ಉದ್ಯೋಗ, ನ್ಯಾಯ ಮತ್ತು ಸ್ಮಾರ್ಟ್ ಸಿಟಿ: 9 ವರ್ಷಗಳ ಹಿಂದಿನ ಬಿಜೆಪಿ ಭರವಸೆಗಳು ಏನಾದವು?

Update: 2023-07-10 10:35 GMT

- ಇತಿ ದೇವಾಂಗನ್, ಮರ್ವಿನ್ ಪ್ರೀತಿ

2014ರಲ್ಲಿ ಬಿಜೆಪಿ ಜನರ ಎದುರು ಇಟ್ಟ ಪ್ರಣಾಳಿಕೆ ಹೇಗಿತ್ತೆಂದರೆ, ಅದು ಈ ದೇಶದ ಎಲ್ಲರನ್ನೂ ಆಕರ್ಷಿಸಿಬಿಟ್ಟಿತ್ತು. ಅದರಲ್ಲೊಂದು ಎಲ್ಲರಿಗೂ ತ್ವರಿತ ನ್ಯಾಯದ ಭರವಸೆ. ಆದರೆ ಈಗೇನಾಗುತ್ತಿದೆ? ಇತ್ತೀಚಿನ ವಿದ್ಯಮಾನಗಳನ್ನೇ ನೋಡಿದರೆ, ಲೈಂಗಿಕ ಕಿರುಕುಳಕ್ಕಾಗಿ ಪ್ರತಿಭಟಿಸಿದ ಕುಸ್ತಿಪಟುಗಳನ್ನೇ ದೂಷಿಸಲಾಯಿತು. ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭ ಒನ್ ಮ್ಯಾನ್ ಶೋ ಆಗಿತ್ತು. ಇಂಥ ಹಲವು ಘಟನೆಗಳಿವೆ. ಇವನ್ನೆಲ್ಲ ಗಮನಿಸಿದಾಗ, ಅಧಿಕಾರಕ್ಕೆ ಬರುವಾಗ ನೀಡಿದ್ದ ಭರವಸೆಗಳನ್ನು ಬಿಜೆಪಿ ಈಡೇರಿಸುವಲ್ಲಿ ವಿಫಲ ವಾಗಿದೆ ಎಂಬುದು ದೇಶಕ್ಕೇ ಕಾಣಿಸುತ್ತಿದೆ. ಎಲ್ಲರಿಗೂ ನ್ಯಾಯ ಎಂಬುದು ಪ್ರಾಮಾಣಿಕ ಉದ್ದೇಶವಾಗಿದ್ದುದಕ್ಕಿಂತ ಹೆಚ್ಚಾಗಿ, ಜನಸಾಮಾನ್ಯರನ್ನು ಮೆಚ್ಚಿಸಲು ಬಿಜೆಪಿ ಈ ವಿಚಾರವನ್ನು ಮುಂದೆ ಮಾಡಿತ್ತು ಎಂದೇ ಅನ್ನಿಸುತ್ತದೆ. ಹಾಗಾದರೆ ಬಿಜೆಪಿ ಭರವಸೆಗಳು ಏನಾದವು?

ಉದ್ಯೋಗ

ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ದೇಶದ ಆರ್ಥಿಕ ಬೆಳ ವಣಿಗೆ ಮತ್ತು ಸಾಮಾಜಿಕ ಸ್ಥಿರತೆಗೆ ನಿರ್ಣಾಯಕ. ಕೋಟಿಗಟ್ಟಲೆ ಉದ್ಯೋಗಗಳ ಭರವಸೆ ನೀಡಲಾಗಿತ್ತು. ಯುವಕರು ಉದ್ಯೋಗಾವ ಕಾಶಗಳ ಬಗ್ಗೆ ತಿಳಿಯಲು ಇರುವ ಉದ್ಯೋಗ ವಿನಿಮಯ ಕೇಂದ್ರಗಳನ್ನು ವೃತ್ತಿ ಕೇಂದ್ರಗಳನ್ನಾಗಿ ಪರಿವರ್ತಿಸುವ ಭರವಸೆಯನ್ನೂ ಬಿಜೆಪಿ ಕೊಟ್ಟಿತ್ತು. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಗೂ ಒತ್ತು ನೀಡುವ ಮಾತನ್ನಾಡಿತ್ತು.

ಕೋಟಿ ಕೋಟಿ ಉದ್ಯೋಗಗಳ ಆಶ್ವಾಸನೆ ಅಲ್ಲೇ ಉಳಿದಿದೆ. ಹಾಗೆ ಹೇಳಿಕೊಂಡು ಅಧಿಕಾರಕ್ಕೆ ಬಂದವರು ಒಂಭತ್ತು ವರ್ಷದಿಂದಲೂ ಕಥೆ ಹೇಳುತ್ತಲೇ ಇದ್ದಾರೆ. ಹೊಸ ಉದ್ಯೋಗಗಳನ್ನು ಸೃಷ್ಟಿಸುವ ವಿಚಾರ ಹಾಗಿರಲಿ, ಇರುವ ಉದ್ಯೋಗಗಳೂ ಇಲ್ಲವಾಗಿವೆ. ಉನ್ನತ ಪದವಿ ಪಡೆದ ಯುವಕರು ಕೂಲಿ ಕೆಲಸಕ್ಕೆ, ಡ್ರೈವರ್ ಕೆಲಸಕ್ಕೆ ಅರ್ಜಿ ಹಾಕುತ್ತಿರುವ, ಟೀ ಪಕೋಡ ಅಂಗಡಿ ಇಡುವ ಕಟು ವಾಸ್ತವವನ್ನು ಈ ದೇಶ ನೋಡಬೇಕಾಗಿದೆ. ಉದ್ಯೋಗ ಕೇಳಿದರೆ, ಪಕೋಡ ಮಾರಬಹುದಲ್ಲವೆ? ಅದನ್ನೂ ಉದ್ಯೋಗ ಎನ್ನುತ್ತೇವಲ್ಲವೆ? ಎಂದು ಪ್ರಧಾನಿಯೇ ಹೇಳುತ್ತಾರೆ.

ಪಕೋಡ ಮಾರಬಹುದಲ್ಲವೆ? ಎಂಬ ಪ್ರಧಾನಿ ಹೇಳಿಕೆಯ ಬಳಿಕ ಫೆಬ್ರವರಿ 2018ರಲ್ಲಿ ವೃತ್ತಿಪರ ಪದವಿ ಹೊಂದಿರುವವರ ಗುಂಪು ಲಕ್ನೊದಲ್ಲಿ ಅಚ್ಛೇ ದಿನ್ ಪಕೋಡಾ ಅಂಗಡಿ ಇಡುವ ಮೂಲಕ ವಿಭಿನ್ನ ಪ್ರತಿಭಟನೆಯನ್ನೂ ನಡೆಸಿದ್ದು ವರದಿಯಾಗಿತ್ತು.

ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಈಚೆಗೆ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಭಾರತದ ನಿರುದ್ಯೋಗ ದರ ಏರುತ್ತಲೇ ಇದೆ.

ಯುವಕರನ್ನು ಹೇಗಾದರೂ ಮಾಡಿ ಭ್ರಮೆಯಲ್ಲಿಯೇ ಇರಿಸುವ ಹುನ್ನಾರವೊಂದು ಹಲವು ಸೋಗುಗಳಲ್ಲಿ ನಡೆದೇ ಇದೆ. ಒಂದೋ ಕೋಮುದ್ವೇಷದ ರಾಜಕಾರಣಕ್ಕೆ ಅಥವಾ ಕಾರ್ಮಿಕರನ್ನು ಹಾಗೂ ಗ್ರಾಹಕರನ್ನು ಸುಲಿಯುವ ಕಾರ್ಪೊರೇಟ್ ಕಂಪೆನಿಗಳಿಗೆ ದೇಶದ ಯುವಕರು ದಾಳವಾಗಿಬಿಟ್ಟಿದ್ದಾರೆ.

2017-18ರಲ್ಲಿ ನಿರುದ್ಯೋಗ 45 ವರ್ಷಗಳ ಗರಿಷ್ಠ ಮಟ್ಟ ಮುಟ್ಟಿದ್ದನ್ನು ಸರಕಾರದ ಅಂಕಿಅಂಶಗಳೇ ತೋರಿಸಿವೆ. 2019ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಸೋರಿಕೆಯಾದ ವರದಿಯ ಭಾಗವಾಗಿ ಈ ಡೇಟಾ ಪ್ರಕಟವಾಗಿತ್ತು.

ನೊಯ್ಡಾದ ಲೇಬರ್ ಚೌಕ್ನಲ್ಲಿ ಕಾರ್ಮಿಕರೊಬ್ಬರು, ಐಟಿ (ಇಲೆಕ್ಟ್ರಿಕಲ್) ಪದವಿ ಹೊಂದಿದ್ದರೂ ಸಂಬಳದ ಕೆಲಸ ಹುಡುಕಲು ಸಾಧ್ಯವಾಗುತ್ತಿಲ್ಲ ಎಂದು ಜನವರಿ 2022ರಲ್ಲಿ ಹೇಳಿದ್ದನ್ನು ‘ದಿ ವೈರ್’ ವರದಿ ಮಾಡಿತ್ತು.

ಈ ವರ್ಷದ ಮೇ ತಿಂಗಳಲ್ಲಿ, ಭಾರತೀಯ ಆರ್ಥಿಕತೆಯ ಮಾನಿಟರಿಂಗ್ ಕೇಂದ್ರದ ಮುಖ್ಯಸ್ಥ ಮಹೇಶ್ ವ್ಯಾಸ್ ಭಾರತದ ಉದ್ಯೋಗಿ ಗಳ ಸಂಖ್ಯೆ ಏರಿಕೆಯಾಗುತ್ತಿಲ್ಲ. ಉದ್ಯೋಗಗಳ ಗುಣಮಟ್ಟ ತುಂಬಾ ಕಡಿಮೆಯಾಗಿದೆ ಎಂದು ಹೇಳಿದ್ದನ್ನೂ ‘ದಿ ವೈರ್’ ವರದಿ ಮಾಡಿತ್ತು.

2017ರಿಂದಲೂ ದೇಶದಲ್ಲಿ ನಿರುದ್ಯೋಗ ಸನ್ನಿವೇಶ ಕಾಡುತ್ತಿದೆ. ಜನರು ತೀವ್ರ ಕಳವಳ ವ್ಯಕ್ತಪಡಿಸುತ್ತಲೇ ಇದ್ದಾರೆ.

ಇನ್ನು ಗ್ರಾಮೀಣ ಉದ್ಯೋಗದ ವಿಷಯದಲ್ಲಿ, ಮಹಾತ್ಮ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ ಯೋಜನೆಗಾಗಿ 2023ರ ಕೇಂದ್ರ ಬಜೆಟ್ ಅನ್ನು ಗಮನಿಸಿದರೆ, ಅದಕ್ಕಿರುವ ಅನುದಾನವನ್ನು ತೀವ್ರವಾಗಿ ಕಡಿತಗೊಳಿಸಲಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಗಳು ಹೆಚ್ಚಿದ್ದರೂ, ಇತ್ತೀಚಿನ ದಿನಗಳಲ್ಲಿ ಉತ್ತಮ ಗುಣಮಟ್ಟದ ಉದ್ಯೋಗ ಆಯ್ಕೆಗಳ ಕೊರತೆ ಯಿದೆ. ಹಿಂದೂ ಬ್ಯುಸಿನೆಸ್ಲೈನ್ನ ಪ್ರಕಾರ, ಗ್ರಾಮೀಣ ಭಾರತದಲ್ಲಿ ಕಡಿಮೆ ಸಂಬಳದ ಕೆಲಸಗಳು ಹೆಚ್ಚಾಗಿರಬಹುದು.

ಸ್ಮಾರ್ಟ್ ಸಿಟಿಗಳು

ಜೂನ್ 2015ರಲ್ಲಿ ಪ್ರಾರಂಭವಾದ ಸ್ಮಾರ್ಟ್ ಸಿಟಿ ಮಿಷನ್ ಅಡಿಯಲ್ಲಿ, ಸರಕಾರ ಸ್ಪರ್ಧಾತ್ಮಕ ಪ್ರಕ್ರಿಯೆಯ ಮೂಲಕ 100 ನಗರಗಳನ್ನು ಆಯ್ಕೆ ಮಾಡಿತು. ಇದರಲ್ಲಿ ಪ್ರತೀ ರಾಜ್ಯ ನಿರ್ದಿಷ್ಟ ಮಾನದಂಡಗಳ ಆಧಾರದ ಮೇಲೆ ನಿರ್ದಿಷ್ಟ ಸಂಖ್ಯೆಯ ನಗರಗಳನ್ನು ನಾಮ ನಿರ್ದೇಶನ ಮಾಡಿದೆ.

ಜೀವನ ಗುಣಮಟ್ಟ, ನೈರ್ಮಲ್ಯ, ಸಾರಿಗೆ, ವಿದ್ಯುತ್ ಸರಬರಾಜು, ಕೈಗೆಟಕುವ ವಸತಿ, ಡಿಜಿಟಲೀಕರಣ, ಸುಸ್ಥಿರ ಪರಿಸರ ಮತ್ತು ಉತ್ತಮ ಆಡಳಿತದಂತಹ ಹಲವಾರು ಮೂಲಭೂತ ಸೌಲಭ್ಯಗಳನ್ನು ಹೆಚ್ಚಿಸಲು 100 ನಗರಗಳನ್ನು ಆಯ್ಕೆ ಮಾಡಲಾಗಿದೆ.

ಆದರೆ ಸ್ಮಾರ್ಟ್ ಸಿಟಿ ಮಿಷನ್ ಮೊದಲಿನಿಂದಲೂ ಸಂಪೂರ್ಣ ವಾಗಿ ಹೊಸ ನಗರಗಳನ್ನು ಅಭಿವೃದ್ಧಿಪಡಿಸುವುದನ್ನು ಒಳಗೊಂಡಿಲ್ಲ ಎಂಬುದನ್ನು ಗಮನಿಸಬೇಕು. ಬದಲಿಗೆ, ಇದು ಅಸ್ತಿತ್ವದಲ್ಲಿರುವ ನಗರಗಳನ್ನು ಪರಿವರ್ತಿಸಲು ಮತ್ತು ಅವುಗಳ ಮೂಲಸೌಕರ್ಯ, ಸೇವೆಗಳು ಮತ್ತು ಒಟ್ಟಾರೆ ಜೀವನಸಾಧ್ಯತೆಯನ್ನು ಸುಧಾರಿಸುವ ಗುರಿಯನ್ನಷ್ಟೇ ಹೊಂದಿದೆ. ಉದಾಹರಣೆಗೆ ದಿಲ್ಲಿ, ಪುಣೆ ಮತ್ತು ಉದಯಪುರ ಈಗಾಗಲೇ ನಗರಗಳಾಗಿವೆ. ಅವನ್ನು ಸ್ಮಾರ್ಟ್ ಮಾಡುವುದೆಂದರೇನು? ಸರಕಾರದ ಪ್ರಕಾರ ‘ಸ್ಮಾರ್ಟ್’ ವ್ಯಾಖ್ಯಾನ ಇನ್ನೂ ಅಸ್ಪಷ್ಟವಾಗಿದೆ.

ಇನ್ನು ಇವುಗಳಿಗೆ ಸಂಬಂಧಿಸಿದ ಕೆಲಸದ ವಿಚಾರವನ್ನು ಗಮನಿಸಿ ದರೂ, ಕೆಲವು ಯೋಜನೆಗಳು ಪ್ರಗತಿಯಲ್ಲಿದ್ದರೆ, ಇನ್ನೂ ಕೆಲವು ಆಗಲೇ ಸ್ಥಗಿತಗೊಂಡಿವೆ. 2021ರಲ್ಲಿ ಕೋವಿಡ್ ಕಾರಣದಿಂದಾಗಿ ಯೋಜನೆಗಳನ್ನು ಪೂರ್ಣಗೊಳಿಸುವಲ್ಲಿ ವಿಳಂಬವಾದ ಕಾರಣ, ಮಿಷನ್ ಅನ್ನು ಜೂನ್ 30, 2023ರವರೆಗೆ ವಿಸ್ತರಿಸಲಾಗಿತ್ತು. ಇದು ಮತ್ತೆ ಜೂನ್ 2024ರವರೆಗೆ ವಿಸ್ತರಣೆಗೊಂಡಿದೆ. ಆದರೆ, 100 ನಗರಗಳಲ್ಲಿ ಸುಮಾರು 20 ನಗರಗಳು ಮಾತ್ರ ಮುಂದಿನ ಜೂನ್ ಗಡುವನ್ನು ಪೂರೈಸಲು ಸಾಧ್ಯ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಡೆಹ್ರಾಡೂನ್ ಸ್ಮಾರ್ಟ್ ಸಿಟಿ ಮಿಷನ್ - 2015 ಮತ್ತು 2022ರ ನಡುವೆ ಉತ್ತರಾಖಂಡ ನಗರವನ್ನು ಪರಿವರ್ತಿಸಲು 1,400 ಕೋಟಿ ರೂ.ಗಳನ್ನು ನಿಯೋಜಿಸಲಾಗಿದೆ. ಆದರೆ ತ್ಯಾಜ್ಯವನ್ನು ನಿರ್ವಹಿಸುವ ನಗರದ ಸಾಮರ್ಥ್ಯ, ವೇಗವಾಗಿ ಹೆಚ್ಚುತ್ತಿರುವ ನಗರ ಜನಸಂಖ್ಯೆ ಮತ್ತು ಕೊಳೆಗೇರಿಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಪರಿಸರವಾದಿಗಳು, ತಜ್ಞರು ಮತ್ತು ಇತಿಹಾಸಕಾರರು ಹೇಳುತ್ತಾರೆ.

ನಗರದ ಹೊರವಲಯದಲ್ಲಿ ಒಂದು ಕಾಲದಲ್ಲಿ ಪ್ರಸಿದ್ಧ ಬಾಸ್ಮತಿ ಭತ್ತದ ಕೃಷಿಯ ಮೂಲವಾಗಿದ್ದ ನಗರದ ಸಿಹಿನೀರಿನ ತೊರೆಗಳು ಕಣ್ಮರೆಯಾಗಿವೆ ಎಂದು ಫೆಬ್ರವರಿಯಲ್ಲಿ ‘ದಿ ವೈರ್’ ವರದಿ ಮಾಡಿತ್ತು. ಅದಕ್ಕೆ ಪೂರಕವಾಗಿ ನಗರದಲ್ಲಿ ಕ್ರಿಯಾಶೀಲ ಮಾಸ್ಟರ್ ಪ್ಲ್ಯಾನ್ ಇಲ್ಲ. ನಗರದಲ್ಲಿ ಜೀವಂತವಾಗಿರುವ ಏಕೈಕ ಉದ್ಯಮವೆಂದರೆ ರಿಯಲ್ ಎಸ್ಟೇಟ್ ಕ್ಷೇತ್ರ.

ಸ್ಮಾರ್ಟ್ ಸಿಟಿಗೆ ಸರಿಯಾದ ಒಳಚರಂಡಿ ವ್ಯವಸ್ಥೆ, ಪರಿಣಾಮಕಾರಿ ಆಡಳಿತ, ಉತ್ತಮ ಗಾಳಿ, ಯೋಗ್ಯ ಪ್ರಯಾಣದ ಸಮಯ ಇತ್ಯಾದಿಗಳ ಅಗತ್ಯವಿದೆ. ಆದರೆ ಬಿಜೆಪಿಯವರಿಗೆ ಮಾತ್ರ ‘ಸ್ಮಾರ್ಟ್’ ಕಲ್ಪನೆ ಧಾರ್ಮಿಕ ಪ್ರವಾಸೋದ್ಯಮ, ರಿಯಲ್ ಎಸ್ಟೇಟ್, ತಂತ್ರಜ್ಞಾನ ಮತ್ತು ಲಭ್ಯವಿರುವ ಸಂಪನ್ಮೂಲಗಳನ್ನು ಲೆಕ್ಕಿಸದೆ ನಗರದ ಮೂಲ ಸೌಕರ್ಯವನ್ನು ಉತ್ತೇಜಿಸುವುದು ಎಂಬಂತಾಗಿದೆ.

ಬೆಲೆ ಏರಿಕೆ

2014ರ ಪ್ರಣಾಳಿಕೆಯಲ್ಲಿ ಹೆಚ್ಚಿನ ಹಣದುಬ್ಬರ ಮತ್ತು ಬಡ್ಡಿದರವನ್ನು ನಿಯಂತ್ರಿಸುವ ಮಾತನ್ನು ಬಿಜೆಪಿ ಹೇಳಿತ್ತು. ಆದರೆ ಆದದ್ದೇನು? ಚಿಲ್ಲರೆ ಹಣದುಬ್ಬರ ಎಪ್ರಿಲ್ 2022ರಲ್ಲಿ ಎಂಟು ವರ್ಷಗಳ ಗರಿಷ್ಠ ಪ್ರಮಾಣ ಶೇ.7.8ಕ್ಕೆ ತಲುಪಿತು ಮತ್ತು ಸಗಟು ಹಣದುಬ್ಬರ ಅದೇ ಸಮಯದಲ್ಲಿ ಒಂಭತ್ತು ವರ್ಷಗಳ ಗರಿಷ್ಠ ಪ್ರಮಾಣ ಶೇ.15.08ಕ್ಕೆ ಏರಿತು. ವಾಸ್ತವವಾಗಿ, ಚಿಲ್ಲರೆ ಹಣದುಬ್ಬರ 2023ರಲ್ಲಿ ಸ್ವಲ್ಪಸಮಯ ಆರ್ಬಿಐ ನಿಗದಿಗೊಳಿಸಿರುವ ಶೇ.6ಕ್ಕಿಂತ ಹೆಚ್ಚಾಗಿತ್ತು.

ಸರಳವಾಗಿ ಹೇಳಬೇಕೆಂದರೆ, ಪ್ರತಿಯೊಬ್ಬರೂ (ಶ್ರೀಮಂತ ರನ್ನು ಹೊರತುಪಡಿಸಿ) ಅಗತ್ಯ ವಸ್ತುಗಳ ಖರೀದಿಯಲ್ಲಿ ಬೆಲೆ ಏರಿಕೆಯ ಬಿಸಿಯನ್ನು ಅನುಭವಿಸುತ್ತಿರುವುದಂತೂ ನಿಜ. ನಿರಂತರವಾದ ಹೆಚ್ಚಿನ ಹಣದುಬ್ಬರ 2023ರ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಕುಟುಂಬದ ಆರ್ಥಿಕ ಉಳಿತಾಯ ವನ್ನು 30 ವರ್ಷಗಳ ಹಿಂದಿನ ಸ್ಥಿತಿಗೆ ತಳ್ಳಿದೆ.

ಅಗತ್ಯ ವಸ್ತುಗಳ ಬೆಲೆ ಏರಿಕೆಯ ಹೊರತಾಗಿಯೂ, ಜನರು ಇನ್ನೂ ತಾವು ಕಷ್ಟಪಟ್ಟು ಚೂರುಪಾರು ಉಳಿಸಿದ್ದನ್ನೇ ಬಳಸಿಕೊಂಡು ಅವುಗಳನ್ನು ಖರೀದಿಸುತ್ತಿದ್ದಾರೆ. ಆದರೂ ಪ್ರತಿಯೊಬ್ಬರೂ

ಹೆಚ್ಚಿನ ಬೆಲೆಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಸಾಧ್ಯವಿಲ್ಲ.

ಕುಕೀ ಬೇಡಿಕೆ ಬೆಳೆದಿದ್ದರೂ, ಬಿಸ್ಕತ್ತು ಮಾರಾಟ ನಿಧಾನ ಗೊಂಡಿದೆ. ದ್ವಿಚಕ್ರ ವಾಹನಗಳ ಮಾರಾಟ ನಿಧಾನಗತಿಯಲ್ಲಿ ಸಾಗುತ್ತಿದ್ದರೂ, ಐಷಾರಾಮಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಶ್ರೀಮಂತರು ನಿರಾಳವಾಗಿಯೇ ಇದ್ದಾರೆ ಮತ್ತು ಜನಸಾಮಾನ್ಯರು ಹೈರಾಣಾಗುತ್ತಿದ್ದಾರೆ ಎಂಬುದನ್ನೇ ಇದು ತೋರಿಸುತ್ತದೆ. ಮೋದಿ ಅವಧಿಯಲ್ಲಿ ಅಸಮಾನತೆ ಮತ್ತು ಬಡತನ ಹೆಚ್ಚಿದೆ ಎಂಬುದನ್ನು ಹಲವಾರು ವರದಿಗಳು ಸೂಚಿಸುತ್ತವೆ.

ಸ್ಮಾರ್ಟ್ ಸಿಟೀಸ್ ಮಿಷನ್ ಪ್ರಾರಂಭಿಸುವಾಗ ಪ್ರಧಾನಿ ಮೋದಿ, ಬಡತನವನ್ನು ತಗ್ಗಿಸುವ ಸಾಮರ್ಥ್ಯ ಏನಾದರೂ ಇದ್ದರೆ ಅದು ನಮ್ಮ ನಗರಗಳಿಗೆ ಎಂದು ಹೇಳಿದ್ದರು. ನಗರ ಪ್ರದೇಶದ ಬಡವರಿಗೆ ಕೈಗೆಟಕುವ ದರದಲ್ಲಿ ಮನೆ ಸೇರಿದಂತೆ ಜನರಿಗೆ ಮೂಲಭೂತ ಸೇವೆಗಳ ಪ್ರವೇಶವನ್ನು ಖಚಿತಪಡಿಸುವುದು ಮಿಷನ್ ಗುರಿಯಾಗಿದೆ ಎಂದಿದ್ದರು. ಆದರೆ ವಾಸ್ತವದಲ್ಲಿ ಮಾತ್ರ, ಈ ಮಿಷನ್ ಬಡವರನ್ನು ಪೂರ್ತಿ ನಿರ್ಲಕ್ಷಿಸಿದೆ ಎಂಬುದನ್ನು ಹಲವಾರು ವರದಿಗಳು ಎತ್ತಿ ತೋರಿಸಿವೆ.

ಆದ್ದರಿಂದ ಸ್ಮಾರ್ಟ್ ಸಿಟಿ ಮಿಷನ್, ಗುರುತಿಸಲಾದ ಪ್ರದೇಶ ಗಳನ್ನು ಮಾತ್ರ ಸುಂದರಗೊಳಿಸುತ್ತದೆಯೇ ಅಥವಾ ಬಡವರಿಗೆ ಮೂಲ ಸೌಕರ್ಯಗಳನ್ನು ನೀಡುವ ಮೂಲಕ ಅವರ ಬದುಕಿನ ಬಗ್ಗೆಯೂ ಕೊಂಚ ಗಮನ ಹರಿಸುತ್ತದೆಯೇ? ಎಂದು ಕೇಳಬೇಕಾಗಿದೆ.

ಬಿಜೆಪಿಯ ಪ್ರಣಾಳಿಕೆಯಲ್ಲಿ ಹೇಳಿದ್ದ, ಸ್ಮಾರ್ಟ್ ಸಿಟಿಗಳು ಮುಂದಿನ 10 ವರ್ಷಗಳಲ್ಲಿ 250 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸಬಹುದೆಂಬ ಮಾತು ಅಲ್ಲಿಯೇ ಉಳಿದುಬಿಟ್ಟಿದೆ. ಏನಾಗಿದೆ ಎಂಬುದು ನಮ್ಮ ಕಣ್ಣೆದುರೇ ಇದೆ.

ನಮಾಮಿ ಗಂಗೆ

‘ನಮಾಮಿ ಗಂಗೆ’ ಕಾರ್ಯಕ್ರಮವನ್ನು ಬಿಜೆಪಿ ಸರಕಾರ ಜೂನ್ 2014ರಲ್ಲಿ ಪ್ರಾರಂಭಿಸಿತು. ಮಾಲಿನ್ಯವನ್ನು ತಗ್ಗಿಸುವುದು ಮತ್ತು ರಾಷ್ಟ್ರೀಯ ನದಿಯನ್ನು ಪುನರುಜ್ಜೀವನಗೊಳಿಸುವುದು ಇದರ ಉದ್ದೇಶವಾಗಿತ್ತು. ರೂ. 20,000 ಕೋಟಿ ಬಜೆಟ್ನೊಂದಿಗೆ, ಗಂಗಾ ಶುದ್ಧೀಕರಣಕ್ಕಾಗಿ ರಾಷ್ಟ್ರೀಯ ಮಿಷನ್ ಅನ್ನು ಮೂರು ಹಂತಗಳಲ್ಲಿ ಜಾರಿಗೆ ತರಲು ಯೋಜಿಸಲಾಗಿತ್ತು.

ನಮಾಮಿ ಗಂಗೆ ಯೋಜನೆ ಕೊಳಚೆನೀರು ಮತ್ತು ತ್ಯಾಜ್ಯನೀರಿನ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಅನಗತ್ಯ ಪ್ರಾಮುಖ್ಯತೆಯನ್ನು ನೀಡಿದೆ ಎಂದು ‘ವೈರ್’ ವರದಿ ಮಾಡಿದೆ. ಮೊದಲು ಸರಕಾರ ವಾಸ್ತವಿಕ ಯೋಜನೆಗೆ ಮುಂದಾಗಬೇಕು ಮತ್ತು ಎರಡನೆಯದಾಗಿ, ನದಿಯನ್ನು ಯಾವಾಗ ಬೇಕಾದರೂ ಸ್ವಚ್ಛಗೊಳಿಸಬಹುದು ಎಂಬ ಭಾವನೆಯನ್ನು ಅದು ಬಿಡಬೇಕು.

2020ರ ವೇಳೆಗೆ ಗಂಗಾ ನದಿ ಏಕೆ ಸ್ವಚ್ಛವಾಗುವುದಿಲ್ಲ ಎಂಬುದನ್ನು 2018ರಲ್ಲಿಯೇ ‘ಡೌನ್ ಟು ಅರ್ಥ್’ ಎತ್ತಿ ತೋರಿಸಿತ್ತು. ಜುಲೈ 2022ರಲ್ಲಿ ರಾಜತಾಂತ್ರಿಕರು ಸಂಶೋಧನೆಯನ್ನು ಉಲ್ಲೇಖಿಸಿ ವರದಿ ಮಾಡಿದ್ದರ ಪ್ರಕಾರ, ನದಿಯ ತಳಮಟ್ಟ ಅತ್ಯಂತ ಕಲುಷಿತವಾಗಿದೆ. ಪಾಚಿ ಮತ್ತು ಯುಟ್ರೋಫಿಕೇಶನ್ ಚಿಹ್ನೆಗಳು ಕಂಡಿವೆ. ಯುಟ್ರೋಫಿಕೇಶನ್ ಸ್ಥಿತಿ ಎಂಬುದು, ಪೋಷಕಾಂಶಗಳ ಅಧಿಕ ಸಮೃದ್ಧಿ. ಇದು ಸಸ್ಯಗಳ ದಟ್ಟವಾದ ಬೆಳವಣಿಗೆಗೆ ಕಾರಣವಾಗುತ್ತದೆ. ಆದರೆ ಆಮ್ಲಜನಕದ ಕೊರತೆಯಿಂದ ಜಲಚರಗಳು ಸಾಯುತ್ತವೆ.

ಇದಲ್ಲದೆ, ಈ ಸಂಶೋಧನೆ ನದಿಯ ಕೆಳಭಾಗದಲ್ಲಿನ ಕಳಪೆ ಗುಣ ಮಟ್ಟವನ್ನೂ ಒಳಚರಂಡಿ ಹರಿಯುವಿಕೆಯನ್ನೂ ಬಹಿರಂಗಪಡಿಸಿತ್ತು.

ಇದಲ್ಲದೆ, ಉತ್ತರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿ ಬಿಡುಗಡೆ ಮಾಡಿದ 2019ರ ವರದಿ ಪ್ರಯಾಗ್ರಾಜ್ನಲ್ಲಿ ಗಂಗಾನದಿ ಸ್ನಾನಕ್ಕೆ ಅಸುರಕ್ಷಿತವಾಗಿದೆ ಎಂದು ಎಚ್ಚರಿಸಿತ್ತು.

ಇವೆಲ್ಲ ಒಂದು ಕಡೆಯಾದರೆ, ಮ್ಯಾನುವಲ್ ಒಳಚರಂಡಿ ಸ್ವಚ್ಛತೆ ತೊಡೆದುಹಾಕುವ ಭರವಸೆಯನ್ನೂ ಬಿಜೆಪಿ ಈಡೇರಿಸದೆ ಇರುವುದು ಇನ್ನೊಂದೆಡೆ. ಅದು ಕೊಟ್ಟ ಪೊಳ್ಳು ಭರವಸೆಗಳಲ್ಲಿ ಇದೂ ಒಂದೆಂಬುದಷ್ಟೇ ಸಾಬೀತಾಗಿದೆ.

2017ರಿಂದ 2022ರಲ್ಲಿ ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ಗಳ ಅಪಾಯಕಾರಿ ಸ್ವಚ್ಛತೆಯ ವೇಳೆ 330 ಜನರು ಸಾವನ್ನಪ್ಪಿದ್ದಾರೆ. ಆದರೆ, ಸರಕಾರದ ಪ್ರಕಾರ, ಮ್ಯಾನುವಲ್ ಸ್ವಚ್ಛತೆಯಿಂದ ಯಾರೂ ಸತ್ತಿಲ್ಲ. ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ಅನ್ನು ಈಗಾಗಲೇ ನಿಷೇಧಿ ಸಲಾಗಿದ್ದರೂ, ಅದಿನ್ನೂ ದೇಶದ ಹಲವು ಭಾಗಗಳಲ್ಲಿ ಚಾಲ್ತಿಯಲ್ಲಿದೆ.

ಮಾರ್ಚ್ 22ರಿಂದ ಎಪ್ರಿಲ್ 26, 2023ರ ಅವಧಿಯಲ್ಲಿ ಗುಜರಾತ್ನ ವಿವಿಧ ಭಾಗಗಳಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸುವಾಗ ಎಂಟು ಜನರು ಸಾವನ್ನಪ್ಪಿದ್ದಾರೆ ಎಂದು ಹಿಂದೂ ವರದಿ ಮಾಡಿದೆ. 1993ರಿಂದೀಚೆಗೆ 1,000ಕ್ಕೂ ಹೆಚ್ಚು ಕಾರ್ಮಿಕರು ಒಳಚರಂಡಿ ಅಥವಾ ಸೆಪ್ಟಿಕ್ ಟ್ಯಾಂಕ್ಗಳನ್ನು ಸ್ವಚ್ಛಗೊಳಿಸುವಾಗ ಸಾವನ್ನಪ್ಪಿದ್ದಾರೆ ಎಂದು ಅಧಿಕೃತ ಮಾಹಿತಿ ತೋರಿಸುತ್ತದೆ.

ಆದರೆ ಈ ಸಂಖ್ಯೆ ಇನ್ನೂ ಹೆಚ್ಚೇ ಇರಬಹುದು ಎಂದು ಹೇಳಲಾಗುತ್ತದೆ.

ಅಧಿಕಾರ ಬಂತು. ಕೊಟ್ಟ ಭರವಸೆಗಳೆಲ್ಲ ಅಲ್ಲೇ ಉಳಿದವು. ಆದರೆ ಜನರಿಗಾಗಿ ಏನನ್ನೂ ಮಾಡಿಲ್ಲ ಎಂಬ ಕಿಂಚಿತ್ ಪಶ್ಚಾತ್ತಾಪವೂ ಇಲ್ಲದ ಸರಕಾರ ಇನ್ನೂ ಬಡಾಯಿ ಮಾತಾಡುತ್ತಲೇ ಇದೆ. ಜನರನ್ನು ಮಾತಿನಿಂದಲೇ ಮರುಳುಗೊಳಿಸುವ ತನ್ನ ತಂತ್ರವನ್ನು ಮುಂದುವರಿ ಸಿಯೇ ಇದೆ. ಈ ಹಂತದಲ್ಲಿಯೇ ಇನ್ನೊಂದು ಚುನಾವಣೆ ಎದುರಾಗುತ್ತಿದೆ.

(ಕೃಪೆ: thewire.in)

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News