ನರಗುಂದ ಬಂಡಾಯ, ರೈತಸಂಘದ ಉದಯ

ರಾಜ್ಯದ ರೈತ ಚಳವಳಿಯಲ್ಲಿ ಮಹತ್ವದ ಪಾತ್ರವಹಿಸಿರುವ ಎಚ್.ಆರ್. ಬಸವರಾಜಪ್ಪನವರ ಆತ್ಮಕತೆ 'ಹಸಿರು ಹಾದಿಯ ಕಥನ' ಕೃತಿಯ ಆಯ್ದ ಭಾಗ.

Update: 2023-07-19 18:45 GMT

ರೈತ ಚಳವಳಿಗಳು ಸೀಮಿತ ಮತ್ತು ಪ್ರಾದೇಶಿಕ ಮಿತಿಯ ವ್ಯಾಪ್ತಿಯನ್ನು ಮೀರಿ, ರೈತಾಪಿ ವರ್ಗದ ವಿಶಾಲ ಐಕ್ಯತೆಗೆ ವೇದಿಕೆಯಾಗಿ ರೂಪುಗೊಂಡದ್ದು ನರಗುಂದ ಮತ್ತು ನವಲುಗುಂದ ರೈತ ಬಂಡಾಯ. ಈ ರೈತ ಹೋರಾಟಕ್ಕೆ ಮೂಲ ಕಾರಣವಾದದ್ದು ಮಲಪ್ರಭಾ ನೀರಾವರಿ ಯೋಜನೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ಹುಟ್ಟುವ ಮಲಪ್ರಭಾ ನದಿ ಸವದತ್ತಿ, ರಾಮದುರ್ಗ, ನರಗುಂದ ತಾಲೂಕುಗಳಲ್ಲಿ ಹರಿದು ಹುನಗುಂದ ತಾಲೂಕಿನಲ್ಲಿ ಕೃಷ್ಣಾ ನದಿಯನ್ನು ಸೇರುತ್ತದೆ. ಸವದತ್ತಿ ಬಳಿಯ ಮುನವಳ್ಳಿ ಎಂಬಲ್ಲಿ ಮಲಪ್ರಭೆಗೆ ಅಣೆಕಟ್ಟು ಕಟ್ಟಿ, ಜಲಾನಯನ ಪ್ರದೇಶಗಳಿಗೆ ನೀರುಣಿಸುವ ನೀರಾವರಿ ಯೋಜನೆಯನ್ನು ರಾಜ್ಯ ಸರಕಾರ 1960ರಲ್ಲೇ ಘೋಷಿಸಿ, ಶಂಕುಸ್ಥಾಪನೆಯನ್ನೂ ಮಾಡಿತ್ತು. ಆದರೆ ಕಾಮಗಾರಿ ಕುಂಟುತ್ತಾ ಸಾಗಿಬಂದಿದ್ದರಿಂದ 1967ರವರೆಗೂ ಗಮನಾರ್ಹ ನಿರ್ಮಾಣ ಕಾಮಗಾರಿ ನಡೆಯಲಿಲ್ಲ. ಹೇಳಿಕೇಳಿ, ಈ ಅಚ್ಚುಕಟ್ಟು ಪ್ರದೇಶ ಕಡಿಮೆ ಮಳೆಯಾಗುವ ಕಪ್ಪು ಜಮೀನಿನ ಪ್ರದೇಶ. ಹಾಗಾಗಿ ಅಲ್ಲಿನ ಜನ, ನೀರನ್ನು ಹೆಚ್ಚಾಗಿ ಅಪೇಕ್ಷಿಸದ ಜೋಳ ಮತ್ತು ಹತ್ತಿಯಂತಹ ಸಾಂಪ್ರದಾಯಿಕ ಬೆಳೆಗಳ ಮೊರೆ ಹೋಗಿದ್ದರು. ನೀರಾವರಿ ಸೌಲಭ್ಯ ಬಂದರೆ, ತಮ್ಮ ಜಮೀನುಗಳಲ್ಲೂ ನೀರಾವರಿ ಬೆಳೆ ತೆಗೆಯಬಹುದೆಂದು ರೈತರು ಆಸೆಗಣ್ಣಿನಿಂದ ಕಾದಿದ್ದೇ ಬಂತು, ಯೋಜನೆ ಮಾತ್ರ ಕಾರ್ಯರೂಪಕ್ಕೆ ಬರುವ ಸುಳಿವೇ ಸಿಗಲಿಲ್ಲ. 1967ರಲ್ಲಿ ಉತ್ತರ ಕರ್ನಾಟಕಕ್ಕೆ ಪ್ರತ್ಯೇಕವಾದ ನೀರಾವರಿ ವಿಭಾಗವನ್ನು ತೆರೆದ ನಂತರವಷ್ಟೇ ಈ ಯೋಜನೆ ವೇಗ ಪಡೆದುಕೊಂಡಿತು. ಆದರೂ ಪೂರ್ಣಪ್ರಮಾಣದಲ್ಲಿ ನೀರಾವರಿ ಯೋಜನೆ ಸಾಕಾರಗೊಳ್ಳಲಿಲ್ಲ. 1980ರಲ್ಲಿ ಚಳವಳಿ ನಡೆದ ಸಂದರ್ಭದಲ್ಲೂ ನರಗುಂದ, ನವಲಗುಂದ, ಸವದತ್ತ್ತಿ, ರಾಮದುರ್ಗ ತಾಲೂಕುಗಳು ಕೆಲವು ಹಳ್ಳಿಗಳಿಗೆ ಮಾತ್ರ ನೀರಾವರಿ ಸೌಲಭ್ಯ ತಲುಪಿತ್ತೆಂದರೆ, ಯೋಜನೆಯ ಮಂದಗತಿ ಎಂತಹದ್ದಿರಬಹುದೆಂದು ಅಂದಾಜಿಸಿ. ಇಲಾಖೆ ತೋಡಿದ್ದ ಕಾಲುವೆಯೆಂದರೆ, ಸಿಮೆಂಟು (ಕಾಂಕ್ರಿಟ್) ಮೆತ್ತಿಗೆಯಿದ್ದ ಕಾಲುವೆಗಳಲ್ಲ, ಮಣ್ಣಿನಲ್ಲಿ ತೋಡಿ ಬಿಟ್ಟಿದ್ದ ಕಾಲುವೆಗಳಷ್ಟೆ. ಹೇಳಿಕೇಳಿ, ಮೊದಲೇ ಅದು ಕಪ್ಪುಮಣ್ಣು. ನದಿ ಪಾತ್ರದ ದ್ವಾರಗಳಿಂದ ಕಾಲುವೆಗಳಿಗೆ ನೀರು ಹರಿಸಿದರೆ, ಕೊನೆಯ ಉಪಕಾಲುವೆ, ಚಿಟುಕಾಲುವೆಗಳಿಗೆ ಹರಿಯುವ ಮೊದಲೇ ನೀರು ಇಂಗಿಹೋಗುತ್ತಿತ್ತು. ಕೆಲವೊಮ್ಮೆ ಯಥೇಚ್ಛವಾಗಿ ಬಿಡುಗಡೆ ಮಾಡುತ್ತಿದ್ದ ನೀರು, ಸದೃಢವಲ್ಲದ ಕಾಲುವೆಗಳಿಂದ ಆಚೆಗೆ ಹರಿದು ಹೊಲಗಳಲ್ಲಿ ಕೊರಕಲು ಉಂಟು ಮಾಡಿ, ಫಲವತ್ತಾದ ಮೇಲ್ಮಣ್ಣನ್ನು ಕೊಚ್ಚಿಕೊಂಡು ಹೋಗುತ್ತಿತ್ತು. ಕೆಲವೆಡೆ ನೀರು ನಿಂತು ಮಡುಗಳು ಸೃಷ್ಟಿಯಾಗುತ್ತಿದ್ದವು. ಒಟ್ಟಿನಲ್ಲಿ ನೀರಾವರಿ ಇಲಾಖೆಯ ಅಸಮರ್ಪಕ ಕಾರ್ಯವೈಖರಿಯಿಂದಾಗಿ ರೈತರ ಪಾಲಿಗೆ ವರವಾಗಬೇಕಿದ್ದ ಮಲಪ್ರಭಾ ನೀರಾವರಿ ಯೋಜನೆ ಶಾಪವಾಗಿ ಪರಿಣಮಿಸಿತ್ತು.

ಆದರೆ ಸರಕಾರದ ದೃಷ್ಟಿಯಲ್ಲಿ ತಾವು ರೈತರಿಗೆ ನೀರು ಕೊಟ್ಟಿದ್ದೇವೆ ಎಂಬ ಭಾವನೆ ಯಿತ್ತು. 1976ರ ವೇಳೆಗೆ ಸಣ್ಣ ಪ್ರಮಾಣದಲ್ಲಿ ಹೊಲಗಳಿಗೆ ನೀರು ಬಂದರೂ ಸರಕಾರ ತಾನು 1974ರಿಂದಲೇ ನಿಮಗೆ ನೀರು ಕೊಡುತ್ತಿದ್ದೇವೆ, ಹಾಗಾಗಿ ಪೂರ್ವಾನ್ವಯ ಆಗುವಂತೆ ಕಳೆದ ಎರಡು ವರ್ಷದ ನೀರಾವರಿ ಅಭಿವೃದ್ಧಿ ಕರ (ಬೆಟರ್‌ಮೆಂಟ್ ಲೆವಿ) ಕಟ್ಟಿ ಎಂದು ರೈತರ ಮೇಲೆ ಒತ್ತಡ ತಂದಿತು. ಅದೂ ಆಗಿನ ಕಾಲದಲ್ಲಿ ಎಕರೆಗೆ 1,500 ರೂಪಾಯಿ ಬೆಟರ್‌ಮೆಂಟ್ ಲೆವಿ ಕಟ್ಟಬೇಕು ಎಂದು ಸರಕಾರ ಪಟ್ಟು ಹಿಡಿಯಿತು. ಒಂದುಕಡೆ, ಸರಕಾರ ಈ ರೀತಿ ಅವೈಜ್ಞಾನಿಕ ಮತ್ತು ಅವಾಸ್ತವಿಕ ತೆರಿಗೆ ವಿಧಿಸಿದರೆ, ಮತ್ತೊಂದೆಡೆ ಅದೇ ನೀರಾವರಿ ಯೋಜನೆಗಾಗಿ ರೈತರಿಂದ ತಾನು ಸ್ವಾಧೀನಪಡಿಸಿಕೊಂಡಿದ್ದ ಜಮೀನುಗಳಿಗೆ ಪರಿಹಾರ ಕೊಡುವ ವಿಚಾರದಲ್ಲಿ ಸರಕಾರ ಆಮೆ ನಡಿಗೆ ನೀತಿ ಅನುಸರಿಸುತ್ತಿತ್ತು. ಎಷ್ಟೋ ರೈತರಿಗೆ ಪರಿಹಾರ ಕೈಸೇರಿರಲಿಲ್ಲ. ಈ ಕುರಿತು ಸರಕಾರಿ ಕಚೇರಿಗಳಿಗೆ ಅಲೆದಾಡಿದರೆ, ಅಧಿಕಾರಿಗಳು ಲಂಚಕ್ಕಾಗಿ ಬೇಡಿಕೆ ಮುಂದಿಡುತ್ತಿದ್ದರು.

ಇದರ ನಡುವೆ ಮಲಪ್ರಭಾ ರೈತರ ಮೇಲೆ ಇನ್ನೊಂದು ದುರಂತ ಬಂದೆರಗಿತು. ಆ ಭಾಗದ ಜಮೀನುಗಳು ಕಪ್ಪು(ಎರೆ) ಮಣ್ಣಿನಿಂದ ಕೂಡಿದ್ದರಿಂದ ಹತ್ತಿ ಬೆಳೆಗೆ ಯೋಗ್ಯವಾಗಿದ್ದವು. ಅದರಲ್ಲೂ ಉದ್ದ ನೂಲಿನ ವರಲಕ್ಷ್ಮೀ ಹತ್ತಿ ಬೆಳೆಗೆ ರೈತರು ಒಗ್ಗಿ ಹೋಗಿದ್ದರು. 1974-75ರಲ್ಲಿ ಕ್ವಿಂಟಾಲ್ ವರಲಕ್ಷ್ಮೀ ಹತ್ತಿಗೆ ಸಾವಿರ ರೂ. ದರವಿತ್ತು. ರೈತರಿಗೆ ತಕ್ಕಮಟ್ಟಿಗೆ ಆದಾಯ ಬರುತ್ತಿತ್ತು. ಹೆಚ್ಚೆಚ್ಚು ರೈತರು ಈ ಬೆಳೆಯನ್ನೇ ಪ್ರಧಾನ ಬೆಳೆಯಾಗಿಸಿಕೊಂಡ ನಂತರ 1977ರ ಆಸುಪಾಸಿನ ವೇಳೆಗೆ ಹತ್ತಿಯ ದರ ದಿಢೀರ್ ಸಾವಿರ ರೂ.ಯಿಂದ ಕ್ವಿಂಟಾಲಿಗೆ ಮುನ್ನೂರು, ನಾನೂರು ರೂ.ಗೆ ಕುಸಿಯಿತು. ರೈತರು ದೊಡ್ಡ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದರು. ಆವತ್ತಿನ ಅಂಕಿಅಂಶಗಳ ಪ್ರಕಾರ ಆ ಭಾಗದಲ್ಲಿದ್ದ 39,429 ಕುಟುಂಬಗಳ ಪೈಕಿ ಶೇ. 71ರಷ್ಟು ಕುಟುಂಬಗಳು ಆರ್ಥಿಕವಾಗಿ ದಿವಾಳಿಯಂಚಿಗೆ ತಲುಪಿದವು. ಅಂತಹ ಸಂದರ್ಭದಲ್ಲಿ ಸರಕಾರ, ತನ್ನ ಅಸಮರ್ಪಕ ನೀರಾವರಿ ಯೋಜನೆಗೆ ತೆರಿಗೆ ಸಂಗ್ರಹಿಸಲು ಬಲವಂತವಾಗಿ ಮುಂದಾಯಿತು.

ಬ್ಯಾಂಕ್‌ನಿಂದ ನೀಡಲಾಗುತ್ತಿದ್ದ ಅಲ್ಪಾವಧಿ ಸಾಲವನ್ನು ಮಧ್ಯಮಾವಧಿಗೆ ವಿಸ್ತರಿಸುವಂತೆ, ಸರಕಾರ ಸ್ವಾಧೀನ ಪಡಿಸಿಕೊಂಡ ಜಮೀನಿಗೆ ಕೂಡಲೇ ಪರಿಹಾರ ಬಿಡುಗಡೆ ಮಾಡುವಂತೆ, ನೀರಾವರಿ ಬೆಟರ್‌ಮೆಂಟ್ ಲೆವಿ ಮತ್ತು ಇತರ ಕರಗಳನ್ನು ಇನ್ನು ಕೆಲವು ವರ್ಷಗಳವರೆಗೆ ಮನ್ನಾ ಮಾಡುವಂತೆ ಆ ಭಾಗದ ರೈತರು ಸರಕಾರಕ್ಕೆ ಹಲವು ಸಲ ಮನವಿ ಮಾಡಿಕೊಂಡರೂ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಅಧಿಕಾರಸ್ಥ ರಾಜಕಾರಣಿಗಳಿಂದ ನಿರಂತರವಾಗಿ ನಿರ್ಲಕ್ಷ ವ್ಯಕ್ತವಾಗಿದ್ದರಿಂದ ರೈತರಿಗೆ ಚಳವಳಿಯಲ್ಲದೆ ಬೇರೆ ಮಾರ್ಗ ಉಳಿಯಲಿಲ್ಲ. ಅದಾಗಲೇ ನರಗುಂದದಲ್ಲಿ ಅಸ್ತಿತ್ವದಲ್ಲಿದ್ದ ರೈತ ಕಾರ್ಮಿಕ ಸಂಘದ ಮೂಲಕ ರೈತರು ಚಳವಳಿಗೆ ಮುಂದಾದರು. ರಾಜಶೇಖರಪ್ಪಹೊಸಕೇರಿ, ವಿ.ಎನ್.ಹಳಕಟ್ಟಿ, ಎಸ್.ವಿ. ನೆಗಳೂರು, ವಿ.ಎಸ್.ಹುಯಿಲುಗೋಳ್, ಮುರಗೋಡು, ಬಾಳೇಕಾಯಿ ಮುಂತಾದ ಸ್ಥಳೀಯ ನಾಯಕರು ಚಳವಳಿಯ ನೇತೃತ್ವ ವಹಿಸಿದರು. ನರಗುಂದದ ಗ್ರಾಮದೇವತೆ ಶ್ರೀ ಉಚ್ಚಲಮ್ಮ ದೇವಿ ದೇವಸ್ಥಾನದಲ್ಲಿ ತೆಂಗಿನ ಕಾಯಿ ಒಡೆಯುವ ಮೂಲಕ ರೈತರು ಚಳವಳಿಯ ರಣಕಹಳೆ ಮೊಳಗಿಸಿದರು.

ಕೆಲವರು ಸರಕಾರದ ಅವೈಜ್ಞಾನಿಕ ತೆರಿಗೆ ವಿರುದ್ಧ ಮುಧೋಳದಲ್ಲಿ ನ್ಯಾಯಾಲಯದಲ್ಲಿ ಕೇಸನ್ನೂ ದಾಖಲಿಸಿದರು. ಕೋರ್ಟು ಕೂಡಾ ಇಂಥಾ ಅವೈಜ್ಞಾನಿಕ ಕರಗಳು ತಪ್ಪು ಎಂದು ತೀರ್ಪಿತ್ತಿತ್ತು. ಆದರೆ ದಾವೆ ಹೂಡಿದವರಿಗೆ ಮಾತ್ರ ಇದರಿಂದ ವಿನಾಯಿತಿ ಘೋಷಿಸಿತೇ ವಿನಾ ಎಲ್ಲಾ ರೈತರಿಗೆ ಅನ್ವಯವಾಗುವಂತೆ ತೀರ್ಪು ಬರಲಿಲ್ಲ. ಅಷ್ಟರಲ್ಲಿ ಚಳವಳಿ ತೀವ್ರತೆ ಪಡೆದುಕೊಳ್ಳಲಾರಂಭಿಸಿತು.

ಎಸ್.ಎ.ಪಾಟೀಲ್, ಬಿ.ಆರ್.ಯಾವಗಲ್, ಬಿ.ಬಿ.ಗಾಣಿಗೇರ್, ಬಿ.ಆರ್. ಪಾಟೀಲ್, ಬಿ.ಎಚ್.ಕುಪ್ಪಣ್ಣನವರ್ ಮೊದಲಾದ ಮತ್ತಷ್ಟು ನಾಯಕರು ಚಳವಳಿಯನ್ನು ವಿಶಾಲಗೊಳಿಸಿದರು. 1980ರಲ್ಲಿ ಈ ಹೋರಾಟಕ್ಕೆ ವ್ಯವಸ್ಥಿತ ಸಂಘಟನೆಯ ರೂಪ ನೀಡುವ ಸಲುವಾಗಿ ಪಕ್ಷಾತೀತವಾದ 'ಮಲಪ್ರಭಾ ನೀರಾವರಿ ಪ್ರದೇಶ ರೈತರ ಸಮನ್ವಯ ಸಮಿತಿ'ಯನ್ನು ಹುಟ್ಟುಹಾಕಿದರು. 1980 ಎಪ್ರಿಲ್ 14ರಂದು ನರಗುಂದಕ್ಕೆ ಆಗಮಿಸಿದ್ದ ಅಂದಿನ ಮುಖ್ಯಮಂತ್ರಿ ಗುಂಡೂರಾಯರಿಗೆ ಹೋರಾಟ ಸಮಿತಿ ತಮ್ಮ ಬೇಡಿಕೆಗಳ ಮನವಿ ಸಲ್ಲಿಸಿತು. ಮುಖ್ಯಮಂತ್ರಿಗಳು ನೆಪ ಮಾತ್ರಕ್ಕೆ ಒಂದು ಪರಿಶೀಲನಾ ಸಮಿತಿ ರಚಿಸಿದರಾದರೂ, ಗಂಭೀರವಾಗಿ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಲಿಲ್ಲ. ಆ ಸಮಿತಿ ಮಾಡಿದ ಶಿಫಾರಸುಗಳು ಕೂಡಾ ರೈತರಿಗೆ ಸಮ್ಮತವೆನಿಸಲಿಲ್ಲ.

ನಿರಂತರ ಸತ್ಯಾಗ್ರಹ, ಅರೆಬೆತ್ತಲೆ ಮೆರವಣಿಗೆ, ಮೃಗಶಿರಾ ಮಳೆಯಲ್ಲಿ ಬಾರುಕೋಲು ಚಳವಳಿ, ಇಡೀ ದಿನ ಒಂಟಿಕಾಲಲ್ಲಿ ನಿಂತ 'ನಿಂತಕಾಲು' ಸತ್ಯಾಗ್ರಹ ಮಾಡಿ ನಾಡಿನ ಗಮನ ಸೆಳೆದರು. ಆಗಲೂ ಸರಕಾರ ರೈತ ಹೋರಾಟಕ್ಕೆ ಸ್ಪಂದಿಸಲಿಲ್ಲ. ದಿನದಿಂದ ದಿನಕ್ಕೆ ಚಳವಳಿಯಲ್ಲಿ ಭಾಗವಹಿಸುತ್ತಿದ್ದವರ ಸಂಖ್ಯೆ ಹೆಚ್ಚುತ್ತಲೇ ಹೋಯಿತು. ಜೂನ್ 30ರಂದು ನರಗುಂದದಲ್ಲಿ ನಡೆದ ಸಭೆಯಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ರೈತರು ಸೇರಿದ್ದರು. ಆನಂತರ ಎಚ್ಚೆತ್ತುಕೊಂಡ ಈ ಭಾಗದ ಸುಮಾರು 17 ಜನಪ್ರತಿನಿಧಿಗಳು ಅಂದಿನ ಕಂದಾಯ ಸಚಿವರಾಗಿದ್ದ ಬಂಗಾರಪ್ಪನವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಬೇಡಿಕೆಗಳ ಮನವಿ ಪತ್ರ ಕೊಟ್ಟುಬಂದರು. ಅದಕ್ಕೂ ಸರಕಾರ ಜಪ್ಪಯ್ಯ ಅನ್ನಲಿಲ್ಲ. ರೈತರು ಕರ ನಿರಾಕರಣೆ ಚಳವಳಿಗೆ ಕರೆಕೊಟ್ಟರು. ನವಲಗುಂದದ ಸುಮಾರು ಹದಿಮೂರು ಸಾವಿರ ರೈತರು ತಾವು ಕರ ಕಟ್ಟುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು.

ಸರಕಾರದ ನಿರ್ಲಕ್ಷದಿಂದಾಗಿ ಕೊನೆಗೂ ದುರಂತದ ಆ ದಿನ ಸಮೀಪಿಸಿತು. ಸರಕಾರದ ಮೇಲೆ ಒತ್ತಡ ತರಲೇಬೇಕೆಂದು ತೀರ್ಮಾನಿಸಿದ ರೈತರು 1980, ಜುಲೈ 21ರಂದು ಸರಕಾರಿ ಕಚೇರಿಗಳನ್ನು ಬಂದ್ ಮಾಡಿಸಿ ಮುಷ್ಕರ ನಡೆಸುವ ಚಳವಳಿಯನ್ನು ಘೋಷಿಸಿದರು. ಆವತ್ತು ಏಕಕಾಲದಲ್ಲಿ ನರಗುಂದ, ಸವದತ್ತ್ತಿ, ರಾಮದುರ್ಗಗಳಲ್ಲಿ ತಹಶೀಲ್ದಾರ್ ಕಚೇರಿ ಸೇರಿದಂತೆ ಇತರ ಸರಕಾರಿ ಕಚೇರಿಗಳಿಗೆ ಮುತ್ತಿಗೆ ಹಾಕಿ ಬಂದ್ ಮಾಡಿಸಲು ರೈತರು ನಿರ್ಧರಿಸಿದ್ದರು. ವಾತಾವರಣ ಎಷ್ಟು ಬಿಗುವಿನಿಂದ ಕೂಡಿತ್ತೆಂದರೆ, ಬಹಳಷ್ಟು ಸರಕಾರಿ ಅಧಿಕಾರಿಗಳು ರಜೆ ಹಾಕಿ ತಮ್ಮ ಕುಟುಂಬಗಳನ್ನೂ ಕರೆದುಕೊಂಡು ನಗರಗಳನ್ನು ತೊರೆದು ದೂರದ ಊರಿಗೆ ಹೊರಟುಹೋಗಿದ್ದರು. ರೈತರ ಸಹನೆಯ ಕಟ್ಟೆಯೊಡೆಯುವ ಲಕ್ಷಣಗಳು ಗೋಚರಿಸಿದ್ದವು. ಆದರೂ ರೈತರು ಶಾಂತಿಯುತವಾಗಿಯೇ ಪ್ರತಿಭಟನೆಗೆ ಮುಂದಾದರು.

ನರಗುಂದ ತಾಲೂಕು ಕಚೇರಿಗೆ ಹತ್ತಾರು ಸಾವಿರ ರೈತರು ತಮ್ಮ ಟ್ರ್ಯಾಕ್ಟರ್, ಎತ್ತಿನ ಗಾಡಿಗಳ ಮೂಲಕ ಫೇರಾವ್ ಮಾಡಿ, ಕಚೇರಿ, ಬಂದ್ ಮಾಡುವಂತೆ ಪ್ರತಿಭಟನೆ ಶುರು ಮಾಡಿದರು. ಆದರೆ ಸಮೂಹವನ್ನು ನಾಜೂಕಾಗಿ ನಿಭಾಯಿಸುವ ಸೂಕ್ಷ್ಮತೆಯಿಲ್ಲದ ತಹಶೀಲ್ದಾರ್, ರೈತರು ರೊಚ್ಚಿಗೇಳುವಂತೆ ಮಾಡಿದ. ಯಾರೂ ಕಚೇರಿಯ ಒಳಹೋಗಲು ಅಥವಾ ಒಳಗಿರುವವರು ಹೊರಕ್ಕೆ ಹೋಗಲು ಆಸ್ಪದವಾಗದಂತೆ ರೈತರು ದಾರಿಗೆ ಅಡ್ಡವಾಗಿ ಉದ್ದಕ್ಕೂ, ಅಗಲಕ್ಕೂ ಮಲಗಿ ಪ್ರತಿಭಟನೆಗೆ ಮುಂದಾದರು. ಮಧ್ಯಾಹ್ನದವರೆಗೂ ಎಲ್ಲಾ ಸರಿಯಾಗಿತ್ತು. ಆದರೆ ಮಧ್ಯಾಹ್ನ ಊಟಕ್ಕೆಂದು ಮನೆಗೆ ತೆರಳಲು ಹೊರಬಂದ ತಹಶೀಲ್ದಾರ್‌ಗೆ ರೈತರು ದಾರಿ ಬಿಡಲಿಲ್ಲ. ಹಠಕ್ಕೆ ಬಿದ್ದವನಂತೆ ಆ ತಹಶೀಲ್ದಾರ್, ಮಲಗಿದ್ದ ರೈತರ ಎದೆಗಳ ಮೇಲೆ ತನ್ನ ಬೂಟುಗಾಲನ್ನಿಟ್ಟು ನಡೆದುಕೊಂಡು ಹೋಗಲು ಮುಂದಾದ. ಹೀಗೆ ಒಂದಿಬ್ಬರನ್ನು ಆತ ತುಳಿದು ಮುಂದೆ ಸಾಗಿರಬಹುದು, ರೈತರ ಸ್ವಾಭಿಮಾನ ಸ್ಫೋಟಿಸಿತು. ಸಿಟ್ಟಿನಿಂದ ತಹಶೀಲ್ದಾರ್ ಮತ್ತು ಕಚೇರಿಯ ಮೇಲೆ ದಾಳಿ ಮಾಡಿದರು. ಆಗ ಸ್ಥಳದಲ್ಲೇ ಇದ್ದ ಇನ್‌ಸ್ಪೆಕ್ಟರ್, ರೈತರ ಮೇಲೆ ಗುಂಡಿನ ಮಳೆಗರೆಯಲು ಆರಂಭಿಸಿದ. ಪೊಲೀಸರ ಈ ಗೋಲಿಬಾರ್‌ನಲ್ಲಿ ಈರಪ್ಪಕಡ್ಲಿಕೊಪ್ಪ, ಬಸಪ್ಪ ಲಕ್ಕುಂಡಿ ಅಗಳವಾಡಿ ಎಂಬ ಇಬ್ಬರು ರೈತರು ಹುತಾತ್ಮರಾದರು!

ಸುದ್ದಿ ಹರಡುತ್ತಿದ್ದಂತೆಯೇ ರೈತರ ಪಿತ್ತ ನೆತ್ತಿಗೇರಿತು, ಪೊಲೀಸರು, ಸರಕಾರಿ ಕಚೇರಿಗಳ ಮೇಲೆ ದಾಳಿ ಮಾಡಿ ಧ್ವಂಸಗೈದರು. ಗುಂಡು ಹಾರಿಸಿದ ಇನ್‌ಸ್ಪೆಕ್ಟರ್ ಗಂಭೀರವಾಗಿ ಗಾಯಗೊಂಡ. ಈ ಗಲಾಟೆಯಲ್ಲಿ ಕೆಲವು ಪೊಲೀಸ್ ಅಧಿಕಾರಿಗಳು ಕೂಡಾ ಅಸುನೀಗಿದರು ಎಂಬ ಸುದ್ದಿ ಇದೆಯಾದರೂ, ಸರಕಾರ ಅದನ್ನು ಅಧಿಕೃತವಾಗಿ ಘೋಷಿಸಿಲ್ಲವಾದ್ದರಿಂದ ನಿಕಟ ಮಾಹಿತಿ ಇವತ್ತಿಗೂ ತಿಳಿದಿಲ್ಲ. ಒಟ್ಟಿನಲ್ಲಿ ರೈತರ ಆಕ್ರೋಶದಿಂದ ಬಚಾವಾಗಲು ಪೊಲೀಸರು ತಾವು ತೊಟ್ಟಿದ್ದ ಸಮವಸ್ತ್ರವನ್ನು ಕಳಚಿಟ್ಟು, ಜನರ ನಡುವೆ ಪಾರಾಗಿ ಜೀವ ಉಳಿಸಿಕೊಂಡಿದ್ದನ್ನು ನಾವು ನಂತರದಲ್ಲಿ ಅಲ್ಲಿಗೆ ಭೇಟಿ ನೀಡಿದಾಗ ಕೆಲವು ಪ್ರತ್ಯಕ್ಷದರ್ಶಿಗಳು ಹಂಚಿಕೊಂಡರು.

ರೈತರ ಮೇಲೆ ಗೋಲಿಬಾರ್ ನಡೆಸಿ, ಇಬ್ಬರು ರೈತರನ್ನು ಕೊಂದು ಹಾಕಿದ ಸರಕಾರದ ಕ್ರಮದ ವಿರುದ್ಧ ಇಡೀ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿತು. ಅಷ್ಟು ದಿನ ಕೇವಲ ಪ್ರಾದೇಶಿಕ ನೆಲೆಗಟ್ಟಿನಲ್ಲಿ ಮಾತ್ರ ತಮ್ಮ ಪ್ರತಿರೋಧ ತೋರುತ್ತಿದ್ದ ರೈತರು ನರಗುಂದ-ನವಲಗುಂದ ಬಂಡಾಯದ ತರುವಾಯ ಎಲ್ಲಾ ಮೂಲೆಯಿಂದ ಒಕ್ಕೊರಲಿನ ದನಿ ಮೊಳಗಲಾರಂಭಿಸಿದರು.

ಜುಲೈ 21ರ ಗೋಲಿಬಾರ್ ಘಟನೆ ತಿಳಿಯುತ್ತಿದ್ದಂತೆಯೇ ಎನ್.ಡಿ. ಸುಂದರೇಶ್ ಅವರು ಶಿವಮೊಗ್ಗ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರನ್ನು ಸಂಪರ್ಕಿಸಿ, ಅವತ್ತೇ ಸಂಜೆ ಶಿವಮೊಗ್ಗದಲ್ಲಿ ಒಂದು ತುರ್ತು ಸಭೆ ಕರೆದರು. ನಮಗೆಲ್ಲ ಬಹುದೊಡ್ಡ ಆಘಾತವಾಗಿತ್ತು. ರೈತರ ಮೇಲೆ ಗೋಲಿಬಾರ್ ನಡೆಸುವಷ್ಟು ಆಡಳಿತ ಅಸೂಕ್ಷ್ಮವಾಗಿದೆಯೇ ಎಂಬ ಪ್ರಶ್ನೆ ಕಾಡುತ್ತಿತ್ತು. ಆ ವಿಚಾರವಾಗಿ ಚರ್ಚಿಸಿದೆವು. ಅದನ್ನು ವಿರೋಧಿಸಿ ನಮ್ಮ ಸಂಘದ ವತಿಯಿಂದ ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಬೇಕೆಂಬ ಅಭಿಪ್ರಾಯಗಳು ಕೇಳಿಬಂದವು. ಆದರೆ ಸುಂದರೇಶ್ ಅವರು ಎಷ್ಟು ಆಕ್ರೋಶಗೊಂಡಿದ್ದರೆಂದರೆ, ಅಷ್ಟು ಮಾತ್ರ ಮಾಡಿ ಕೈತೊಳೆದುಕೊಳ್ಳುವುದು ಅವರಿಗೆ ಸರಿ ಕಾಣಲಿಲ್ಲ.

''ಅಲ್ರೀ, ಆ ಹೇಡಿಗಳು ನಮ್ಮ ರೈತರ ಮೇಲೆ ಗುಂಡು ಹಾರಿಸಿ, ಕೊಲೆ ಮಾಡಿ, ನಮ್ಮನ್ನು ಹೆದರಿಸಿ ಮೂಲೆಯಲ್ಲಿ ಕೂರಿಸಲು ಯೋಜನೆ ಹಾಕಿಕೊಂಡಿದ್ದಾರೆ. ಅಂತಹದ್ದರಲ್ಲಿ ನಾವು ಕೇವಲ ಸಾಂಕೇತಿಕ ಪ್ರತಿಭಟನೆ ಮಾಡಿದರೆ ಸಾಕಾ?'' ಅವರ ಧ್ವನಿಯಲ್ಲಿ ಸಿಟ್ಟಿತ್ತು.

''ಮತ್ತೇನು ಮಾಡೋದು ನೀವೇ ಹೇಳಿ ಸಾರ್?'' ಎಂದೆ ನಾನು.

''ನಿಮ್ಮ ಗುಂಡೇಟಿಗೆ ನಾವು ರೈತರು ಹೆದರಲ್ಲ ಅನ್ನೋದನ್ನು ಸರಕಾರಕ್ಕೆ ತಿವಿದು ಹೇಳೋಣ. ನಾವೆಲ್ಲರೂ ನಾಳೆಯೇ ಗೋಲಿಬಾರ್ ನಡೆದ ನರಗುಂದಕ್ಕೆ ಹೋಗಿ, ಆತಂಕದಲ್ಲಿರುವ ರೈತರನ್ನು ಮಾತಾಡಿಸಿ ಧೈರ್ಯ ತುಂಬೋಣ'' ಎಂದರು

ಅವರಷ್ಟೇ ಆಕ್ರೋಶ ಎಲ್ಲರಿಗೂ ಇತ್ತು. ಎಲ್ಲರೂ ಒಮ್ಮನಸ್ಸಿನಿಂದ ಒಪ್ಪಿದರು. ಜುಲೈ 22ರಂದು ಸುಂದರೇಶ್ ಅವರ ಸಂಗಡ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷರಾಗಿದ್ದ ಎಚ್.ಎಸ್.ರುದ್ರಪ್ಪನವರು, ಕಡಿದಾಳು ಶಾಮಣ್ಣ, ನಾನು, ಡಾ. ಬಿ.ಎಂ. ಚಿಕ್ಕಸ್ವಾಮಿ, ಕೆ.ಪುಟ್ಟಪ್ಪ, ಜ್ಯೋತಿರಾವ್, ಈಶ್ವರಪ್ಪ, ಭದ್ರೇಗೌಡ, ಶ್ರೀನಿವಾಸ, ಬೀರನಹಳ್ಳಿ ಬಸಪ್ಪಮೊದಲಾದವರು ಎರಡು ಕಾರಿನಲ್ಲಿ ನರಗುಂದದತ್ತ ಹೊರಟೆವು.

ನಾವು ನರಗುಂದಕ್ಕೆ ಹೋದಾಗ ಇಡೀ ನಗರ ತುಂಬಾ ಉದ್ವಿಗ್ನತೆಯಿಂದ ಕೂಡಿತ್ತು. ಹಿಂದಿನ ದಿನ ನಡೆದ ದೊಂಬಿಯ ಕಾರಣಕ್ಕೆ ಸರಕಾರವು ರೈತ ಹಿತರಕ್ಷಣಾ ಸಮಿತಿಯ ಸಂಚಾಲಕರಾದ ರುದ್ರಪ್ಪಹೊಸಕೇರಿ, ಬಿ.ಆರ್. ಯಾವಗಲ್, ಹಳಕಟ್ಟಿ ಮುಂತಾದ ನಾಯಕರನ್ನೆಲ್ಲ ಬಂಧಿಸಿ ಜೈಲಿನಲ್ಲಿಟ್ಟಿತ್ತು. ಇಡೀ ನರಗುಂದ ನಗರ ಯುದ್ಧಾನಂತರದ ರಣರಂಗದಷ್ಟು ಚೆಲ್ಲಾಪಿಲ್ಲಿಯಾಗಿತ್ತು. ಜನ ಭಯಭೀತಗೊಂಡು ಮನೆಯಿಂದ ಹೊರಬರುತ್ತಲೇ ಇರಲಿಲ್ಲ. ನಾವು ಮೊದಲು, ಗೋಲಿಬಾರ್‌ನಿಂದ ಮೃತರಾದ ರೈತರ ಮನೆಗಳಿಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಶೋಕ ಹಂಚಿಕೊಂಡು ಬಂದೆವು. ಆನಂತರ ಜೈಲಿಗೆ ಹೋಗಿ, ಬಂಧನದಲ್ಲಿದ್ದ ರೈತ ಹೋರಾಟಗಾರರನ್ನು ಭೇಟಿಯಾಗಿ ಧೈರ್ಯ ತುಂಬಿದೆವು. ಮುಂದಿನ ಹೋರಾಟದಲ್ಲಿ ನಾವು ಜೊತೆಗಿರುವುದಾಗಿ, ಕಾನೂನು ಸಮರವನ್ನು ಮುನ್ನಡೆಸುವುದಾಗಿ ವಿಶ್ವಾಸ ಕೊಟ್ಟೆವು. ಆದರೆ ಪರಿಸ್ಥಿತಿ ಅಷ್ಟು ಸುಲಭವಿರಲಿಲ್ಲ. ಅವರನ್ನು ಜೀವನಪರ್ಯಂತ ಜೈಲಿನಲ್ಲಿ ಕೊಳೆಸಲು ಏನೆಲ್ಲ ಕೇಸುಗಳು ಬೇಕೋ ಅವೆಲ್ಲವನ್ನೂ ಹೇರಿದ್ದರು ಪೊಲೀಸರು. ಮುಂದೆ ಗುಂಡೂರಾಯರ ಸರಕಾರ ಬಿದ್ದು, ಹೆಗಡೆಯವರ ಸರಕಾರ ಬಂದಾಗ ಕೇಸು ವಾಪಸ್ ತೆಗೆದುಕೊಂಡಿದ್ದರಿಂದ ಅವರು ಬಿಡುಗಡೆ ಆಗುವಂತಾಯಿತು.

ಆ ದುರಂತ ವಿದ್ಯಮಾನಕ್ಕೆ ಸಾಕ್ಷಿಯಾದ ಜಾಗವನ್ನು ಕಣ್ಣಾರೆ ಕಂಡ ನಂತರ ನಮ್ಮ ಆಕ್ರೋಶ ಇನ್ನಷ್ಟು ಹೆಚ್ಚಾಯಿತು. ಗುಂಡೂರಾಯರ ಸರಕಾರದ ವಿರುದ್ಧ ನಮಗೆ ಉಕ್ಕಿಬಂದ ಕೋಪ ಅಷ್ಟಿಷ್ಟಲ್ಲ. ವಾಪಸ್ ಶಿವಮೊಗ್ಗಕ್ಕೆ ಮರಳಬೇಕು, ಎಂದು ಅಂದುಕೊಂಡರೂ, ಆ ನೆಲವನ್ನು ಬಿಟ್ಟು ತೆರಳಲು ಮನಸ್ಸಾಗಲಿಲ್ಲ. ಯಾವ ಹೊತ್ತಿನಲ್ಲಿ ಪೊಲೀಸರು ಮತ್ತಾವ ಆಟ ಆಡಬಹುದೋ ಎಂಬ ಯೋಚನೆಗಳು ಕಾಡಲಾರಂಭಿಸಿದವು. ನರಗುಂದದಲ್ಲಿ ಹೊತ್ತಿದ ಕಿಡಿಯನ್ನು ನಾವು ಇಡೀ ರಾಜ್ಯಕ್ಕೆ ವ್ಯಾಪಿಸದೆ ಹೋದರೆ, ಇದು ಸಹ ಸೀಮಿತ ಪ್ರಾದೇಶಿಕ ವಿದ್ಯಮಾನವಾಗಿ, ಇಲ್ಲಿನ ರೈತರು ಮತ್ತು ರೈತ ಹೋರಾಟಗಾರರ ಮೇಲೆ ಸರಕಾರ ಇನ್ನೂ ಕ್ರೂರವಾಗಿ ಮುಗಿಬೀಳಬಹುದು ಎಂಬ ಆತಂಕ ನಮ್ಮದು. ಆವತ್ತು ಹುಬ್ಬಳ್ಳಿಯಲ್ಲೇ ಉಳಿದು, ಮುಂದಿನ ದಾರಿಯ ಬಗ್ಗೆ ಚರ್ಚಿಸಿ ಆನಂತರ ಶಿವಮೊಗ್ಗಕ್ಕೆ ವಾಪಸ್ ಹೋಗೋಣ ಎಂದು ತೀರ್ಮಾನಿಸಿದೆವು, ಹುಬ್ಬಳ್ಳಿಯ ಹೊಟೇಲೊಂದರಲ್ಲಿ ರೂಮು ಮಾಡಿಕೊಂಡು ಮಂಥನಕ್ಕಿಳಿದೆವು.

ಎಲ್ಲರ ಅಭಿಪ್ರಾಯ ಒಂದೇ ಆಗಿತ್ತು. ನರಗುಂದದ ಹೋರಾಟದ ಕಿಚ್ಚನ್ನು ನಾವು ಬೇರೆಡೆಗೆ ವ್ಯಾಪಿಸುವಂತೆ ನೋಡಿಕೊಳ್ಳಬೇಕು. ಆದರೆ ಹೇಗೆ? ಅನ್ನೋದು ನಮ್ಮ ಮುಂದಿದ್ದ ಪ್ರಶ್ನೆ, ಸುದೀರ್ಘ ಸಮಾಲೋಚಿಸಿದ ನಂತರ ಎಚ್.ಎಸ್. ರುದ್ರಪ್ಪನವರು ಒಂದು ಪ್ರಸ್ತಾಪ ಮುಂದಿಟ್ಟರು.

''ನಾವು ವಾಪಸ್ ಶಿವಮೊಗ್ಗಕ್ಕೆ ಹೋಗಿ ಪ್ರತಿಭಟನೆ, ಚಳವಳಿ ನಡೆಸಿದರೂ ಅದು ನಮ್ಮ ಈಗಿನ ಕಬ್ಬು ಬೆಳೆಗಾರರ ಸಂಘದ ಒಂದು ಮುಂದುವರಿಕೆ ಚಳವಳಿ ಮಾತ್ರ ಆಗಿರುತ್ತೆ. ನಮ್ಮ ಮುಂದಿನ ಹೋರಾಟಗಳು ನರಗುಂದದ ಬಂಡಾಯವನ್ನು ಆವರಿಸಿಯೇ ಮೈದಳೆಯಬೇಕೆಂದರೆ, ನಾವೀಗ ಇಲ್ಲಿಯೇ ಒಂದು ಹೊಸ ಸಂಘವನ್ನು ಹುಟ್ಟುಹಾಕಬೇಕು. ಆಗ ಅದಕ್ಕೆ ನರಗುಂದದ ನಂಟು ಬೆಳೆಯುತ್ತೆ. ನಂತರ ಅದನ್ನು ನಾವು ಶಿವಮೊಗ್ಗದಲ್ಲಿ ಮುಂದುವರಿಸಬಹುದು. ರಾಜ್ಯವ್ಯಾಪಿ ಬೆಂಬಲ ವ್ಯಕ್ತವಾಗುತ್ತೆ'' ಎಂಬುದು ಅವರ ಪ್ರಸ್ತಾಪ.

ಈ ಹೊಸ ಸಂಘದ ಸಂರಚನೆ ಹೇಗಿರಬೇಕು, ಪದಾಧಿಕಾರಿಗಳು ಯಾರು, ಯಾರ್ಯಾರನ್ನು ಒಳಗೊಳ್ಳಬೇಕು ಎಂದು ಚರ್ಚಿಸಿ ಒಮ್ಮತದ ತೀರ್ಮಾನಕ್ಕೆ ಬಂದೆವು. ಕೂಡಲೇ ಆ ಭಾಗದ ಒಂದಷ್ಟು ರೈತ ನಾಯಕರನ್ನು ಸಂಪರ್ಕಿಸಿ, ಅವರಿಗೆ ನಮ್ಮ ನಿರ್ಧಾರವನ್ನು ತಿಳಿಸಿದೆವು. ಅವರು ಸಹ ನಮ್ಮ ಜೊತೆಗೂಡಲು ಉತ್ಸಾಹ ತೋರಿದರು. ಮಾರನೇ ದಿನ, ಅಂದರೆ ಜುಲೈ 23ರಂದು ಅದೇ ಹೊಟೇಲಿನಲ್ಲಿ ನಮ್ಮ ಹೊಸ ಸಂಘವನ್ನು ಘೋಷಿಸಲು ನಿರ್ಧರಿಸಿದೆವು.

23 ಜುಲೈ 1980, 'ಕರ್ನಾಟಕ ರಾಜ್ಯ ರೈತ ಸಂಘ ಮತ್ತು ರೈತ ಕಾರ್ಮಿಕ ಸಂಘ' ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದ ದಿನ. ಅವತ್ತು, ಪತ್ರಿಕಾಗೋಷ್ಠಿ ನಡೆಸಿ, ಅಲ್ಲಿನ ರೈತ ನಾಯಕರೂ ಸೇರಿದಂತೆ, ಇಲ್ಲಿಂದ ತೆರಳಿದ್ದ ಅಷ್ಟೂ ಜನರ ಉಪಸ್ಥಿತಿಯಲ್ಲಿ ಸಂಘವನ್ನು ಹುಟ್ಟುಹಾಕಿ, 'ಇನ್ನುಮುಂದೆ ನರಗುಂದ ರೈತರ ಹೋರಾಟವನ್ನು, ಅವರ ಬೇಡಿಕೆಗಳನ್ನು ಮತ್ತು ಬಂಧಿತ ನಾಯಕರ ಬಿಡುಗಡೆಗಾಗಿ' ಈ ಸಂಘ ಹೋರಾಡಲಿದೆ ಎಂದು ಪ್ರಕಟಿಸಿದೆವು. ಹೊಸ ಸಂಘದ ಅಧ್ಯಕ್ಷರನ್ನಾಗಿ ಎಚ್. ಎಸ್.ರುದ್ರಪ್ಪನವರನ್ನೂ, ಪ್ರಧಾನ ಕಾರ್ಯದರ್ಶಿಯಾಗಿ ಎನ್.ಡಿ.ಸುಂದರೇಶ್ ಅವರನ್ನೂ, ಖಜಾಂಚಿಯಾಗಿ ಡಾ. ಬಿ.ಎಂ. ಚಿಕ್ಕಸ್ವಾಮಿಯವರನ್ನೂ ಆಯ್ಕೆ ಮಾಡಿಕೊಂಡೆವು. ಜೋಡೆತ್ತಿನ ಗುರುತನ್ನು ನಮ್ಮ ಸಂಘದ ಲಾಂಛನವಾಗಿ ಅಂಗೀಕರಿಸಿದೆವು

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News