ಸ್ವತಂತ್ರ ಭಾರತವು ಗೌರವಿಸಲೇ ಬೇಕಾದ ಟೈಗರ್ ಟಿಪ್ಪು: ಆರೆಸ್ಸೆಸ್ ಸಿದ್ಧಾಂತಿ ಮಲ್ಕಾನಿ

Update: 2023-07-07 09:16 GMT

ಇದು ಆರೆಸ್ಸೆಸ್ನ ಅತ್ಯಂತ ಗೌರವಾನ್ವಿತ ಸದಸ್ಯರಲ್ಲಿ ಓರ್ವರಾಗಿದ್ದ, ಚಿಂತನೆ, ತರ್ಕ ಮತ್ತು ನಿಖರವಾದ ಸಂಶೋಧನೆಗೆ ಹೆಸರಾಗಿದ್ದ ಕೆ.ಆರ್.ಮಲ್ಕಾನಿಯವರ ಲೇಖನಿಯಿಂದ ಮೂಡಿ ಬಂದಿರುವ ಮಹಾನ್ ಟಿಪ್ಪು ಸುಲ್ತಾನ್ರ ಶ್ರೇಷ್ಠ ಪರಂಪರೆ....

- ಫಾತಿಮಾ ಫರೀಹಾ

ಬಿಜೆಪಿಯು ಟಿಪ್ಪು ಸುಲ್ತಾನ್ರನ್ನು ನಿರಂತರವಾಗಿ ದೂಷಿಸುವ ಮೂಲಕ ಕೋಮುಜ್ವಾಲೆಯನ್ನು ಎಬ್ಬಿಸಲು ಅವರನ್ನು ಬಳಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆರೆಸ್ಸೆಸ್ನ ಪ್ರಮುಖ ಸಿದ್ಧಾಂತಿಗಳಲ್ಲಿ ಓರ್ವರಾಗಿರುವ ಕೆ.ಆರ್.ಮಲ್ಕಾನಿ ಅವರು ಮೈಸೂರು ದೊರೆಯ ಕುರಿತು ತನ್ನ ಪುಸ್ತಕದಲ್ಲಿ ಏನು ಬರೆದಿದ್ದಾರೆ ಎನ್ನುವುದನ್ನು ಬಿಜೆಪಿಗರು ಖಂಡಿತ ಓದಲೇಬೇಕು.

ಕೇವಲರಾಮ್ ರತನ್ಮಲ್ ಮಲ್ಕಾನಿಯವರು ತನ್ನ 2002ರ ಕೃತಿ ‘ಇಂಡಿಯಾ ಫಸ್ಟ್’ನಲ್ಲಿ ‘ದಿ ಗ್ರೇಟ್ನೆಸ್ ಆಫ್ ಟಿಪ್ಪು ಸುಲ್ತಾನ್’ ಅಧ್ಯಾಯದಲ್ಲಿ ‘ಸ್ವತಂತ್ರ ಭಾರತವು ಟೈಗರ್ ಟಿಪ್ಪುಗೆ ವಂದಿಸದಿರಲು ಸಾಧ್ಯವಿಲ್ಲ’ಎಂದು ಗೌರವಪೂರ್ವಕವಾಗಿ ಬರೆದಿದ್ದಾರೆ.

ಪತ್ರಕರ್ತ, ಇತಿಹಾಸಕಾರ ಮತ್ತು ರಾಜಕಾರಣಿಯಾಗಿದ್ದ ಮಲ್ಕಾನಿ ಬಿಜೆಪಿಯ ಸ್ಥಾಪಕರಲ್ಲೋರ್ವರಾಗಿದ್ದಾರೆ. 1991ರಿಂದ 1994ರವರೆಗೆ ಬಿಜೆಪಿಯ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಅವರು ಆರೆಸ್ಸೆಸ್ನ ಪ್ರಮುಖ ಸಿದ್ಧಾಂತಿಗಳಲ್ಲಿ ಓರ್ವರು ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ.

ಸಂಶೋಧನೆ ಆಧಾರಿತ ಬರವಣಿಗೆಗೆ ಬದ್ಧ ಪತ್ರಕರ್ತರಾಗಿದ್ದ ಮಲ್ಕಾನಿ ಹಲವಾರು ವೃತ್ತಪತ್ರಿಕೆಗಳಲ್ಲಿ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ‘ದಿ ಹಿಂದುಸ್ಥಾನ್ ಟೈಮ್ಸ್’ ನಲ್ಲಿ ಉಪಸಂಪಾದಕರಾಗಿದ್ದಾಗ ಆರೆಸ್ಸೆಸ್ನ ಮುಖವಾಣಿ ‘ಆರ್ಗನೈಸರ್’ಗೆ ಲೇಖನಗಳನ್ನು ಬರೆಯಲು ಆರಂಭಿಸಿದ್ದ ಅವರು ಅಂತಿಮವಾಗಿ 1948ರಲ್ಲಿ ಅದರ ಮುಖ್ಯ ಸಂಪಾದಕರಾಗಿ ಅಧಿಕಾರ ವಹಿಸಿಕೊಂಡಿದ್ದರು. ಅವರು ಆರೆಸ್ಸೆಸ್ನ ಹಿಂದಿ ಭಾಷೆಯ ಮುಖವಾಣಿ ‘ಪಾಂಚಜನ್ಯ’ದ ಮುಖ್ಯ ಸಂಪಾದಕರೂ ಆಗಿದ್ದರು.

ತನ್ನ ‘ಇಂಡಿಯಾ ಫಸ್ಟ್’ ಕೃತಿಯಲ್ಲಿ ಟಿಪ್ಪು ಸುಲ್ತಾನ್ರ ಕುರಿತು ಬರೆದಿರುವ ಮಲ್ಕಾನಿ,‘ಟಿಪ್ಪು ಕುರಿತು ನಾನು ಹೆಚ್ಚೆಚ್ಚು ಓದಿದಷ್ಟೂ ಅವರ ಶ್ರೀಮಂತ ವ್ಯಕ್ತಿತ್ವದಿಂದ ಹೆಚ್ಚೆಚ್ಚು ಪ್ರಭಾವಿತನಾಗಿದ್ದೇನೆ’ ಎಂದು ಹೇಳಿದ್ದಾರೆ.

ಮಲ್ಕಾನಿ ಹೇಳುವಂತೆ ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಟದಿಂದ ಮಾತ್ರ ತೃಪ್ತರಾಗಿರಲಿಲ್ಲ, ಬದಲಿಗೆ ಅವರು ತನ್ನ ಸಾಮ್ರಾಜ್ಯದಾದ್ಯಂತ ಆಧುನಿಕ ಆಡಳಿತವನ್ನು ತರಲು ಪ್ರಯತ್ನಿಸಿದ್ದರು. ‘ಸಾರ್ವಜನಿಕ ಕಾಮಗಾರಿಗಳಿಗಾಗಿ ಬಲವಂತದ ದುಡಿಮೆ ಮತ್ತು ಶಂಕಿತರಿಗೆ ಚಿತ್ರಹಿಂಸೆಯನ್ನು ಅವರು ನಿಷೇಧಿಸಿದ್ದರು. ಅವರು ಪಾನನಿಷೇಧವನ್ನು ಪರಿಚಯಿಸಿದ್ದರು. ಅವರು ಪ್ರತೀ ನಾಲ್ಕು ಮೈಲಿಗಳಿಗೆ ಒಂದು ಶಾಲೆಯನ್ನು ಸ್ಥಾಪಿಸಲು ಪ್ರಯತ್ನಿಸಿದ್ದರು. ತೂಕ ಮತ್ತು ಅಳತೆ ಪದ್ಧತಿಯಲ್ಲಿ ಸುಧಾರಣೆಗಳನ್ನು ತಂದಿದ್ದ ಅವರು ಹಿಜರಿ ಕ್ಯಾಲೆಂಡರನ್ನೂ ಸರಿಪಡಿಸಿದ್ದರು’ ಎಂದು ಮಲ್ಕಾನಿ ಬರೆದಿದ್ದಾರೆ.

ಮಲ್ಕಾನಿ ಟಿಪ್ಪುವನ್ನು ‘ಪರಿಸರವಾದಿಗಳಿಗೆ ಮಾದರಿಯ ಆಡಳಿತಗಾರ’ ಎಂದು ಬಣ್ಣಿಸಿದ್ದಾರೆ. ಟಿಪ್ಪು ಸುಲ್ತಾನ್ರ ಕೆಲವು ಪರಿಸರಸ್ನೇಹಿ ನೀತಿಗಳನ್ನು ಗಮನಿಸಿರುವ ಮಲ್ಕಾನಿ, ಅವರು ಮರಗಳನ್ನು ಕಡಿಯುವುದನ್ನು ಮತ್ತು ಪ್ರಾಣಿಗಳ ಬೇಟೆಯನ್ನು ನಿಷೇಧಿಸಿದ್ದರು ಎಂದು ಬರೆದಿದ್ದಾರೆ. ತಾನು ಸ್ಥಾಪಿಸಿದ್ದ ಮದ್ದುಗುಂಡುಗಳ ತಯಾರಿಕೆ ಕಾರ್ಖಾನೆಯು ಹೊರಹಾಕುವ ತ್ಯಾಜ್ಯಗಳಿಂದ ಕಾವೇರಿ ನದಿಯು ಕಲುಷಿತಗೊಳ್ಳುತ್ತಿದೆ ಎನ್ನುವುದು ಗೊತ್ತಾದಾಗ ಟಿಪ್ಪು ಅದನ್ನು ಸ್ಥಳಾಂತರಿಸಿದ್ದರು ಎಂದು ಮಲ್ಕಾನಿ ತನ್ನ ಕೃತಿಯಲ್ಲಿ ಅವರ ಪರಿಸರ ಪ್ರೇಮಕ್ಕೆ ನಿದರ್ಶನವನ್ನು ನೀಡಿದ್ದಾರೆ.

ತನ್ನ ಕೃತಿಯಲ್ಲಿ ಟಿಪ್ಪುವನ್ನು ಪ್ರಶಂಸಿಸಿರುವ ಮಲ್ಕಾನಿ, ಅವರ ವಿಶಾಲ ದೃಷ್ಟಿಕೋನವು ತನ್ನನ್ನು ಅಚ್ಚರಿಗೊಳಿಸಿದೆ. ಭಾರತದ ಪರಿಕಲ್ಪನೆ ಇಲ್ಲದಿದ್ದ ಹೆಚ್ಚಿನ ಭಾರತೀಯ ರಾಜಕುಮಾರರಿಗೆ ತಮ್ಮ ಸಂಸ್ಥಾನವನ್ನು ಮೀರಿ ನೋಡಲು ಸಾಧ್ಯವಿರಲಿಲ್ಲ. ಬಹುತೇಕ ಎಲ್ಲ ರಾಜಕುಮಾರರಲ್ಲಿ ಟಿಪ್ಪು ಮಾತ್ರ ವಿಶ್ವ ದೃಷ್ಟಿಕೋನವನ್ನು ಹೊಂದಿದ್ದರು ಎಂದು ಬರೆದಿದ್ದಾರೆ.

‘ಟಿಪ್ಪು ನೆಪೋಲಿಯನ್ ಜೊತೆ ಪತ್ರ ವ್ಯವಹಾರ ನಡೆಸುತ್ತಿದ್ದರು. ಅಮೆರಿಕದ ಸ್ವಾತಂತ್ರ್ಯ ಘೋಷಣೆಯನ್ನು ಓದಿ ಅವರು ಪುಳಕಿತಗೊಂಡಿದ್ದರು. 108 ತೋಪುಗಳ ವಂದನೆ ಯೊಂದಿಗೆ ಅವರು ಅಮೆರಿಕದ ಸ್ವಾತಂತ್ರ್ಯವನ್ನು ಅಭಿನಂದಿಸಿದ್ದರು! ಅದು ಟಿಪ್ಪು ಸುಲ್ತಾನ್!’ ಎಂದು ಮಲ್ಕಾನಿ ಕೃತಿಯಲ್ಲಿ ಬರೆದಿದ್ದಾರೆ.

ಮಲ್ಕಾನಿ ಟಿಪ್ಪು ಕುರಿತು ತನ್ನ ಪ್ರಬಂಧವನ್ನು ‘ಸ್ವತಂತ್ರ ಭಾರತವು ಟೈಗರ್ ಟಿಪ್ಪುವನ್ನು ವಂದಿಸದಿರಲು ಸಾಧ್ಯವಿಲ್ಲ’ ಎಂಬ ಮಾತಿನೊಂದಿಗೆ ಅಂತ್ಯಗೊಳಿಸಿದ್ದಾರೆ.

ಟಿಪ್ಪು ವಿದೇಶಿ ಶಕ್ತಿಗಳ ವಿರುದ್ಧ ಹೋರಾಡಿದ್ದ 18ನೇ ಶತಮಾನದ ಏಕೈಕ ರಾಜಕುಮಾರನಾಗಿದ್ದರು. ತನ್ನ ಸುತ್ತಲಿನ ಇತರ ರಾಜಕುಮಾರರಂತೆ ಟಿಪ್ಪು ಕೂಡ ಸುಲಭವಾಗಿ ಬ್ರಿಟಿಷರಿಗೆ ತಲೆಬಾಗಬಹುದಿತ್ತು. ಆದರೆ ಮಲ್ಕಾನಿ ಯಥೋಚಿತವಾಗಿ ಬರೆದಿರುವಂತೆ ‘ಟಿಪ್ಪು ಅಪಮಾನಕ್ಕಿಂತ ಸಾವಿಗೆ ಆದ್ಯತೆ ನೀಡಿದ್ದರು’

ಇದು ಆರೆಸ್ಸೆಸ್ನ ಅತ್ಯಂತ ಗೌರವಾನ್ವಿತ ಸದಸ್ಯರಲ್ಲಿ ಓರ್ವರಾಗಿದ್ದ, ಚಿಂತನೆ, ತರ್ಕ ಮತ್ತು ನಿಖರವಾದ ಸಂಶೋಧನೆಗೆ ಹೆಸರಾಗಿದ್ದ ಕೆ.ಆರ್.ಮಲ್ಕಾನಿಯವರ ಲೇಖನಿಯಿಂದ ಮೂಡಿ ಬಂದಿರುವ ಮಹಾನ್ ಟಿಪ್ಪು ಸುಲ್ತಾನ್ರ ಶ್ರೇಷ್ಠ ಪರಂಪರೆ....

ಕೃಪೆ: siasat.com

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News