ಸರಕಾರದ ದಮನ ನೀತಿಯೆದುರು ಕಂಗಾಲಾಗುತ್ತಿರುವ ಆದಿವಾಸಿಗಳು

ಚಳವಳಿಯ ನಾಯಕತ್ವ ಹೊತ್ತಿರುವ ಒಬ್ಬೊಬ್ಬರದೇ ಬೆನ್ನುಬಿದ್ದು ದಮನಿಸಲು ನೋಡಲಾಗುತ್ತದೆ. ಮುಂಚೂಣಿಯಲ್ಲಿರುವ ಹಲವು ಆದಿವಾಸಿ ಮಹಿಳೆಯರೂ ಅರಣ್ಯಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಬ್ರಿಟಿಷರಂತೆಯೇ ಮಧ್ಯಪ್ರದೇಶ ಸರಕಾರ ಕೂಡ, ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವ ಆದಿವಾಸಿ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಇನ್ನಿಲ್ಲದ ಕಸರತ್ತುಗಳನ್ನು ಮಾಡುತ್ತಲೇ ಇದೆ ಎಂಬುದು ಹೋರಾಟದಲ್ಲಿ ಸಕ್ರಿಯರಾಗಿರುವ ಗಿರಿಜನ ನಾಯಕರ ತಕರಾರು.

Update: 2023-07-15 18:41 GMT

ಸುಕನ್ಯಾ ಶಾಂತಾ

ಮಧ್ಯಪ್ರದೇಶದಲ್ಲಿ, 1970ರ ದಶಕದಿಂದಲೂ ಅರಣ್ಯದಲ್ಲಿ ಬದುಕು ಕಂಡುಕೊಂಡಿರುವ ಬುಡಕಟ್ಟು ಸಮುದಾಯದ ಮೂರನೇ ತಲೆಮಾರನ್ನು ನಾವೀಗ ಕಾಣಬಹುದು. ಬುರ್ಹಾನ್‌ಪುರ ಜಿಲ್ಲೆಯ ಸಿವಾಲ್‌ನಲ್ಲಿ ಬರೇಲಾ, ಭಿಲಾಲ ಮತ್ತು ಭಿಲ್ ಬುಡಕಟ್ಟು ಸಮುದಾಯಗಳಿವೆ. ಅವತ್ತಿನಿಂದಲೂ ದಟ್ಟವಾದ ಮತ್ತು ಶ್ರೀಮಂತ ಸಾಗುವಾನಿ ಅರಣ್ಯ ಪ್ರದೇಶವನ್ನು ತಮ್ಮ ನೆಲೆಯನ್ನಾಗಿ ಮಾಡಿಕೊಂಡಿರುವ ಸಮುದಾಯಗಳು ಅವು. ಆದರೂ, ಅರಣ್ಯ ಹಕ್ಕುಗಳು 50 ವರ್ಷಗಳಿಂದ ಈ ಪ್ರದೇಶದಲ್ಲಿ ವಾಸಿಸುವ ಸಮುದಾಯಗಳ ಪಾಲಿಗೆ ಇಲ್ಲವಾಗುತ್ತಿವೆ. ಇನ್ನೂ ಕಳವಳಕಾರಿ ಸಂಗತಿಯೆಂದರೆ, ಅರಣ್ಯ ಮತ್ತು ಸ್ಥಳೀಯ ಆಡಳಿತಗಳು, ಅತಿಕ್ರಮಣ ಮತ್ತು ಸರಕಾರಿ ಆದೇಶಗಳ ಉದ್ದೇಶಪೂರ್ವಕ ಉಲ್ಲಂಘನೆ ಮೊದಲಾದ ಅನೇಕ ಪ್ರಕರಣಗಳನ್ನು ದಾಖಲಿಸಿ, ಗ್ರಾಮಸ್ಥರ ಮೇಲೆ ದಬ್ಬಾಳಿಕೆ ನಡೆಸಿವೆ. ತಮ್ಮ ಈ ದುರವಸ್ಥೆಯ ಬಗ್ಗೆ ಆದಿವಾಸಿ ಸಮುದಾಯದ ಮೂರನೇ ತಲೆಮಾರಿನ ಯುವಕರು ಮಾತನಾಡತೊಡಗಿದ್ದಾರೆ.

ಅವರ ವಿರುದ್ಧ ನಡೆದ ದೌರ್ಜನ್ಯಗಳ ಪಟ್ಟಿಯಲ್ಲಿ ತೀರಾ ಇತ್ತೀಚಿನದೆಂದರೆ, ಈ ಪ್ರದೇಶದಲ್ಲಿ ಸರಕಾರವನ್ನು ನಿರಂತರವಾಗಿ ಪ್ರಶ್ನಿಸುತ್ತಿರುವ ಅವರಿಗೆ ಅರಣ್ಯ ಪ್ರದೇಶಕ್ಕೆ ಪ್ರವೇಶ ನಿರಾಕರಿಸುತ್ತಿರುವುದು.

ಬುರ್ಹಾನ್‌ಪುರ ಜಿಲ್ಲೆಯ ಹೆಚ್ಚಿನ ಭಾಗವನ್ನು ಪರಿಶಿಷ್ಟ ಪ್ರದೇಶವೆಂದು ಗುರುತಿಸಲಾಗಿದ್ದರೂ, ಅಲ್ಲಿ ವಾಸಿಸುವ ಬುಡಕಟ್ಟು ಸಮುದಾಯಗಳು ದೀರ್ಘಕಾಲದಿಂದ ಅರಣ್ಯ ಹಕ್ಕುಗಳನ್ನು ಕಳೆದುಕೊಂಡಿವೆ. ಜಿಲ್ಲೆಯ ಇತರ 15 ಗ್ರಾಮಗಳ ನಿವಾಸಿಗಳೊಂದಿಗೆ ಸಿವಾಲ್ ಗ್ರಾಮಸ್ಥರು ತಮ್ಮನ್ನು ಅರಣ್ಯವಾಸಿಗಳೆಂದು ಗುರುತಿಸಬೇಕು ಮತ್ತು ಅರಣ್ಯ ಹಕ್ಕು ಕಾಯ್ದೆಯಡಿ ತಮ್ಮ ಹಕ್ಕುಗಳನ್ನು ರಕ್ಷಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. 2018ರಲ್ಲಿ ಕಾನೂನುಬದ್ಧ ಹಕ್ಕುಗಳ ಬೇಡಿಕೆಯ ಈ ಹೋರಾಟ ತೀವ್ರಗೊಂಡಿತು.

ಗ್ರಾಮಸ್ಥರು ಅರಣ್ಯದಿಂದ ತಮ್ಮನ್ನು ಹೊರಗಟ್ಟುವುದನ್ನು ವಿರೋಧಿಸಿದಾಗ ಪೆಲೆಟ್ ಗುಂಡುಗಳನ್ನು ಹಾರಿಸಲಾಯಿತು ಎಂದು, ಘಟನೆಯನ್ನು ನೆನಪಿಸಿಕೊಳ್ಳುತ್ತ ಜಾಗೃತ ಆದಿವಾಸಿ ದಲಿತ ಸಂಘಟನೆಯ ಕಾರ್ಯಕರ್ತರು ಆರೋಪಿಸುತ್ತಾರೆ. ಗುಂಡಿನ ದಾಳಿಯಲ್ಲಿ ಕನಿಷ್ಠ ನಾಲ್ವರು ಗಾಯಗೊಂಡಿದ್ದರು. ಹೆಚ್ಚಿನ ನಿವಾಸಿಗಳು ಹಲವಾರು ದಶಕಗಳಿಂದ ಅಂದರೆ ಎಫ್‌ಆರ್‌ಎ ಕಾನೂನು ಅಸ್ತಿತ್ವಕ್ಕೆ ಬರುವ ಮುಂಚಿನಿಂದಲೂ ಇಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿನ ಭೂಮಿಯನ್ನು ಉಳುಮೆ ಮಾಡಿ ಅರಣ್ಯ ಉತ್ಪನ್ನಗಳಿಂದಲೇ ಜೀವನ ನಡೆಸುತ್ತಿದ್ದಾರೆ. ಅವರು ತಮ್ಮ ಹಕ್ಕುಗಳನ್ನು ಪ್ರತಿಪಾದಿಸಲು ಪ್ರಾರಂಭಿಸಿದಾಗ, ಅರಣ್ಯಾಧಿಕಾರಿಗಳು ಬಲಪ್ರಯೋಗ ಮಾಡಿದರು ಎಂಬುದು ದಲಿತ ಸಂಘಟನೆಯ ಆರೋಪ.

ಈ ಘಟನೆ ದೂರು ಮತ್ತು ಪ್ರತಿದೂರುಗಳಿಗೆ ಕಾರಣವಾಯಿತು. ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಅರಣ್ಯ ಇಲಾಖೆ ಆದಿವಾಸಿ ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲಿಸಿದರೆ, ತಮ್ಮ ವಿರುದ್ಧ ಅತಿಯಾದ ಬಲಪ್ರಯೋಗ ಮಾಡಿದ್ದಾರೆ ಎಂದು ಗ್ರಾಮಸ್ಥರು ದೂರಿದರು. ಈ ದೂರು ಕನಿಷ್ಠ ಇಬ್ಬರು ಅರಣ್ಯಾಧಿಕಾರಿಗಳ ವರ್ಗಾವಣೆಗೆ ಕಾರಣವಾಯಿತು.

ಇದರಿಂದಾಗಿ ಅರಣ್ಯ ಇಲಾಖೆ ವ್ಯಗ್ರಗೊಂಡಿತು. ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ಹಲವು ಗ್ರಾಮಸ್ಥರ ವಿರುದ್ಧ ಅರಣ್ಯಾಧಿಕಾರಿಗಳು ಮತ್ತು ರಾಜ್ಯ ಪೊಲೀಸರು ಪ್ರಕರಣಗಳನ್ನು ದಾಖಲಿಸಿದರು. ಈ ಪ್ರಕರಣಗಳಲ್ಲಿ ಅವರ ಮೇಲೆ ಕೊಲೆ ಯತ್ನ, ಕಾನೂನುಬಾಹಿರ ಸಭೆ ಇಂಥ ಹಲವಾರು ಆರೋಪಗಳನ್ನು ಹೊರಿಸಲಾಗಿದೆ.

2019ರಿಂದ ಈ ಪ್ರದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಅನೇಕ ನಿದರ್ಶನಗಳಿವೆ. ಆಗಸ್ಟ್ ಮತ್ತು ಸೆಪ್ಟಂಬರ್ 2020ರ ಅವಧಿಯಲ್ಲಿ ಈ ಪ್ರದೇಶದ ಆದಿವಾಸಿ ಸಮುದಾಯಕ್ಕೆ ಸೇರಿದ ಹಲವಾರು ವ್ಯಕ್ತಿಗಳನ್ನು ಅರಣ್ಯಾಧಿಕಾರಿಗಳು ಸುಳ್ಳು ಆರೋಪದಡಿಯಲ್ಲಿ ವಶಕ್ಕೆ ಪಡೆದು ಕರೆದೊಯ್ದು ಚಿತ್ರಹಿಂಸೆ ನೀಡಿದ್ದಾರೆ. ಅಂತಹ ಒಂದು ಘಟನೆಯಲ್ಲಿ ಇಬ್ಬರು ಆದಿವಾಸಿ ಯುವಕರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಮೊದಲು ಕಿಟಕಿಯ ಕಂಬಿಗಳಿಗೆ ಸೇರಿಸಿ ಕೈಕೋಳ ಹಾಕಲಾಗಿತ್ತು ಮತ್ತು ರಾತ್ರಿಯಿಡೀ ಥಳಿಸಲಾಗಿತ್ತು ಎಂಬ ದೂರುಗಳಿವೆ.

ಅನೇಕ ಪ್ರಕರಣಗಳಲ್ಲಿ ಆರೋಪಿಗಳಾಗಿರುವವರು ಹೆಚ್ಚಾಗಿ ರೈತರು ಅಥವಾ ಕೃಷಿ ಕಾರ್ಮಿಕರಾಗಿದ್ದಾರೆ. ಅವರ ಪಾಲಿಗೆ, ನ್ಯಾಯಾಲಯದ ಮುಂದೆ ಹಾಜರಾಗುವುದು ಎಂದರೆ ಒಂದು ದಿನದ ಗಳಿಕೆಯನ್ನು ಕಳೆದುಕೊಳ್ಳುವುದು. ''ನಮ್ಮ ವಿಚಾರದಲ್ಲಿ ಸರಕಾರದ ಅನ್ಯಾಯದ ಧೋರಣೆ ವಿರುದ್ಧ ನಾವು ಸಂಘಟನಾತ್ಮಕ ಹೋರಾಟ ಮಾಡಲು ಸಾಕಷ್ಟು ಸಮಯ ಹಾಕಬೇಕಾಗಿದೆ. ಈಗಂತೂ ಪ್ರತೀ ವಾರ ನ್ಯಾಯಾಲಯದ ಮುಂದೆ ಹಾಜರಾಗುವುದು ನಮಗೆ ಇನ್ನಷ್ಟು ಕಷ್ಟದ್ದಾಗಿದೆ'' ಎಂಬುದು ಅವರ ಸಂಕಟ.

ಅರಣ್ಯ ಭೂಮಿಗೆ ಕಾನೂನುಬದ್ಧ ಹಕ್ಕುದಾರರಾಗಿರುವ ಗ್ರಾಮಸ್ಥರ ಬೇಡಿಕೆಯನ್ನು ಇಕ್ಕಟ್ಟಿಗೆ ಸಿಲುಕಿಸಿರುವ ಸಂಕೀರ್ಣ ಸಂದರ್ಭ ಏನೆಂದರೆ, ಮರಗಳನ್ನು ಕಡಿಯಲಾಗುತ್ತಿದೆ ಎಂಬ ಸರಕಾರದ ಆರೋಪ. ಕಳೆದ ಒಂದು ದಶಕದಲ್ಲಿ ಈ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಅರಣ್ಯನಾಶ ನಡೆದಿದೆ.

ಆದರೆ, ಅರಣ್ಯ ಪ್ರದೇಶವನ್ನು ದೊಡ್ಡ ಪ್ರಮಾಣದಲ್ಲಿ ನಾಶಪಡಿಸುವ ಬಗ್ಗೆ ಅರಣ್ಯ ಮತ್ತು ಜಿಲ್ಲಾಡಳಿತಕ್ಕೆ ಆದಿವಾಸಿ ಸಮುದಾಯ ದೂರುತ್ತಲೇ ಇದೆ. ಆ ಪ್ರದೇಶದಲ್ಲಿರುವುದು ಸಾಗುವಾನಿ ಮರಗಳು. ಕೋಟ್ಯಂತರ ಬೆಲೆಬಾಳುತ್ತವೆ. ಅರಣ್ಯ ಪ್ರದೇಶವನ್ನು ನಾಶಪಡಿಸುವ ಕ್ರಿಮಿನಲ್ ಕೃತ್ಯದಲ್ಲಿ ಸಮೀಪದ ಗ್ರಾಮಗಳ ಕೆಲವರು ತೊಡಗಿಕೊಂಡಿರುವ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಸಂಬಂಧಪಟ್ಟವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಆದಿವಾಸಿಗಳ ಆಕ್ಷೇಪ.

ವಿಪರ್ಯಾಸವೆಂದರೆ, ಮರಗಳನ್ನು ಕಡಿಯುವಲ್ಲಿ ತೊಡಗಿರುವವರು ಕೂಡ ಬುಡಕಟ್ಟು ಸಮುದಾಯಕ್ಕೆ ಸೇರಿದವರು. ಇದು, ಆದಿವಾಸಿ ಸಮುದಾಯಗಳ ಅನೇಕರು ಭೂಮಿಯ ಮೇಲೆ ಪಾಲನ್ನು ಪಡೆಯಲು ಮಾಡುತ್ತಿರುವ ಹತಾಶ ಪ್ರಯತ್ನ ಎಂಬುದನ್ನು ಆದಿವಾಸಿ ಸಮುದಾಯದ ಹೋರಾಟಗಾರರು ಹೇಳುತ್ತಾರೆ. ಸರಕಾರ ಈ ಪ್ರದೇಶದಲ್ಲಿ ಎಫ್‌ಆರ್‌ಎ ಕಾಯ್ದೆಯನ್ನು ಅನುಷ್ಠಾನಗೊಳಿಸುವ ಬಗ್ಗೆ ಗಂಭೀರವಾಗಿರುತ್ತಿದ್ದರೆ ಅರಣ್ಯ ನಾಶವನ್ನು ನಿಯಂತ್ರಣಕ್ಕೆ ತರಬಹುದಿತ್ತು ಎಂಬುದು ಅವರ ಅಭಿಪ್ರಾಯ.

ಅಕ್ಟೋಬರ್ 2022ರಿಂದ ಈ ಪ್ರದೇಶ 15,000 ಎಕರೆಗಳಷ್ಟು ಅರಣ್ಯವನ್ನು ಕಳೆದುಕೊಂಡಿದೆ ಎಂಬ ಆರೋಪಗಳಿವೆ. ಅರಣ್ಯ ಮತ್ತು ಸರಕಾರದ ಇತರ ಸಂಸ್ಥೆಗಳ ಸಹಕಾರವಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ ಎಂದೂ ಹೇಳಲಾಗುತ್ತಿದೆ.

ಎಪ್ರಿಲ್‌ನಲ್ಲಿ, ಬುಡಕಟ್ಟು ಸಮುದಾಯಗಳಿಗೆ ಸೇರಿದ ಸಾವಿರಕ್ಕೂ ಹೆಚ್ಚು ಮಹಿಳೆಯರು ಮತ್ತು ಪುರುಷರು ಮಧ್ಯಪ್ರದೇಶ ಸರಕಾರ ವ್ಯಾಪಕ ಮತ್ತು ಅಕ್ರಮ ಮರಗಳ್ಳತನಕ್ಕೆ ನೀಡಿದ ಮೌನ ಬೆಂಬಲದ ವಿರುದ್ಧ ಮೂರು ದಿನಗಳ ಪ್ರತಿಭಟನೆ ನಡೆಸಿದರು, ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮರ ಕಡಿಯುವುದು ರಾಜ್ಯ ಸರಕಾರದ ಪರೋಕ್ಷ ಬೆಂಬಲವಿಲ್ಲದೆ ಅಸಾಧ್ಯ ಎಂಬುದು ಅವರ ಆರೋಪವಾಗಿತ್ತು.

ಅಧಿಕಾರಿಗಳು ಗ್ರಾಮಸ್ಥರ ಬೇಡಿಕೆಗಳಿಗೆ ಮಣಿಯದಿದ್ದರೂ, ಅವರ ಪರವಾಗಿರುವವರು ಆರೋಪಿಸುವ ಪ್ರಕಾರ, ಅರಣ್ಯ ಮತ್ತು ರಾಜ್ಯಾಡಳಿತ ಅನೇಕ ಅರ್ಹ ಎಫ್‌ಆರ್‌ಎ ಹಕ್ಕುದಾರರನ್ನು ಅಕ್ರಮವಾಗಿ ಹೊರಹಾಕುತ್ತಿದೆ. ಜಿಲ್ಲೆಯಲ್ಲಿ 10,000 ಎಫ್‌ಆರ್‌ಎ ಹಕ್ಕುದಾರಿಕೆ ಅರ್ಜಿಗಳು ಬಾಕಿ ಉಳಿದಿವೆ. ಅವುಗಳಲ್ಲಿ ಕೆಲವು ಬಲವಂತದಿಂದ ಹೊರಹಾಕಲ್ಪಟ್ಟವರಿಗೆ ಸೇರಿದೆ ಎಂಬುದು ಗ್ರಾಮಸ್ಥರ ಆರೋಪ.

ಪ್ರತಿಬಾರಿ ಪ್ರತಿಭಟನೆಗೆ ನಿಂತಾಗಲೂ ರಾಜ್ಯ ಸರಕಾರದ ದಬ್ಬಾಳಿಕೆಯನ್ನು ಎದುರಿಸಬೇಕಾಗಿದೆ ಎಂಬುದು ಹೋರಾಟದಲ್ಲಿ ತೊಡಗಿರುವವರ ಆರೋಪ.

ಜಿಲ್ಲೆಯಲ್ಲಿ ಸಮುದಾಯ ಮತ್ತು ಆಂದೋಲನಗಳನ್ನು ಸಂಘಟಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಪ್ರಮುಖರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಒಂದರ ಬೆನ್ನಲ್ಲೊಂದು ಎಂಬಂತೆ ಪ್ರಕರಣಗಳಲ್ಲಿ ಸಿಲುಕಿಸಲಾಗುತ್ತದೆ. ಸಾಮಾನ್ಯವಾಗಿ ಕಾನೂನುಬಾಹಿರವಾಗಿ ಜನರನ್ನು ಸೇರಿಸಿದ್ದಾರೆ ಎಂಬಂಥ ಆರೋಪಗಳನ್ನು ಇಂಥವರ ಮೇಲೆ ಹೊರಿಸಲಾಗುತ್ತದೆ.

ಇವೆಲ್ಲವೂ ಚಳವಳಿಯನ್ನು ಮುರಿಯಲು ಸರಕಾರದ ತಂತ್ರದ ಭಾಗ ಎಂಬುದು ಇಲ್ಲಿನ ಮಾನವ ಹಕ್ಕುಗಳ ಕಾರ್ಯಕರ್ತರ ಆಪಾದನೆ. ಚಳವಳಿಯ ನಾಯಕತ್ವ ಹೊತ್ತಿರುವ ಒಬ್ಬೊಬ್ಬರದೇ ಬೆನ್ನುಬಿದ್ದು ದಮನಿಸಲು ನೋಡಲಾಗುತ್ತದೆ. ಮುಂಚೂಣಿಯಲ್ಲಿರುವ ಹಲವು ಆದಿವಾಸಿ ಮಹಿಳೆಯರೂ ಅರಣ್ಯಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಬ್ರಿಟಿಷರಂತೆಯೇ ಮಧ್ಯಪ್ರದೇಶ ಸರಕಾರ ಕೂಡ, ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವ ಆದಿವಾಸಿ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಇನ್ನಿಲ್ಲದ ಕಸರತ್ತುಗಳನ್ನು ಮಾಡುತ್ತಲೇ ಇದೆ ಎಂಬುದು ಹೋರಾಟದಲ್ಲಿ ಸಕ್ರಿಯರಾಗಿರುವ ಆದಿವಾಸಿ ನಾಯಕರ ತಕರಾರು.

(ಕೃಪೆ:

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News