ಇಳಕಲ್:‌ ಖ್ಯಾತ ಚಿತ್ರ ಕಲಾವಿದ ಖಾಸಿಂ ಕನ್ಸಾವಿ ನಿಧನ

Update: 2024-05-18 06:43 GMT

ಬಾಗಲಕೋಟೆ, ಮೇ 18: ಖ್ಯಾತ ಚಿತ್ರ ಕಲಾವಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ  ಖಾಸಿಂ ಕನ್ಸಾವಿ (50) ಅವರು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಶುಕ್ರವಾರ ಖಾಸಗಿ ಬಸ್ ಮೂಲಕ ಬೆಂಗಳೂರಿಗೆ ಹೊರಟಿದ್ದ ಅವರಿಗೆ ಕುಷ್ಟಗಿ ಸಮೀಪ ಹೃದಯ ನೋವು ಕಾಣಿಸಿಕೊಂಡ ಕಾರಣ ಅಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ ತಿಳಿದು ಬಂದಿದೆ.

2014 ರಲ್ಲಿ ರಾಜ್ಯ ಲಲಿತಕಲಾ ಅಕಾಡೆಮಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದ ಖಾಸಿಂ ಕನ್ಸಾವಿ ಅವರು, ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಂದ ಕಲಾ ವಿಭಾಗದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿದ್ದರು.

ಕಾಸಿಮ್ ಆರ್ಟ್ ಗ್ಯಾಲರಿಯ ಸಂಸ್ಥಾಪಕರಾಗಿದ್ದ ಕನ್ಸಾವಿ‌, ತಮ್ಮದೇ ಆದ ವಿಶಿಷ್ಟ ಚಿತ್ರಕಲೆಯಿಂದ ಇವರು ಸಾಕಷ್ಟು ಹೆಸರು ಗಳಿಸಿದ್ದರು. ಹಂಪಿ ವಿಶ್ವವಿದ್ಯಾಲಯದಿಂದ ಡಿಪ್ಲೋಮಾ ಪದವಿ ಪಡೆದ ಕನ್ಸಾವಿ, ಆನಂತರ ಬೆಂಗಳೂರಿನ ಕೆನ್ ಕಲಾ ಶಾಲೆಯಲ್ಲಿ ಕಲಿತು ತಮ್ಮದೇ ಆದ ಶೈಲಿಯಲ್ಲಿ ಕಲಾಕೃತಿಗಳ ರಚನೆಯಲ್ಲಿ ತೊಡಗಿಕೊಂಡಿದ್ದರು.

ಸದ್ಯ ಕರಡಿ ಹೈಸ್ಕೂಲ್ ನಲ್ಲಿ ಚಿತ್ರಕಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಇವರು ಚಿತ್ರಿಸಿದ ಚಿತ್ರಗಳನ್ನು ಹೆಚ್ಚಿನ ಹಣ ನೀಡಿ ಕಲಾಪ್ರೇಮಿಗಳು ಖರೀದಿಸುತ್ತಿದ್ದರು .

ರಾಜ್ಯದಲ್ಲಿ ಮಾತ್ರವಲ್ಲದೇ ದೇಶದ ಬೇರೆ ಬೇರೆ ಭಾಗಗಳಲ್ಲಿ ತಮ್ಮ ಕಲಾ ಪ್ರದರ್ಶನ ಮಾಡಿದ್ದರು. ಕಲಾವಿದರಿಗೆ ಅನುಕೂಲ ಆಗಲಿ ಎಂಬ ದೃಷ್ಟಿಯಿಂದ ತಮ್ಮ ಮನೆಯಲ್ಲಿಯೇ ಆರ್ಟ್ ಗ್ಯಾಲರಿ ಮಾಡಿ ಬೇರೆ ಬೇರೆ ಕಲಾವಿದರ ಚಿತ್ರಕಲಾ ಪ್ರದರ್ಶನಕ್ಕೆ ಸಹಕಾರ ಮಾಡಿ ಕೊಟ್ಟಿದ್ದರು.‌

ಖಾಸಿಂ ಕನ್ಸಾವಿ ಅವರ ನಿಧನಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News