ಅನ್ನ ಭಾಗ್ಯ ಮತ್ತು ಅಕ್ಕಿ ಕಾಳ ಸಂತೆಯ ಕರಾಳ ಜಾಲ
ಸದಾನಂದ ಗಂಗನಬೀಡು
ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ಐದು ಗ್ಯಾರಂಟಿಗಳ ಪೈಕಿ ಪ್ರತೀ ಬಿಪಿಎಲ್ ಪಡಿತರ ಚೀಟಿದಾರನಿಗೆ ತಿಂಗಳಿಗೆ ತಲಾ 10 ಕೆಜಿ ಧಾನ್ಯ ವಿತರಿಸುವ ಗ್ಯಾರಂಟಿಯೂ ಒಂದಾಗಿತ್ತು. ಮೊದಲು ಕಾಂಗ್ರೆಸ್ ಪಕ್ಷವು ಪ್ರತೀ ಬಿಪಿಎಲ್ ಪಡಿತರ ಚೀಟಿದಾರನಿಗೆ ತಲಾ 10 ಕೆಜಿ ಧಾನ್ಯ ವಿತರಿಸುವ ಗ್ಯಾರಂಟಿಯ ಜಾಹೀರಾತು ನೀಡಿತ್ತಾದರೂ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿಶೇಷ ಒಲವಿನ ಕಾರಣಕ್ಕಾಗಿ ಚುನಾವಣೆ ಮುಗಿಯುವ ಹೊತ್ತಿಗೆ ಆ ಗ್ಯಾರಂಟಿಯು 10 ಕೆಜಿ ಅಕ್ಕಿಯಾಗಿ ರೂಪಾಂತರಗೊಂಡಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲುವು ಸಾಧಿಸಿದ ನಂತರ ತಾನು ನೀಡಿದ್ದ ಗ್ಯಾರಂಟಿಯಂತೆಯೇ ಪ್ರತೀ ಬಿಪಿಎಲ್ ಪಡಿತರ ಚೀಟಿದಾರನಿಗೆ ತಲಾ 10 ಕೆಜಿ ಅಕ್ಕಿ ಪೂರೈಸಲು ಮುಂದಾಯಿತು. ಆದರೆ, ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ್ದ ರಾಜ್ಯ ಬಿಜೆಪಿ ನಾಯಕರು ಕೇಂದ್ರ ಸರಕಾರದ ಕಿವಿಯೂದಿ, ಭಾರತೀಯ ಆಹಾರ ನಿಗಮದಿಂದ ಮುಕ್ತ ಮಾರುಕಟ್ಟೆಯಲ್ಲಿ ರಾಜ್ಯ ಸರಕಾರಗಳು ಅಕ್ಕಿ ಖರೀದಿಸುವಂತಿಲ್ಲ ಎಂಬ ಜನವಿರೋಧಿ ಆದೇಶವನ್ನು ಮಾಡಿಸಿದರು. ಆದರೆ, ಅದೇ ಹೊತ್ತಿನಲ್ಲಿ ಭಾರತೀಯ ಆಹಾರ ನಿಗಮದಿಂದ ಮುಕ್ತ ಮಾರುಕಟ್ಟೆಯಲ್ಲಿ ಹರಾಜು ಮಾಡಲಾಗುವ ಅಕ್ಕಿಯನ್ನು ಖರೀದಿಸುವ ಅವಕಾಶವನ್ನು ಖಾಸಗಿ ವರ್ತಕರಿಗೆ ನೀಡಲಾಯಿತು. ಆ ಮೂಲಕ ಒಕ್ಕೂಟ ವ್ಯವಸ್ಥೆಯ ಮೂಲತತ್ವಕ್ಕೇ ಧಕ್ಕೆ ತರಲಾಯಿತು.
ಇದೇ ಹೊತ್ತಿನಲ್ಲಿ ಪ್ರತೀ ಬಿಪಿಎಲ್ ಪಡಿತರ ಚೀಟಿದಾರರಿಗೆ ತಿಂಗಳಿಗೆ ತಲಾ 10 ಕೆಜಿ ಅಕ್ಕಿ ವಿತರಿಸುವ ಔಚಿತ್ಯದ ಕುರಿತು ಸಾಮಾಜಿಕ ಜಾಲತಾಣಗಳು, ಮಾಧ್ಯಮಗಳಲ್ಲಿ ದೊಡ್ಡ ಮಟ್ಟದ ಚರ್ಚೆ ಕೂಡಾ ಶುರುವಾಯಿತು. ಈ ಚರ್ಚೆಯ ಸಂದರ್ಭದಲ್ಲಿ ಕೇಳಿ ಬಂದ ಪ್ರಮುಖ ಆರೋಪ ಪಡಿತರ ಚೀಟಿದಾರರು ತಮ್ಮ ಬಳಿ ಉಳಿಯುವ ಹೆಚ್ಚುವರಿ ಅಕ್ಕಿಯನ್ನು ಚಿಲ್ಲರೆ ವರ್ತಕರಿಗೆ ಅಗ್ಗದ ಬೆಲೆಯಲ್ಲಿ ಮಾರಾಟ ಮಾಡುತ್ತಾರೆ ಎಂಬುದು. ಈ ಆರೋಪದಲ್ಲಿ ಹುರುಳಿತ್ತು ಕೂಡಾ. ನ್ಯಾಷನಲ್ ಸ್ಯಾಂಪಲ್ ಸರ್ವೇ (ಎನ್‌ಎಸ್‌ಎಸ್) ವರದಿಯ ಪ್ರಕಾರ, ಯಾವುದೇ ಆರೋಗ್ಯವಂತ ವಯಸ್ಕ ವ್ಯಕ್ತಿ ದಿನವೊಂದಕ್ಕೆ 300 ಗ್ರಾಂ ಮಿಶ್ರ ಧಾನ್ಯಗಳನ್ನು ಸೇವಿಸಬೇಕಾಗುತ್ತದೆ. ಈ ಲೆಕ್ಕದಲ್ಲಿ ತಿಂಗಳೊಂದಕ್ಕೆ ಪ್ರತೀ ವ್ಯಕ್ತಿ 9,000 ಗ್ರಾಂ (9 ಕೆಜಿ) ಧಾನ್ಯಗಳನ್ನು ಸೇವಿಸಬೇಕಾಗುತ್ತದೆ. ಆದರೆ, ಪ್ರತೀ ಬಿಪಿಎಲ್ ಪಡಿತರ ಚೀಟಿದಾರನಿಗೆ ತಿಂಗಳೊಂದಕ್ಕೆ ವಿತರಿಸುತ್ತಿರುವುದು ಕೇವಲ 5,000 ಗ್ರಾಂ (5 ಕೆಜಿ) ಅಕ್ಕಿ ಮಾತ್ರ. ಆ ಲೆಕ್ಕದಲ್ಲಿ ಬಿಪಿಎಲ್ ಪಡಿತರ ಚೀಟಿದಾರರಿಗೆ ದಿನವೊಂದಕ್ಕೆ 166.66 ಗ್ರಾಂ ಧಾನ್ಯವನ್ನು ಮಾತ್ರ ಸಾರ್ವಜನಿಕ ಪಡಿತರ ವ್ಯವಸ್ಥೆಯಲ್ಲಿ ವಿತರಿಸಲಾಗುತ್ತಿದೆ. ಈ ಅಸಮತೋಲಿತ ಧಾನ್ಯಗಳ ಸೇವನೆಯಿಂದಾಗಿಯೇ ಕರ್ನಾಟಕ ರಾಜ್ಯವು ರಾಷ್ಟ್ರೀಯ ಅಪೌಷ್ಟಿಕತೆಯ ಸೂಚ್ಯಂಕದಲ್ಲಿ ಎಂಟನೆಯ ಸ್ಥಾನದಲ್ಲಿದೆ. ಇದು ಗಂಭೀರ ಸ್ವರೂಪದ ಅಪೌಷ್ಟಿಕತೆ ಎಂಬುದು ಆಹಾರ ತಜ್ಞರು ಹಾಗೂ ಆರೋಗ್ಯ ತಜ್ಞರ ಅಭಿಮತ. ಹೀಗಾಗಿಯೇ ಪ್ರತೀ ಬಿಪಿಎಲ್ ಪಡಿತರ ಚೀಟಿದಾರನಿಗೆ ತಿಂಗಳಿಗೆ ತಲಾ 10 ಕೆಜಿ ಅಕ್ಕಿ ವಿತರಿಸಲು ನಿರ್ಧರಿಸಲಾಗಿದೆ ಎಂಬುದು ರಾಜ್ಯ ಸರಕಾರದ ಸಮರ್ಥನೆ.
ಆದರೆ, ವಾಸ್ತವ ಹಾಗಿಲ್ಲ. ಕರ್ನಾಟಕ ರಾಜ್ಯದ ಭೌಗೋಳಿಕತೆ ವೈವಿಧ್ಯಮಯವಾಗಿದ್ದು, ಈ ವೈವಿಧ್ಯತೆಗನುಸಾರವಾಗಿ ಆಹಾರ ಪದ್ಧತಿಗಳೂ ರೂಢಿಯಲ್ಲಿವೆ. ಕರ್ನಾಟಕ ರಾಜ್ಯವನ್ನು ಸಾಮಾನ್ಯವಾಗಿ ನಾಲ್ಕು ಪ್ರಾಂತಗಳನ್ನಾಗಿ ವಿಂಗಡಿಸಲಾಗಿದೆ: ಮೈಸೂರು ಕರ್ನಾಟಕ, ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಹಾಗೂ ಕರಾವಳಿ ಕರ್ನಾಟಕ ಎಂದು. ಈ ಪೈಕಿ ಮೈಸೂರು ಕರ್ನಾಟಕದಲ್ಲಿ ರಾಗಿ ಪ್ರಮುಖ ಆಹಾರ ಧಾನ್ಯವಾಗಿದ್ದರೆ, ಉತ್ತರ ಕರ್ನಾಟಕದಲ್ಲಿ ಜೋಳ ಪ್ರಮುಖ ಆಹಾರ ಧಾನ್ಯ. ಮಧ್ಯ ಕರ್ನಾಟಕದಲ್ಲಿ ಬೆಳ್ತಕ್ಕಿ (ಬಿಳಿ ಅಕ್ಕಿ) ಪ್ರಮುಖ ಆಹಾರ ಧಾನ್ಯವಾಗಿದ್ದರೆ, ಕರಾವಳಿ ಕರ್ನಾಟಕದಲ್ಲಿ ಕುಚ್ಚಲಕ್ಕಿ ಹಾಗೂ ಕೆಂಪಕ್ಕಿ ಪ್ರಮುಖ ಆಹಾರ ಧಾನ್ಯ. ಈ ಆಹಾರ ವೈವಿಧ್ಯದ ಕಾರಣಕ್ಕಾಗಿಯೇ ಸಾರ್ವಜನಿಕ ಪಡಿತರ ವ್ಯವಸ್ಥೆಯಲ್ಲಿ ಸಾಮಾನ್ಯವಾಗಿ ವಿತರಿಸಲಾಗುತ್ತಿರುವ ಬೆಳ್ತಕ್ಕಿಯ ಬಳಕೆ ಮೈಸೂರು ಕರ್ನಾಟಕ, ಉತ್ತರ ಕರ್ನಾಟಕ ಹಾಗೂ ಕರಾವಳಿ ಕರ್ನಾಟಕ ಪ್ರಾಂತಗಳಲ್ಲಿ ತೀರಾ ವಿರಳ. ಹೀಗಾಗಿ ಈ ಭಾಗದ ಬಿಪಿಎಲ್ ಪಡಿತರ ಚೀಟಿದಾರರು ತಮ್ಮ ಬಳಿ ಉಳಿಯುವ ಹೆಚ್ಚುವರಿ ಅಕ್ಕಿಯನ್ನು ಚಿಲ್ಲರೆ ವರ್ತಕರಿಗೆ ಅಗ್ಗದ ಬೆಲೆಗೆ (ಎಪಿಎಲ್ ಪಡಿತರ ಚೀಟಿದಾರರಿಗೆ ನಿಗದಿಪಡಿಸಿರುವ ರೂ. 15ಕ್ಕೆ) ಮಾರಾಟ ಮಾಡುತ್ತಾರೆ. ಇಲ್ಲಿಂದಲೇ ಅಕ್ಕಿ ಕಾಳ ಸಂತೆಯ ಕರಾಳ ಜಾಲವೂ ತೆರೆದುಕೊಳ್ಳುತ್ತದೆ. ಹೀಗೆ ಬಿಪಿಎಲ್ ಪಡಿತರ ಚೀಟಿದಾರರಿಂದ ಅಗ್ಗದ ಬೆಲೆಗೆ ಖರೀದಿಸುವ ಅಕ್ಕಿಯನ್ನು ಚಿಲ್ಲರೆ ವರ್ತಕರು ನೇರವಾಗಿ ಅಕ್ಕಿ ಗಿರಣಿಗಳಿಗೆ ಲಾಭದ ಬೆಲೆಗೆ ಮಾರಾಟ ಮಾಡುತ್ತಾರೆ. ಹೀಗೆ ಚಿಲ್ಲರೆ ವರ್ತಕರಿಂದ ಖರೀದಿಸಿದ ಅಕ್ಕಿಯನ್ನು ನುಣುಪಾಗಿ ಪಾಲಿಶ್ ಮಾಡುವ ಅಕ್ಕಿ ಗಿರಣಿ ಮಾಲಕರು, ಅದೇ ಅಕ್ಕಿಯನ್ನು ‘ಸಾರ್ಟೆಕ್ಸ್ ರೈಸ್’ ಎಂಬ ಹೆಸರಿನಲ್ಲಿ ಮುಕ್ತ ಮಾರುಕಟ್ಟೆಗೆ ದುಬಾರಿ ಬೆಲೆ ವಿಧಿಸಿ ಸಾಗಣೆ ಮಾಡುತ್ತಾರೆ. ಹೀಗೆ ಕೇವಲ ರೂ. 15ಕ್ಕೆ ಖರೀದಿಸಲಾದ ಅಕ್ಕಿಯು ಮರಳಿ ಗ್ರಾಹಕನ ಕೈಗೆ ಸೇರುವ ಹೊತ್ತಿಗೆ ರೂ. 50 ತಲುಪಿರುತ್ತದೆ. ಅರ್ಥಾತ್ ಆ ಅಕ್ಕಿಯ ಬೆಲೆ ಶೇ. 333ರಷ್ಟು ದುಬಾರಿಯಾಗಿರುತ್ತದೆ. ಇಂತಹ ಅಕ್ಕಿಯನ್ನು ಸಾಮಾನ್ಯವಾಗಿ ಮಧ್ಯಮ, ಮೇಲ್ಮಧ್ಯಮ ವರ್ಗದ ಜನರೇ ಖರೀದಿಸುವುದರಿಂದ ಚಟುವಟಿಕೆ ರಹಿತ ಜೀವನಕ್ಕೆ ಒಗ್ಗಿ ಹೋಗಿರುವ ಅವರು ಸುಲಭವಾಗಿ ಮಧುಮೇಹಕ್ಕೆ ತುತ್ತಾಗುತ್ತಾರೆ. ಅದಕ್ಕಿರುವ ಪ್ರಮುಖ ಕಾರಣ: ಅಕ್ಕಿಯನ್ನು ಅತಿಯಾಗಿ ಪಾಲಿಶ್ ಮಾಡುವುದರಿಂದ ಅದರಲ್ಲಿನ ಪ್ರಮುಖ ಅನ್ನಾಂಗವಾದ Thiamine Hydrochloride ನಾಶವಾಗಿ, ಕೇವಲ ಕಾರ್ಬೊಹೈಡ್ರೇಟ್ ಭರಿತ, ಸತ್ವರಹಿತ, ಅನಾರೋಗ್ಯಕಾರಿ ಅಕ್ಕಿ ಮಾತ್ರ ಉಳಿದಿರುತ್ತದೆ. ಇಂತಹ ಅಕ್ಕಿಯಲ್ಲಿ ಎ್ಝಛ್ಚಿಛಿಞಜ್ಚಿ ಐ್ಞಛ್ಡಿ ಪ್ರಮಾಣ ಸಾಮಾನ್ಯಕ್ಕಿಂತ ಹೆಚ್ಚಿರುತ್ತದೆ (ಸಾಮಾನ್ಯ ಅಕ್ಕಿಯ Glyecemic ಇಂಡೆಕ್ಸ್ ಪ್ರಮಾಣ 55 ಇದ್ದರೆ, ಪಾಲಿಶ್ ಮಾಡಿದ ಅಕ್ಕಿಯಲ್ಲಿ ಅದರ ಪ್ರಮಾಣ 73-78ರಷ್ಟಿರುತ್ತದೆ). ಇಂತಹ ಅಕ್ಕಿ ಸೇವನೆಯಿಂದ ಮಧುಮೇಹ ತೀವ್ರ ರೂಪದಲ್ಲಿ ಬಿಗಡಾಯಿಸಿ, ಸಾರ್ವಜನಿಕ ಆರೋಗ್ಯ ಸೇವೆಯ ಮೇಲೆ ಹೆಚ್ಚು ಒತ್ತಡ ಉಂಟಾಗುತ್ತದೆ. ಇತ್ತೀಚಿನ ವೈಜ್ಞಾನಿಕ ಸಂಶೋಧನೆಗಳ ಪ್ರಕಾರ, ಅತಿಯಾದ ಅಕ್ಕಿ ಸೇವನೆ ಹಾಗೂ ರಕ್ತ ಹೀನತೆ ಮತ್ತು ಅಪೌಷ್ಟಿಕತೆ ನಡುವೆ ನೇರಾನೇರ ಸಂಬಂಧವಿದೆ ಎಂಬುದು ಸಾಬೀತಾಗಿದೆ. ಅಕ್ಕಿಯ ಅತಿಯಾದ ಸೇವನೆಯಿಂದಾಗುವ ರಕ್ತಹೀನತೆ ಹಾಗೂ ಅಪೌಷ್ಟಿಕತೆಯನ್ನು ತಪ್ಪಿಸಬೇಕಿದ್ದರೆ ಕೇವಲ ಅಕ್ಕಿ ವಿತರಿಸುವ ಬದಲು ಮಿಶ್ರ ಧಾನ್ಯ ವಿತರಿಸುವುದು ಅತ್ಯಗತ್ಯ. ಅದರಲ್ಲೂ ಅಪೌಷ್ಟಿಕತೆಯ ಸೂಚ್ಯಂಕದಲ್ಲಿ ಎಂಟನೆಯ ಸ್ಥಾನದಲ್ಲಿರುವ ಕರ್ನಾಟಕದಲ್ಲಿ ಪ್ರತೀ ಬಿಪಿಎಲ್ ಪಡಿತರ ಚೀಟಿದಾರನಿಗೆ ಮಿಶ್ರ ಧಾನ್ಯಗಳನ್ನು ಮಾತ್ರವಲ್ಲದೆ, ಬೇಳೆ ಕಾಳುಗಳು ಹಾಗೂ ಅಡುಗೆ ಎಣ್ಣೆಯನ್ನೂ ವಿತರಿಸಬೇಕಾದ ಜರೂರಿದೆ.
ಅಪೌಷ್ಟಿಕತೆಯ ಮುಖ್ಯ ಲಕ್ಷಣವೇ ರಕ್ತಹೀನತೆ, ಅಜೀರ್ಣತೆ ಹಾಗೂ ತೂಕ ಕಳೆದುಕೊಳ್ಳುವುದು. ಯಾವುದೇ ವ್ಯಕ್ತಿ ರಕ್ತಹೀನತೆಗೆ ಗುರಿಯಾದರೆ, ಅದರ ಪರಿಣಾಮ ನೇರವಾಗಿ ಆತನ ಜೀರ್ಣ ಕ್ರಿಯೆಯ ಮೇಲಾಗುತ್ತದೆ. ಪಚನ ಕ್ರಿಯೆ ಏರುಪೇರಾದರೆ, ದೇಹಕ್ಕೆ ಸೇರಬೇಕಾದ ಪೋಷಕಾಂಶಗಳು ಸಮರ್ಪಕವಾಗಿ ದೇಹಕ್ಕೆ ಒದಗುವುದಿಲ್ಲ. ದೇಹಕ್ಕೆ ಪೋಷಕಾಂಶಗಳು ಸಮರ್ಪಕವಾಗಿ ಒದಗದಿದ್ದರೆ ಅದು ತೂಕ ರಾಹಿತ್ಯದಲ್ಲಿ ಕೊನೆಯಾಗುತ್ತದೆ. ಹೀಗಾಗಿ ರಕ್ತಹೀನತೆಯನ್ನು ತಪ್ಪಿಸಲು ಅಕ್ಕಿಯೊಂದಿಗೆ ಕಬ್ಬಿಣ ಮತ್ತು ಕ್ಯಾಲ್ಸಿಯಂ ಪ್ರಮಾಣ ಹೇರಳವಾಗಿರುವ ರಾಗಿ ಹಾಗೂ ಹೆಚ್ಚು ನಾರಿನಾಂಶ ಹೊಂದಿರುವ ಗೋಧಿಯನ್ನು ಮೈಸೂರು ಕರ್ನಾಟಕ ಪ್ರಾಂತದ ಬಿಪಿಎಲ್ ಪಡಿತರ ಚೀಟಿದಾರರಿಗೆ ಪೂರೈಸಬೇಕಿದೆ. ಉತ್ತರ ಕರ್ನಾಟಕದ ಪಡಿತರ ಚೀಟಿದಾರರಿಗೆ ಅಕ್ಕಿಯೊಂದಿಗೆ ಜೋಳವನ್ನು, ಮಧ್ಯ ಕರ್ನಾಟಕದ ಪಡಿತರ ಚೀಟಿದಾರರಿಗೆ ಬೆಳ್ತಕ್ಕಿಯೊಂದಿಗೆ ರಾಗಿ ಅಥವಾ ಗೋಧಿಯನ್ನು, ಕರಾವಳಿ ಕರ್ನಾಟಕದ ಪಡಿತರ ಚೀಟಿದಾರರಿಗೆ ಕುಚ್ಚಲಕ್ಕಿ, ಕೆಂಪಕ್ಕಿಯೊಂದಿಗೆ ಗೋಧಿಯನ್ನು ವಿತರಿಸುವ ಮೂಲಕ ಸಮತೋಲಿತ ಧಾನ್ಯಗಳನ್ನು ಪೂರೈಸುವುದು ಅತ್ಯವಶ್ಯವಾಗಿದೆ. ರಕ್ತಹೀನತೆಯಿಂದ ಉಂಟಾಗುವ ಅಜೀರ್ಣತೆಯನ್ನು ಹೋಗಲಾಡಿಸಲು ಅಡುಗೆ ಎಣ್ಣೆಯನ್ನು ಪಡಿತರ ಚೀಟಿದಾರರಿಗೆ ಕಡ್ಡಾಯವಾಗಿ ನೀಡಲೇಬೇಕಿದೆ. ಅಡುಗೆ ಎಣ್ಣೆಯಲ್ಲಿ ಕೊಬ್ಬಿನಂಶವಿದ್ದು, ಇದು ಆಹಾರವು ಸೂಕ್ತವಾಗಿ ಪಚನವಾಗಲು ನೆರವು ನೀಡುತ್ತದೆ. ಸಸ್ಯಜನ್ಯ ಕೊಬ್ಬನ್ನು ಹೇರಳವಾಗಿ ಹೊಂದಿರುವ ಏಕೈಕ ಆಹಾರ ಪದಾರ್ಥ ಅಡುಗೆ ಎಣ್ಣೆಯಾಗಿದೆ. ಇನ್ನು ದೇಹದ ಬೆಳವಣಿಗೆಗೆ ಪ್ರೊಟೀನ್ ಅತ್ಯಗತ್ಯವಾಗಿದ್ದು, ಸಸ್ಯಜನ್ಯ ಪ್ರೊಟೀನ್ ಹೇರಳವಾಗಿ ದೊರೆಯುವುದು ಬೇಳೆಕಾಳುಗಳಲ್ಲಾಗಿದೆ. ಇದರೊಂದಿಗೆ ಥೈರಾಯ್ಡೊ ಸಮಸ್ಯೆಯನ್ನು ಹೋಗಲಾಡಿಸಲು ಐಯೋಡೈಸ್ಡ್ ಉಪ್ಪನ್ನು ಪಡಿತರ ಚೀಟಿದಾರರಿಗೆ ಒದಗಿಸುವುದು ವಿವೇಚನೆಯ ಕ್ರಮವಾಗಲಿದೆ.
ಕರ್ನಾಟಕ ರಾಜ್ಯ ಸರಕಾರವು ಭಾರತೀಯ ಆಹಾರ ನಿಗಮದಿಂದ ಖರೀದಿಸಲು ಮುಂದಾಗಿದ್ದ ಪ್ರತೀ ಕೆಜಿಯ ಅಕ್ಕಿಯ ಮೂಲಬೆಲೆ ರೂ. 34 ಆಗಿದ್ದು, ಸಾಗಣೆ ಹಾಗೂ ವಿತರಣೆ ವೆಚ್ಚ ಸೇರಿ ಸುಮಾರು ರೂ. 40 ಆಗುತ್ತಿತ್ತು. ರಾಜ್ಯದಲ್ಲಿ ಸುಮಾರು 1.20 ಕೋಟಿ ಬಿಪಿಎಲ್ ಪಡಿತರ ಚೀಟಿಗಳಿದ್ದು, 4.42 ಕೋಟಿ ಪಡಿತರ ಫಲಾನುಭವಿಗಳಿದ್ದಾರೆ. ಈ ಲೆಕ್ಕದಲ್ಲಿ ಪ್ರತೀ ಬಿಪಿಎಲ್ ಪಡಿತರ ಚೀಟಿದಾರನಿಗೆ ತಿಂಗಳಿಗೆ ತಲಾ 10 ಕೆಜಿ ಅಕ್ಕಿ ವಿತರಿಸಿದರೆ, ಅದರ ಒಟ್ಟು ಮೊತ್ತ ರೂ. 400 ಆಗುತ್ತದೆ. ಆಗ 4.42 ಕೋಟಿ ಪಡಿತರ ಫಲಾನುಭವಿಗಳಿಂದ ತಿಂಗಳಿಗೆ ರೂ. 1,768 ಕೋಟಿ ವೆಚ್ಚವಾಗುತ್ತದೆ. ಈ ಪೈಕಿ ಆಹಾರ ಭದ್ರತಾ ಕಾಯ್ದೆಯಡಿ ಕೇಂದ್ರ ಸರಕಾರವು 5 ಕೆಜಿ ಅಕ್ಕಿಯನ್ನು ಎಲ್ಲ ರಾಜ್ಯಗಳಿಗೂ ಉಚಿತವಾಗಿ ಒದಗಿಸುತ್ತಿರುವುದರಿಂದ ಉಳಿದ 5 ಕೆಜಿ ಅಕ್ಕಿಯನ್ನು ಪ್ರತೀ ಬಿಪಿಎಲ್ ಪಡಿತರ ಚೀಟಿದಾರನಿಗೆ ಒದಗಿಸಲು ರಾಜ್ಯ ಸರಕಾರ ರೂ. 884 ಕೋಟಿ ವೆಚ್ಚ ಮಾಡಬೇಕಾಗುತ್ತದೆ.
ಇಷ್ಟು ದೊಡ್ಡ ಮೊತ್ತವನ್ನು ಕೇವಲ ಅಕ್ಕಿ ಖರೀದಿಗೇ ವಿನಿಯೋಗಿಸುವ ಬದಲು ಕೇಂದ್ರ ಸರಕಾರ ಒದಗಿಸುತ್ತಿರುವ 5 ಕೆಜಿ ಅಕ್ಕಿಯ ಜೊತೆಗೆ ರಾಜ್ಯ ಸರಕಾರವು ತಲಾ 2 ಕೆಜಿ ರಾಗಿ/ಗೋಧಿ/ಜೋಳ/ಕುಚ್ಚಲಕ್ಕಿ/ಕೆಂಪಕ್ಕಿ, ಅರ್ಧ ಕೆಜಿ ತೊಗರಿಬೇಳೆ/ಹೆಸರುಕಾಳು, ಅರ್ಧ ಲೀಟರ್ ತಾಳೆ ಎಣ್ಣೆ, 1 ಕೆಜಿ ಉಪ್ಪು ವಿತರಿಸಲು ಮುಂದಾದರೆ ಅದಕ್ಕಾಗುವ ತಲಾವಾರು ವೆಚ್ಚವು ಕೋಷ್ಟಕದಲ್ಲಿ ಕೊಟ್ಟಂತಿದೆ.
ಭಾರತೀಯ ಆಹಾರ ನಿಗಮವು ಪ್ರತೀ ಕೆಜಿ ಅಕ್ಕಿಯನ್ನು ರೂ. 34ರ ಮೂಲಬೆಲೆಗೆ ಪೂರೈಸಲು ಒಪ್ಪಿಕೊಂಡಿತ್ತು. ಅದರೊಂದಿಗೆ ಸಾಗಣೆ ವೆಚ್ಚ ಹಾಗೂ ವಿತರಣೆ ವೆಚ್ಚ ಸೇರಿ ಸುಮಾರು ರೂ. 40 ಆಗುತ್ತಿತ್ತು. ಈ ಲೆಕ್ಕದಲ್ಲಿ ಪ್ರತೀ ಬಿಪಿಎಲ್ ಪಡಿತರ ಚೀಟಿದಾರನಿಗೆ ವಿತರಿಸಲು ಬಯಸಿದ್ದ ಹೆಚ್ಚುವರಿ 5 ಕೆಜಿ ಅಕ್ಕಿಗೆ ರೂ. 200 ತಗಲುತ್ತಿತ್ತು. ಆದರೆ, ಭಾರತೀಯ ಆಹಾರ ನಿಗಮವು ಇದೀಗ ಹೆಚ್ಚುವರಿ ಅಕ್ಕಿಯನ್ನು ಪೂರೈಸಲು ನಿರಾಕರಿಸಿರುವುದರಿಂದ ಮುಕ್ತ ಮಾರುಕಟ್ಟೆಯಿಂದ ಖರೀದಿಸಲು ರಾಜ್ಯ ಸರಕಾರ ಟೆಂಡರ್ ಆಹ್ವಾನಿಸಲು ಮುಂದಾಗಿದೆ. ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಸಲು ಮುಂದಾದರೆ ಪ್ರತೀ ಕೆಜಿ ಅಕ್ಕಿಯ ಮೂಲಬೆಲೆ ರೂ. 40ಕ್ಕಿಂತ ಕಮ್ಮಿ ಇರುವುದಿಲ್ಲ. ಇದರೊಂದಿಗೆ ಸಾಗಣೆ ವೆಚ್ಚ ಹಾಗೂ ವಿತರಣಾ ವೆಚ್ಚ ಸೇರಿ ರೂ. 45 ತಲುಪಲಿದೆ ಎಂಬುದು ಮಾರುಕಟ್ಟೆ ತಜ್ಞರ ಅಭಿಮತ. ಈ ಲೆಕ್ಕದಲ್ಲಿ ಹೆಚ್ಚುವರಿ 5 ಕೆಜಿ ಅಕ್ಕಿಗೆ ರೂ. 225 ವೆಚ್ಚವಾಗಲಿದೆ. ಒಟ್ಟು 4.42 ಕೋಟಿ ಪಡಿತರ ಫಲಾನುಭವಿಗಳಿಗೆ ರೂ. 994.5 ಕೋಟಿ ವೆಚ್ಚವಾಗಲಿದೆ. ಆದರೆ, ಪ್ರತೀ ಬಿಪಿಎಲ್ ಪಡಿತರ ಚೀಟಿದಾರನಿಗೆ ತಿಂಗಳಿಗೆ ತಲಾ 5 ಕೆಜಿ ಅಕ್ಕಿಯೊಂದಿಗೆ ಮೇಲೆ ಹೇಳಿದಂತೆ 2 ಕೆಜಿ ರಾಗಿ/ಜೋಳ/ಗೋಧಿ/ಕುಚ್ಚಲಕ್ಕಿ/ಕೆಂಪಕ್ಕಿ, ಅರ್ಧ ಕೆಜಿ ತೊಗರಿಬೇಳೆ/ಹೆಸರುಕಾಳು, ಅರ್ಧ ಲೀಟರ್ ತಾಳೆ ಎಣ್ಣೆ ಹಾಗೂ 1 ಕೆಜಿ ಉಪ್ಪು ವಿತರಿಸಿದರೆ, ಸರಕಾರದ ಬೊಕ್ಕಸಕ್ಕೆ ರೂ. 44.20 ಕೋಟಿ ಉಳಿತಾಯವಾಗಲಿದೆ. ನಮ್ಮ ದೇಶದ ಯಾವುದೇ ರಾಜಕೀಯ ಪಕ್ಷಗಳಿಗೂ ಸಾರ್ವಜನಿಕ ಪಡಿತರ ವ್ಯವಸ್ಥೆಯ ಮಹತ್ವ ತಿಳಿದಿಲ್ಲ. ಈ ವ್ಯವಸ್ಥೆಯ ಮೂಲಕ ಸಮತೋಲಿತ ಆಹಾರ ಪದಾರ್ಥಗಳನ್ನು ಹಸಿದವರ ಹೊಟ್ಟೆಗೆ ಉಣಿಸಿದರೆ, ಅವರ ದೇಹ ಚೈತನ್ಯಯುತವಾಗುತ್ತದೆ. ಯಾವುದೇ ವ್ಯಕ್ತಿಯ ದೇಹ ಚೈತನ್ಯಯುತವಾಗಿದ್ದಾಗ ಆತನಲ್ಲಿ ದುಡಿಮೆಯ ಹುಮ್ಮಸ್ಸು ಮೂಡುತ್ತದೆ. ಇದರಿಂದ ದೇಶದ ಉತ್ಪಾದಕತೆಯೂ ಹೆಚ್ಚಿ, ಜಿಡಿಪಿಯೂ ವೇಗವಾಗಿ ವೃದ್ಧಿಸುತ್ತದೆ. ಒಂದು ಕಾಲದಲ್ಲಿ ಗಂಭೀರ ವಲಸೆ ಸಮಸ್ಯೆ ಎದುರಿಸುತ್ತಿದ್ದ ತಮಿಳುನಾಡಿನಲ್ಲಿ ಪರಿಣಾಮಕಾರಿಯಾಗಿ ಜಾರಿಯಾದ ಉಚಿತ ಪಡಿತರ ವಿತರಣೆ ವ್ಯವಸ್ಥೆಯಿಂದ ಅಲ್ಲಿನ ವಲಸೆ ಸಮಸ್ಯೆ ಬಹುತೇಕ ಇಲ್ಲವಾಗಿ, ಇಡೀ ದಕ್ಷಿಣ ಭಾರತದಲ್ಲಿ ಆ ರಾಜ್ಯದ ಆಂತರಿಕ ಉತ್ಪನ್ನ ದರವು ಅಗ್ರ ಸ್ಥಾನದಲ್ಲಿರುವುದೇ ಈ ಮಾತಿಗೆ ಜ್ವಲಂತ ನಿದರ್ಶನ.
ರಾಜಕೀಯ ಪಕ್ಷಗಳಿಗೆ ಉಚಿತ ಪಡಿತರ ವಿತರಣೆ ವ್ಯವಸ್ಥೆಯ ಮಹತ್ವ ತಿಳಿದಿದ್ದರೆ, ಅವು ಯಾವುದೇ ಭರವಸೆ ನೀಡುವ ಮೊದಲು ಆಹಾರ ತಜ್ಞರು ಮತ್ತು ಆರೋಗ್ಯ ತಜ್ಞರೊಂದಿಗೆ ತೀರ್ಮಾನಿಸಿ ಚುನಾವಣೆ ಭರವಸೆ ನೀಡಲು ಮುಂದಾಗುತ್ತಿದ್ದವು. ಆದರೆ, ಉಚಿತ ಪಡಿತರ ವಿತರಣೆ ವ್ಯವಸ್ಥೆ ಅವುಗಳ ಪಾಲಿಗೆ ಮತ ತಂದುಕೊಡುವ ಅಗ್ಗದ ಜನಪ್ರಿಯ ಯೋಜನೆಯಾಗಿ ಮಾತ್ರ ಉಳಿದಿರುವುದರಿಂದಲೇ ಸಾರ್ವಜನಿಕ ಆರೋಗ್ಯ ಸೇವೆಯ ಮೇಲೆ ದೂರಗಾಮಿ ಮಾರಕ ಪರಿಣಾಮ ಬೀರಲಿರುವ ಪ್ರತೀಬಿಪಿಎಲ್ ಪಡಿತರ ಚೀಟಿದಾರನಿಗೆ ತಲಾ 10 ಕೆಜಿ ನೀಡುವಂಥ ಅಪಾಯಕಾರಿ ಭರವಸೆಯ ಮೊರೆ ಹೋಗುತ್ತಿರುವುದು.
ಈಗಲೂ ಕಾಲ ಮಿಂಚಿಲ್ಲ; ರಾಜ್ಯ ಸರಕಾರವು ಆಹಾರ ತಜ್ಞರು ಹಾಗೂ ಆರೋಗ್ಯ ತಜ್ಞರೊಂದಿಗೆ ಸಮಾಲೋಚಿಸಿ ಸಮತೋಲಿತ ಆಹಾರ ಧಾನ್ಯಗಳ ಪೂರೈಕೆಗೆ ಮುಂದಾಗಬೇಕಿದೆ. ಇದರಿಂದ ಸ್ಥಳೀಯ ರೈತರಿಗೂ ದೊಡ್ಡ ಲಾಭವಾಗಲಿದ್ದು, ಗಂಭೀರ ಗುಳೆ ಸಮಸ್ಯೆ ಎದುರಿಸುತ್ತಿರುವ ಉತ್ತರ ಕರ್ನಾಟಕದಲ್ಲಿ ಆರ್ಥಿಕ ಸ್ಥಿರತೆ ಸ್ಥಾಪಿಸಲು ಸಾಧ್ಯವಿದೆ. ಅಲ್ಲದೆ ಪಡಿತರ ವ್ಯವಸ್ಥೆಯಲ್ಲಿ ಪ್ರದೇಶಾವಾರು ಆಹಾರ ಧಾನ್ಯಗಳನ್ನು ಪೂರೈಸುವುದರಿಂದ ಸಾರ್ವಜನಿಕ ಆರೋಗ್ಯ ಸೇವೆಯನ್ನೂ ಸುಸ್ಥಿತಿಯಲ್ಲಿಡಬಹುದಾಗಿದೆ. ಆದರೆ, ಇದಕ್ಕೆಲ್ಲ ಬೇಕಿರುವುದು ರಾಜಕೀಯ ಇಚ್ಛಾಶಕ್ತಿಯೇ ಹೊರತು ರಾಜಕೀಯ ಗಿಮಿಕ್ ಅಲ್ಲ.