ಆಘಾ ಶಾಹಿದ್ ಅಲಿ, ಬಶಾರತ್ ಪೀರ್ ಕೃತಿ ಕೈಬಿಟ್ಟ ಕಾಶ್ಮೀರ ವಿವಿಗಳು
‘‘ಇದೊಂದು ಭಯಾನಕ ಮತ್ತು ಕೆಟ್ಟ ನಿರ್ಧಾರ. ‘ಹೊಸ ಕಾಶ್ಮೀರ’ವನ್ನು ರಚಿಸುವ ಹಿಕ್ಮತ್ತಿನ ಭಾಗ. ಅಂದರೆ ಇದು ಇತಿಹಾಸದ ಅಳಿಸುವಿಕೆ. ನಾವು ನಮ್ಮ ಇತಿಹಾಸ, ನಮ್ಮ ರಾಜಕೀಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು, ನಮ್ಮ ಕವಿಗಳನ್ನು ಮರೆತುಬಿಡುತ್ತೇವೆ. ಇದು ನೆನಪಿನ ಮೇಲಿನ ಯುದ್ಧವಾಗಿದೆ’’ ಎಂದಿದ್ದಾರೆ, ಲಂಡನ್ ಮೂಲದ ಕಾಶ್ಮೀರಿ ಬರಹಗಾರ ಮಿರ್ಝಾ ವಹೀದ್.
ಕಾಶ್ಮೀರದ ಎರಡು ಪ್ರಮುಖ ವಿಶ್ವವಿದ್ಯಾನಿಲಯಗಳು ಯಾವುದೇ ವಿವರಣೆಯಿಲ್ಲದೆ ಇಬ್ಬರು ಮಹತ್ವದ ಕಾಶ್ಮೀರಿ ಬರಹಗಾರರ ಕೃತಿಗಳನ್ನು ಪಠ್ಯಕ್ರಮದಿಂದ ಕೈಬಿಟ್ಟಿವೆ. ಕಾಶ್ಮೀರ ವಿಶ್ವವಿದ್ಯಾನಿಲಯ, ಕಾಶ್ಮೀರಿ-ಅಮೆರಿಕನ್ ಕವಿ ಆಘಾ ಶಾಹಿದ್ ಅಲಿ ಅವರ ಮೂರು ಕವನಗಳನ್ನು ಹಾಗೂ ಲೇಖಕ, ಪತ್ರಕರ್ತ ಬಶಾರತ್ ಪೀರ್ ಅವರ ಆತ್ಮಚರಿತ್ರೆಯನ್ನು ಇಂಗ್ಲಿಷ್ ಸ್ನಾತಕೋತ್ತರ ಪಠ್ಯದಿಂದ ಕೈಬಿಟ್ಟಿದೆ. ಶಾಹಿದ್ ಅವರ ಪ್ರಸಿದ್ಧ ಕವನಗಳು - ‘ಪೋಸ್ಟ್ಕಾರ್ಡ್ ಫ್ರಮ್ ಕಾಶ್ಮೀರ್’, ‘ಅರೇಬಿಕ್’ ಮತ್ತು ‘ದಿ ಲಾಸ್ಟ್ ಸ್ಯಾಫ್ರನ್’ ಮತ್ತು ಪೀರ್ ಅವರ ‘ಕರ್ಫ್ಯೂಡ್ ನೈಟ್’ ಕೈಬಿಡಲಾಗಿರುವ ಕೃತಿಗಳು.
ಈ ಕೃತಿಗಳು ಈ ವರ್ಷದಿಂದ ಪಠ್ಯಕ್ರಮದ ಭಾಗವಾಗಿರುವುದಿಲ್ಲ ಎಂದು ವಿಶ್ವವಿದ್ಯಾನಿಲಯದ ಮೂಲವೊಂದು ತಿಳಿಸಿದೆ. ಉಪಕುಲಪತಿಗಳ ಕಚೇರಿಯ ಸಮಾಲೋಚನೆಯ ನಂತರ ಸಂಬಂಧಿತ ಅಧಿಕಾರಿಗಳಿಗೆ ನಿರ್ಧಾರವನ್ನು ಮೌಖಿಕವಾಗಿ ತಿಳಿಸಲಾಗಿದೆ ಎಂದು ಹೇಳಲಾಗಿದೆ.
ವಿಶ್ವವಿದ್ಯಾನಿಲಯ ತನ್ನ ವೆಬ್ಸೈಟ್ನಿಂದ ಎರಡು ವರ್ಷಗಳ ಸ್ನಾತಕೋತ್ತರ ಕೋರ್ಸ್ನ ಪಠ್ಯಕ್ರಮವನ್ನು ಸಹ ತೆಗೆದುಹಾಕಿದೆ. ಪಠ್ಯಕ್ರಮವನ್ನು ಒಮ್ಮೆ ನವೀಕರಿಸಿದ ನಂತರ ಮತ್ತೆ ಲಭ್ಯವಿರಲಿದೆ ಎಂದು ಮೂಲಗಳು ತಿಳಿಸಿವೆ.
ಇನ್ನು ಶ್ರೀನಗರದ ಕ್ಲಸ್ಟರ್ ಯೂನಿವರ್ಸಿಟಿ ಕೂಡ ಶಾಹಿದ್ ಅವರ ‘ಐ ಸೀ ಕಾಶ್ಮೀರ್ ಫ್ರಮ್ ನ್ಯೂಡೆಲ್ಲಿ ಅಟ್ ಮಿಡ್ನೈಟ್’ ಮತ್ತು ‘ಕಾಲ್ ಮಿ ಇಸ್ಮಾಯೀಲ್ ಟುನೈಟ್’ ಕವನಗಳನ್ನು ತೆಗೆಯಲು ನಿರ್ಧರಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ತೊಂಬತ್ತರ ದಶಕದ ಆರಂಭದಲ್ಲಿ ಸಶಸ್ತ್ರ ಬಂಡಾಯ ಭುಗಿಲೆದ್ದ ನಂತರ ಕಾಶ್ಮೀರದ ಜನರು ಎದುರಿಸುತ್ತಿರುವ ಹೋರಾಟಗಳನ್ನು ಅತ್ಯಂತ ಗಾಢವಾಗಿ ಪ್ರತಿಮಾತ್ಮಕವಾಗಿ ಕಟ್ಟಿಕೊಡುವ ಕವಿತೆ ‘ಐ ಸೀ ಕಾಶ್ಮೀರ್ ಫ್ರಮ್ ನ್ಯೂಡೆಲ್ಲಿ ಅಟ್ ಮಿಡ್ನೈಟ್’. ದಂಗೆ ತೀವ್ರವಾಗಿದ್ದ ದಿನಗಳಲ್ಲಿ ಕಾಶ್ಮೀರದಲ್ಲಿ ಪ್ರತಿದಿನದ ಸ್ಥಿತಿ ಎಂಬಂತಾಗಿದ್ದ ಚಿತ್ರಹಿಂಸೆ, ಗುಂಡಿನಿಂದ ಛಿದ್ರವಾದ ದೇಹಗಳು, ಕರ್ಫ್ಯೂ ಇರುತ್ತಿದ್ದ ರಾತ್ರಿಗಳನ್ನು ವಿವರಿಸುತ್ತ ಕವಿತೆ ಮನ ಕಲಕುತ್ತದೆ.
‘ಕಾಲ್ ಮಿ ಇಸ್ಮಾಯೀಲ್ ಟುನೈಟ್’ ಎಂಬುದು ಧರ್ಮನಿಂದೆಯ ಉಲ್ಲೇಖಗಳೊಂದಿಗೆ ಇರುವ ಗಝಲ್ ಆಗಿದ್ದು, ಇದರಲ್ಲಿ ಶಾಹಿದ್ ಕಾಶ್ಮೀರದಲ್ಲಿನ ಧರ್ಮ ಮತ್ತು ಸಂಘರ್ಷದ ನಡುವೆ ತಮ್ಮನ್ನು ತಾವು ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಸಂಘರ್ಷ ಭುಗಿಲೆದ್ದ ಹೊತ್ತಲ್ಲಿ ಕಣಿವೆಯಲ್ಲಿ ತಲೆದೋರಿದ್ದ ಹಿಂಸಾಚಾರದ ಬಗ್ಗೆಯೂ ಗಝಲ್ ಉಲ್ಲೇಖಿಸುತ್ತದೆ.
ಕ್ಲಸ್ಟರ್ ಯುನಿವರ್ಸಿಟಿಯ ‘ಇಂಟಿಗ್ರೇಟೆಡ್ ಮಾಸ್ಟರ್ಸ್ ಇನ್ ಇಂಗ್ಲಿಷ್’ ಪಠ್ಯಕ್ರಮದಲ್ಲಿ ಈ ಎರಡು ಕವಿತೆಗಳು ಸೇರಿದ್ದವು. ಈ ಪಠ್ಯಕ್ರಮ ಒಳಗೊಂಡಿರುವ ಇತರ ಕವಿಗಳಲ್ಲಿ ಪ್ರಭಾವಿ ಉರ್ದು ಕವಿ ಫೈಝ್ ಅಹ್ಮದ್ ಫೈಝ್ ಕೂಡ ಸೇರಿದ್ದಾರೆ.
ಶಾಹಿದ್ ಒಬ್ಬ ಮಹತ್ವದ ಸೆಕ್ಯುಲರ್ ದೃಷ್ಟಿಕೋನದ ಕವಿಯಾಗಿದ್ದು, ಅವರ ಹೃದಯವು ಕಾಶ್ಮೀರದ ಹಿಂದೂಗಳು ಮತ್ತು ಮುಸ್ಲಿಮರಿಬ್ಬರಿಗೂ ನೋವು ಮತ್ತು ವೇದನೆಯಿಂದ ಮಿಡಿದಿತ್ತು ಎಂದು ಕಾಶ್ಮೀರ ವಿವಿ ಮಾಜಿ ಶಿಕ್ಷಣತಜ್ಞರು ಹೇಳುತ್ತಾರೆ. ಅವರ ಕೃತಿಗಳು ಕಾಶ್ಮೀರ ಸಂಘರ್ಷದ ವಿಷಯವನ್ನು ಹೊಂದಿದ್ದರೂ, ಕಾಶ್ಮೀರ ವಿವಿ ಪಠ್ಯದ ಭಾಗವಾಗಿದ್ದ ಮೂರೂ ಕವನಗಳು ಸಂಪೂರ್ಣವಾಗಿ ಯಾವುದೇ ರಾಜಕೀಯ ನಿಲುವಿನವಾಗಿರಲಿಲ್ಲ ಎಂಬುದು ಆ ಶಿಕ್ಷಣತಜ್ಞರ ಅಭಿಪ್ರಾಯ.
ಆಘಾ ಶಾಹಿದ್ ಅಲಿ
ಇಂಗ್ಲಿಷ್ನಲ್ಲಿ ಹೆಚ್ಚು ವ್ಯಾಪಕ ಓದುಗ ಬಳಗವನ್ನು ಹೊಂದಿದ್ದ ಕಾಶ್ಮೀರಿ ಬರಹಗಾರರಲ್ಲಿ ಶಾಹಿದ್ ಒಬ್ಬರು. ಅವರ 2001ರ ಕವನ ಸಂಕಲನ ‘ರೂಮ್ಸ್ ಆರ್ ನೆವರ್ ಫಿನಿಶ್ಡ್’, ಅಮೆರಿಕದ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿಯಾದ ನ್ಯಾಷನಲ್ ಬುಕ್ ಪ್ರಶಸ್ತಿಯ ಅಂತಿಮ ಸುತ್ತಿಗೆ ಆಯ್ಕೆಯಾಗಿತ್ತು. ಇದು ಪ್ರತಿಷ್ಠಿತ ಯುಎಸ್ ಸಾಹಿತ್ಯ ಪ್ರಶಸ್ತಿಯಾಗಿದೆ. 1949ರ ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಲಿಯಂ ಫಾಲ್ಕ್ನರ್ ಮತ್ತು ಪುಲಿಟ್ಝರ್ ಪ್ರಶಸ್ತಿ ಪುರಸ್ಕೃತರಾದ ಫಿಲಿಪ್ ರೋಥ್ ಮತ್ತು ಜಾನ್ ಅಪ್ಡಿಕ್ ಮೊದಲಾದ ಮಹತ್ವದ ಬರಹಗಾರರು ಈ ಪ್ರಶ್ತಸ್ತಿಗೆ ಭಾಜನರಾಗಿದ್ದಿದೆ.
ಹೊಸದಿಲ್ಲಿಯಲ್ಲಿ ಜನಿಸಿದ ಮತ್ತು ಅಮೆರಿಕದಲ್ಲಿ ಬೆಳೆದ ಅವರು 2001ರಲ್ಲಿ 52ನೇ ವಯಸ್ಸಿನಲ್ಲಿ ಮಿದುಳಿನ ಕ್ಯಾನ್ಸರ್ನಿಂದ ನಿಧನರಾದರು. ಶಾಹಿದ್ ಕಾಶ್ಮೀರ ವಿವಿ ಹಳೆಯ ವಿದ್ಯಾರ್ಥಿಯಾಗಿದ್ದು, ದಿಲ್ಲಿ ವಿಶ್ವವಿದ್ಯಾನಿಲಯ, ಪ್ರಿನ್ಸ್ಟನ್ ವಿಶ್ವವಿದ್ಯಾನಿಲಯ ಮತ್ತು ಹ್ಯಾಮಿಲ್ಟನ್ ಕಾಲೇಜ್ ಮೊದಲಾದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಬೋಧಕರಾಗಿ ಕೆಲಸ ಮಾಡಿದ್ದರು.
‘ಅಮೆರಿಕನ್ ಆಲ್ಫಾಬೆಟ್ಸ್: 25 ಕಂಟೆಂಪರರಿ ಪೊಯೆಟ್ಸ್’ ಅಮೆರಿಕನ್ ಕಾವ್ಯದ ಪ್ರಮುಖ ಸಂಕಲನ. ಅದರಲ್ಲಿ ಶಾಹಿದ್ ಅವರನ್ನು ‘‘ಎರಡನೇ ವಿಶ್ವ ಸಮರದ ನಂತರದ ಅಸಾಮಾನ್ಯ ಕವಿಗಳಲ್ಲಿ ಒಬ್ಬರು’’ ಎಂದು ವಿವರಿಸುತ್ತದೆ.
‘‘ಅವರ ಧ್ವನಿ ನಾನು ಹಿಂದೆಂದೂ ಕೇಳಿರದಂಥದ್ದಾಗಿತ್ತು. ಏಕಕಾಲದಲ್ಲಿ ಭಾವಗೀತಾತ್ಮಕ ಮತ್ತು ತೀವ್ರ ಅಚ್ಚುಕಟ್ಟುತನ ಉಳ್ಳದ್ದಾಗಿತ್ತು. ತೊಡಗಿಸಿಕೊಳ್ಳುವಿಕೆಯಷ್ಟೇ ಆಳವಾಗಿ ಅಂತರ್ಮುಖಿಯಾಗಿತ್ತು. ಗಝಲ್ನ ಛಂದವಂತೂ ಇಂಗ್ಲಿಷ್ ಕಾವ್ಯದ ಹರಹಿಗೆ ಶಾಹಿದ್ ಅವರ ಪ್ರಮುಖ ಪಾಂಡಿತ್ಯಪೂರ್ಣ ಕೊಡುಗೆ ಎಂದು ಖಚಿತವಾಗಿ ಹೇಳಬಹುದು’’ ಎಂದು ಲೇಖಕ ಅಮಿತಾವ್ ಘೋಷ್ ಬರೆದಿದ್ದಾರೆ.
ಶಾಹಿದ್ ಅವರ ಮರಣದ ನಂತರ ಪ್ರಕಟವಾದ ತನ್ನ ಕಾಶ್ಮೀರಿ ಗೆಳೆಯನಿಗೆ ಘೋಷ್ ಅವರ ಶ್ರದ್ಧಾಂಜಲಿ ರೂಪದ ಪ್ರಬಂಧ ಕೇಂದ್ರೀಯ ಶಾಲಾ ಶಿಕ್ಷಣ ಮಂಡಳಿಯ 11ನೇ ತರಗತಿಯ ಪಠ್ಯಕ್ರಮದ ಭಾಗವಾಗಿದೆ. ದೇಶಾದ್ಯಂತ 27,000ಕ್ಕೂ ಹೆಚ್ಚು ಶಾಲೆಗಳಲ್ಲಿ ಈ ಪಠ್ಯವಿದೆ.
ಬಶಾರತ್ ಪೀರ್
ಪೀರ್ ಅವರ ‘ಕರ್ಫ್ಯೂಡ್ ನೈಟ್’, ಹಿಂಸಾಚಾರದಿಂದ ಧ್ವಂಸಗೊಂಡ ಕಾಶ್ಮೀರದಲ್ಲಿ ಬೆಳೆಯುತ್ತಿರುವವನ ಆಳವಾದ ವೈಯಕ್ತಿಕ ಅನುಭವಗಳ ಅದ್ಭುತವಾದ ಆತ್ಮಚರಿತ್ರೆ. ಹಿಮಾಲಯ ಪ್ರದೇಶದಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದ ಸಂಘರ್ಷದ ಮರೆಯಲಾಗದ ಚಿತ್ರವನ್ನು ಕಟ್ಟಿಕೊಟ್ಟಿದ್ದಕ್ಕಾಗಿ ವಿಮರ್ಶಕರ ಅಪಾರ ಮೆಚ್ಚುಗೆಯನ್ನು ಪಡೆದ ಕೃತಿ.
ಲೇಖಕ ಖುಷ್ವಂತ್ ಸಿಂಗ್ ಅವರು ‘ಕರ್ಫ್ಯೂಡ್ ನೈಟ್’ನ್ನು ‘‘ಕಟು ಪ್ರಾಮಾಣಿಕತೆಯ ಮತ್ತು ಆಳವಾಗಿ ಘಾಸಿಗೊಳಿಸುವ ಕಥನ’’ ಎಂದಿದ್ದರು. ‘ದಿ ಗಾರ್ಡಿಯನ್’ ವಿಮರ್ಶೆಯಲ್ಲಿ, ‘‘ಕಾಶ್ಮೀರ ಸಂಘರ್ಷವನ್ನು ಭಾರತ ಮತ್ತು ಪಾಕಿಸ್ತಾನದ ನಡುವಿನ ರಾಜಕೀಯ ನೆಲೆಯಿಂದ ಕಾಶ್ಮೀರಿಗಳ ಜೀವನದೊಳಕ್ಕೆ ತರುವ ಕೃತಿ’’ ಎಂದು ಹೇಳಲಾಗಿತ್ತು.
‘‘ಈ ಇಬ್ಬರು ಲೇಖಕರ ಕೃತಿಗಳನ್ನು ಕೈಬಿಡುವ ನಿರ್ಧಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಅತ್ಯಂತ ಬೌದ್ಧಿಕ ಮತ್ತು ಚಿಂತನ ವಿರೋಧಿ ಆಡಳಿತವಿದೆ ಎಂಬ ಕಲ್ಪನೆಯನ್ನು ಬಲಪಡಿಸುತ್ತದೆ’’ ಎಂದು ಲಂಡನ್ ಮೂಲದ ಕಾಶ್ಮೀರಿ ಬರಹಗಾರ ಮಿರ್ಝಾ ವಹೀದ್ ಹೇಳಿದ್ದಾರೆ.
‘‘ಶ್ರೇಷ್ಠ ಕವಿಯೊಬ್ಬನನ್ನು ವಿಶ್ವವಿದ್ಯಾನಿಲಯದ ಆವರಣದಿಂದ ಆಚೆ ಹಾಕಿದ್ದು ವಿವಿ ಆಡಳಿತಗಾರನಿಗೆ ಬಹುಶಃ ಬಹಳ ದೊಡ್ಡ ಸಾಧನೆಯಾಗಿ ಕಾಣಿಸಿರಬಹುದು’’ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ವಿಶ್ವವಿದ್ಯಾನಿಲಯದ ಕುಲಪತಿ ಮತ್ತು ವಾಸ್ತವಿಕ ಮುಖ್ಯಸ್ಥರಾಗಿದ್ದಾರೆ.
‘‘ಇದೊಂದು ಭಯಾನಕ ಮತ್ತು ಕೆಟ್ಟ ನಿರ್ಧಾರವಾಗಿದೆ, ‘ಹೊಸ ಕಾಶ್ಮೀರ’ವನ್ನು ರಚಿಸುವ ಹಿಕ್ಮತ್ತಿನ ಭಾಗವಾಗಿದೆ. ಅಂದರೆ ಇದು ಇತಿಹಾಸದ ಅಳಿಸುವಿಕೆ-ನಾವು ನಮ್ಮ ಇತಿಹಾಸ, ನಮ್ಮ ರಾಜಕೀಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು, ನಮ್ಮ ಕವಿಗಳನ್ನು ಮರೆತುಬಿಡುತ್ತೇವೆ. ಇದು ನೆನಪಿನ ಮೇಲಿನ ಯುದ್ಧವಾಗಿದೆ’’ ಎಂದು ವಹೀದ್ ಹೇಳಿದ್ದಾರೆ.
‘‘ವಿಶ್ವವಿದ್ಯಾನಿಲಯಗಳು ಜ್ಞಾನ, ಚಿಂತನೆ ಮತ್ತು ಸಾಹಿತ್ಯದೊಂದಿಗೆ ವಿಮರ್ಶಾತ್ಮಕ ತೊಡಗಿಸಿಕೊಳ್ಳುವಿಕೆಯ ಸ್ಥಳಗಳು. ವಿಶಾಲ ಜಗತ್ತಿನಲ್ಲಿ ನಮ್ಮನ್ನು ನಾವು ಗುರುತಿಸಿಕೊಳ್ಳಲು ನೆರವಾಗುತ್ತವೆ. ಶಾಹಿದ್ ಅವರ ಕವನವನ್ನು ಕಾಶ್ಮೀರದಲ್ಲಿ ಮತ್ತು ಪ್ರಪಂಚದಾದ್ಯಂತ ಬಹಳ ಸಮಯದಿಂದ ಜನ ಓದುತ್ತ ಬಂದಿದ್ದಾರೆ. ಇನ್ನೂ ಹೆಚ್ಚು ಓದುತ್ತಾರೆ. ಬಶಾರತ್ ಅವರ ಆತ್ಮಚರಿತ್ರೆ ಕಳೆದ ಕೆಲವು ದಶಕಗಳ ಪ್ರಮುಖ ಪುಸ್ತಕಗಳಲ್ಲಿ ಒಂದಾಗಿದೆ. ಶಾಹಿದ್ರನ್ನು ನೆನಪಿನಿಂದ ಅಳಿಸಲು ಸಾಧ್ಯವಿಲ್ಲ. ‘ಕರ್ಫ್ಯೂಡ್ ನೈಟ್’ನ್ನು ಕಣ್ಮರೆಯಾಗಿಸಲು ಸಾಧ್ಯವಿಲ್ಲ’’ಎಂದು ವಹೀದ್ ಅಭಿಪ್ರಾಯಪಟ್ಟಿದ್ದಾರೆ.
ಕೃಪೆ:thewire.in