ಮೊದಲ ದಲಿತ ಮಹಿಳಾ ಬಾಡಿಬಿಲ್ಡರ್ ಪ್ರಿಯಾ ಸಿಂಗ್ ಕತೆ

Update: 2023-07-12 14:28 GMT

- ರೇಣುಕಾ ನಿಡಗುಂದಿ

ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗೆದ್ದು ದೇಶದ ರಾಷ್ಟ್ರಪತಿಯವರಿಂದ ಸಮ್ಮಾನ ಸ್ವೀಕರಿಸಿ ಅನೇಕ ಪದಕಗಳನ್ನು ಗೆದ್ದ ಮೊದಲ ದಲಿತ ಮಹಿಳಾ ಬಾಡಿಬಿಲ್ಡರ್ ಪ್ರಿಯಾ ಸಿಂಗ್ ಇತ್ತೀಚೆಗೆ ಎದುರಿಸುತ್ತಿರುವ ಅವಮಾನಕರ ಸಂಗತಿಗಳು ಮಾತ್ರ ಖಂಡನೀಯವಾದವು. ಆಕೆ ದಲಿತಳಾಗಿದ್ದ ಮಾತ್ರಕ್ಕೋ ಅಥವಾ ಹೆಣ್ಣಾದ ಕಾರಣಕ್ಕೋ ಕೆಲವು ಗಂಡಸರು ಕೀಳುಮಟ್ಟಕ್ಕಿಳಿದುದು ನಮ್ಮ ಪುರುಷಪ್ರಧಾನ ಸಮಾಜದ ಕೆಟ್ಟ ಪರಂಪರೆಗೆ ಹಿಡಿದ ಕನ್ನಡಿಯಾಗಿದೆ.

ಮೊನ್ನೆ ಮೊನ್ನೆಯಷ್ಟೇ ಮಧ್ಯಪ್ರದೇಶದ ಸೀಧಿಯಲ್ಲಿ ಆದಿವಾಸಿಯೊಬ್ಬನ ಮೇಲೆ ಮೂತ್ರ ವಿಸರ್ಜಿಸಿದನೊಬ್ಬ. ಇದೇ ಮಧ್ಯಪ್ರದೇಶದ ಶಿವಪುರಿಯಲ್ಲಿ ಹೆಣ್ಣುಮಗಳನ್ನು ಕೆಣಕಿದ್ದರೆಂದು ಇಬ್ಬರು ದಲಿತ ಯುವಕರನ್ನು ಥಳಿಸಿ ಕೊರಳಿಗೆ ಚಪ್ಪಲಿ ಹಾರ ಹಾಕಿ ಉಟ್ಟಬಟ್ಟೆಗೆ ಮಲವನ್ನು ಮೆತ್ತಿ ಬಾಯಿಗೆ ಮಲವನ್ನು ತುರುಕಿ ಮೆರವಣಿಗೆ ಮಾಡಿದರು. ಕಾಲಿಗೆ ಚಪ್ಪಲಿ ಧರಿಸಿ ಉಚ್ಚ ಜಾತಿಯವರ ಕೇರಿಯಲ್ಲಿ ನಡೆದುದಕ್ಕೆ ಯುವಕನನ್ನು ಥಳಿಸಿದ್ದರು. ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿಯ ನಿವಾಸದ ಹತ್ತಿರವೇ ದಲಿತ ಅಪ್ರಾಪ್ತ ವಯಸ್ಸಿನ ಹೆಣ್ಣುಮಗಳನ್ನು ಹೊತ್ತೊಯ್ದು ೨೪ ಗಂಟೆ ಸಾಮೂಹಿಕವಾಗಿ ಅತ್ಯಾಚಾರ ಮಾಡುತ್ತಾರೆ. ಬಿಹಾರದಲ್ಲಿ ದಲಿತ ಅಪ್ರಾಪ್ತ ಹುಡುಗ ಬಿಸ್ಕಿತ್ ಕದ್ದನೆಂದು ಅವನನ್ನು ಕಂಬಕ್ಕೆ ಕಟ್ಟಿ ಒಂದು ಗಂಟೆ ಥಳಿಸುತ್ತಾರೆ. ಇದೇ ಬಿಹಾರದಲ್ಲಿ ಮಾವಿನ ಹಣ್ಣು ಮಾರುವ ವಯೋವೃದ್ಧ ಮೇಲ್ವರ್ಗದವರ ಓಣಿಯಲ್ಲಿ ಹ್ಯಾಂಡ್ಪಂಪಿನಿಂದ ನೀರು ಕುಡಿದುದಕ್ಕೆ ಅವನನ್ನು ಹೊಡೆದು ಸಾಯಿಸುತ್ತಾರೆ.

ನಿತ್ಯವೂ ಒಂದಲ್ಲಾ ಒಂದು ಘಟನೆಗಳು ಘಟಿಸುತ್ತಲೇ ಇವೆ. ಎತ್ತ ಸಾಗುತ್ತಿದೆ ಈ ದೇಶ?

ಇವ್ಯಾವುವೂ ಹಳೆಯ ಘಟನೆಗಳಲ್ಲ. ಇತ್ತೀಚೆಗೆ ನಡೆದ ಘಟನೆಗಳು. ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಇಷ್ಟು ಅಮಾನವೀಯವಾಗಿ ನಡೆಸಿಕೊಳ್ಳುತ್ತಾನೆಂದರೆ ಅವನೊಳಗಿನ ಮನುಷ್ಯತ್ವ ಸತ್ತು ಹೋಗಿದೆಯೆಂದೇ ಅರ್ಥ. ಯಾಕೆಂದರೆ ಪ್ರಾಣಿಗಳೂ ಇನ್ನೊಂದು ಪ್ರಾಣಿಯನ್ನು ತನ್ನ ಆಹಾರದ ಹೊರತಾಗಿ ಹಿಂಸಿಸುವುದಿಲ್ಲ. ! ಜಾತಿ ಶ್ರೇಷ್ಠತೆಯ ಮತಾಂಧರಿಗೆಲ್ಲ ಬಿಜೆಪಿ ರಕ್ಷಾಕವಚವಿದೆ. ‘‘ನಮಗ್ಯಾರೂ ಏನೂ ಮಾಡೋದಿಲ್ಲ’’ ಎಂಬ ಅಭಯಹಸ್ತವಿದ್ದುದರಿಂದಲೇ ಮೇಲ್ಜಾತಿಯ ನಶೆ ಮೆದುಳಿಗೇರಿದೆ. ದುರುಳರಿಗೆ ಯಾವ ಭಯವೂ ಇಲ್ಲದಂತಾಗಿದೆ. ಮದವೇರಿದ ಗೂಳಿಗಳು ಎಲ್ಲೆಂದರಲ್ಲಿ ದಲಿತರು, ಹಿಂದುಳಿದ ಆದಿವಾಸಿ, ಅಲ್ಪಸಂಖ್ಯಾತರನ್ನು ಬೇಟೆಯಾಡುತ್ತಿವೆ.. ಹೆಚ್ಚಿನ ಘಟನೆಗಳು ಉತ್ತರಪ್ರದೇಶ, ಮಧ್ಯಪ್ರದೇಶ, ಬಿಹಾರ, ರಾಜಸ್ಥಾನಗಳಿಂದ ವರದಿಯಾಗುತ್ತಿವೆ. ಮಧ್ಯಪ್ರದೇಶದಲ್ಲಿನ ಇತ್ತೀಚಿನ ಘಟನೆಗಳಂತೂ ಬೆಚ್ಚಿಬೀಳಿಸುವಂತಿವೆ. ೨೦೧೧ರ ಜನಗಣತಿಯ ಪ್ರಕಾರ ಮಧ್ಯಪ್ರದೇಶವೊಂದರಲ್ಲಿಯೇ ೧.೫೩ ಕೋಟಿಗೂ ಹೆಚ್ಚಿನ ಆದಿವಾಸಿಗಳು ಮತ್ತು ೧.೧೩ ಕೋಟಿಗೂ ಹೆಚ್ಚಿನ ದಲಿತರಿದ್ದಾರೆ.

ಇನ್ನು ಹೆಣ್ಣುಮಕ್ಕಳ ಸ್ಥಿತಿ ಇದಕ್ಕೇನೂ ಹೊರತಾಗಿಲ್ಲ. ಅದರಲ್ಲೂ ಒಬ್ಬ ದಲಿತ ಮಹಿಳೆ ಉಳಿದೆಲ್ಲಾ ಜಾತಿಯ ಮಹಿಳೆಯರಂತೆ ಯಶಸ್ಸಿನ ಒಂದು ಮೆಟ್ಟಲನ್ನು ಹತ್ತಿದರೆ ಸಾಕು ಅದನ್ನು ಸಹಿಸದ ಈ ಮೇಲ್ಜಾತಿಯ ಗಂಡು ಗೂಳಿಗಳು ಅಂಡಿಗೆ ಬೆಂಕಿಯಿಟ್ಟಂತೆ ಆಕೆಯನ್ನು ಬೆದರಿಸುತ್ತಾರೆ, ಅಂಜಿಸುತ್ತಾರೆ. ಆಕೆ ಭಯಬೀಳದೆ ಹೋದರೆ ನೇರವಾಗಿ ಆಕೆಯ ಚಾರಿತ್ರ್ಯಹರಣದಂತಹ ತೇಜೋವಧೆಗೆ ಇಳಿಯುತ್ತಾರೆ. ಆಡುವ ಬಾಯಿಗಳು, ಎಲುಬಿಲ್ಲದ ನಾಲಿಗೆಗಳು ಗಂಡಾಳಿಕೆಯ ಸಮಾಜ ಯಾವ ಮಟ್ಟಕ್ಕೆ ಇಳಿಯುತ್ತದೆಂಬುದನ್ನು ಪ್ರಿಯಾ ಸಿಂಗ್ ಎಂಬ ಚಿನ್ನದ ಪದಕ ಗೆದ್ದ ದಲಿತ ಬಾಡಿಬಿಲ್ಡರ್ ಮಹಿಳೆಯ ಕಥೆ ನಿರೂಪಿಸುತ್ತದೆ.

ಈ ಪ್ರಿಯಾ ಸಿಂಗ್ ಇರುವುದು ರಾಜಸ್ಥಾನದಲ್ಲಿ.

ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗೆದ್ದು ದೇಶದ ರಾಷ್ಟ್ರಪತಿಯವರಿಂದ ಸಮ್ಮಾನ ಸ್ವೀಕರಿಸಿ ಅನೇಕ ಪದಕಗಳನ್ನು ಗೆದ್ದ ಮೊದಲ ದಲಿತ ಮಹಿಳಾ ಬಾಡಿಬಿಲ್ಡರ್ ಪ್ರಿಯಾ ಸಿಂಗ್ ಇತ್ತೀಚೆಗೆ ಎದುರಿಸು ತ್ತಿರುವ ಅವಮಾನಕರ ಸಂಗತಿಗಳು ಮಾತ್ರ ಖಂಡನೀಯವಾದವು.

ಆಕೆ ದಲಿತಳಾಗಿದ್ದ ಮಾತ್ರಕ್ಕೋ ಅಥವಾ ಹೆಣ್ಣಾದ ಕಾರಣಕ್ಕೋ ಕೆಲವು ಗಂಡಸರು ಕೀಳುಮಟ್ಟಕ್ಕಿಳಿದುದು ನಮ್ಮ ಪುರುಷಪ್ರಧಾನ ಸಮಾಜದ ಕೆಟ್ಟ ಪರಂಪರೆಗೆ ಹಿಡಿದ ಕನ್ನಡಿಯಾಗಿದೆ. ಫೇಸಬುಕ್, ಇನ್ಸ್ಟಾಗ್ರಾಮ್ನಂತಹ ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾ ಸಿಂಗ್ ಹೆಸರಿನಲ್ಲಿ ನಕಲಿ ಅಕೌಂಟನ್ನು ಸೃಷ್ಟಿಸಿ ಆಕೆಯ ಅಶ್ಲೀಲ ಫೋಟೊಗಳನ್ನು ಹರಿಬಿಟ್ಟಿದ್ದರು. ಆಕೆಯ ಬಂಧುಗಳೇ ಈ ಬಗ್ಗೆ ಪ್ರಿಯಾಳಿಗೆ ಸುದ್ದಿಮುಟ್ಟಿಸಿದ ಬಳಿಕವೇ ಆಕೆಗೆ ಗೊತ್ತಾದದ್ದು. ಅಕೆಯ ಸ್ಥಿತಿ ಹೇಗಾಗಿರಬೇಕು ಎಂದು ಊಹಿಸಲೂ ಸಾಧ್ಯವಿಲ್ಲ. ತಕ್ಷಣವೇ ಆಕೆ ಜಯಪುರ್ನ ಪೊಲೀಸರಿಗೆ ವಿಷಯ ತಿಳಿಸಿ ಎಫ್ಐಆರ್ ದಾಖಲಿಸಿದಳು. ಈಗ ಜಯಪುರ್ನ ಸೈಬರ್ ಸೆಲ್ ಈ ಬಗ್ಗೆ ತನಿಖೆ ಆರಂಭಿಸಿದೆಯಂತೆ. ಪ್ರಿಯಾಳ ಕತೆ ಇಲ್ಲಿಗೇ ಮುಗಿಯುವುದಿಲ್ಲ.

ಆಕೆಯೇ ‘ದಿ ಮೂಕನಾಯಕ’ ಪತ್ರಿಕೆಗೆ ಈ ಬಗ್ಗೆ ಪೂರ್ಣ ವಿವರಣೆಯನ್ನು ಕೊಟ್ಟಿದ್ದಾಳೆ. ಆಕೆ ಅನ್ನುತ್ತಾಳೆ - ಅವಳ ಈ ಅಶ್ಲೀಲ ಫೋಟೊಗಳನ್ನು ನೋಡಿದ ಒಬ್ಬ ಹೆಣ್ಣುಮಗಳು ಫೋನ್ ಮಾಡಿ - ‘‘ನಾನು ನಿಮ್ಮ ದೊಡ್ಡ ಅಭಿಮಾನಿಯಾಗಿದ್ದೆ. ನಿಮ್ಮನ್ನು ಒಳ್ಳೆಯವಳೆಂದುಕೊಂಡಿದ್ದೆ. ನೀವು ನನಗೆ ಪ್ರೇರಣೆಯಾಗಿದ್ದಿರಿ. ಆದರೆ ಈಗ ನಾನು ನಿಮ್ಮನ್ನು ದ್ವೇಷಿಸುತ್ತೇನೆ.’’ ಎಂದ ಮಾತುಗಳನ್ನು ಮೆಲುಕುಹಾಕುತ್ತ ಪ್ರಿಯಾ ಸಿಂಗ್ ಕಣ್ಣೀರಾ ಗುತ್ತಾಳೆ. ವರ್ಷಗಳಿಂದ ಕಠಿಣ ಪರಿಶ್ರಮದಿಂದ ಗಳಿಸಿದ್ದ ಈ ಗೌರವವೆಲ್ಲ ಒಮ್ಮೆಗೆ ಮಣ್ಣುಪಾಲಾಯಿತು. ಗಳಿಸಿದ್ದ ಹೆಸರು ಬದನಾಮಿಯಾಗಿ ಬದಲಾಯಿತು. ನನಗೇ ಹೀಗಾದರೆ ಇನ್ನು ಮುಂದಿನ ಪೀಳಿಗೆಗೆ ಆತ್ಮವಿಶ್ವಾಸ ಎಲ್ಲಿಂದ ಬರಬೇಕು? ಮುಂದಿನ ಪೀಳಿಗೆ ತಮ್ಮ ಕನಸುಗಳನ್ನು ನನಸಾಗುತ್ತವೆಂದು ಹೇಗೆ ನಂಬಬೇಕು? ಭರವಸೆ ಎಲ್ಲಿಂದ ಬರಬೇಕು?

ಪ್ರಿಯಾ ಮುಂದುವರಿದು ಹೇಳುತ್ತಾಳೆ -‘‘ನನ್ನನ್ನು ಫೋನ್ ಮೂಲಕ ಸಂಪರ್ಕಿಸಿ ನನ್ನ ಕತೆಯನ್ನು, ನನ್ನ ಮನದಳಲನ್ನು ವಿಚಾರಿಸುತ್ತಿರುವವರು ನೀವೇ ಮೊದಲಿಗರು (ದಿ ಮೂಕನಾಯಕ). ಎಲ್ಲಾ ಮೀಡಿಯಾಗಳು ನನ್ನ ಟ್ವೀಟನ್ನೇ ಸುದ್ದಿಯೆಂದು ಪ್ರಕಟಿಸಿ ಇನ್ನಷ್ಟು ನನ್ನ ಅವಮಾನಕ್ಕೆ ದಾರಿಮಾಡಿಕೊಟ್ಟಿವೆ. ಒಬ್ಬ ರಾಷ್ಟ್ರಪತಿಯಿಂದ ಪುರಸ್ಕಾರವನ್ನು ಪಡೆದ ಆಟಗಾರ್ತಿಯ ಸ್ಥಿತಿ ಏನಾಗಿರಬಹು ದೆಂಬ ಸೂಕ್ಷ್ಮವೂ ಇದ್ದಂತಿಲ್ಲ ಈ ಮೀಡಿಯಾಗಳಿಗೆ. ಬಹುಶಃ ಅದು ಅವುಗಳಿಗೆ ಬೇಕೂ ಇಲ್ಲವೆನಿಸುತ್ತದೆ. ಆದರೆ ಎಂಥ ಪರಿಸ್ಥಿತಿಯೇ ಬರಲಿ, ಏನೇ ಇರಲಿ ನನಗೆ ಹೋರಾಡುವ ಧೈರ್ಯವಿದೆ. ಹೋರಾಡುತ್ತೇನೆ. ಆದರೆ ಎಲ್ಲಿ ಒಬ್ಬ ಮಹಿಳೆಯ ಚಾರಿತ್ರ್ಯಹರಣ ತೇಜೋವಧೆಗೆ ಗಂಡಸು ಇಳಿಯುತ್ತಾನೋ ಅಲ್ಲಿ ಮಹಿಳೆಯ ಚೈತನ್ಯ ಉಡುಗುತ್ತದೆ. ಕೆಲ ಪತ್ರಕರ್ತರು ಈ ವಿಷಯವನ್ನು ಪ್ರಕಟಿಸುವ ಉಪಕಾರ ಮಾಡುತ್ತಿದ್ದಾರೆ.’’

ಪ್ರಿಯಾಳ ಮದುವೆ ಲಾಯದಲ್ಲಿಯೇ ನಡೆದಿತ್ತು. ಆಕೆ ಹದಿಮೂರು ವರ್ಷದವಳಿದ್ದಾಗ ಚೊಚ್ಚಲ ಮಗುವಿನ ತಾಯಿಯಾದಳು. ತಾನೇ ಮಗುವಾಗಿ ಇನ್ನೊಂದು ಮಗುವನ್ನು ಸಂಭಾಳಿಸಬೇಕಾದ ಹೊಣೆಯನ್ನು ಹೊತ್ತಳು. ಹಾಗೂ ಹೀಗೂ ಆಕೆ ಈ ಮದುವೆಯ ಚೌಕಟ್ಟಿನಿಂದ ಹೊರ ಬಂದು ಹೊಸ ಜೀವನವನ್ನು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಾಳೆ. ಇದು ಕೇವಲ ಆಕೆಯ ಬದುಕು. ಇಲ್ಲಿಂದ ಪ್ರಿಯಾ ಸಿಂಗ್ ಬಾಡಿಬಿಲ್ಡರ್ ಆಗುವ ಹೊಸದೊಂದು ಕನಸಿನ ಬೆನ್ನತ್ತುತ್ತಾಳೆ. ಒಬ್ಬ ಮಹಿಳೆ, ಅದೂ ಒಂಟಿ ತಾಯಿ ಮತ್ತು ಮಹಿಳಾ ಆಟಗಾರ್ತಿಯಾಗಿ ಆಕೆಯ ಬದುಕು ಹೂವಿನಷ್ಟು ಮೃದುವಾಗಿರಲಿಲ್ಲ. ಅದು ಮುಳ್ಳಿನ ಹಾಸಿಗೆಯ ಮೇಲಿನ ಬರಿಗಾಲಿನ ನಡಿಗೆಯಾಗಿತ್ತು. ರಾಷ್ಟ್ರಪತಿಯಿಂದ ಸಮ್ಮಾನಿತಳಾದ ನಂತರ ಬದುಕು ಸರಳವಾಯಿತು ಎಂದು ಜನರಿಗೆ ಅನಿಸಿರಬಹುದು. ಆದರೆ ಅದು ತಪ್ಪು

ಈ ಸಮ್ಮಾನದ ಬಳಿಕ ಬದುಕು ಇನ್ನಷ್ಟು ದುರ್ಭರವಾಯಿತು. ಅಂತರ್ ರಾಷ್ಟ್ರೀಯ ಪದಕ ಗೆದ್ದು ಪುರಸ್ಕಾರ ಸ್ವೀಕರಿಸಿದ ನಂತರ ಆಕೆ ಕೆಲಸ ಮಾಡುತ್ತಿದ್ದ ಕಂಪೆನಿ ಆಕೆಯನ್ನು ಕೆಲಸದಿಂದ ಕಿತ್ತುಹಾಕುತ್ತದೆ. ಕಾರಣ - ಪದಕ ಗೆದ್ದಿದ್ದಕ್ಕಾಗಿ ಅನೇಕ ಕಡೆಗಳಲ್ಲಿ ಆಕೆಯನ್ನು ಸನ್ಮಾನಿಸಲು ಕರೆಯಲಾಗುತ್ತಿತ್ತು. ಅ ಕಾರ್ಯಕ್ರಮಕ್ಕೆ ಹೋಗಲು ಪ್ರಿಯಾ ತನ್ನ ಮಾಲಕರಿಂದ ರಜೆ ಪಡೆದು ಹೋಗಬೇಕಿತ್ತು. ಆಕೆ ರಜೆ ಕೇಳಿದಾಗ ಅವರು -‘‘ ಒಂದೋ ಸಮ್ಮಾನವನ್ನು ಸ್ವೀಕರಿಸಲು ಹೋಗು ಇಲ್ಲಾ ಕೆಲಸ ಮಾಡು. ಎರಡೂ ಜೊತೆಜೊತೆಯಾಗಿ ನಡೆಯುವುದಿಲ್ಲ.’’ ಎಂದರಂತೆ. ಇದೇ ಕಾರಣಕ್ಕೆ ಆಕೆಯನ್ನು ಕೆಲಸದಿಂದ ಕಿತ್ತೊಗೆಯುತ್ತಾರೆ. ಒಂದು ಕಡೆ ಇಡೀ ಜಗತ್ತು ಆಕೆಯನ್ನು ಸನ್ಮಾನಿಸಲು ತುದಿಗಾಲಲ್ಲಿ ನಿಂತಿತ್ತು. ಇನ್ನೊಂದೆಡೆ ಆಕೆ ನಿಜವಾಗಿಯೂ ನಿರುದ್ಯೋಗಿಯಾಗಿದ್ದಳು.

ಒಬ್ಬ ಮಹಿಳೆ ದೇಶಕ್ಕೆ ಕೀರ್ತಿ ತರುತ್ತಿದ್ದಾಳೆ, ದೇಶದ ಹೆಣ್ಣುಮಕ್ಕಳಿಗೆ ಪ್ರೇರಣೆಯಾಗುತ್ತಿದ್ಡಾಳೆ. ಅವಳ ಉಪಜೀವನಕ್ಕೆ ಪರದಾಡುವಂತಾಗಿದ್ದು ಲಜ್ಜೆಗೇಡಿನ ಸಂಗತಿಯಲ್ಲದೆ ಮತ್ತೇನು. ಪ್ರಿಯಾಳ ಮಗಳು ಓದುತ್ತಿದ್ದಾಳೆ. ಈಗ ಹನ್ನೆರಡನೇ ತರಗತಿ ಪಾಸುಮಾಡಿ ಗ್ರಾಫಿಕ್ ಡಿಸೈನಿಂಗ್ ಕೋರ್ಸ್ ಮಾಡುತ್ತಿದ್ದಾಳೆ. ಇಷ್ಟೆಲ್ಲ ಪದಕ ಪಡೆದರೂ ನನ್ನ ಮಗಳು ಮನೆಯಲ್ಲಿ ಕುಳಿತಿದ್ದಾಳೆ. ಯಾಕೆಂದರೆ ಇನ್ಸ್ಟಿಟ್ಯೂಟಿನ ಫೀಸ್ ಕಟ್ಟಲಾಗುತ್ತಿಲ್ಲ. ಇದರ ಮೇಲೆ ಬರೆ ಎಳೆದಂತೆ ಚಾರಿತ್ರ್ಯಹರಣ ಮಾಡುತ್ತಿದ್ದಾರೆ.

ರಾಜಸ್ಥಾನದ ಬಿಕಾನೇರಿನಲ್ಲಿ ವಾಸಿಸುವ ಪ್ರಿಯಾ ಸಿಂಗ್ ಮನೆಯ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ. ಆ ಕಾರಣದಿಂದ ಆಕೆ ನೌಕರಿ ಮಾಡುತ್ತಿ ದ್ದಳು. ಪ್ರಿಯಾ ಜಿಮ್ನಲ್ಲಿ ಕೆಲಸಕ್ಕೆ ಅರ್ಜಿ ಹಾಕಿದ್ದಳು. ಅವಳ ಪರ್ಸನಾ ಲಿಟಿಯಿಂದಾಗಿ ಆಕೆಗೆ ಕೆಲಸ ಸಿಕ್ಕಿತು. ಅಲ್ಲಿಯೇ ಪ್ರಿಯಾ ತನ್ನ ಜಿಮ್ ಟ್ರೈನಿಂಗನ್ನೂ ಮುಂದುವರಿಸಿದ್ದಳು. ಈಗ ಆಕೆ ದೇಶದ ಯಶಸ್ವಿ ಮಹಿಳಾ ಬಾಡಿಬಿಲ್ಡರ್ ಆಗಿ ದೇಶಕ್ಕೆ ಪದಕವನ್ನು ತಂದ ಗೌರವಕ್ಕೆ ಪಾತ್ರಳಾಗಿದ್ದಾಳೆ.

ಆಕೆಯ ನಕಲಿ ಖಾತೆ ತೆರೆದು ಚಾರಿತ್ರ್ಯವಧೆಗೆ ಇಳಿದಿರುವವರ ಕೊಳಕು ಮನಸ್ಥಿತಿ ನಮ್ಮ ಸಮಾಜಕ್ಕೆ ಹಿಡಿದಿರುವ ಮಸಿ ಅನ್ನಬೇಕಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News