‘ಜಾತ್ಯತೀತ’ ಕುಮಾರಸ್ವಾಮಿಯವರ ಹತಾಶ ಮನಃಸ್ಥಿತಿ

ಎಚ್.ಡಿ. ಕುಮಾರಸ್ವಾಮಿಯವರ ಮಾತು ಅವರ ಹತಾಶ ಮನಃಸ್ಥಿತಿಗೆ ಒಡ್ಡಿದ ಕನ್ನಡಿಯಂತಿದೆ. ಹಾಗಾದರೆ ಅವರು ಮುಖ್ಯಮಂತ್ರಿಯಾಗಲು ಯಾರು ತಡೆದರು? ಇಷ್ಟಕ್ಕೂ ಆ ಮಾತು ಈಗೇಕೆ? ಆಪರೇಷನ್ ಕಮಲದಲ್ಲಿ ನಿಸ್ಸೀಮರಾದ ಬಿಜೆಪಿಯವರು ಡಬಲ್ ಇಂಜಿನ್ ರೈಲು ಬಿಡುತ್ತಾ ಉತ್ತರದಿಂದ ದಕ್ಷಿಣಕ್ಕೂ ಓಡಿಸುತ್ತಿದ್ದಾಗ ತಡೆವವರಾರು? ಆದರೂ ಅದನ್ನು ತಡೆದು ನಿಲ್ಲಿಸಿದವರು ಕರ್ನಾಟಕದ ಮತದಾರರು ತಾನೆ? ಯಾಕೆ ತಡೆದರೆಂಬುದು ಕುಮಾರಸ್ವಾಮಿಯವರಿಗೂ ಚೆನ್ನಾಗಿ ಗೊತ್ತು.

Update: 2023-07-18 08:10 GMT

ಪ್ರೊ. ಶಿವರಾಮಯ್ಯ, ಬೆಂಗಳೂರು

‘‘ಕಳೆದ ಲೋಕಸಭಾ ಚುನಾವಣೆಯ ವೇಳೆ ಪ್ರಧಾನಿ ನರೇಂದ್ರಮೋದಿ ಮಾತು ಕೇಳಿದ್ದರೆ ಐದು ವರ್ಷಗಳ ಕಾಲ ನಾನೇ ಮುಖ್ಯಮಂತ್ರಿ ಆಗಿರುತ್ತಿದ್ದೆ’’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಳೆದ ಗುರುವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಕುರಿತ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಮುಂದುವರಿದ ಅವರು ಆದರೆ ಯಾವುದೇ ಕಪ್ಪುಚುಕ್ಕೆ ಬೇಡ ಎಂದು ಕಾಂಗ್ರೆಸ್ ಜೊತೆಗೆ ಹೋದೆ ಎಂದು ಹೇಳಿರುತ್ತಾರೆ. (ವಾರ್ತಾಭಾರತಿ. 14. 7. 2023).

ಈ ಮಾತು ಅವರ ಹತಾಶ ಮನಃಸ್ಥಿತಿಗೆ ಒಡ್ಡಿದ ಕನ್ನಡಿಯಂತಿದೆ. ಹಾಗಾದರೆ ಅವರು ಮುಖ್ಯಮಂತ್ರಿಯಾಗಲು ಯಾರು ತಡೆದರು? ಇಷ್ಟಕ್ಕೂ ಆ ಮಾತು ಈಗೇಕೆ? ಆಪರೇಷನ್ ಕಮಲದಲ್ಲಿ ನಿಸ್ಸೀಮರಾದ ಬಿಜೆಪಿಯವರು ಡಬಲ್ ಇಂಜಿನ್ ರೈಲು ಬಿಡುತ್ತಾ ಉತ್ತರದಿಂದ ದಕ್ಷಿಣಕ್ಕೂ ಓಡಿಸುತ್ತಿದ್ದಾಗ ತಡೆವವರಾರು? ಆದರೂ ಅದನ್ನು ತಡೆದು ನಿಲ್ಲಿಸಿದವರು ಕರ್ನಾಟಕದ ಮತದಾರರು ತಾನೆ? ಯಾಕೆ ತಡೆದರೆಂಬುದು ಕುಮಾರಸ್ವಾಮಿಯವರಿಗೂ ಚೆನ್ನಾಗಿ ಗೊತ್ತು. ಕೇವಲ ಕಾಂಗ್ರೆಸ್ ಘೋಷಿಸಿದ 5 ಗ್ಯಾರಂಟಿಗಳಿಗೆ ಮಾತ್ರ ಅಲ್ಲ; ಅದು ಮೇಲು ನೋಟಕ್ಕೆ ನಿಜವಾದರೂ ಮತದಾರನ ಮನಸ್ಸಿನಲ್ಲಿ ಅಂಡರ್‌ಕರೆಂಟ್ ಆಗಿ ಕೆಲಸ ಮಾಡಿದ್ದು ಬೇರೆ. ಸರ್ವಜನಾಂಗದ ಶಾಂತಿಯ ತೋಟವಾಗಿದ್ದ ಕರ್ನಾಟಕವನ್ನು ದ್ವೇಷ ಭಾಷಣಗಳಿಂದ ಕೋಮು ಗಲಭೆಗಳಿಂದ, ಭ್ರಷ್ಟಾಚಾರದಿಂದ, ಸ್ವಜನ ಪಕ್ಷಪಾತದಿಂದ, ಹಿಂದುತ್ವವಾದದ ಬೆಂಕಿಯಿಂದ ಸುಡಲು ಪ್ರಾರಂಭಿಸಿದುದರಿಂದ ಡಬಲ್ ಇಂಜಿನ್ ಕೇಸರಿ ರೈಲು ನಿಲ್ಲುವಂತಾಯಿತು.

ರಾಜ್ಯಕ್ಕೆ ಅಕ್ಕಿ ಕೊಡದ ಸರ್ವಾಧಿಕಾರಿ ಧೋರಣೆಯ, ಮಣಿಪುರದ ಬೆಂಕಿಯನ್ನು ಇನ್ನೂ ಆರಿಸಲಾಗದ ಆ ರಾಜಕೀಯ ಪಕ್ಷಕ್ಕೆ ಸಾಥ್ ಕೊಡುವಂತೆ ಕಾಣುತ್ತಿದ್ದಾರೆ ಕುಮಾರಸ್ವಾಮಿ. ಮತ್ತೆ ಇವರು ಕೇಸರಿ ಮೌಸ್‌ಟ್ರ್ಯಾಪ್ ಒಡ್ಡಿದ ಬೋನಿಗೆ ಬೀಳುವಂತಿದೆ. ಆದರೆ, ಕೊಂಚ ಹಿಂದಕ್ಕೆ ಹೋಗಿ ನೋಡಿದರೆ ಇದೇ ಕುಮಾರಸ್ವಾಮಿ 2006ರಲ್ಲಿ ಈ ಕೇಸರಿ ಪಕ್ಷದ ಯಡಿಯೂರಪ್ಪರೊಂದಿಗೆ 20-20 ತಿಂಗಳ ರಾಜಕೀಯ ಮ್ಯಾಚ್ ಆಡಲು ಹೋಗಿ ಮುಗ್ಗರಿಸಿದ್ದು ಮರೆತುಹೋಯಿತೆ? ಅಂದು ಕುಮಾರಸ್ವಾಮಿಗೆ ತಗಲಿದ ಮೊದಲ ಕಪ್ಪುಚುಕ್ಕೆ ಯಾವ ದ್ರಾವಣದಿಂದಲೂ ತೊಳೆಯಲು ಸಾಧ್ಯವಿಲ್ಲ. ಆಗ ಇವರೇನಾದರೂ ಕೇಸರಿ ಪಕ್ಷದೊಂದಿಗೆ ಕೈ ಜೋಡಿಸದಿದ್ದರೆ ಧರಮ್‌ಸಿಂಗ್ ಸರಕಾರ ಬೀಳುತ್ತಿರಲಿಲ್ಲ. ವಿಂಧ್ಯಪರ್ವತ ದಾಟಿ ಆ ಪಕ್ಷ ಬರುತ್ತಿರಲಿಲ್ಲ. ಇಲ್ಲಿಂದ ಶುರುವಾಯಿತು ಕರ್ನಾಟಕದಲ್ಲಿ ಅಶಾಂತಿ ಪರ್ವ! ಅದರ ಮೊದಲ ಆಘಾತ ಆದದ್ದು ಯಾರಮೇಲೆ ಗೊತ್ತೇ? ಕುಮಾರಸ್ವಾಮಿಯವರ ತಂದೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೇಲೆ. ಆಗ ಅವರು ಅನುಭವಿಸಿದ ಜೀವನ್ಮರಣ ಹೋರಾಟ ವರ್ಣನಾತೀತ! ಸಾವಿಗೆ ಸಮೀಪದ ಅನುಭವವಾಗಿತ್ತು! ಅದು ಹೇಗಿತ್ತು ಎಂಬುದನ್ನು ಗೌಡರ ಹಿರಿಯ ಅಳಿಯ ಹೃದಯ ತಜ್ಞ ಡಾ.ಸಿ.ಎನ್.ಮಂಜುನಾಥ್ ಅವರ ಮಾತುಗಳಿಂದಲೇ ನೋಡಬಹುದು:

‘‘ಅವರು (ಗೌಡರು) ಒಂದಕ್ಕೊಂದು ಸಂಬಂಧ ಇಲ್ಲದಂತೆ ಮಾತನಾಡಲು ಪ್ರಾರಂಭಿಸಿದರು. ಇದು ನನ್ನ ಜೀವನದ ಕರಾಳ ದಿನ, ಎಂದು ಕನ್ನಡದಲ್ಲಿ ಜೋರಾಗಿ ಕೂಗಿದರು. ಜೀವಮಾನವಿಡೀ ಜಾತ್ಯತೀತ ರಾಜಕಾರಣ ಮಾಡಿಕೊಂಡು ಬಂದ ತಾನು ಅಧಿಕಾರಕ್ಕಾಗಿ ಯಾವತ್ತೂ ರಾಜಿ ಮಾಡಿಕೊಳ್ಳಲಿಲ್ಲ. ಆದರೆ ಇವತ್ತು ಎಲ್ಲಾ ಹಾಳಾಗಿ ಹೋಯಿತು, ಎಂದು ನೋವಿನಲ್ಲಿ ಒದ್ದಾಡಿದರು. ಇದೆಲ್ಲಾ ಅಧಿಕಾರ ಹಿಡಿಯಲು ಕುಟುಂಬದ ಒಳಗೆ ನಡೆದ ನಾಟಕ ಎಂದು ಹೊರಗಿನವರು ಹೇಳಬಹುದು. ಆದರೆ ನಾನೊಬ್ಬ ವೈದ್ಯನಾಗಿ ಮಾತನಾಡುತ್ತಿದ್ದೇನೆ. ಅವರಿಗೆ ಇದರಿಂದ ಉಂಟಾದ ತಲೆನೋವು ಎಷ್ಟು ತೀವ್ರವಾಗಿತ್ತೆಂದರೆ, ನಾನು ಅವರಿಗೆ ಮೆದುಳಿನ ರಕ್ತಸ್ರಾವವಾಗಬಹುದೆಂದು ಭಯಪಟ್ಟುಕೊಂಡೆ. ಬೆಳಗ್ಗಿನ ಜಾವ 2 ಗಂಟೆ ಹೊತ್ತಿಗೆ ನಾವು ಅವರನ್ನು ಮೆದುಳಿನ ಸಿ.ಟಿ.ಸ್ಕಾನ್ ಮಾಡಿಸಲು ಮಲ್ಯ ಆಸ್ಪತ್ರೆಗೆ ದಾಖಲಿಸಿದೆವು. ಮುಂದಿನ ಅರವತ್ತು ದಿನಗಳಲ್ಲಿ ಅವರು ತೀವ್ರ ಮಾನಸಿಕ ಖಿನ್ನತೆಗೆ ಒಳಗಾದರು, ಮಾತು ಕಳೆದುಕೊಂಡರು. ಯಾರೊಂದಿಗೂ ಒಂದು ಮಾತು ಕೂಡ ಆಡದ ಸ್ಥಿತಿಗೆ ತಲುಪಿದರು. ಕುಟುಂಬದ ಸದಸ್ಯರಾಗಲಿ, ದಾದಿಯರಾಗಲಿ ಅವರನ್ನು ಮುಟ್ಟಲು ಬಂದರೆ, ಸಿಡಿಮಿಡಿಗೊಂಡು ಅವರನ್ನು ದೂರ ತಳ್ಳುತ್ತಿದ್ದರು. ಅವರ ಹತ್ತಿರ ಹೋಗಲು ಸಾಧ್ಯವಾಗುತ್ತಿದ್ದುದು ನನಗೊಬ್ಬನಿಗೆ ಮಾತ್ರ. ನಿಜ ಹೇಳಬೇಕೆಂದರೆ, ಅವರು ಚೇತರಿಸಿಕೊಳ್ಳಬಹುದು ಎಂಬ ಭರವಸೆಯನ್ನೇ ನಾವು ಕಳೆದುಕೊಂಡಿದ್ದೆವು’’ (ನೇಗಿಲ ಗೆರೆಗಳು: ಸುಗತ ಶ್ರೀನಿವಾಸರಾಜು.-ಪುಟ 614)

ದೇವೇಗೌಡರು ತಮ್ಮ ಬದುಕಿನುದ್ದಕ್ಕೂ ಬಹಳ ಜತನದಿಂದ ಕಾಪಾಡಿಕೊಂಡು ಬಂದಿದ್ದ ಜಾತ್ಯತೀತ ಅಸ್ಮಿತೆಗೆ ಕುಮಾರಸ್ವಾಮಿಯವರಿಂದ ಭಂಗ ಬಂದಿತ್ತು. ಹೀಗೆ ಬಿಜೆಪಿಯ ಬೆಂಬಲವನ್ನು ಸ್ವೀಕರಿಸಿದ್ದರೆ 1997ರಲ್ಲಿ ಅವರು ಯುನೈಟೆಡ್ ಫ್ರಂಟ್‌ನ ಪ್ರಧಾನಿಯಾಗಿ ಮುಂದುವರಿಯಬಹುದಿತ್ತು. ಸ್ವತಃ ವಾಜಪೇಯಿ ಅವರು ಬೆಂಬಲ ಸೂಚಿಸುತ್ತೇವೆ ಎಂದು ಮುಂದೆ ಬಂದು ಸೂಚನೆ ಕೊಟ್ಟಿದ್ದರು. ಆದರೆ ಗೌಡರು ರಾಜಿಯಾಗಲಿಲ್ಲ; ಜಾತ್ಯತೀತ ನಿಲುವು-ಈ ರಾಷ್ಟ್ರದ ಆತ್ಮ. ಅದಕ್ಕೆ ಒಪ್ಪಲಿಲ್ಲ. ಆದರೆ ಈಗ ಅವರ ಮಗನಿಂದಲೇ ಆ ಸಿದ್ಧಾಂತಕ್ಕೆ ಕೊಡಲಿಪೆಟ್ಟು ಬಿದ್ದಿತ್ತು. ಆಮೇಲೆ ಕುಟುಂಬದವರ ಒತ್ತಾಯದ ಮೇರೆಗೆ ಕುಮಾರಸ್ವಾಮಿಯವರು ತಂದೆಯ ಬಳಿ ಹೋಗಿ ತಪ್ಪೊಪ್ಪಿಕೊಂಡರು!.

ಆದರೆ, ಕುಮಾರಸ್ವಾಮಿ ಮೊನ್ನಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಜಯಭೇರಿ ಹೊಡೆಯುತ್ತೆ, ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ಭಾವಿಸಿದ್ದರು. ಆದರೆ ಅದು ಹುಸಿಯಾಯಿತು. ಕೇಸರಿ ಪಕ್ಷವೇ ಮೈಪರಚಿಕೊಂಡು ಇವನು ತಳ್ಳಿದ್ದು, ಅವನು ತಳ್ಳಿದ್ದು, ಇಲ್ಲ ಇವನೇ ಬಿದ್ದದ್ದು ಎಂದು ದೂರಿಕೊಳ್ಳುತ್ತಾ ಕುಳಿತುಕೊಳ್ಳುವಂತಾಯಿತು. ಆದರೆ ಕುಮಾರಸ್ವಾಮಿಯವರು ಮಾತ್ರ ಬಿಜೆಪಿ ಮತ್ತು ಜೆಡಿಎಸ್ ಎರಡಕ್ಕೂ ಅನಧಿಕೃತ ವಿರೋಧಪಕ್ಷದ ನಾಯಕ ಎಂಬಂತೆ ಮೊನ್ನೆ ಸದನದಲ್ಲಿ ವರ್ತಿಸುತ್ತಾ ಬಂದರು. ಅದು ಸಹಜವಾಗಿಯೂ ಹಾಗಾಗಿದ್ದರೆ ಚೆನ್ನಾಗಿತ್ತೋ ಏನೋ? ಆದರೆ ಅದು ಹಾಗಾಗಲಿಲ್ಲ. ಕನ್ನಡ ಮನೆತನಗಳಾದ ಹೊಯ್ಸಳರು, ದೇವಗಿರಿಯ ಯಾದವರು ಶತಮಾನಗಳ ಕಾಲ ಕಲಹ ಕದನಗಳನ್ನು ಮಾಡುತ್ತಲೇ ಇದ್ದರು. ಈ ಅಂತಃಕಲಹಗಳು ಬ್ರಿಟಿಷರ ಕಾಲದವರೆಗೂ ಮುಂದುವರಿಯಿತು. ಅದೇ ಮನೋಗತ ಇವತ್ತಿನ ಪ್ರಜಾಪ್ರಭುತ್ವ ಸಂದರ್ಭದಲ್ಲೂ ತಪ್ಪಿಲ್ಲ. ಜಾತ್ಯತೀತ ಪ್ರಜಾಸತ್ತಾತ್ಮಕ ಸಂವಿಧಾನಬದ್ಧ ಒಕ್ಕೂಟ ರಾಜ್ಯಗಳ ಮೇಲೆ ತಮ್ಮ ದಬ್ಬಾಳಿಕೆ ದೌರ್ಜನ್ಯ ತೋರುತ್ತಲೇ ಬರುತ್ತಿದ್ದಾರೆ ಅವರು. ಒಂದೇ ಧರ್ಮ, ಒಂದೇ ಭಾಷೆ, ಒಂದೇ ತೆರಿಗೆ, ಒಂದೇ ಸಂಸ್ಕೃತಿ, ಒಂದೇ ಜನಾಂಗ, ಒಂದೇ ನಾಗರಿಕ ಸಂಹಿತೆ- ಎಂದು ಬಹು ಸಂಸ್ಕೃತಿಯ ದೇಶವನ್ನು ಒಂದಾದ ಮೇಲೆ ಒಂದರಂತೆ ಪ್ರಸ್ತಾವನೆಗಳನ್ನು ತಯಾರಿಸಿ ಮಂಡಿಸುತ್ತ ಕೇಸರಿಪಕ್ಷ ದಕ್ಷಿಣದತ್ತ ವತ್ತರಿಸಿ ಬರುತ್ತಲೇ ಇದೆ. ಅದಕ್ಕೆ ಭದ್ರ ತಡೆಗೋಡೆ ಒಡ್ಡಿರುವುದು ಸದ್ಯ ತಮಿಳುನಾಡು ಮಾತ್ರ. ತಮಿಳರ ಅಸ್ಮಿತೆ ಕನ್ನಡಿಗರಿಗೆ ಯಾಕಿಲ್ಲ? ಈ ಅಸ್ಮಿತೆ ಕುಮಾರಸ್ವಾಮಿಯೂ ಒಳಗೊಂಡಂತೆ ಪ್ರತಿಯೊಬ್ಬ ಕನ್ನಡಿಗನ ಸಂಕಲ್ಪವಾಗಬೇಕು. ಕೇವಲ ವರ್ಗ ಹುದ್ದೆ, ದರಪಟ್ಟಿ ತೋರಿಸುವುದು; ಪೆನ್‌ಡ್ರೈವ್ ಇದೆ ಎಂದು ಬೆದರಿಸುವುದು ಇತ್ಯಾದಿ ಅವರ ಘನತೆಗೆ ತಕ್ಕುದಲ್ಲ! ಕುಮಾರಸ್ವಾಮಿ ಕಪ್ಪುಚುಕ್ಕೆಗೆ ಹೆದರುವುವರಾದರೆ ಇನ್ನುಮುಂದೆಯಾದರೂ ಅವರು ಹತಾಶೆಯ ಮಾತುಗಳನ್ನಾಡುವುದನ್ನು ಬಿಟ್ಟು ಸಮರ್ಥ ಪ್ರತಿಪಕ್ಷದ ನಾಯಕರಾಗಲು ಯತ್ನಿಸಬೇಕು- ತಮ್ಮ ತಂದೆಯಂತೆ! ಇವರ ನಡೆ ನೂತನ ಶಾಸಕರಿಗೆ ಮಾದರಿಯಾಗಬೇಕಲ್ಲವೆ?

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News