಕೊಳ್ಳಬೇಕಾದ ಹಂತದಲ್ಲಿದೆ. ಸೀಟು ಹಂಚಿಕೆ, ಸಾಮಾನ್ಯ ಅಭ್ಯರ್ಥಿ ಸೂತ್ರದ ರೂಪುರೇಷೆ, ಸಂಪನ್ಮೂಲಗಳ ಕ್ರೋಡೀಕರಣ ಮತ್ತು ಸಂಘಟಿತ ಪ್ರಚಾರ ತಂತ್ರ ಇವುಗಳ ವಿಚಾರದಲ್ಲಿ ಅದು ಸ್ಪಷ್ಟತೆ ಪಡೆಯಬೇಕಾಗಿದೆ.

ಈಗಿನ ಎಲ್ಲ ವ್ಯಾಪಕ ಸಮಾಲೋಚನೆಗಳು ಮತ್ತು ಮಾತುಕತೆಗಳು ಈ ನಿಟ್ಟಿನ ಕೆಲವು ವಿಧಾನಗಳನ್ನು ರೂಪಿಸುವ ಗುರಿಯನ್ನು ಹೊಂದಿವೆ. ಬೆಂಗಳೂರಿನಲ್ಲಿ ಜುಲೈ ತಿಂಗಳಿನ ಸಭೆಯಂತೆ, ಮೈತ್ರಿಕೂಟದ ಎರಡು ದಿನಗಳ ಔಪಚಾರಿಕ ಸಭೆಗೆ ಮೊದಲು ಪಕ್ಷದ ನಾಯಕರು ಅನೌಪಚಾರಿಕ ಮಾತುಕತೆ ನಡೆಸುವುದರ ಅಗತ್ಯ ಮನಗಂಡಿದ್ಧಾರೆ.

ಎಲ್ಲಕ್ಕಿಂತ ಮುಖ್ಯವಾಗಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಸ್ತಾಪಿಸಿದಂತೆ 11 ಸದಸ್ಯರ ಸಮನ್ವಯ ಸಮಿತಿಯನ್ನು ಸಂಚಾಲಕರ ನೇಮಕದೊಂದಿಗೆ ರಚಿಸುವ ಸಾಧ್ಯತೆಯಿದೆ.

ಕೇಂದ್ರದಲ್ಲಿ ಸಮ್ಮಿಶ್ರ ರಾಜಕೀಯದ ಉಚ್ಛ್ರಾಯ ಸ್ಥಿತಿಯಲ್ಲಿ - ಕಳೆದ ಶತಮಾನದ ಕೊನೆಯ ಮೂರು ದಶಕಗಳಿಂದ ಈ ಶತಮಾನದ ಮೊದಲ ದಶಕದ ನಡುವೆ ಅಂಥ ಕಾರ್ಯವಿಧಾನಗಳು ಮತ್ತು ಸಂಯೋಜಕರ ಪಾತ್ರ ಮೈತ್ರಿಕೂಟಗಳ ವೈವಿಧ್ಯಮಯ ಹಿತಾಸಕ್ತಿಗಳನ್ನು ನಿರ್ವಹಿಸುವಲ್ಲಿ ಪ್ರಮುಖವಾಗಿತ್ತು. ಇದರೊಂದಿಗೆ, ಪ್ರಚಾರ ಮತ್ತು ಸಂವಹನದಂತಹ ನಿರ್ದಿಷ್ಟ ಸಮಿತಿಗಳಿಗೆ ಔಪಚಾರಿಕ ರೂಪವನ್ನು ನೀಡಲಾಗುವುದು. ಅದಕ್ಕೆ ಪೂರಕವಾಗಿ ಮೈತ್ರಿಗೆ ಸಾಮಾನ್ಯ ಕಾರ್ಯದರ್ಶಿಯೂ ಬರಬಹುದು.

ಚುನಾವಣೆಯ ಹೊತ್ತಿನಲ್ಲಿ ಹೋರಾಡಬೇಕಿರುವ ಬಗೆಯನ್ನು ಸ್ಪಷ್ಟಪಡಿಸಿಕೊಳ್ಳುವ ಮತ್ತು ಅದಕ್ಕೆ ಪೂರಕವಾಗಿ ಸಿದ್ಧಗೊಳ್ಳಬೇಕಿರುವ ಬಗೆಯನ್ನು ಮೈತ್ರಿಪಕ್ಷಗಳು ಕಂಡುಕೊಳ್ಳಬೇಕಿರುವುದು ಪ್ರಮುಖ ಘಟ್ಟ.

ಕಳೆದ ದಶಕಗಳಲ್ಲಿ ಕೇಂದ್ರದಲ್ಲಿನ ಮೈತ್ರಿ ವ್ಯವಸ್ಥೆಗಳ ಒಂದು ಅಂಶವೆಂದರೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮ. ಚುನಾವಣಾ ಪೂರ್ವ ಕಾರ್ಯಕ್ರಮ ರೂಪಿಸಲು ಮೈತ್ರಿ ನಾಯಕರು ಮುಂದಾಗಿದ್ದಾರೆ. ನಿಜವಾದ ಅರ್ಥದಲ್ಲಿ, ಮೈತ್ರಿ ಸೈದ್ಧಾಂತಿಕ ಒಗ್ಗಟ್ಟು ಹೊಂದಿಲ್ಲ ಎಂಬ ಪ್ರತಿಸ್ಪರ್ಧಿ ಎನ್ಡಿಎ ಆರೋಪವನ್ನು ಸರಿದೂಗಿಸುವ ಪ್ರಯತ್ನ ಇದಾಗಿದೆ. ಇದು ಮೈತ್ರಿಕೂಟದ ಪ್ರಚಾರ ಶೈಲಿಯನ್ನು ಚುರುಕುಗೊಳಿಸುವ ಸಾಧ್ಯತೆಯೂ ಇದೆ.

ಆದಾಗ್ಯೂ, ಒಮ್ಮುಖ ಸಂಹಿತೆಯನ್ನು ರಚಿಸುವುದು ಇನ್ನೂ ಪಕ್ಷದ ಮುಖ್ಯಸ್ಥರ ಒಪ್ಪಿಗೆಯನ್ನು ಪಡೆಯಬೇಕಿರುವ ವಿಚಾರವಾಗಿಯೇ ಉಳಿದಿದೆ.

ಮತ್ತೊಂದು ಸಂದಿಗ್ಧತೆ, ಮೈತ್ರಿಕೂಟ ತನ್ನ ಪ್ರಧಾನಿ ಅಭ್ಯರ್ಥಿಯನ್ನು ಬಿಂಬಿಸುವ ಕುರಿತದ್ದು. ಸದ್ಯ, ಮೋದಿ ಜನಪ್ರಿಯತೆಯ ಜೊತೆ ಹೋಲಿಕೆ ತಪ್ಪಿಸುವ ಕಾರಣಕ್ಕಾಗಿ ಮೈತ್ರಿ ನಾಯಕರು ಯಾವುದೇ ಚುನಾವಣಾ ಪೂರ್ವ ಬಿಂಬಿಸುವಿಕೆಯ ಅಗತ್ಯವನ್ನು ಬದಿಗಿಟ್ಟಿದ್ದಾರೆ. ಆದರೆ, ಇತ್ತೀಚಿನ ವಾರಗಳಲ್ಲಿ ಮೈತ್ರಿಕೂಟದ ಕೇಂದ್ರವಾಗಿ ಕಾಂಗ್ರೆಸ್ ತನ್ನ ಅಧ್ಯಕ್ಷ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಲೂ ಬಹುದು ಎನ್ನಲಾಗುತ್ತಿದೆ. ಇಂತಹ ಸಾಧ್ಯತೆಗಳು, ಈ ಕ್ಷಣದಲ್ಲಿ ಬಹುಮಟ್ಟಿಗೆ ಊಹಾತ್ಮಕವಾಗಿದ್ದು, ಖರ್ಗೆಯವರ ದಲಿತ ಗುರುತನ್ನು ಚುನಾವಣೆಯಲ್ಲಿ ಶಕ್ತಿಯಾಗಿ ಬಳಸುವುದು ಮತ್ತು ಪಕ್ಷದೊಳಗಿನ ಗಾಂಧಿ ಕುಟುಂಬ ನಿಯಂತ್ರಿತ ಅಧಿಕಾರ ಕೇಂದ್ರಗಳಲ್ಲಿ ಖರ್ಗೆ ಸ್ವೀಕಾರಾರ್ಹತೆಯ ಆಧಾರದಿಂದ ವ್ಯಕ್ತವಾಗುತ್ತಿರುವುದಾಗಿದೆ.

ನಾಯಕತ್ವವನ್ನು ಬಿಂಬಿಸದಿರುವ ಯೋಚನೆ ಪ್ರಾಥಮಿಕವಾಗಿ ಒಂದು ತಂತ್ರವಾಗಿತ್ತು. ಒಂದು ವೇಳೆ ಪ್ರಧಾನಿ ಅಭ್ಯರ್ಥಿಯನ್ನು ಬಿಂಬಿಸಿದಲ್ಲಿ ತೊಡಕಾಗಬಹುದು ಎಂಬುದು ಇದಕ್ಕೆ ಕಾರಣವಾಗಿತ್ತು. ನಾಯಕತ್ವದ ಪ್ರಶ್ನೆಯನ್ನು ಪಕ್ಕಕ್ಕೆ ಇಟ್ಟುಕೊಳ್ಳುವುದು, ಮೈತ್ರಿಕೂಟ ಚುನಾವಣೆಯಲ್ಲಿ ಗೆಲ್ಲುವಲ್ಲಿ ಯಶಸ್ವಿಯಾದ ನಂತರದ ಅಧಿಕಾರದ ಸಮೀಕರಣಗಳಲ್ಲಿ ಅನುಕೂಲವಾಗಲಿ ಎಂಬ ಕಾರಣಕ್ಕೆ.

ಇತರ ಅಂಶವಾಗಿ ಮುಖ್ಯವಾಗುವುದು ಚುನಾವಣಾ ತಂತ್ರಗಾರಿಕೆ. ಇದರ ಬಗ್ಗೆ ಕೂಟ ಬಹಳ ರಕ್ಷಣಾತ್ಮಕವಾಗಿ ಯೋಚಿಸುತ್ತಿರುವಂತಿದೆ. ಬಿಜೆಪಿ ನೇತೃತ್ವದ ಪ್ರಚಾರದ ಬಗ್ಗೆ ಮೈತ್ರಿ ಕೂಟ ಎಚ್ಚರವಹಿಸಿದೆ. ಎಲ್ಲಿಯೂ ತನ್ನ ನಡೆ ಬಿಜೆಪಿಗೆ ಲಾಭವಾಗದಂತೆ ನೋಡಿಕೊಳ್ಳುವ ಎಚ್ಚರ ಅದು.

ಸಂದಿಗ್ಧತೆಯೆಂದರೆ, ಅಪಾಯಗಳನ್ನು ತೆಗೆದುಕೊಳ್ಳದಿರುವುದು ಮೈತ್ರಿಕೂಟವನ್ನು ವಿಭಿನ್ನ ಸವಾಲುಗಳಿಗೆ ಒಡ್ಡುತ್ತದೆ. ನಾಯಕತ್ವದ ಮೇಲಿನ ನಿರ್ಣಯದಲ್ಲಿನ ಅಸ್ಥಿರತೆಯ ಆರಂಭಿಕ ಚಿಹ್ನೆಗಳು, ಒಗ್ಗಟ್ಟಿನ ಕೊರತೆ ಮತ್ತು ಹೊಸ ಮೈತ್ರಿಯಲ್ಲಿ ಭವಿಷ್ಯದ ಅಧಿಕಾರಕ್ಕಾಗಿ ಹೋರಾಟದ ಸೂಚನೆಗಳಂತೆ ಕಂಡು ಟೀಕೆಗೆ ಒಳಗಾಗುತ್ತಿವೆ.

ಇನ್ನು ಸಾಮಾನ್ಯ ಅಭ್ಯರ್ಥಿ ಸೂತ್ರವೂ ಮತ್ತೊಂದು ಸವಾಲಾಗಲಿದೆ. ಒಂದು ಮಿತ್ರಪಕ್ಷದ ಮತದಾರರು ಮತ್ತೊಂದಕ್ಕೆ ಬೆಂಬಲಿಸಿಯಾರೆ ಎಂಬ ಪ್ರಶ್ನೆಯಿದೆ. ರಾಜ್ಯ ರಾಜಕೀಯದಲ್ಲಿ ಕೆಲವು ಮಿತ್ರಪಕ್ಷಗಳು ಪ್ರತಿಸ್ಪರ್ಧಿಗಳಾಗಿರುವ ರಾಜ್ಯಗಳಲ್ಲಿ ಇದು ವಿಶೇಷವಾಗಿ ಅಪಾಯಕಾರಿಯಾಗಿದೆ. ಕೆಲವನ್ನು ಹೆಸರಿಸುವುದಾದರೆ, ಪಶ್ಚಿಮ ಬಂಗಾಳ, ಪಂಜಾಬ್ ಮತ್ತು ಕೇರಳ ಇವು ಅಂಥ ಕೆಲವು ರಾಜ್ಯಗಳು. ಡಿಎಂಕೆಯಂತಹ ಪಕ್ಷ ಕಾಂಗ್ರೆಸ್ ಅಥವಾ ಎಡಪಕ್ಷಗಳಿಂದ ಹೇಳಿಕೊಳ್ಳುವಂಥ ಸ್ಪರ್ಧೆಯನ್ನು ಹೊಂದಿರದ ತಮಿಳುನಾಡಿನಂತಹ ರಾಜ್ಯಗಳಲ್ಲಿ ಇಂತಹ ಸಮಸ್ಯೆ ಕಡಿಮೆ. ಆದರೆ ಮೈತ್ರಿಕೂಟದ ಪಾಲುದಾರರು ಆಡಳಿತ ನಡೆಸುತ್ತಿರುವ 11 ರಾಜ್ಯಗಳಲ್ಲಿ, ಮತ ವರ್ಗಾವಣೆ ವಿಚಾರವಾಗಿ, ಪ್ರಮುಖ ಮತದಾರರನ್ನು ಓಲೈಸಲು ಹೆಚ್ಚು ಪ್ರಯತ್ನದ ಅಗತ್ಯ ಬೀಳಬಹುದು.

ಇದಲ್ಲದೆ, ಅಂತಹ ವರ್ಗಾವಣೆ ಪಕ್ಷಗಳ ಸ್ಥಳೀಯ ಘಟಕಗಳ ನಡುವಿನ ಸಮನ್ವಯವನ್ನು ಅವಲಂಬಿಸಿರುತ್ತದೆ. ಪಕ್ಷಗಳ ಬೂತ್ ಕಾರ್ಯಕರ್ತರ ಮಟ್ಟದಲ್ಲಿಯೂ ಇಂಥ ಸಮನ್ವಯದ ಅಗತ್ಯವಿರುತ್ತದೆ. ಒಕ್ಕೂಟದೊಳಗೆ ಅಂತಹ ಕಾರ್ಯಕರ್ತರ ಮಟ್ಟದ ಹೊಂದಾಣಿಕೆ ಇಲ್ಲದೆ ಹೋದಲ್ಲಿ ಚುನಾವಣಾ ತಂತ್ರಗಳು ಫಲಕಾರಿಯಾಗಲಾರವು. ಉದಾಹರಣೆಗೆ, ಕಳೆದ ಲೋಕಸಭೆ ಚುನಾವಣೆಯಲ್ಲಿ, ಮೈತ್ರಿ ಪಕ್ಷಗಳ ಕಾರ್ಯಕರ್ತರ ನಡುವಿನ ಸಮನ್ವಯ ಕೊರತೆ ಉತ್ತರ ಪ್ರದೇಶದಲ್ಲಿ ಎಸ್ಪಿ ಮತ್ತು ಬಿಎಸ್ಪಿ ನಡುವಿನ ಮೈತ್ರಿ ವೈಫಲ್ಯಕ್ಕೆ ಕಾರಣವಾಯಿತು.

ಎಪ್ಪತ್ತು ಮತ್ತು ಎಂಭತ್ತರ ದಶಕದ ಕಾಂಗ್ರೆಸ್ ವಿರೋಧಿ ಬಣದಂತೆ ಈಗ ಬಿಜೆಪಿ ವಿರೋಧಿ ಮೈತ್ರಿಯನ್ನು ಬಲಪಡಿಸುವ ಮತ್ತೊಂದು ಪ್ರಯತ್ನವೆಂಬಂತೆಯೂ ಇದೆಲ್ಲವೂ ಕಾಣಿಸುತ್ತಿದೆ. ಮುಂಬೈನಲ್ಲಿಯ ಮೈತ್ರಿಕೂಟದ ಸಭೆ ಯಾವ ಸೂತ್ರಗಳನ್ನು ಕಂಡುಕೊಳ್ಳಲಿದೆ, ಪ್ರತಿಪಕ್ಷಗಳು ಬಿಜೆಪಿ ವಿರುದ್ಧದ ಹೋರಾಟ ವಿಚಾರದಲ್ಲಿ ಎಷ್ಟು ಗಂಭೀರವಾಗಿವೆ ಎಂಬುದೆಲ್ಲವೂ ಮುಖ್ಯವಾಗಲಿದೆ. ಭಿನ್ನಮತ ಮತ್ತು ರಾಜಕೀಯ ಹಿತಾಸಕ್ತಿಗಳೆರಡರ ನಡುವೆ ಸಮನ್ವಯ ಸಾಧ್ಯವಾಗುವುದೆ ಎಂಬುದು ಈಗಿನ ಕುತೂಹಲ.

(ಕೃಪೆ: newslaundry.com)

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News