ಕ್ರಾಂತಿಯ ತಾಯಿಗೆ ಲಾಲ್ ಸಲಾಮ್
Lal Salam to the Mother of Revolution
- ಅಂಬಣ್ಣ ಅರೊಳಿಕರ್
ಲಂಗಾಣ ರಾಜ್ಯದ ಮೆದಕ್ ಜಿಲ್ಲೆಯ ತೂಫ್ರಾನ್ ಹಳ್ಳಿಯಲ್ಲಿ ಜನಿಸಿದ ಗುಮ್ಮಡಿ ವಿಠ್ಠಲ್ ರಾವ್ ಹೆಸರಿನ ಒಬ್ಬ ದಲಿತ ಕುಟುಂಬದ ವ್ಯಕ್ತಿಯು ಗದ್ದರ್ ಹೆಸರಿನಲ್ಲಿ ಹಾಡಿನ ಮೂಲಕವೇ ದೇಶಾದ್ಯಂತ ಜನಜಾಗೃತಿಯನ್ನು ಮೂಡಿಸಿ ನಮ್ಮ ನಡುವಿನಿಂದ ಕಣ್ಮರೆಯಾಗಿದ್ದಾರೆ. ಭೂಮಾಲಕ ವ್ಯವಸ್ಥೆಯ ವಿರುದ್ಧ ನಡೆದ ತ್ಯಾಗಪೂರಿತ , ರಾಜಿರಹಿತ ಹೋರಾಟಕ್ಕೆ ಪೂರಕವಾಗಿ ನಡೆದ ಅವರ ಹಮ್ಮಿಕೊಂಡ ಜನಜಾಗೃತಿ ಸಾಂಸ್ಕೃತಿಕ ಪ್ರತಿರೋಧದ ಪಯಣವೇ ಅವರು ನಡೆದು ಬಂದ ವಿರೋಚಿತ ಹೋರಾಟದ ಇತಿಹಾಸವಾಗಿದೆ..
76 ವರ್ಷಗಳ ಅವರ ಜೀವತಾವಧಿಯ ಸಂಘರ್ಷದಲ್ಲಿ ಅವರ ಜನತೆಯೊಂದಿಗಿನ ನಿಕಟ ಸಂಪರ್ಕ ಈ ದೇಶದ ಪ್ರಜಾಪ್ರಭುತ್ವಕ್ಕೆ ಬಹುದೊಡ್ಡ ಸಂಪರ್ಕ ಸೇತುವೆಯಾಗಿ ಅಸಂಖ್ಯಾತ ಜನತೆಯ ಒಳಗಿನ ಆಕ್ರೋಶದ ಧ್ವನಿಯಾಗಿ ದೇಶದ ಉದ್ದಗಲಕ್ಕೆ ಅವರು ಹರಡಿಕೊಂಡರು. ಅವರು ಇದುವರೆಗೂ ಬರೆದಿರುವ ಸಾವಿರಾರು ಹಾಡುಗಳು ಅವಿಭಜಿತ ಆಂಧ್ರಪ್ರದೇಶಕ್ಕೆ ಅಷ್ಟೇ ಅಲ್ಲ ಈ ದೇಶದ ಪ್ರತಿಯೊಬ್ಬರ ಮನಮುಟ್ಟುವಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ.
ಹಾಡು ಮುಟ್ಟದ ಸೊಪ್ಪಿಲ್ಲ,,ಗದ್ದರ್ ಬರೆಯದ ಸಾಹಿತ್ಯವಿಲ್ಲ. ಭಾರತದ ಶ್ರಮಿಕ ವರ್ಗದ ಸಾಂಸ್ಕೃತಿಕ ಕ್ರಾಂತಿಗೆ ಸೇನಾಧಿಪತಿಯಾಗಿ ಅವರು ಗುರುತಿಸಲ್ಪಟ್ಟರು. ‘‘ನನ್ನ ಸಾಹಿತ್ಯ ಜನರ ಅನುಭವದಿಂದ ಉಗಮವಾದ ಸಾಹಿತ್ಯ...ಆದುದರಿಂದಲೇ ಇದು ಪರಿಣಾಮಕಾರಿಯಾಗಿದೆ. ನನ್ನ ಸಾಹಿತ್ಯದಲ್ಲಿ ಶೇ. 25ರಷ್ಟು ದುಡಿಯುವ ಜನರ ಒಳ ಮಾತುಗಳಿದ್ದರೆ, ಶೇ. 75ರಷ್ಟು ಅಸ್ಪಶ್ಯತೆ, ಅಧಿಕಾರ ಹೀನತೆ, ಅಸಮಾನತೆಯ ವಿರುದ್ಧ ಆಳುವ ವರ್ಗಕ್ಕೆ ಅಂಕುಶ ಹಾಕುವ ಉದ್ದೇಶವನ್ನು ಹೊಂದಿದೆ’’ ಎಂದು ಅವರು ಅಭಿಪ್ರಾಯ ಪಟ್ಟಿದ್ದರು. ಕಾಡಿನಿಂದ ನಾಡಿಗೆ ಕಾಲಿಟ್ಟು ಜನಸಾಮಾನ್ಯರೊಂದಿಗೆ ನೇರವಾಗಿ ಬೆರೆಯಲು ಆರಂಭಿಸಿದ ದಿನದಿಂದ ಅವರು ಹೆಚ್ಚು ಹೆಚ್ಚು ಜನರನ್ನು ತಲುಪಲು ಆರಂಭಿಸಿದ್ದರು. ಸಿನಿಮಾ ಮಾಧ್ಯಮವನ್ನು ಕೂಡ ತನ್ನ ದಮನಿತರ ಹಾಡಿಗಾಗಿ ಪರಿಣಾಮಕಾರಿಯಾಗಿ ಬಳಸಿಕೊಂಡರು. ಪೊಲೀಸರು ಸಿಡಿಸಿದ ಒಂದು ಗುಂಡನ್ನು ಎದೆಯೊಳಗಿಟ್ಟೇ ಬದುಕು ಸವೆಸಿದರು. ಹಾಡಿನ ಮೂಲಕ ಅವರು ಕರ್ನಾಟಕದ ನೆಲದಲ್ಲೂ ಓಡಾಡಿದರು. ಇಬ್ಬರು ಮಹಿಳೆಯರು ಎನ್ಕೌಂಟರ್ಗೆ ಬಲಿಯಾದಾಗ ಅವರು ಅವಿಭಜಿತ ದಕ್ಷಿಣ ಕನ್ನಡಕ್ಕೂ ಬಂದಿದ್ದರು. ಇಲ್ಲೂ ಕ್ರಾಂತಿಕಾರಿ ಹಾಡುಗಳನ್ನು ಹಾಡಿ ಜನಜಾಗೃತಿ ಮೂಡಿಸಿದ್ದರು. ಸಾಕೇತ್ ರಾಜನ್ ಹತ್ಯೆಯಾದಾಗ ಅವರು ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ‘ಈ ರಾಜ್ಯದಲ್ಲಿ ನನ್ನ ಮಗನಿಗೊಂದು ಪ್ರತಿಮೆ ನಿರ್ಮಾಣ ಮಾಡಬೇಕು’ ಎಂದು ಸರಕಾರವನ್ನು ಬೇಡಿಕೊಂಡಿದ್ದರು. ದ್ವೇಷವಿಲ್ಲದ, ಮೋಸವಿಲ್ಲದ ನಾಡಿನ ನಿರ್ಮಾಣದ ಆಶಯ ಹೊತ್ತು ಹುತಾತ್ಮರಾದ ಅಸಂಖ್ಯಾತ ಹೋರಾಟಗಾರರ ತ್ಯಾಗಪೂರಿತ ಬಳುವಳಿಯ ಬಂಡಾಯದ ಧ್ವನಿಯಿಲ್ಲವಾಗಿದೆ.ಇಂತಹ ವೀರ ಪರಂಪರೆಯ ಯುದ್ಧನೌಕೆಯ ಅಗಲಿಕೆ ಲಕ್ಷಾಂತರ ಜನತೆಯ ಕಣ್ಣೀರಿಗೆ ಸಾಕ್ಷಿಯಾಗಿದೆ... ಸಾವಿನ ಜೊತೆ ಸಂಗೀತ ಹಾಡುವೆನು ಕ್ರಾಂತಿಯ ತಾಯಿಗೆ ಲಾಲ್ ಸಲಾಮ್ ಎಂಬ ಅವರ ವಾಣಿ ಕ್ರಾಂತಿಕಾರಿ ಇತಿಹಾಸದಲ್ಲಿ ಚಿರಸ್ಮರಣೀಯವಾಗಿ ದಾಖಲಾಗಿದೆ..