ದಲಿತರೇಕೆ ಶಾಪಗ್ರಸ್ಥರಾಗಬೇಕು?

Update: 2023-07-10 18:34 GMT

ಹಳ್ಳಿವೆಂಕಟೇಶ್, ಹಾಸನ

ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷಗಳು ಕಳೆದರೂ, ದಲಿತರ ಮೇಲೆ ನಡೆಯುವ ಶೋಷಣೆಗಳು ನಿಲ್ಲುವ ಸೂಚನೆಗಳು ಕಾಣುತ್ತಿಲ್ಲ. ಅರ್ಧದಷ್ಟು ಶೋಷಣೆಗಳು ದೇವರ ಹೆಸರಲ್ಲೇ ನಡೆದರೆ ಇನ್ನರ್ಧ ಜಾತಿ ಮತ್ತು ಮೌಢ್ಯಗಳ ಹೆಸರಲ್ಲಿ ನಡೆಯುತ್ತಿದೆ. ಒಬ್ಬ ದಲಿತ ವೈದ್ಯನಾದರೆ ಅವನಿರುವ ಆಸ್ಪತ್ರೆಗೆ ಹೋಗುವುದೋ ಬೇಡವೋ ಎಂಬ ಮನೋಭಾವ ಈಗಲೂ ಇದೆ. ಒಬ್ಬ ದಲಿತ ಪ್ರಾಧ್ಯಾಪಕ ಮಕ್ಕಳ ನಡುವೆ ನಿಂತು ಪಾಠ ಮಾಡುವಾಗ ಅವನು ದಲಿತನೆಂದು ತಿಳಿದರೆ ಆ ಪ್ರಾಧ್ಯಾಪಕನ ಜಾತಿ ಬಗ್ಗೆ ಹುಡುಗರ ಮಧ್ಯೆಯೇ ಕ್ಯಾಂಪಸ್‌ನಲ್ಲಿ ಗುಸುಗುಸು ನಡೆಯುತ್ತದೆ. ಹುಡುಗರು ಬಿಡಿ ಅವರ ಜೊತೆಯೇ ಕೆಲಸ ಮಾಡುವ ಸಹೋದ್ಯೋಗಿಗಳ ನಡುವೆಯೂ ಅಸಮಾಧಾನವಿರುತ್ತದೆ. ವಿಶ್ವವಿದ್ಯಾನಿಲಯಗಳು ಜಾತಿಗಳನ್ನು ಧಿಕ್ಕರಿಸಬೇಕು. ಆದರೆ ಅವುಗಳು ಜಾತಿಗಳನ್ನು ಕಟ್ಟಿಕೊಂಡೇ ಮುನ್ನಡೆಯುತ್ತಿವೆ. ಹಾಗಾಗಿ ಇಂಥ ವಿಶ್ವವಿದ್ಯಾನಿಲಯಗಳಲ್ಲಿ ಕಲಿಯುವ ವಿದ್ಯಾರ್ಥಿಗಳ ಮನಸ್ಥಿತಿ ಇದರಿಂದ ಹೊರತಾಗಿರಲು ಹೇಗೆ ಸಾಧ್ಯ?

ಕೋಲಾರ ಜಿಲ್ಲೆಯಲ್ಲಿ ಮರ್ಯಾದೆ ಹತ್ಯೆಗಳು ಮುಂದುವರಿಯುತ್ತಲೇ ಇವೆ. ಗೊಲ್ಲರ ಹುಡುಗಿಯನ್ನು ದಲಿತರ ಯುವಕ ಪ್ರೀತಿ ಮಾಡಿದ ಎಂದು ಹುಡುಗಿಯ ತಂದೆಯೇ ಮಗಳನ್ನು ಕತ್ತು ಹಿಸುಕಿ ಕೊಂದಿದ್ದಾನೆ. ಈ ಸುದ್ದಿ ತಿಳಿದು ದಲಿತ ಹುಡುಗ ರೈಲಿಗೆ ಸಿಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜಾತಿ ಎನ್ನುವುದು ಇಷ್ಟೊಂದು ಪ್ರಬಲವಾಗಿ ಬೇರೂರಿದೆ ಎಂದರೆ ಇಲ್ಲಿ ಯಾವ ಸಂಬಂಧಕ್ಕೂ ಬೆಲೆ ಇಲ್ಲ. ಜಾತಿಯ ಮೌಲ್ಯಗಳು ಇಲ್ಲಿ ಪ್ರಧಾನವಾದ ಕೆಲಸವನ್ನು ನಿರ್ವಹಿಸುತ್ತವೆ ಎಂಬುದೇ ಸತ್ಯ. ಪ್ರೀತಿ, ಪ್ರೇಮದ ಹೆಸರಲ್ಲಿ ದಲಿತರು ಹತ್ಯೆಗೆ ಒಳಗಾಗುವುದು, ನೀರು ಮುಟ್ಟಿದ, ಕೆರೆಗೆ ಬಂದ, ದೇವಸ್ಥಾನದ ಗರ್ಭಗುಡಿ ಪ್ರವೇಶಿಸಿದ ಅದಕ್ಕೆ ಅವನಿಗೆ ದಂಡ ಹಾಕುವುದು, ಮಾರಣಾಂತಿಕ ಹಲ್ಲೆ ನಡೆಸುವುದು ಸಾಮಾನ್ಯವಾಗುತ್ತಿದೆ.

ಮಧ್ಯ ಪ್ರದೇಶದಲ್ಲಿ ಬಿಜೆಪಿಯ ಕಾರ್ಯಕರ್ತನೊಬ್ಬ ಆದಿವಾಸಿ ದಲಿತ ವ್ಯಕ್ತಿಯ ತಲೆಯ ಮೇಲೆ ಮೂತ್ರ ವಿಸರ್ಜಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿತ್ತು. ಆನಂತರ ಕೆಲವು ಮಾಧ್ಯಮಗಳು ಇದನ್ನು ಪ್ರಕಟ ಮಾಡಿದ್ದವು. ಯಾರೋ ಒಬ್ಬ ನೀಚನು ಎಸಗುವ ಇಂಥ ಕೃತ್ಯಗಳು ಒಮ್ಮೆ ನಡೆದರೆ ಸರಿ, ಮೇಲಿಂದ ಮೇಲೆ ನಡೆದರೆ ಇದಕ್ಕೆ ಆಡಳಿತ ನಡೆಸುವ ಸರಕಾರವೂ ಜವಾಬ್ಧಾರಿಯಾಗುತ್ತದೆ. ನಮ್ಮ ಕಾನೂನು ಕುಣಿಕೆ ಕೂಡ ಬಿಗಿಯಾಗಬೇಕಾಗುತ್ತದೆ. ಮನುಷ್ಯಪರವಾದ ಅರಿವಿಲ್ಲದ ಶಿಕ್ಷಣ ಇಂಥ ಶೋಷಣೆಗೆ ಹಾದಿ ಮಾಡಿಕೊಡುತ್ತಿದೆ. ನಮ್ಮ ಶಿಕ್ಷಣದ ನೀತಿ ಮತ್ತು ಚೌಕಟ್ಟುಗಳು ಬದಲಾಗಬೇಕು. ಆರ್ಥಿಕತೆಯ ಜೊತೆಯಲ್ಲಿ ಅಜ್ಞಾನದ ಸಂಕೋಲೆಗಳಿಂದಲು ಹೊರಬರಬೇಕಿದೆ. ನಮ್ಮತನಗಳನ್ನು ನಾವು ಅರಿತುಕೊಳ್ಳಬೇಕಿದೆ. ದಲಿತನೆಂಬ ಕಾರಣಕ್ಕೆ ಶೋಷಣೆಗೆ ಒಳಗಾದರೆ, ಅವನನ್ನು ನೀವು ಸಮಾನತೆಯಿಂದ ಕಾಣುವುದು ಯಾವಾಗ? ಅವನು ನಮ್ಮೆಳಗೊಬ್ಬ ಎಂದು ನೀವು ಹೇಳುವುದು ಯಾವಾಗ? ಎಂಬ ಪ್ರಶ್ನೆಗಳು ಮೂಡುತ್ತವೆ. ಈ ದೇಶದಲ್ಲಿ ಕೆಲವು ಪ್ರಶ್ನೆಗಳಿಗೆ ದಲಿತನೊಬ್ಬ ಬದುಕಿರುವವರೆಗೆ ಉತ್ತರ ಸಿಗುವುದಿಲ್ಲ. ದಲಿತನಾಗಿ ಹುಟ್ಟಿದ ವ್ಯಕ್ತಿ ಮತ್ತು ಅವನ ವಂಶ ಶೋಷಣೆಯಿಂದ ಮುಕ್ತಿ ಹೊಂದುವುದಿಲ್ಲ.

ವಿಜ್ಞಾನವೂ ನಮಗೆ ಅರಿವನ್ನು ತರಲಿಲ್ಲ ಎಂದರೆ ನಾವು ಈ ಪ್ರಪಂಚವನ್ನು ಅರ್ಥಮಾಡಿಕೊಳ್ಳುವುದರಲ್ಲೇ ಸೋತಿದ್ದೇವೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕಿದೆ. ದಲಿತನೆಂದರೆ ಅವನು ಶೋಷಣೆಯ ಜೀವಿ ಎಂಬ ನಂಬಿಕೆ ಮೇಲಿನ ಜಾತಿಗಳಿಗಿದ್ದರೆ ಅದನ್ನು ಮೊದಲು ಮನಸ್ಸಿನಿಂದ ತೆಗೆಯುವುದು ಒಳ್ಳೆಯದು. ದಲಿತರು ಅಕ್ಷರವಂಥರಾದ ಮೇಲೆ ವೌಢ್ಯಗಳಿಂದ ಮೊದಲು ದೂರವಿರಬೇಕು. ಮೇಲ್ಜಾತಿಯವರಂತೆ ನಾನು ಬದುಕಬೇಕೆಂದು ಅವರನ್ನು ರೋಲ್‌ಮಾಡೆಲ್ ಮಾಡಿಕೊಳ್ಳುವುದು ಶುದ್ಧ ಮೂರ್ಖತನ. ನನ್ನಂತೆ ನಾನು ಬದುಕುತ್ತೇನೆ. ನನ್ನ ಬದುಕು ಯಾರದೂ ಅಲ್ಲ ನನ್ನದು! ಎಂಬ ಕಾಳಜಿ, ಕುತೂಹಲ ಎರಡು ಇರಬೇಕು. ಅನುಕರಣೆಗಳೇ ದಲಿತರನ್ನು ಹೆಚ್ಚಿನ ಇಕ್ಕಟ್ಟಿಗೆ ಸಿಕ್ಕಿಸುತ್ತಿವೆ. ಹಾಗಾಗಿ ಕುರಿ ಹಳ್ಳಕ್ಕೆ ಬಿದ್ದರೆ ನನ್ನದೂ ಒಂದು ಕಲ್ಲು ಎಂದು ಎಲ್ಲರೂ ಬೀಸುತ್ತಾರೆ.

ಮೊನ್ನೆ ಉತ್ತರ ಪ್ರದೇಶದಲ್ಲಿ ಭೀಮ್ ಆರ್ಮಿಯ ಅಧ್ಯಕ್ಷ ಚಂದ್ರಶೇಖರ್ ಆಝಾದ್ ರಾವಣ್ ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲು ಹಾಕಿದ್ದ ಸಂಚು ವಿಫಲವಾಯಿತು. ಕೂದಲೆಳೆಯ ಅಂತರದಲ್ಲಿ ಅವರ ಜೀವ ಉಳಿದುಕೊಂಡಿದೆ. ಆದರೆ ಅಲ್ಲಿನ ಮುಖ್ಯಮಂತ್ರಿ ಆದಿತ್ಯನಾಥ ಅವರು ಚಂದ್ರಶೇಖರ ಅವರ ಮೇಲೆ ದಾಳಿಗೆ ಯತ್ನಿಸಿದವರ ಮನೆಯನ್ನು ಬುಲ್ಡೋಜರ್‌ನಿಂದ ನೆಲಸಮ ಮಾಡುವುದನ್ನು ನಿರೀಕ್ಷಿಸುವ ಹಾಗಿಲ್ಲ!.

ದಲಿತರು ದೇವಸ್ಥಾನಕ್ಕೆ ಬರುವಂತಿಲ್ಲ, ಆದರೆ ಆ ದೇವರಿಗೆ ತಮಟೆ ಬಾರಿಸ ಬೇಕು, ದಲಿತರು ಮೇಲ್ವರ್ಗದವರ ಮನೆಯ ಶವಸಂಸ್ಕಾರಕ್ಕೆ ಕೊಂಬು ಕಹಳೆ ಊದಬೇಕು ಆದರೆ, ಅವರ ಮನೆಯೊಳಗೆ ಪ್ರವೇಶಿಸುವಂತಿಲ್ಲ. ದಲಿತರು ಚಪ್ಪಲಿ ಹೊಲಿಯಬೇಕು, ಕಸಗುಡಿಸಬೇಕು, ಆದರೆ ಅವರು ಚಪ್ಪಲಿ ಬಿಡುವ ಜಾಗದಲ್ಲಿ ಇರಬೇಕು. ಇದು ಯಾವ ಸೀಮೆ ನ್ಯಾಯ?. ದಲಿತರಿಗೆ ಹಸಿವಿದ್ದ ಕಾರಣಕ್ಕೆ ಯಾವ್ಯಾವುದೋ ವೃತ್ತಿ ಮಾಡಿಕೊಂಡು ಬಂದರು. ಅದು ಅವರ ಜನ್ಮಕ್ಕೆ ಅಂಟಿದ ಉದ್ಯೋಗ ಎಂದು ಇಂದಿಗೂ ಭಾವಿಸುವುದು ಸರಿಯೇ?. ಜಾತಿಯ ತಪ್ಪುತಿಳುವಳಿಕೆಯಿಂದ ಹೊರಬಂದರೆ ಮಿಕ್ಕಿದೆಲ್ಲಕ್ಕೂ ಉತ್ತರ ಸಿಗುತ್ತದೆ. ದೇವರ ಮಕ್ಕಳೆಂದು ಕರೆಸಿಕೊಂಡವರನ್ನು ದೇವರಂತೆ ಕಾಣದಿದ್ದರೂ ಬೇಡ ಮನುಷ್ಯರಂತೆ ಕಾಣಿರಿ. ಅವರು ಶಾಪಗ್ರಸ್ತರಂತೂ ಖಂಡಿತ ಅಲ್ಲ

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News