ಉಮ್ಮನ್ ಚಾಂಡಿ ಎಂಬ ನಿಜ ಜನನಾಯಕ
ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಕಾಂಗ್ರೆಸ್ನ ಕಟ್ಟಾಳುವಾಗಿದ್ದರು. ಐದು ದಶಕಗಳಿಗೂ ಹೆಚ್ಚು ಕಾಲ ಸತತವಾಗಿ ಒಂದು ಕ್ಷೇತ್ರವನ್ನು ಪ್ರತಿನಿಧಿಸಿ ಮಿಂಚಿದ ಸಾಧಕ ಅವರು. ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವರ ಆಡಳಿತ ಚತುರತೆ ಎದ್ದುಕಾಣುವಂಥದ್ದಾದರೂ, ಜನಸಾಮಾನ್ಯರೊಂದಿಗೆ ಬೆರೆತು ಚಾಂಡಿಯವರು ಸಾಧಿಸಿದ್ದು ಇನ್ನೂ ಹೆಚ್ಚಿನದು. ಅವರ ಆ ಸಾಮರ್ಥ್ಯ ಅವರ ಎಲ್ಲಾ ಗುಣಗಳನ್ನು ಮೀರಿಸುವಂಥದ್ದು.
ಜನಸಮೂಹವನ್ನು ಸೆಳೆಯುವ ಕೌಶಲ್ಯ, ಚತುರ ರಾಜಕೀಯ ಕುಶಾಗ್ರಮತಿ ಮತ್ತು ತಮ್ಮ ಅನುಯಾಯಿಗಳಿಗೆ ಅಚಲ ಬದ್ಧತೆ. ಇವಿಷ್ಟು ಕಾರಣಗಳಿಂದಾಗಿ ಮೆಚ್ಚಿನವರಾಗಿದ್ದ ಉಮ್ಮನ್ ಚಾಂಡಿ, ರಾಷ್ಟ್ರೀಯ ಅವಕಾಶಗಳನ್ನು ತಿರಸ್ಕರಿಸಿ, ಕೇರಳಕ್ಕೆ ಸೀಮಿತವಾಗಿರುವುದನ್ನೇ ಬಯಸಿದ್ದ ಅಸಾಮಾನ್ಯ ರಾಜಕಾರಣಿ. ಎಚ್ಚರ ತಪ್ಪಿದ ರೀತಿಯ ಮಹತ್ವಾಕಾಂಕ್ಷೆ ಅವರಿಗಿರಲಿಲ್ಲ. ಸ್ವಲ್ಪಮಟ್ಟಿಗೆ ಅವರು ಎಲ್ಲಾ ರಾಜಕೀಯ ಪಕ್ಷಗಳ ನಾಯಕರೊಂದಿಗೆ ಬೆರೆಯುವವರಾಗಿದ್ದರು ಮತ್ತು ಸ್ನೇಹದಿಂದಿದ್ದರು. ವಿದ್ಯಾರ್ಥಿ ಬದುಕಿನಲ್ಲಿರುವಾಗಲೇ ತೋರಿದ ಕ್ರಿಯಾಶೀಲತೆ ಮೂಲಕ ಮುಖ್ಯವಾಹಿನಿಯ ರಾಜಕೀಯಕ್ಕೆ ಕಾಲಿಟ್ಟ ಸರ್ವೋತ್ಕೃಷ್ಟ ಕೇರಳ ರಾಜಕಾರಣಿ. ಚಾಂಡಿ ಅವರ ನಿಧನ, ಅವರಂಥ ನಾಯಕರ ಹೆಚ್ಚು ಅಗತ್ಯವಿರುವ ಸಮಯದಲ್ಲಿ ಮತ್ತು ಕೇರಳದ ರಾಜಕೀಯ ಸಂದರ್ಭದಲ್ಲಿ ದೊಡ್ಡ ಶೂನ್ಯವನ್ನು ಸೃಷ್ಟಿಸಿದೆ ಎಂಬುದು ನಿಜ. ಚಾಣಾಕ್ಷ ಮತ್ತು ಪ್ರಾಯೋಗಿಕ ರಾಜಕಾರಣಿಯಾಗುವುದರ ಜೊತೆಗೆ, ಅವರು ಕೇರಳದ ರಾಜಕೀಯದಲ್ಲಿ ಅತ್ಯಂತ ಸ್ನೇಹಪರ ಮತ್ತು ಜನಪ್ರಿಯರಲ್ಲಿ ಒಬ್ಬರಾಗಿದ್ದರು.
ಉಮ್ಮನ್ ಚಾಂಡಿಯವರ ಪ್ರಮುಖ ಗುಣವೆಂದರೆ ಜನರ ಜೊತೆ ಅಸಾಧಾರಣ ಬಗೆಯಲ್ಲಿ ಬೆರೆಯುತ್ತಿದ್ದುದು. ತಮ್ಮನ್ನು ಯಾವಾಗಲೂ ಆರಾಧಿಸುವ ಜನಸಾಮಾನ್ಯರ ನಡುವೆ ಇದ್ದರು. ಅವರೆಂದೂ ಜನಸಾಮಾನ್ಯರಿಂದ ದೂರವಾದ ಸಂದರ್ಭಗಳೇ ಇರಲಿಲ್ಲ. ಸಮಾಜದ ಎಲ್ಲ ವರ್ಗದ ವ್ಯಕ್ತಿಗಳೊಂದಿಗೆ ಅವರು ಸಂಪರ್ಕದಲ್ಲಿದ್ದ ರೀತಿ ಕೇರಳದ ರಾಜಕೀಯದಲ್ಲಿ ಮನೆಮಾತು. ಇತರ ಪ್ರಮುಖ ಕಾಂಗ್ರೆಸ್ ನಾಯಕರಾದ ದಿವಂಗತ ಕೆ. ಕರುಣಾಕರನ್ ಮತ್ತು ಎ.ಕೆ. ಆ್ಯಂಟನಿ ಸಾರ್ವಜನಿಕ ಜೀವನದಿಂದ ದೂರವಾಗಿದ್ದ ಹೊತ್ತಲ್ಲಿ ಚಾಂಡಿ ಬೇರೆಯದೇ ನಿಲುವಿನಿಂದ ಗಮನ ಸೆಳೆದವರಾಗಿದ್ದರು.
ಐದು ದಶಕಗಳಿಗೂ ಹೆಚ್ಚು ಕಾಲ ಸತತವಾಗಿ ಒಂದು ಕ್ಷೇತ್ರವನ್ನು ಪ್ರತಿನಿಧಿಸುವುದು ವಿಶ್ವದಲ್ಲಿ ಕೆಲವೇ ಕೆಲವರು ಸಾಧಿಸಬಹುದಾದ ಗಮನಾರ್ಹ ಸಾಧನೆ. 1970ರಲ್ಲಿ ಕೊಟ್ಟಾಯಂನ ಉಪನಗರವಾದ ಪುತ್ತುಪ್ಪಲ್ಲಿಯಿಂದ ಕೇರಳ ವಿಧಾನಸಭೆಗೆ ಚುನಾಯಿತರಾದ ಚಾಂಡಿಯವರ ಊರ್ಧ್ವಮುಖಿ ಪಯಣ ಅವರ ಮರಣದವರೆಗೂ ಅವಿರೋಧವಾಗಿಯೇ ಉಳಿಯಿತು. ಕುತೂಹಲಕಾರಿ ಸಂಗತಿಯೆಂದರೆ, ವಿಧಾನಸಭಾ ಚುನಾವಣೆಯ ಸಮಯದಲ್ಲಿ ಪ್ರತಿಸ್ಪರ್ಧಿಗಳು ಚಾಂಡಿ ಅವರ ವಿರುದ್ಧ ಮಾತನಾಡಿ ತಮ್ಮ ಸಮಯ ವ್ಯರ್ಥ ಮಾಡಿಕೊಳ್ಳುವುದರಲ್ಲಿ ಅರ್ಥವಿಲ್ಲ ಎಂಬ ಅರಿವಿನಿಂದ ಕ್ಷೇತ್ರದಲ್ಲಿ ಪ್ರಚಾರವನ್ನೇ ಮಾಡುತ್ತಿರಲಿಲ್ಲ.
ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವರ ಆಡಳಿತ ಚತುರತೆ ಎದ್ದುಕಾಣುವಂಥದ್ದಾದರೂ, ಜನಸಾಮಾನ್ಯರೊಂದಿಗೆ ಬೆರೆತು ಚಾಂಡಿಯವರು ಸಾಧಿಸಿದ್ದು ಇನ್ನೂ ಹೆಚ್ಚಿನದು. ಅವರ ಆ ಸಾಮರ್ಥ್ಯ ಅವರ ಎಲ್ಲಾ ಗುಣಲಕ್ಷಣಗಳನ್ನು ಮೀರಿಸುವಂಥದ್ದು. ಅವರ ಬಗ್ಗೆ ಬಹಳಷ್ಟು ಮಂದಿ ತಮಾಷೆಯಾಗಿ ಹೇಳುವುದಿತ್ತು: ಅವರ ಅಭಿಮಾನಿಗಳು ಮತ್ತು ಅವರನ್ನು ಕಾಣಲು ಬರುವವರು ಅವರನ್ನು ಯಾವಾಗಲೂ ಹಿಂಬಾಲಿಸುತ್ತಿದ್ದರೆ, ಚಾಂಡಿಗೆ ಶೌಚಾಲಯಕ್ಕೆ ಹೋಗುವುದಕ್ಕೂ ಒಂದು ಕ್ಷಣದ ಏಕಾಂತತೆ ಸಿಗುವುದಿಲ್ಲ ಎಂದು. ಅವರು ಮಲಗುತ್ತಿದ್ದುದು ಕೆಲವೇ ಗಂಟೆಗಳು ಮಾತ್ರ. ಅದು ಬಿಟ್ಟರೆ, ಅವರನ್ನು ಯಾರಾದರೂ ಸುತ್ತುವರಿಯದೇ ಇದ್ದ ಸಂದರ್ಭವೇ ಇರುತ್ತಿರಲಿಲ್ಲ. ಅವರ ವೈಯಕ್ತಿಕ ಮತ್ತು ರಾಜಕೀಯ ಜೀವನ ಅವಿನಾಭಾವವೆನ್ನುವಂತೆ ಬೆಸೆದುಕೊಂಡಿತ್ತು,
ದಶಕಗಳಿಂದ, ಕೇರಳದಲ್ಲಿ ಕಾಂಗ್ರೆಸ್ ಎರಡು ಜಗಳಗಂಟ ಬಣಗಳನ್ನು ಹೊಂದಿತ್ತು, ಒಂದು ಕೆ. ಕರುಣಾಕರನ್ ಬಣ ಮತ್ತು ಇನ್ನೊಂದು ಎ.ಕೆ. ಆ್ಯಂಟನಿ ಬಣ. ಅದೇನೇ ಇದ್ದರೂ, ಪಕ್ಷವನ್ನು ಸಂಘಟನಾತ್ಮಕವಾಗಿ ಮತ್ತು ರಾಜಕೀಯವಾಗಿ ಮುನ್ನಡೆಸುವ ಸಂಪೂರ್ಣ ಹೊರೆಯನ್ನು ಚಾಂಡಿಯವರೇ ಹೊರುತ್ತಿದ್ದರು. ಈ ವಿಚಾರದಲ್ಲಿ ಅವರು ತೋರಿದ್ದ ಕುಶಲತೆ ಅಸಾಧಾರಣವಾದುದು. ಅತ್ಯಂತ ಪ್ರತಿಕೂಲ ಕ್ಷಣಗಳಲ್ಲಿಯೂ ಅವರು ವಿಚಲಿತರಾಗದೆ ಇರುತ್ತಿದ್ದರು. ಅದು ಅವರ ಸಹಜ ಸಾಮರ್ಥ್ಯವೆಂಬಂತಿತ್ತು. ಅವರ ಒಂದು ಮುಗುಳ್ನಗೆ ಎದುರಾಳಿಗಳನ್ನೂ ನಿಶ್ಯಸ್ತ್ರಗೊಳಿಸುವ ಹಾಗಿರುತ್ತಿತ್ತು. ಅವರು ವಿಧಾನಸಭೆಯಲ್ಲಿ ಒಂದು ಕ್ಷಣದಲ್ಲೇ ತಮ್ಮ ಆಕ್ರಮಣಕಾರಿ ಗುಣದಿಂದ ನಿಬ್ಬೆರಗಾಗಿಸಿದರೆ, ಮುಂದಿನ ಘಳಿಗೆಯಲ್ಲಿಯೇ ಹೊಂದಾಣಿಕೆ, ಸಹನೆ ಮತ್ತು ಎಲ್ಲ ಸದ್ಗುಣಗಳ ಏಕರೂಪವಾಗಿ ಗಮನ ಸೆಳೆಯುತ್ತಿದ್ದರು. ಆ ದೃಷ್ಟಿಯಿಂದ ಅವರೊಬ್ಬ ಅಪರೂಪದ ರಾಜಕಾರಣಿಯಾಗಿದ್ದರು. ಅವರಿಗೆ ಶತ್ರುಗಳಿರಲಿಲ್ಲ, ಎದುರಾಳಿಗಳಷ್ಟೇ ಇದ್ದರು.
ಎಲ್ಲಾ ಉತ್ತಮ ಗುಣಗಳ ಹೊರತಾಗಿಯೂ ಅವರಲ್ಲಿನ ಕೊರತೆ ಏನಾಗಿತ್ತು? ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಹೆಚ್ಚು ವಿವೇಕ ಮತ್ತು ಎಚ್ಚರಿಕೆಯ ಅಗತ್ಯವಿರುವುದು ಅವರು ತಿಳಿದಿರದ ವಿಚಾರವೇನೂ ಆಗಿರಲಿಲ್ಲವಾದರೂ, ಯಾರಿಗಾದರೂ ಮತ್ತು ಎಲ್ಲರಿಗೂ ಅವಕಾಶ ಕಲ್ಪಿಸಲು ಅವರು ಹೆಣಗಾಡುತ್ತಿದ್ದ ರೀತಿ ಅವರ ರಾಜಕೀಯ ಜೀವನದ ಮೇಲೆ ಹಾನಿಕಾರಕ ಪರಿಣಾಮ ಬೀರಿತು. ವೇಗವಾಗಿ ಬದಲಾಗುತ್ತಿರುವ ಕಾಂಗ್ರೆಸ್ ರಾಜಕೀಯದ ಚಲನವಲನವನ್ನು ನಿಭಾಯಿಸಲು ಪ್ರಯತ್ನಿಸುತ್ತಿದ್ದ ಅವರು ತಮ್ಮ ಆರೋಗ್ಯದ ಬಗ್ಗೆ ಅಷ್ಟಾಗಿ ಕಾಳಜಿ ವಹಿಸಲಿಲ್ಲ ಮತ್ತು ಕೇರಳದಿಂದ ಹೊರಗೆ ಹೋಗಲು ಯಾವಾಗಲೂ ಅವರಿಗೆ ಇಷ್ಟವಿರಲಿಲ್ಲ. ಒಲ್ಲದ ಮನಸ್ಸಿನಿಂದಲೇ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಉಸ್ತುವಾರಿ ವಹಿಸಿಕೊಂಡಿದ್ದರು. ದಿಲ್ಲಿಯಲ್ಲಿದ್ದ ದಿನಗಳಲ್ಲಿ ನೀರಿನಿಂದ ಹೊರಬಿದ್ದ ಮೀನಿನಂತೆ ಚಡಪಡಿಸುತ್ತಿದ್ದರು ಎಂಬುದು ಎಲ್ಲರಿಗೂ ತಿಳಿದ ವಿಷಯ.
ಚಾಂಡಿ ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತರಿಗೆ ರಾಜಕೀಯ ಶಬ್ದಕೋಶದ ಹಾಗಿದ್ದರು. ಅವರು ವಿದ್ಯಾರ್ಥಿ ರಾಜಕೀಯದಿಂದ ಪ್ರಾರಂಭಿಸಿ ಹಂತಹಂತವಾಗಿ ಮೇಲೇರಿದವರಾಗಿದ್ದರು. ಅವರ ಕಟ್ಟಾ ಅನುಯಾಯಿಗಳ ಪಾಲಿನ ಐಕಾನ್ ಆಗಿದ್ದರು. ಅವರ ಸರಳತೆ, ಉಡುಗೆ-ತೊಡುಗೆ ಮತ್ತು ಅವರ ಕೇಶ ವಿನ್ಯಾಸ ಯಾವಾಗಲೂ ಪಟ್ಟಣದಲ್ಲಿನ ಚರ್ಚೆಗೆ ವಿಷಯವಾಗಿತ್ತು. ಅವರ ಹರಿದ ಬಟ್ಟೆಗಳು ಮತ್ತು ಕೂದಲನ್ನು ಬಾಚಿಕೊಳ್ಳುವುದರ ಬಗೆಗಿನ ಅನಾಸಕ್ತಿಯ ಬಗ್ಗೆ ಕೇರಳದಲ್ಲಿ ಜೋಕುಗಳು ಹುಟ್ಟಿಕೊಂಡಿದ್ದವು. ಸೈದ್ಧಾಂತಿಕ ನಿಲುವುಗಳು ಮಸುಕಾಗುತ್ತಿರುವ ಮತ್ತು ನಾಯಕರು ಸುಲಭವಾಗಿ ಬದ್ಧತೆ ಕಳೆದುಕೊಳ್ಳುತ್ತಿರುವ ಕಾಲದಲ್ಲಿ ಚಾಂಡಿ ದೃಢವಾಗಿ ಕಾಂಗ್ರೆಸ್ ಧ್ವಜವನ್ನು ಹಿಡಿದಿದ್ದರು.
ಈ ಅನುಭವಿ ನಾಯಕನಿಗೆ ವಿದಾಯ ಹೇಳುವ ಹೊತ್ತಿನಲ್ಲಿ, ಭಾರತೀಯ ಇತಿಹಾಸದಲ್ಲಿ ರಾಜಕೀಯದ ವಿಲಕ್ಷಣ ರೀತಿಯನ್ನು ನೋಡುತ್ತಿದ್ದೇವೆ. ನಿರಂಕುಶ ಆಡಳಿತದ ಆಘಾತವನ್ನು ಎದುರಿಸುತ್ತಿದ್ದೇವೆ. ಚಾಂಡಿ ಶಾಂತಿಗಾಗಿ ನಿರಂತರ ಹಂಬಲ ಹೊಂದಿದವರಾಗಿದ್ದರು. ರಾಜಕೀಯದಲ್ಲಿ ಪ್ರೀತಿಯ ಪಾತ್ರವನ್ನು ಅರ್ಥಮಾಡಿಕೊಂಡ ಸಜ್ಜನ ರಾಜಕಾರಣಿಯಾಗಿದ್ದರು. ಅಂಥ ಪ್ರೀತಿಯನ್ನು ಅವರು ಜನರೆಡೆಗೆ ಎಷ್ಟೊಂದು ನಿಸ್ಪೃಹತೆಯಿಂದ ತೋರುತ್ತಿದ್ದರೋ, ತಮ್ಮ ತೀವ್ರ ಪ್ರತಿಸ್ಪರ್ಧಿಗಳ ಕಡೆಗೂ ಅದೇ ನಿಷ್ಕಲ್ಮಷತೆಯಿಂದ ತೋರಬಲ್ಲವರಾಗಿದ್ದರು.
ಕೃಪೆ: thewire.in