ಸಿದ್ದರಾಮಯ್ಯ ಬಜೆಟ್; ಅಕ್ಕಿ ಕೊಡುವ ಆಸೆ, ಕಾರ್ಪೊರೇಟ್ ನೆಂಟರ ಮೇಲೆ ಪ್ರೀತಿ

Update: 2023-07-08 04:49 GMT

ಕಳೆದ ಐದು ವರ್ಷಗಳಿಂದ ಬಜೆಟ್ ಭಾಷಣಗಳಲ್ಲೂ ಅನಗತ್ಯವಾಗಿ ಹಿಂದುತ್ವ, ಹಿಜಾಬ್, ಮಠ, ಮಹಾ ಭಾರತ, ವಿಶ್ವಗುರು, ಭೈರಪ್ಪ, ನರೇಂದ್ರ ಮೋದಿ ಇತ್ಯಾದಿ ಸುಳ್ಳು-ದ್ವೇಷಗಳ ಕಥನವನ್ನೇ ಕೇಳಿ ರೋಸಿ ಹೋಗಿದ್ದ ಕರ್ನಾಟಕದ ಜನರಿಗೆ ಸಹಜೀವನ, ಬಸವಣ್ಣ, ಕುವೆಂಫು, ಕಾರ್ನಾಡ್, ಒಳಗೊಳ್ಳುವ ಅಭಿವೃದ್ಧಿ ಇನ್ನಿತ್ಯಾದಿ ಸಾಂವಿಧಾನಿಕ ಆಶಯಗಳನ್ನು ಪುನರುಚ್ಚರಿಸಿದ ಸಿದ್ದರಾಮಯ್ಯನವರ 14ನೇ ಬಜೆಟ್ ಭಾಷಣ ಸಮಾಧಾನ ತರುವಂತಿತ್ತು. ಆದರೆ ಅದು ಆಶಯಗಳಲ್ಲಿ ಮಾತ್ರ ಇತ್ತೋ? ಅಥವಾ ಮುಖ್ಯಮಂತ್ರಿಗಳು ಮುಂದಿಟ್ಟ ಬಜೆಟ್ನಲ್ಲೂ ಮೋದಿ ಆರ್ಥಿಕತೆಗೆ ಪರ್ಯಾಯವಾದ ಆರ್ಥಿಕ ದರ್ಶನವಿತ್ತೋ?

ಕಾಂಗ್ರೆಸ್ ಸರಕಾರ ಈಡೆರಿಸಬೇಕಿರುವ ಐದು ಗ್ಯಾರಂಟಿಗಳ ಯೋಜನೆಗಳು ನರೇಂದ್ರ ಮೋದಿಯವರ ಮತ್ತು ಬಿಜೆಪಿಯವರ ಕಾರ್ಪೊರೇಟ್ವಾದಿ ಆರ್ಥಿಕ ದರ್ಶನಕ್ಕಿಂತ ಭಿನ್ನ ಎಂಬುದು ಸರಿ. ಮತ್ತದು ಸ್ವಾಗತಾರ್ಹ. ಆದರೆ ಈ ಗ್ಯಾರಂಟಿಗಳು ಜನಸಾಮಾನ್ಯರ ಎಡಜೋಬಿಗೆ ದುಡ್ಡು ತುಂಬಲು ಬಲ ಜೋಬಿನಿಂದ ತೆಗೆಯದಂತಾಗಬೇಕಿದ್ದರೆ ಗ್ಯಾರಂಟಿಗಳಿಗೆ ಬೇಕಿರುವ ಸಂಪನ್ಮೂಲ ಗಳನ್ನು ಸಿದ್ದರಾಮಯ್ಯನವರ ಸರಕಾರ ಎಲ್ಲಿಂದ ಹೊಂದಿಸುತ್ತಾರೆಂಬುದೇ ಈ ಬಜೆಟ್ನಲ್ಲಿ ಜನಪರರು ಆತಂಕದಿಂದ ನಿರೀಕ್ಷಿಸುತ್ತಿದ್ದ ವಿಷಯವಾಗಿತ್ತು.

ಈ ನಿಟ್ಟಿನಲ್ಲಿ ಬೇಕಾದ ಸಂಪನ್ಮೂಲಗಳನ್ನು ಕ್ರೋಡೀಕರಣ ಮಾಡಿಕೊಳ್ಳುವುದಕ್ಕೆ ಜಿಎಸ್ಟಿ ಜಾರಿಯಾದ ಮೇಲೆ ರಾಜ್ಯ ಸರಕಾರಕ್ಕೆ ವಿಶೇಷವಾದ ಅವಕಾಶಗಳೇನೂ ಇಲ್ಲ. ಕೇಂದ್ರ ಸರಕಾರಕ್ಕಾದರೆ ರಾಜ್ಯಗಳ ಜಿಎಸ್ಟಿ ಸಂಗ್ರಹ ಗಳಲ್ಲೂ ಪಾಲು ಸಿಗುವುದಲ್ಲದೆ, ರಾಜ್ಯ ಸರಕಾರದ ಜೊತೆ ಹಂಚಿಕೊಳ್ಳದೆ ಪೆಟ್ರೋಲ್ ಇತ್ಯಾದಿಗಳ ಮೇಲೆ ಸೆಸ್ ಅನ್ನು ವಿಧಿಸುವ ಸಂಪೂರ್ಣ ಹಕ್ಕು ಕೇಂದ್ರ ಸರಕಾರಕ್ಕೆ ಮಾತ್ರ ಇದೆ. ಮೋದಿ ಸರಕಾರ ತನ್ನ ಪಾಲನ್ನು ಈ ಮೂಲಕ ಹೆಚ್ಚು ಮಾಡಿಕೊಂಡಿದೆ. ಅಷ್ಟು ಮಾತ್ರವಲ್ಲದೆ ಅಮೆರಿಕ ಇನ್ನಿತ್ಯಾದಿ ದೇಶಗಳಲ್ಲಿ ಇರುವಂತೆ ಕಾರ್ಪೊರೇಟ್ ತೆರಿಗೆ ಮತ್ತು ಆದಾಯ ತೆರಿಗೆ ಹಾಗೂ ಇನ್ನಿತರ ಪ್ರತ್ಯಕ್ಷ ತೆರಿಗೆಗಳನ್ನು ವಿಧಿಸುವ ಅಧಿಕಾರ ಭಾರತದಲ್ಲಿ ರಾಜ್ಯ ಸರಕಾರಗಳಿಗಿಲ್ಲ. ಆ ಅಧಿಕಾರ ಕೂಡ ಭಾರತದಲ್ಲಿ ಕೇವಲ ಕೇಂದ್ರ ಸರಕಾರದ್ದು. ಇದಲ್ಲದೆ ಮೋದಿ ಸರಕಾರ ನೇಮಕ ಮಾಡಿದ 15ನೇ ಹಣಕಾಸು ಆಯೋಗ ಕೇಂದ್ರ ಸರಕಾರದ ತೆರಿಗೆಯಲ್ಲಿ ಕರ್ನಾಟಕ ರಾಜ್ಯದ ಪಾಲನ್ನು ಶೇ.4.71 ರಿಂದ ಶೇ.3.65ಕ್ಕೆ ಇಳಿಸಿದೆ. ಇವೆಲ್ಲದರ ಜೊತೆಗೆ ಕೇಂದ್ರದಿಂದ ಕರ್ನಾಟಕಕ್ಕೆ ನ್ಯಾಯಯುತವಾಗಿ ಬರಬೇಕಿರುವ ಅನುದಾನ ಮತ್ತು ಪರಿಹಾರಗಳನ್ನು ಕೂಡ ಬೊಮ್ಮಾಯಿ ಸರಕಾರ ಪಡೆದುಕೊಂಡಿಲ್ಲ. ಈಗಂತೂ ಮೋದಿ ಸರಕಾರ ಅಕ್ಕಿ ವಿಷಯದಲ್ಲಿ ಮಾಡಿರುವುದನ್ನು ನೋಡಿದರೆ ಕರ್ನಾಟಕದ ಪಾಲನ್ನು ಇನ್ನೂ ನಿರಾಕರಿಸುವ ಎಲ್ಲಾ ಸಾಧ್ಯತೆಗಳೂ ಇದ್ದೇ ಇತ್ತು.

ಹೀಗಾಗಿ ಸಿದ್ದರಾಮಯ್ಯನವರು ಗ್ಯಾರಂಟಿಗಳಿಗೆ ಬೇಕಿರುವ ಹೆಚ್ಚುವರಿ 60,000 ಕೋಟಿ ರೂ.ಯನ್ನು ಸಂಗ್ರಹಿಸಲು ಇದ್ದ ದಾರಿಗಳು ಸಾಲ (ಇದು ಸಾಮಾನ್ಯ ಜನರ ಮೇಲೆ ಮುಂದೂಡಿದ ತೆರಿಗೆಯೆಂದೇ ಅರ್ಥ), ಅಬಕಾರಿ ಇನ್ನಿತಾದಿ ಪಾಪಿ ಸರಕುಗಳ ಮೇಲೆ ಹೆಚ್ಚುವರಿ ತೆರಿಗೆ (ಇದರಿಂದ ಪರೋಕ್ಷವಾಗಿ ಗ್ಯಾರಂಟಿಗಳ ಫಲಾನುಭವಿ ಕುಟುಂಬಗಳಿಗೆ ಹೊರೆಯಾಗುತ್ತದೆ ಎಂಬುದನ್ನು ಅಧ್ಯಯನಗಳು ಹೇಳುತ್ತವೆ), ಆರ್ಥಿಕ ಹೆಚ್ಚಿನ ಅನುದಾನಕ್ಕೆ ಕೇಂದ್ರದೊಡನೆ ಸಂಘರ್ಷ, ಆಡಳಿತಾತ್ಮಕ ವೆಚ್ಚದ ನಿಯಂತ್ರಣ (ಇದೂ ಕೂಡ ಯಾವುದರ ಮೇಲೆ ನಿಯಂತ್ರಣ ಎನ್ನುವುದರ ಮೇಲೆ ಗ್ಯಾರಂಟಿ ಫಲಾನುಭವಿಗಳ ಮೇಲೆ ಪರೋಕ್ಷ ಪರಿಣಾಮ ಬೀರುತ್ತದೋ ಇಲ್ಲವೊ ಎಂಬುದು ತೀರ್ಮಾನವಾಗುತ್ತದೆ). ಇದು ಯಾವುದನ್ನು ಮಾಡದೆಯೂ ಗ್ಯಾರಂಟಿಗಳಿಗೆ ಹಣ ಹೊಂದಿಸುವುದು ಕೇವಲ ಪವಾಡದಿಂದ ಮಾತ್ರ ಸಾಧ್ಯವಿತ್ತು.

ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರ ಬಜೆಟ್ ಅನ್ನು ನೋಡಿದರೆ ಸಹಜವಾಗಿಯೇ ಬಜೆಟ್ನಲ್ಲಿ ಯಾವುದೇ ಪವಾಡಗಳಿಲ್ಲ ಎಂಬುದು ಸ್ಪಷ್ಟವಾ ಗುತ್ತದೆ. ಹೀಗಾಗಿ ಮೊದಲು ಬಜೆಟ್ನಲ್ಲಿ ಹೇಗೆ ಹಣ ಹೊಂದಿಸಲಾಗಿದೆ ಎಂಬುದನ್ನು ಗಮನಿಸೋಣ.

ಈ ವರ್ಷದ ಬಟ್ನ ಪ್ರಕಾರ ಸರಕಾರ 3,24,478 ಕೋಟಿ ರೂ. ಸಂಪನ್ಮೂಲ ವನ್ನು ಸಂಗ್ರಹಿಸಲಿದ್ದು 3,24,747 ಕೋಟಿ ರೂ. ಗಳನ್ನು ವೆಚ್ಚ ಮಾಡಲಿದೆ. ಸರಕಾರ ಸಂಗ್ರಹಿಸಲಿರುವ ಸಂಪನ್ಮೂಲಗಳಲ್ಲಿ ಸರಕಾರ ತನ್ನ ಸ್ವಂತ ತೆರಿಗೆ, ಹೂಡಿಕೆಗಳಿಂದ ಬರುವ ಲಾಭ ಹಾಗೂ ಕೇಂದ್ರದಿಂದ ಬರುವ ಪಾಲು ಇತ್ಯಾದಿಗಳ ಮೂಲಕ 2.38.410 ಕೋಟಿ ಸಂಗ್ರಹಿಸುತ್ತಿದ್ದರೆ ಉಳಿದ 85,818 ಕೋಟಿಯನ್ನು ಸಾಲದ ಮೂಲಕ ಸಂಗ್ರಹಿಸಲಿದೆ.

ರಾಜ್ಯ ಸರಕಾರ ನಿರೀಕ್ಷೆ ಮಾಡುತ್ತಿರುವ 2,38,410 ಕೋಟಿ ರೂ.ಯಲ್ಲಿ 2,10, 554 ಕೋಟಿ ರೂ. ತೆರಿಗೆ ಆದಾಯವಾಗಿದ್ದರೆ, 12,500 ಕೋಟಿ ರೂ.ತೆರಿಗೆಯೇತರ ಆದಾಯ ಹಾಗೂ ಕೇಂದ್ರದ ಅನುದಾನದ ನಿರೀಕ್ಷೆ 15,500 ಕೋಟಿ ರೂ. ಇಷ್ಟು ಮೊತ್ತವನ್ನು ನಿಜಕ್ಕೂ ಕ್ರೋಡೀಕರಿಸಬಹುದೇ?

ಅದನ್ನು ಅರ್ಥ ಮಾಡಿಕೊಳ್ಳಲು ಕರ್ನಾಟಕದಲ್ಲಿ ತೆರಿಗೆ ಸಂಗ್ರಹದ ಪ್ರಮಾಣದ ಏರಿಕೆಯ ಗತಿ ಹೇಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಉದಾಹರಣೆಗೆ 2021ರಲ್ಲಿ ಸಾಧಿಸಲಾದ ತೆರಿಗೆ ಆದಾಯ ಕೇವಲ 1.54 ಲಕ್ಷ ಕೋಟಿ ರೂ. ಮಾತ್ರ. 2022ರ ಬಜೆಟ್ ಅಂದಾಜು ಇದ್ದದ್ದು 1.56 ಲಕ್ಷ ಕೋಟಿ ರೂ. ಇದ್ದಕ್ಕಿದ್ದತೆ ಯಾವುದೇ ವಿವರಗಳಿಲ್ಲದೆ 2022-23ರ ತೆರಿಗೆ ಸಂಗ್ರಹದ ಪರಿಷ್ಕೃತ ಅಂದಾಜು 1.78 ಲಕ್ಷ ಕೋಟಿ ರೂ.ಗೆ ಏರಿದೆ. ಮತ್ತು ಈಗ 2023-24 ರ ಬಜೆಟ್ನಲ್ಲಿ ತೆರಿಗೆ ಆದಾಯದ ಅಂದಾಜನ್ನು 2.10 ಲಕ್ಷ ಕೋಟಿ ರೂ.ಗಳಿಗೆ ಏರಿಸಲಾಗಿದೆ. ಸಾಮನ್ಯವಾಗಿ ತೆರಿಗೆ ಸಂಗ್ರಹದ ಏರಿಕೆಗಳು ವಾರ್ಷಿಕ ಹೆಚ್ಚೆಂದರೆ ಶೇ.14 ರಷ್ಟು ಏರಬಹುದು ಎಂದು ಅಂದಾಜು ಮಾಡಲಾಗುತ್ತದೆ. ಕೇಂದ್ರ ಸರಕಾರವು ಜಿಎಸ್ಟಿಯಿಂದ ರಾಜ್ಯಗಳಿಗೆ ತೆರಿಗೆ ಕೊರತೆ ಆದರೆ ಕೊಡುತ್ತಿದ್ದ ಪರಿಹಾರವನ್ನು ಕೂಡ ತೆರಿಗೆ ಸಂಗ್ರಹದಲ್ಲಿ ಶೇ.14ರಷ್ಟು ಏರಿಕೆ ಎಂಬ ಸರ್ವ ಸಮ್ಮತ ನಿಯಮವನ್ನೇ ಆಧರಿಸಿತ್ತು. ಆದರೆ ಸಿದ್ದರಾಮಯ್ಯನವರ ಬಜೆಟ್ನಲ್ಲಿ ತೆರಿಗೆ ಆದಾಯದ ಏರಿಕೆಯನ್ನು 2022ರ ಬಜೆಟ್ಟಿಗೆ ಹೋಲಿಸಿದರೆ ಶೇ.30ಕ್ಕಿಂತ ಹೆಚ್ಚಿಗೆ ಏರಿಕೆ ಯಾಗಬಹುದೆಂಬ ನಿರೀಕ್ಷೆ ಮಾಡಿದ್ದಾರೆ. ಇದು ಸಾಧ್ಯವೇ?

ಇದನ್ನು ಇನ್ನಷ್ಟು ಆಳವಾಗಿ ಪರಿಶೀಲಿಸಬೇಕೆಂದರೆ ಕರ್ನಾಟಕಕ್ಕೆ ಈ ತೆರಿಗೆ ಆದಾಯದಲ್ಲಿ ಪ್ರಮುಖವಾಗಿರುವ ಜಿಎಸ್ಟಿ ಮೂಲಗಳಿಂದ ಕಳೆದ ಎರಡು ವರ್ಷಗಳಲ್ಲಿ ಎಷ್ಟು ಬಂದಿದೆ ಎಂದು ಹೋಲಿಸಬೇಕು. 2021 ರಲ್ಲಿ ಕರ್ನಾಟಕಕ್ಕೆ ಜಿಎಸ್ಟಿ ಮೂಲದಿಂದ ಬಂದ ತೆರಿಗೆ ಆದಾಯ 60,000 ಕೋಟಿ ರೂ.. 2022-23 ರಲ್ಲಿ ಅದು 62,000 ಕೋಟಿ ರೂ.ಯನ್ನು ತಲುಪಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಯಾವುದೇ ಬಗೆಯ ವಿವರಣೆಗಳಿಲ್ಲದೆ ಈ ಬಜೆಟಿನಲ್ಲಿ 2022-23

ರ ಜಿಎಸ್ಟಿ ಸಂಗ್ರಹದ ಪರಿಷ್ಕೃತ ಅಂದಾಜನ್ನು 74,353 ಕೋಟಿ ರೂ.ಗಳಿಗೆ ಏರಿಸಲಾಗಿದೆ ಮತ್ತು 2023-24ರ ಸಾಲಿಗೆ ಜಿಎಸ್ಟಿ ಬಾಬತ್ತಿನಲ್ಲಿ ಕರ್ನಾಟಕಕ್ಕೆ 88,195 ಕೋಟಿ ರೂ.ಗಳಾಗಬಹುದೆಂದು ನಿರೀಕ್ಷಿಸಲಾಗಿದೆ. ಅಂದರೆ 202 ರ ಬಜೆಟ್ ಅಂದಾಜಿಗೆ ಹೋಲಿಸಿದಲ್ಲಿ ಶೇ.42ರಷ್ಟು ಹೆಚ್ಚುವರಿ ತೆರಿಗೆ ಸಂಗ್ರಹ ಹಾಗೂ 2022-23ರ ಪರಿಷ್ಕೃತ ಅಂದಾಜಿಗೆ ಹೋಲಿಸಿದರೆ ಶೇ.25ರಷ್ಟು ಹೆಚ್ಚುವರಿ ತೆರಿಗೆ ಸಂಗ್ರಹವಾಗಬಹುದೆಂದು ಅಂದಾಜು ಮಾಡಲಾಗಿದೆ.

ಆದರೆ ದೇಶದಲ್ಲಿ ಒಟ್ಟಾರೆ ವರ್ಷದಿಂದ ವರ್ಷಕ್ಕೆ ಜಿಎಸ್ಟಿ ತೆರಿಗೆ ಸಂಗ್ರಹದ ಏರಿಕೆಯ ಗತಿ ಶೇ.8-12ಕ್ಕಿಂತ ಹೆಚ್ಚಿರದ ಸಂದರ್ಭದಲ್ಲಿ ಬಜೆಟ್ ಅದರ ಎರಡು ಪಟ್ಟು ಹೆಚ್ಚಳದ ನಿರೀಕ್ಷೆ ಸಿದ್ದರಾಮಯ್ಯನವರು ಹೇಗೆ ಇಟ್ಟುಕೊಂಡಿದ್ದಾರೆ?

ಅದೇ ರೀತಿ ರಾಜ್ಯದ ಅಬಕಾರಿ ತೆರಿಗೆ 29 ಸಾವಿರ ಕೋಟಿಯಿಂದ 36,000 ಕೋಟಿ ಹೆಚ್ಚು ಮಾಡಬೇಕೆಂಬ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಇದರಿಂದ ಕುಡಿಯುವುದೇನೂ ಕಡಿಮೆಯಾಗದು ಎಂಬುದು ತಿಳಿದಿರುವ ವಿಷಯವೇ. ಸರಕಾರದ ಉದ್ದೆಶವೂ ಅದಲ್ಲ. ಅದೇ ರೀತಿ ಮೋಟಾರು ತೆರಿಗೆ, ಸ್ಟಾಂಪ್ಸ್ ಮತ್ತು ಡ್ಯೂಟಿಸ್ ಇತ್ಯಾದಿಗಳ ಮೇಲೂ ಶೇ.30ರಷ್ಟು ಹೆಚ್ಚಳವನ್ನು ಮುಖ್ಯಮಂತ್ರಿಗಳು ನಿರೀಕ್ಷಿಸಿದ್ದಾರೆ.

ಆದರೆ ಇವೆಲ್ಲವೂ ಸಾಲ ಮಾಡದೆ, ಹೆಚ್ಚಿಗೆ ತೆರಿಗೆಯನ್ನು ತೋರಿಸದೆ ಗ್ಯಾರಂಟಿಗಳಿಗೆ ಸಂಪನ್ಮೂಲ ಸಂಗ್ರಹಣೆ ಮಾಡಲಾಗಿದೆ ಎಂಬ ಸುಳ್ಳು ಸಮಾಧಾ ನವಾಗುವುದಿಲ್ಲವೇ? ಏಕೆಂದರೆ ಈ ಪ್ರಮಾಣದ ತೆರಿಗೆ ಸಂಗ್ರಹ ಆಗದಿದ್ದರೆ ಗ್ಯಾರಂಟಿಗಳನ್ನು ಮುಂದುವರಿಸಲು ಒಂದು ಹೆಚ್ಚುವರಿ ಸಾಲವನ್ನೇ ಮಾಡಬೇಕು ಅಥವಾ ಇನ್ನೊಂದು ಘೋಷಿತ ಬಾಬತ್ತಿನಿಂದ ಕಿತ್ತು ಗ್ಯಾರಂಟಿಯನ್ನು ಪೂರೈಸಬೇಕು. ಅದು ಬಡಜನರ ಮೇಲೆ ಪರೋಕ್ಷ ಅಥವಾ ಮುಂದೂಡಿದ ತೆರಿಗೆಯೇ ಆಗುತ್ತದೆ.

ಇವುಗಳ ಬದಲಿಗೆ ಸಿದ್ದರಾಮಯ್ಯನವರು ಏನು ಮಾಡಬಹುದಿತ್ತು? ಐಶಾರಾಮಿ ವಾಹನಗಳ ಮೇಲೆ ರಸ್ತೆ ಶುಲ್ಕವನ್ನು ಹೆಚ್ಚು ಮಾಡಿ ಶಕ್ತಿ ಯೋಜನೆಗೆ ಬೇಕಾದ ಹಣ ಸಂಗ್ರಹಿಸಬಹುದಿತ್ತು. ಐಶರಾಮಿ ಹೊಟೇಲ್ ಅಥವಾ ರೆಸ್ಟೋರೆಂಟ್ಗಳ ಮೇಲೆ ಅನ್ನಭಾಗ್ಯ ಸೇವಾ ತೆರಿಗೆಯನ್ನು ವಿಧಿಸಿ ಅನ್ನಭಾಗ್ಯಕ್ಕೆ ಬೇಕಿರುವ ಸಂಪನ್ಮೂಲವನ್ನು ಸಂಗ್ರಹಿಸಬಹುದ್ದಿತ್ತು. ಇವು ಕೇವಲ ಕೆಲವು ಉದಾಹರಣೆಗಳಷ್ಟೆ.

ಗ್ಯಾರಂಟಿ ಯೋಜನೆಗಳು ಈ ಭಾರತದಲ್ಲಿ ಬಡಜನರು ಶ್ರೀವಂತರಷ್ಟೇ ಹಕ್ಕುಳ್ಳ ನಾಗರಿಕರು ಎಂದು ಪೋಷಿಸುವ ಯೋಜನೆಗಳು. ಆದರೆ ಅದು ಯಶಸ್ವಿಯಾಗ ಬೇಕೆಂದರೆ ಶ್ರೀಮಂತರಿಗೆ ಹೆಚ್ಚಿನ ತೆರಿಗೆ ಹಾಕಬೇಕು. ಅಂದರೆ ಶ್ರೀಮಂತರ ಪರವಾದ, ಕಾರ್ಪೊರೇಟ್ ಪರವಾದ ನವ ಉದಾರವಾದಿ ಆರ್ಥಿಕತೆಯ ಚೌಕಟ್ಟಿನಿಂದ ಹೊರಬರಬೇಕು. ಉತ್ತರ ಯುರೋಪಿನ ನಾರ್ವೆ, ಸ್ವೀಡನ್ನಂಥ ಯಶಸ್ವಿ ಪ್ರಜಾತಂತ್ರಗಳಲ್ಲಿ ಸಿದ್ದರಾಮಯ್ಯನವರ ಗ್ಯಾರಂಟಿಗಳಿಗೆ ಎರಡು ಪಟ್ಟು ಹೆಚ್ಚಿನ ಗ್ಯಾರಂಟಿಗಳನ್ನು ಕೊಟ್ಟೂ ಯಶಸ್ವಿ ಆರ್ಥಿಕತೆಯಾಗುತ್ತಿರುವುದು ಏಕೆಂದರೆ ಅಲ್ಲಿ ಶ್ರೀಮಂತರ ಮೇಲೆ ತೆರಿಗೆ ಹಾಕಿ ಜನಸಾಮಾನ್ಯರಿಗೆ ಉಚಿತ ವಸತಿ, ವಿದ್ಯುತ್, ಶಿಕ್ಷಣ ಮತ್ತು ಆರೋಗ್ಯವನ್ನು ಕೊಡಲಾಗುತ್ತಿದೆ.

ಭಾರತದಲ್ಲಿ ಕಾರ್ಪೊರೇಟ್ ಪರ ನವ ಉದಾರವಾದಿ ಆರ್ಥಿಕತೆಯ ಚೌಕಟ್ಟಿನೊಳಗೆ ಬಡವರಿಗೆ ಗ್ಯಾರಂಟಿಗಳು ಗ್ಯಾರಂಟಿಯಾಗಲು ಸಾಧ್ಯವೇ? ಅಕ್ಕಿ ಮೇಲೆ ಆಸೆ ಇದ್ದರೆ ಕಾರ್ಪೊರೇಟ್ ನಂಟರ ಮೇಲೆ ಪ್ರೀತಿ ಕಡಿಮೆ ಮಾಡಿಕೊಳ್ಳಬೇಕು. ಅಲ್ಲವೇ?

Tags:    

Writer - ವಾರ್ತಾಭಾರತಿ

contributor

Editor - Safwan

contributor

Contributor - ಶಿವಸುಂದರ್

contributor

Similar News