ವ್ಯವಸ್ಥೆಯ ಧೂರ್ತ ಮೌನಕ್ಕೆ ಇದೆಯೇ ಸಮರ್ಥನೆ?
ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವನ್ನು ಯಾವಾಗಲೂ ಶತ್ರುಗಳ ಮೇಲೆ ಅಧಿಕಾರವನ್ನು ಪ್ರತಿಪಾದಿಸಲು ಯುದ್ಧದ ಅಸ್ತ್ರವಾಗಿ ಬಳಸಲಾಗುತ್ತದೆ. ಯುದ್ಧಕಾಲದಲ್ಲಿ ಹೆಣ್ಣು ಹೇಗೆ ಹೆಚ್ಚಾಗಿ ಗುರಿಯಾಗುತ್ತಾಳೆ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಬಲಿಯಾಗುತ್ತಾಳೆ ಎಂಬುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ. ಸಂಘರ್ಷ ಮತ್ತು ಅಸ್ಥಿರತೆಯ ಸಂದರ್ಭಗಳಲ್ಲಿ ಮಹಿಳೆಯರ ವಿರುದ್ಧ ತಾರತಮ್ಯ ಹೇಗೆ ಉಲ್ಬಣಗೊಳ್ಳುತ್ತದೆಂಬುದು ಮಣಿಪುರದ ಈ ಅಸಹ್ಯಕರ ಪ್ರಸಂಗದಲ್ಲಿ ಮತ್ತೊಮ್ಮೆ ಬಯಲಾಗಿದೆ.
ಜುಲೈ 19, 2023ರಂದು ದೇಶದೆದುರು ಬಯಲಾದದ್ದು ಒಂದು ಹೇಯ ಮತ್ತು ಅಕ್ಷಮ್ಯ ಘಟನೆ. ಮಣಿಪುರದಲ್ಲಿನ ಜನಾಂಗೀಯ ಘರ್ಷಣೆಯ ಹೊತ್ತಲ್ಲಿ ಇಬ್ಬರು ಬುಡಕಟ್ಟು ಮಹಿಳೆಯರನ್ನು ಜನರ ಗುಂಪೊಂದು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ ಆ ಕರಾಳ ಘಟನೆ ಎರಡೂವರೆ ತಿಂಗಳ ನಂತರ ಬಹಿರಂಗವಾಯಿತೆಂಬುದೇ ಮತ್ತೊಂದು ಘೋರ. ಈ ನೀಚ ಕೃತ್ಯದ ಹಿನ್ನೆಲೆಯಲ್ಲಿ ಮತ್ತದನ್ನು ಅಡಗಿಸಿಟ್ಟಿದ್ದವರ ಧೂರ್ತತನದ ಹಿನ್ನೆಲೆಯಲ್ಲಿ ಏಳುವ ಪ್ರಶ್ನೆಗಳು ಹಲವು.
ಮೇ ತಿಂಗಳಿಂದಲೂ ಈಶಾನ್ಯ ರಾಜ್ಯ ಮಣಿಪುರ ಹೊತ್ತಿ ಉರಿಯುತ್ತಿದೆ. ಮೈತೈಗಳನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸುವ ವಿಚಾರದಲ್ಲಿ ಮಣಿಪುರ ಹೈಕೋರ್ಟ್ ಆದೇಶ ವಿರೋಧಿಸಿ ಮಣಿಪುರದ ಬುಡಕಟ್ಟು ವಿದ್ಯಾರ್ಥಿಗಳ ಒಕ್ಕೂಟ (ATSUM) ಮೇ 3ರಂದು ಐಕ್ಯತಾ ಮೆರವಣಿಗೆ ನಡೆಸಿದಲ್ಲಿಂದ ಹಿಂಸಾಚಾರ ಶುರುವಾಯಿತು. ಅದರ ಮರುದಿನವೇ ಮೇ 4ರಂದು ಬಿ ಫೈನೋಮ್ ಗ್ರಾಮದಲ್ಲಿ ಕುಕಿ-ರೆಮಿ ಸಮುದಾಯದ ಮಹಿಳೆಯ ರನ್ನು ಪೊಲೀಸ್ ವ್ಯಾನ್ನಲ್ಲಿ ಕರೆದೊಯ್ಯುತ್ತಿದ್ದಾಗ ಸಂಭವಿಸಿದ್ದೇ ಮೊನ್ನೆ ಬಯಲಾದ ಈ ಆಘಾತಕಾರಿ ಘಟನೆ.
ಅಲ್ಲಿಂದ ಅವರನ್ನು ಗುಂಪೊಂದು ಬಲವಂತವಾಗಿ ಎಳೆದೊಯ್ದು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿತು. ಅವರ ಮೇಲೆ ಸಾಮೂಹಿಕ ಅತ್ಯಾಚಾರವನ್ನೂ ನಡೆಸಿತು. ಈ ಘಟನೆ ಮೈತೈ ಪ್ರಾಬಲ್ಯದ ಕಣಿವೆ ಜಿಲ್ಲೆ ತೌಬಲ್ನಲ್ಲಿ ನಡೆದಿದ್ದರೆ, ಸಂತ್ರಸ್ತರು ನಂತರ ಕಾಂಗ್ಪೋಕ್ಪಿಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಅಲ್ಲಿ ಝೀರೊ ಎಫ್ಐಆರ್ ದಾಖಲಿಸಿ, ಪ್ರಕರಣವನ್ನು ತೌಬಲ್ನಲ್ಲಿರುವ ಪೊಲೀಸ್ ಠಾಣೆಗೆ ವರ್ಗಾಯಿಸಲಾಯಿತು. ಸಂತ್ರಸ್ತರ ದೂರಿನ ಪ್ರಕಾರ, 50ರ ಹರೆಯದ ಇನ್ನೊಬ್ಬ ಮಹಿಳೆಯ ಮೇಲೆಯೂ ಗುಂಪು ದೌರ್ಜನ್ಯ ನಡೆಸಿದೆ.
ಮಾನವ ಹಕ್ಕುಗಳ ಉಲ್ಲಂಘನೆಯ ಘೋರ ಕೃತ್ಯದ ಕುರಿತು ಕಳೆದ ಎರಡು ತಿಂಗಳಿನಿಂದ ಕಿವುಡಾಗಿರುವ ಸಾಂಸ್ಥಿಕ ಮೌನ ಅತ್ಯಂತ ದುಃಖಕರ ಮತ್ತು ಕಳವಳಕಾರಿ. ಮಣಿಪುರ ಪೊಲೀಸರು ಅಪರಾಧ ನಡೆದ ಸ್ಥಳದಲ್ಲಿ ಉಪಸ್ಥಿತರಿದ್ದರೂ ಮಹಿಳೆಯರ ರಕ್ಷಣೆಗೆ ಬರಲಿಲ್ಲ ಎಂಬುದನ್ನು ‘ದಿ ವೈರ್’ ವರದಿ ಹೇಳಿದೆ. ಮೇ 3ರಿಂದ ಮಣಿಪುರದಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ. ವೀಡಿಯೊ ತಕ್ಷಣವೇ ಬಹಿರಂಗಗೊಳ್ಳದಿರಲು ಅದು ಒಂದು ಕಾರಣವಿದ್ದೀತು. ಮಹಿಳೆಯರ ಮೇಲಾದ ಈ ಅನ್ಯಾಯ ಮಾತ್ರ ಅತಿ ಘೋರವಾದುದು. ಘಟನೆಯ ಬಗ್ಗೆ ಗೊತ್ತಿದ್ದರೂ ಸಾರ್ವಜನಿಕ ಆಕ್ರೋಶ ವ್ಯಕ್ತವಾಗುವವರೆಗೂ ನಿರ್ಲಕ್ಷ್ಯ ವಹಿಸಿದ ಸರಕಾರದ ನಡೆಯೂ ಅಷ್ಟೇ ಎದ್ದು ಕಾಣುವಂಥದ್ದು.
ನಿರ್ಭಯಾ ಅತ್ಯಾಚಾರ ಪ್ರಕರಣದ ನಂತರ ನ್ಯಾಯಮೂರ್ತಿ ವರ್ಮಾ ಅವರ ಸಮಿತಿಯಿಂದ ಝೀರೊ ಎಫ್ಐಆರ್ ಕ್ರಿಮಿನಲ್ ಕಾನೂನು ತಿದ್ದುಪಡಿಯಾಗಿದೆ. ಇದು ಪೊಲೀಸ್ ಠಾಣೆಯ ವ್ಯಾಪ್ತಿಗೆ ಒಳಪಡದ ಪ್ರದೇಶದಲ್ಲಿ ಘಟನೆ ಸಂಭವಿಸಿದರೂ ಎಫ್ಐಆರ್ ದಾಖಲಿಸಲು ಪೊಲೀಸರನ್ನು ಕಡ್ಡಾಯಗೊಳಿಸುವ ರಕ್ಷಣಾತ್ಮಕ ಸಾಧನವಾಗಿದೆ. ವಿಳಂಬವನ್ನು ತಡೆಗಟ್ಟುವುದು ಮತ್ತು ತನಿಖೆ ನಡೆಸಲು ಪೊಲೀಸರನ್ನು ಬದ್ಧಗೊಳಿಸುವುದು ಇದರ ಉದ್ದೇಶವಾಗಿತ್ತು. ಆದರೆ, ಮಣಿಪುರದಲ್ಲಿ ಹಿಂಸಾಚಾರಕ್ಕೆ ಸಾಕ್ಷಿಯಾಗಿ ಕಾರಿನಲ್ಲಿ ಕುಳಿತಿದ್ದ ನಾಲ್ವರು ಪೊಲೀಸರ ಕಣ್ಣೆದುರೇ ಘಟನೆ ನಡೆದಿದ್ದರೂ ಝೀರೊ ಎಫ್ಐಆರ್ ಕ್ರಮ ಅನುಸರಿಸಲಾಯಿತು. ಇದಲ್ಲದೆ, ಶಂಕಿತರ ಗುರುತನ್ನು ದೃಢೀಕರಿಸಬಹುದಾಗಿದ್ದರೂ, ಝೀರೊ ಎಫ್ಐಆರ್ನಲ್ಲಿ ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಎಂದು ಉಲ್ಲೇಖಿಸಿ ಅತ್ಯಾಚಾರ ಮತ್ತು ಕೊಲೆಯ ಆರೋಪಗಳನ್ನು ದಾಖಲಿಸಲಾಗಿದೆ. ಹೀಗಾಗಿ, ತ್ವರಿತ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಉದ್ದೇಶಿಸಲಾದ ಸಾಧನವನ್ನು ಅಧಿಕಾರಿಗಳು ಅನ್ಯಾಯವೆಸಗಿದ ಅಪರಾಧಿಗಳಿಗೆ ಸಹಾಯ ಮಾಡಲು ತಿರುಚಿದ್ದಾರೆ.
ಇದೇನೂ ಮೊದಲ ನಿದರ್ಶನವಲ್ಲ. ಕಳೆದ ಎರಡು ತಿಂಗಳಿನಿಂದ ಸರಕಾರ ಇಂತಹ ಅವಮಾನದ ಬಗ್ಗೆ ಹೇಗೆ ಕಣ್ಣುಮುಚ್ಚಿ ಕುಳಿತಿದೆ ಎಂಬುದು ಹೆಚ್ಚು ಕಳವಳಕಾರಿಯಾಗಿದೆ. ಹಿಂಸಾಚಾರ ಪ್ರಾರಂಭವಾದಾಗಿನಿಂದ ಅಧಿಕಾರಿಗಳು ಇನ್ನೂ ಎಷ್ಟು ಮಾನವ ಹಕ್ಕುಗಳ ಉಲ್ಲಂಘನೆಯ ಘಟನೆಗಳನ್ನು ವರದಿ ಮಾಡದೆ ಇದ್ದಿರಬಹುದು ಅಥವಾ ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದ್ದಿರಬಹುದು ಎಂಬ ಪ್ರಶ್ನೆಯನ್ನು ಇದು ಹುಟ್ಟುಹಾಕುತ್ತದೆ. ಇದಕ್ಕೆ ಸಾಕ್ಷಿಯಾಗಿ, ಮಣಿಪುರದಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರ ಕುರಿತು ಇನ್ನೂ ಕೆಲವು ನಿರೂಪಣೆಗಳು ವಾರದೊಳಗೆ ಮುಂಚೂಣಿಗೆ ಬಂದಿವೆ.
ಇಬ್ಬರು ಮಹಿಳಾ ಕಾರ್ಯಕರ್ತರು ಮತ್ತು ಉತ್ತರ ಅಮೆರಿಕದ ಮಣಿಪುರ ಬುಡಕಟ್ಟು ಸಂಘ (NAMTA) ಈ ಘಟನೆಯ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ (NCW) ಮಾಹಿತಿ ನೀಡಿದ್ದು ತಡವಾಗಿ ವರದಿಯಾಗಿದೆ. ಅಲ್ಲದೆ, ತಿಂಗಳ ಹಿಂದಯೇ ಜೂನ್ 12ರಂದು ಇತರ ಐವರು ಈ ವಿಷಯದ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದರು ಎಂಬುದೂ ವರದಿಯಾಗಿದೆ. ಆದರೆ, ಈ ಬಗ್ಗೆ ಯಾವುದೇ ಕ್ರಮ ಜರುಗಲೇ ಇಲ್ಲ.
ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವನ್ನು ಯಾವಾಗಲೂ ಶತ್ರುಗಳ ಮೇಲೆ ಅಧಿಕಾರವನ್ನು ಪ್ರತಿಪಾದಿಸಲು ಯುದ್ಧದ ಅಸ್ತ್ರವಾಗಿ ಬಳಸಲಾಗುತ್ತದೆ. ಸಂಘರ್ಷದ ಸಮಯದಲ್ಲಿ ಅನೇಕ ದ್ವಂದ್ವಗಳನ್ನು ಸೃಷ್ಟಿಸಲಾಗುತ್ತದೆ, ಸಿಟ್ಟೆಲ್ಲ ದುರ್ಬಲ ಮಹಿಳೆಯರ ವಿರುದ್ಧ ತಿರುಗುತ್ತದೆ. ಏಕೆಂದರೆ ಮಹಿಳೆಯರು ಜೈವಿಕ ಪುನರುತ್ಪಾದಕರು, ಸಾಂಸ್ಕೃತಿಕ ವಾಹಕರು ಮತ್ತು ಜನಾಂಗೀಯ ಗುಂಪಿನ ಸಂಕೇತವೆಂಬ ಕಾರಣದಿಂದಾಗಿ ಜನಾಂಗೀಯ ಗುಂಪಿನ ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ಮಹತ್ವದ ಪಾತ್ರವನ್ನು ಹೊಂದಿದ್ದಾರೆಂದು ಗ್ರಹಿಸಲಾಗುತ್ತದೆ. ರುತ್ ಸೀಫರ್ಟ್ ಹೇಳುವಂತೆ, ಸ್ತ್ರೀ ದೇಹವು ದೇಹದ ರಾಜಕೀಯದ ಸಾಂಕೇತಿಕ ಪ್ರಾತಿನಿಧ್ಯವಾಗಿದೆ ಮತ್ತು ಮಹಿಳೆಯರ ಮೇಲಿನ ಅತ್ಯಾಚಾರವು ಸಮುದಾಯದ ದೇಹದ ಸಾಂಕೇತಿಕ ಅತ್ಯಾಚಾರವಾಗಿದೆ.
ಯುದ್ಧಕಾಲದಲ್ಲಿ ಮಹಿಳೆಯರು ಹೇಗೆ ಹೆಚ್ಚಾಗಿ ಗುರಿಯಾಗುತ್ತಾರೆ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಬಲಿಯಾಗುತ್ತಾರೆ ಎಂಬುದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ. ಸಂಘರ್ಷ ಮತ್ತು ಅಸ್ಥಿರತೆಯ ಸಂದರ್ಭಗಳಲ್ಲಿ ಮಹಿಳೆಯರ ವಿರುದ್ಧ ಅಸ್ತಿತ್ವದಲ್ಲಿರುವ ತಾರತಮ್ಯದ ಮಾದರಿಗಳು ಹೇಗೆ ಉಲ್ಬಣಗೊಳ್ಳುತ್ತವೆ ಎಂಬುದಕ್ಕೆ ಮಣಿಪುರದ ಈ ಅಸಹ್ಯಕರ ಪ್ರಸಂಗ ಪುನರಾವರ್ತಿತ ಉದಾಹರಣೆಯಾಗಿದೆ.
ಆದಾಗ್ಯೂ, ಸಂಘರ್ಷದ ಸಂದರ್ಭಗಳಲ್ಲಿ ಲೈಂಗಿಕ ದೌರ್ಜನ್ಯದ ನಿದರ್ಶನಗಳಿಗೆ ಬಂದಾಗಲೆಲ್ಲ ಏಕೆ ಮೌನ ವಹಿಸಲಾಗುತ್ತದೆ ಎಂಬುದು ಮಾತ್ರ ಯಾವಾಗಲೂ ಬಗೆಹರಿಯದೆ ಉಳಿಯುತ್ತದೆ. ಈ ಮೌನವು ಕೇವಲ ಗೌರವ ಮತ್ತು ಅವಮಾನದ ಹೊರೆಯಿಂದಲ್ಲ, ಅದು ಅವರ ಮೂಲಭೂತ ಮಾನವ ಹಕ್ಕುಗಳನ್ನು ಉಲ್ಲಂಘಿಸಿದರೂ ಸಮಾಜವು ಮಹಿಳೆಯರನ್ನು ಕಳಂಕಿತರು ಎಂಬ ದೃಷ್ಟಿಯಿಂದ ನೋಡತೊಡಗುವ ಮುಗಿಯದ ದಾರುಣತೆ.
ಆದರೆ ಈ ಬಾರಿ ದುಷ್ಕರ್ಮಿಗಳ ವಿರುದ್ಧ ಕ್ರಮಕೈಗೊಳ್ಳದೆ ಮೌನವಾಗಿರುವುದನ್ನು ವ್ಯವಸ್ಥೆಯೂ ಅನುಸರಿಸಿತು ಎಂಬುದು ತುಂಬ ಕಟುವಾದ ಸತ್ಯ. ಝೀರೋ ಎಫ್ಐಆರ್ನಂತಹ ರಕ್ಷಣಾತ್ಮಕ ಸಾಧನಗಳನ್ನು ಸಂತ್ರಸ್ತೆಯರ ವಿರುದ್ಧ ಬಳಸಲಾಗಿದೆ. ಇಂಟರ್ನೆಟ್ ಸ್ಥಗಿತಗೊಳಿಸುವಿಕೆ ಕೂಡ ಅನ್ಯಾಯವನ್ನು ಮುಚ್ಚಿಹಾಕಿದೆ. ಹಾಗಾಗಿ ಹೇಯ ಕೃತ್ಯವೆಸಗಿದ ದುಷ್ಕರ್ಮಿಗಳು ಮತ್ತು ವ್ಯವಸ್ಥೆ ಎರಡೂ ಇಲ್ಲಿ ಸಮಾನ ದೋಷ ಎಸಗಿರುವುದು ಸ್ಪಷ್ಟ. ವೀಡಿಯೊ ಸೋರಿಕೆಯಾದ ನಂತರ ದುಷ್ಕರ್ಮಿಗಳನ್ನು ರಾತ್ರೋರಾತ್ರಿ ಬಂಧಿಸಲಾಗಿದ್ದರೂ, ಸಂತ್ರಸ್ತೆಯರು ಅನುಭವಿಸಿದ ಆಘಾತಕ್ಕೆ ಪ್ರತಿಯಾಗಿ ನ್ಯಾಯ ಒದಗಿಸುವುದು ಸಾಧ್ಯವಾಗಲಿಲ್ಲ. ಏಕೆಂದರೆ ಅವರ ಮೇಲಾದ ಘೋರ ಅನ್ಯಾಯವನ್ನು ಬಹಳ ಸಮಯದವರೆಗೆ ಮುಚ್ಚಿಡಲಾಯಿತು. ಏಕೆ ಈ ಸಾಂಸ್ಥಿಕ ಮೌನ ಎಂಬ ಪ್ರಶ್ನೆ ಹಾಗೇ ಉಳಿದಿದೆ.
ಕೃಪೆ: countercurrents.org