ಖೋಟಾ ಕಾರ್ಖಾನೆಗಳಿಗೆ ಬಲಿಯಾಗುತ್ತಿರುವ ವಿದ್ಯಾರ್ಥಿಗಳು
ಕೆಲವು ವರ್ಷಗಳ ಹಿಂದೆ ರಾಜ್ಯದ ಖ್ಯಾತ ಉದ್ಯಮಿಯೊಬ್ಬರು ಮಂಗಳೂರಿನ ನೇತ್ರಾವತಿ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಾಗ, ಇಲ್ಲಿನ ಜಿಲ್ಲಾಡಳಿತ ‘ಇನ್ನು ಮುಂದೆ ಸೇತುವೆಯಿಂದ ಧುಮುಕಿ ಯಾರೂ ಆತ್ಮಹತ್ಯೆ ಮಾಡಿಕೊಳ್ಳಬಾರದು’ ಎನ್ನುವ ಸದುದ್ದೇಶದಿಂದ ಸೇತುವೆಯ ಎರಡೂ ಬದಿಗಳಿಗೂ ಮುಳ್ಳಿನ ಬೇಲಿಯನ್ನು ಹಾಕಿತು. ಈ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದ್ದುದರಿಂದ, ಆತ್ಮಹತ್ಯೆಯ ಹೆಚ್ಚಳಕ್ಕೆ ಈ ಸೇತುವೆಯೇ ಕಾರಣವಾಗಿರಬಹುದು ಎಂದು ಜಿಲ್ಲಾಡಳಿತ ಶಂಕಿಸಿರಬೇಕು. ಕೊರೋನೋತ್ತರ ದಿನಗಳಿಂದ ನಿರುದ್ಯೋಗಿಗಳಷ್ಟೇ ಅಲ್ಲ, ಜನಸಾಮಾನ್ಯರಿಗೆ ಉದ್ಯೋಗಗಳನ್ನು ನೀಡುತ್ತಿದ್ದ ಉದ್ಯಮಿಗಳು ಕೂಡ ಆತ್ಮಹತ್ಯೆಯ ದಾರಿಯನ್ನು ಹಿಡಿದಿದ್ದಾರೆ. ಆತ್ಮಹತ್ಯೆಗೆ ಕಾರಣವಾಗುತ್ತಿರುವ ಅಂಶಗಳನ್ನು ಗುರುತಿಸಿ ಅದರಿಂದ ಜನರನ್ನು ಪಾರು ಮಾಡುವ ಹೇಗೆ ಎನ್ನುವುದನ್ನು ಚಿಂತಿಸುವ ಬದಲು ಜಿಲ್ಲಾಡಳಿತ ಸೇತುವೆಗೆ ಬೇಲಿ ಹಾಕಿ ಆತ್ಮಹತ್ಯೆಯನ್ನು ತಡೆಯಲು ಮುಂದಾಯಿತು. ಈ ಸೇತುವೆಗೆ ಬೇಲಿ ಹಾಕಿದ ಬಳಿಕವೂ ದಕ್ಷಿಣ ಕನ್ನಡದಲ್ಲಿ ಆತ್ಮಹತ್ಯೆಗಳು ನಡೆಯುತ್ತಲೇ ಇವೆ. ನೇತ್ರಾವತಿ ನದಿಯಲ್ಲಿ ಯುವಕರ ಮೃತದೇಹಗಳು ಪತ್ತೆಯಾಗುತ್ತಲೇ ಇವೆ.
ಪಿಯುಸಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಘೋಷಣೆಯಾಗುತ್ತಿದ್ದಂತೆಯೇ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಸಮಾಜ ಅತ್ಯಂತ ಸಹಜ ಎನ್ನುವಂತೆ ಸ್ವೀಕರಿಸಿ ಬಿಟ್ಟಿದೆ. ಯಾಕೆಂದರೆ ಈ ಆತ್ಮಹತ್ಯೆಗಳು ಸಮಾಜ, ಶಾಲೆ, ಪೋಷಕರ ಸಂಘಟಿತ ಪ್ರಯತ್ನದ ಫಲ. ಶಾಲೆಗಳಿಗೆ ನೂರು ಶೇ. ಫಲಿತಾಂಶಗಳು ಬೇಕು, ಪೋಷಕರಿಗೆ ಡಿಸ್ಟಿಂಕ್ಷನ್ ಅಂಕಗಳು ಬೇಕು. ಇವರೆಲ್ಲರ ನಿರೀಕ್ಷೆಗಳನ್ನು ಈಡೇರಿಸಲು ಸಾಧ್ಯವಾಗದ ಎಳೆ ವಿದ್ಯಾರ್ಥಿಗಳು ಕಡಿಮೆ ಅಂಕಗಳು ದೊರಕಿದಾಗ ಮಾನಸಿಕ ಒತ್ತಡ, ನಿರಾಸೆಯಿಂದ ಆತ್ಮಹತ್ಯೆಯ ದಾರಿ ಹಿಡಿಯುತ್ತಾರೆ. ‘ಪರೀಕ್ಷೆಯ ಒತ್ತಡ’ ‘ಖಿನ್ನತೆ’ ಮೊದಲಾದ ಹೆಸರಿನಲ್ಲಿ ಈ ಸಾವನ್ನು ಆತ್ಮಹತ್ಯೆ ಎಂದು ಪೊಲೀಸರು ಕರೆದು ಪ್ರಕರಣವನ್ನು ಮುಗಿಸಿ ಬಿಡುತ್ತಾರೆ. ಆತ್ಮಹತ್ಯೆ ಮಾಡಿಕೊಳ್ಳುವಂತಹ ಸ್ಥಿತಿಗೆ ಅವರನ್ನು ತಳ್ಳಿದವರ ಬಗ್ಗೆ ಪೊಲೀಸರ ಪ್ರಾಥಮಿಕ ವರದಿ ಯಾವ ಮಾತನ್ನೂ ಆಡುವುದಿಲ್ಲ. ರೈತರ ಆತ್ಮಹತ್ಯೆಗಳನ್ನು ಗಂಭೀರವಾಗಿ ತೆಗೆದುಕೊಂಡಂತೆ ಈ ಎಳೆ ವಿದ್ಯಾರ್ಥಿಗಳ ಆತ್ಮಹತ್ಯೆಗಳನ್ನು ಸರಕಾರ ಗಂಭೀರವಾಗಿ ತೆಗೆದುಕೊಂಡಿಲ್ಲ. ಯಾಕೆಂದರೆ ಇವರ ಪರವಾಗಿ ಮಾತನಾಡುವವರು, ಬೀದಿಗಿಳಿದು ಪ್ರತಿಭಟನೆ ಮಾಡುವವರು ಯಾರೂ ಇಲ್ಲ. ಮುಖ್ಯವಾಗಿ ಈ ಎಳೆ ವಿದ್ಯಾರ್ಥಿಗಳಿಗೆ ಮತದಾನದ ಹಕ್ಕಿಲ್ಲ. ಆದುದರಿಂದಲೇ ಇವರ ಆತ್ಮಹತ್ಯೆಗಳು ತನಿಖೆಗೆ ಅರ್ಹ ಎಂದು ಸರಕಾರಕ್ಕೆ ಅನ್ನಿಸಿಲ್ಲ.
ರಾಜಸ್ಥಾನದ ಕೋಟಾ ಸ್ಪರ್ಧಾತ್ಮ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತಯಾರಿಸುವ ಕಾರ್ಖಾನೆಗಳಿಗಾಗಿ ಕುಖ್ಯಾತವಾಗಿದೆ. ರವಿವಾರ ಈ ಕೋಟಾದಲ್ಲಿ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ವರದಿಯಾಗಿದೆ. ಈ ವರ್ಷ ಕೋಟಾದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ ೨೦ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ವರ್ಷ ೧೫ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿವೆ. ಇವರೆಲ್ಲರೂ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದರೆ ಈ ದೇಶದ ಅತ್ಯುನ್ನತ ಸ್ಥಾನಗಳನ್ನು ಅಲಂಕರಿಸಿ ಆಡಳಿತದ ಪ್ರಮುಖ ಭಾಗವಾಗುತ್ತಿದ್ದರು. ಆದರೆ ತಮ್ಮ ಕಲಿಕೆಯನ್ನು ಅರ್ಧದಲ್ಲೇ ನಿಲ್ಲಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೈದ್ಯಕೀಯ ವಿದ್ಯಾಭ್ಯಾಸಕ್ಕಾಗಿ ನಡೆಸುವ ನೀಟ್ ಪರೀಕ್ಷೆಯಲ್ಲಿ ವಿಫಲರಾದವರು ಕೂಡ ಆತ್ಮಹತ್ಯೆಗೆ ಇಳಿಯುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ತಮಿಳುನಾಡಿನಲ್ಲಿ ಇತ್ತೀಚೆಗೆ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರು. ಈ ನೀಟ್‌ನ ವಿರುದ್ಧ ತಮಿಳು ನಾಡು ಸರಕಾರ ಮಸೂದೆಯನ್ನು ಮಂಡಿಸಿದೆ. ತಮಿಳುನಾಡಿನ ಪ್ರತಿಭಾವಂತ ವಿದ್ಯಾರ್ಥಿಗಳ ಅವಕಾಶಗಳನ್ನು ಈ ನೀಟ್ ಕಿತ್ತುಕೊಳ್ಳುತ್ತಿದೆ ಎಂದು ಅಲ್ಲಿನ ರಾಜಕೀಯ ನಾಯಕರು ಆರೋಪಿಸುತ್ತಿದ್ದಾರೆ. ಈಗಾಗಲೇ ನೀಟ್ ವಿರುದ್ಧ ಸರಕಾರದ ನಿರ್ಧಾರ ರಾಷ್ಟ್ರಪತಿಯ ಅಂಗಳದಲ್ಲಿದೆ.
ಇತ್ತ ರಾಜಸ್ಥಾನದ ಕೋಟಾದಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆಗೆ ವಸತಿ ನಿಲಯಗಳಲ್ಲಿರುವ ಫ್ಯಾನ್‌ಗಳನ್ನು, ಬಾಲ್ಕನಿಗಳನ್ನೇ ಹೊಣೆ ಮಾಡಲು ಅಲ್ಲಿನ ಆಡಳಿತ ನಿರ್ಧರಿಸಿದೆ. ಸೀಲಿಂಗ್ ಫ್ಯಾನುಗಳನ್ನು ಆತ್ಮಹತ್ಯೆ ಮಾಡಿಕೊಳ್ಳಲು ವಸತಿ ನಿಲಯಗಳು ಮಾಡಿರುವ ವಿಶೇಷ ವ್ಯವಸ್ಥೆ ಎಂದು ವಿದ್ಯಾರ್ಥಿಗಳು ತಪ್ಪು ತಿಳಿದುಕೊಂಡಿರುವ ಸಾಧ್ಯತೆಗಳಿವೆ ಎಂದು ಭಾವಿಸಿ ಇತ್ತೀಚೆಗಷ್ಟೇ ಈ ಫ್ಯಾನುಗಳನ್ನು ಕಳಚಿ, ಸ್ಪ್ರಿಂಗ್ ಫ್ಯಾನುಗಳನ್ನು ಅಳವಡಿಸಿತ್ತು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಬಾಲ್ಕನಿ ಹಾಗೂ ಲಾಬಿಗಳಲ್ಲಿ ಆತ್ಮಹತ್ಯೆಗಳನ್ನು ತಡೆಯಲು ವಿಶೇಷ ಬಲೆಗಳನ್ನು ಅಳವಡಿಸಿದೆ. ಸುಮಾರು ೧೫೦ ಕೆಜಿ ಭಾರವನ್ನು ಈ ಬಲೆಗಳು ತಾಳಿಕೊಳ್ಳುತ್ತವೆಯಂತೆ. ಮುಂದಿನ ದಿನಗಳಲ್ಲಿ ಯಾವುದಾದರೂ ವಿದ್ಯಾರ್ಥಿಗೆ ಬಾಲ್ಕನಿಯನ್ನು ನೋಡಿ ಹಾರಬೇಕು ಎಂದು ಮನಸ್ಸಾದರೆ ಈ ಬಲೆಗಳು ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಆದರೆ ವಿದ್ಯಾರ್ಥಿಗಳನ್ನು ಆತ್ಮಹತ್ಯೆಗೆ ತಳ್ಳುವ ಬಲೆಗಳ ಬಗ್ಗೆ ಯಾವುದೇ ಕ್ರಮವನ್ನು ತೆಗೆದುಕೊಳ್ಳಲು ಮುಂದಾಗಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರು ಮಾಡುವ ಈ ಖೋಟಾ ಅಥವಾ ನಕಲಿ ಕಾಲೇಜುಗಳೇ ವಿದ್ಯಾರ್ಥಿಗಳನ್ನು ಆತ್ಮಹತ್ಯೆಗೆ ತಳ್ಳುವ ನಿಜವಾದ ಬಲೆಗಳಾಗಿವೆ. ಪೋಷಕರು, ವಿದ್ಯಾರ್ಥಿಗಳು ಈ ಖೋಟಾ ಕಾರ್ಖಾನೆಗಳ ಬಲೆಗೆ ಬೀಳದಂತೆ ತಡೆಯುವ ಪ್ರಯತ್ನವನ್ನು ಮೊದಲು ಮಾಡಬೇಕಾಗಿದೆ. ಆದರೆ ಶಿಕ್ಷಣ ವ್ಯವಸ್ಥೆ ಈ ಬಗ್ಗೆ ಮೌನವಾಗಿದೆ.
ಐಐಟಿ ಸೇರಿದಂತೆ ಅತ್ಯುನ್ನತ ಶಿಕ್ಷಣ ಪಡೆಯಲು ಬೇಕಾದ ಪ್ರವೇಶ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ತಯಾರಿಗೊಳಿಸಲು ಕೋಟಾದಲ್ಲಿ ನೂರಾರು ಶೈಕ್ಷಣಿಕ ಕಾರ್ಖಾನೆಗಳಿವೆ. ವಿದ್ಯಾರ್ಥಿಗಳು ತಮ್ಮ ದೈನಂದಿನ ಶಿಕ್ಷಣದ ಜೊತೆ ಜೊತೆಗೆ ಈ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಾರೆ. ಅದಕ್ಕಾಗಿ ಈ ಕೋಟಾದಲ್ಲಿರುವ ಕಾಲೇಜುಗಳಲ್ಲಿ ತಮ್ಮ ಮಕ್ಕಳನ್ನು ಸೇರಿಸಲು ಪೋಷಕರು ಲಕ್ಷಾಂತರ ರೂ. ವ್ಯಯಿಸುತ್ತಾರೆ. ಪೋಷಕರ ಮಹತ್ವಾಕಾಂಕ್ಷೆ, ವಿದ್ಯಾರ್ಥಿಗಳ ಅಸಹಾಯಕತೆಗಳನ್ನು ಬಂಡವಾಳವಾಗಿಸಿಕೊಂಡು ಇಲ್ಲಿರುವ ತರಬೇತಿ ಸಂಸ್ಥೆಗಳು ದುಡ್ಡು ಬಾಚಿಕೊಳ್ಳುತ್ತಿವೆ. ಇಲ್ಲಿರುವ ಬಹುತೇಕ ವಿದ್ಯಾರ್ಥಿಗಳು ಪೋಷಕರ ಒತ್ತಡಕ್ಕೆ ಮಣಿದು ಸೇರ್ಪಡೆಯಾದವರು. ತಮ್ಮೆಲ್ಲ ಕನಸುಗಳನ್ನು ಸುಟ್ಟುಕೊಂಡು, ಐಐಟಿಯಂತಹ ಸಂಸ್ಥೆಗಳಿಗೆ ಸೇರುವ ಉದ್ದೇಶದಿಂದ ಹಗಲು ರಾತ್ರಿ ವಿದ್ಯಾರ್ಥಿಗಳು ಓದಬೇಕಾಗುತ್ತದೆ. ಇಲ್ಲಿರುವ ಬಹುತೇಕ ಸಂಸ್ಥೆಗಳು ನಕಲಿ ಎಂದು ಜಿಲ್ಲಾಡಳಿತವೇ ಹೇಳುತ್ತಿದೆ. ಇಷ್ಟಾದರೂ ಪೋಷಕರು ಮುಗಿ ಬಿದ್ದು ತಮ್ಮ ಮಕ್ಕಳನ್ನು ಸೇರ್ಪಡೆಗೊಳಿಸುತ್ತಾರೆ. ಮನೆಯನ್ನು ತೊರೆದು ಹಾಸ್ಟೆಲ್ ಸೇರುವ ವಿದ್ಯಾರ್ಥಿಗಳು ಅನುಭವಿಸುವ ಸಂಕಟಗಳು ಒಂದೆರಡಲ್ಲ. ಇವೆಲ್ಲದರ ಮಧ್ಯೆ ಪರೀಕ್ಷೆಯನ್ನು ಎದುರಿಸಲು ವಿಫಲವಾದರೆ ಅಥವಾ ಒತ್ತಡಗಳನ್ನು ತಾಳಿಕೊಳ್ಳಲು ಸಾಧ್ಯವಾಗದೇ ಇದ್ದರೆ ಅಂತಿಮವಾಗಿ ವಿದ್ಯಾರ್ಥಿಗಳು ನೇಣಿಗೆ ಶರಣಾಗುತ್ತಾರೆ. ಇವೆಲ್ಲವೂ ಗೊತ್ತಿದ್ದೂ ಫ್ಯಾನುಗಳನ್ನು ಕಿತ್ತು ಹಾಕಿ, ಬಾಲ್ಕನಿಗಳಿಗೆ ಬಲೆ ಅಳವಡಿಸಿ ಆತ್ಮಹತ್ಯೆಗಳನ್ನು ತಡೆಯಲು ಸರಕಾರ ಮುಂದಾಗಿದೆ. ಮುಖ್ಯವಾಗಿ ಈ ವಿದ್ಯಾರ್ಥಿಗಳ ಆತ್ಮಹತ್ಯೆಗಳಿಗೆ ನಿಜವಾದ ಕಾರಣವೇನು ಎನ್ನುವುದನ್ನು ಕಂಡುಕೊಂಡು ಆ ಕಾರಣಗಳಿಗೆ ಪರಿಹಾರವನ್ನು ಹುಡುಕುವುದಕ್ಕೆ ಸರಕಾರ ಮುಂದಾಗಬೇಕಾಗಿದೆ. ಬಹುತೇಕ ಆತ್ಮಹತ್ಯೆಗಳಿಗೆ ಪೋಷಕರ ಒತ್ತಡಗಳು ಕಾರಣ. ಪೋಷಕರ ನಿರೀಕ್ಷೆ ತಲುಪಲು ಸಾಧ್ಯವಾಗದೆ ವಿದ್ಯಾರ್ಥಿಗಳು ಕಟ್ಟಕಡೆಗೆ ಸಾವಿನ ಕದ ತಟ್ಟುತ್ತಾರೆ. ಇದೊಂದು ರೀತಿಯಲ್ಲಿ, ಸಾವಿಗಾಗಿ ವಿದ್ಯಾರ್ಥಿಗಳು ನಡೆಸುತ್ತಿರುವ ಸ್ಪರ್ಧೆ. ಈ ಸಾವಿನ ಜೂಜಿಗೆ ಪೋಷಕರು ತಮ್ಮ ಮಕ್ಕಳನ್ನು ಒತ್ತೆಯಿಟ್ಟು ಆಡುತ್ತಿದ್ದಾರೆ. ತಮ್ಮ ವೈಯಕ್ತಿಕ ಪ್ರತಿಷ್ಠೆಗಾಗಿ ತಮ್ಮ ಮಕ್ಕಳ ಬದುಕನ್ನು ಬಲಿಕೊಡುವಷ್ಟು ಪೋಷಕರು ಸ್ವಾರ್ಥಿಗಳಾಗಬಾರದು. ವಿದ್ಯಾರ್ಥಿಗಳ ಆಸೆ, ಆಕಾಂಕ್ಷೆ, ಕನಸುಗಳಿಗೆ ಅವರು ಕಿವಿಯಾಗಬೇಕು. ಇದೇ ಸಂದರ್ಭದಲ್ಲಿ ಎಸೆಸೆಲ್ಸಿ, ಪಿಯುಸಿಯ ಬಳಿಕ ಹೆಚ್ಚಿನ ಕಲಿಕೆಗಾಗಿ ಹೊಸದಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ಅಗತ್ಯದ ಬಗ್ಗೆ ಸರಕಾರ ಪುನರಾವಲೋಕಿಸಬೇಕು. ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವಿದ್ಯಾರ್ಥಿಗಳನ್ನು ತಯಾರು ಮಾಡುವ ಹೆಸರಿನಲ್ಲಿ ಅಣಬೆಗಳಂತೆ ತಲೆಯೆತ್ತುತ್ತಿರುವ ನಕಲಿ ಕಾರ್ಖಾನೆಗಳ ವಿರುದ್ಧ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಅಂತಹ ಇಂತಹ ಸಂಸ್ಥೆಗಳಿಗೆ ಸಂಪೂರ್ಣ ನಿಷೇಧ ಹೇರಬೇಕು. ಶಿಕ್ಷಣ ಸಂಸ್ಥೆಗಳು ಕಾರ್ಖಾನೆಗಳಾದಾಗ ಅದು ಸಹಜವಾಗಿಯೇ ವಿಷಕಾರಿ ಹೊಗೆಯನ್ನು ಉಗುಳಲಾರಂಭಿಸುತ್ತವೆ. ಆ ವಿಷ ಕಾರಿ ಹೊಗೆಗಾಗಿ ಅದನ್ನು ಉಗುಳುವ ಕೊಳವೆಯನ್ನು ಹೊಣೆ ಮಾಡುವ ಮೂಲಕ ಮಾಲಿನ್ಯವನ್ನು ತಡೆಯಲು ಸಾಧ್ಯವಿಲ್ಲ ಎನ್ನುವುದನ್ನು ಸರಕಾರ ಇನ್ನಾದರೂ ಅರ್ಥ ಮಾಡಿಕೊಳ್ಳಬೇಕು.