ಆದಾಯ ತೆರಿಗೆ ಅಧಿಕಾರಿಗಳ ಕಾರ್ಯಾಚರಣೆ : ಎರಡೇ ದಿನದಲ್ಲಿ 16 ಕೋಟಿಗೂ ಅಧಿಕ ಮೌಲ್ಯದ ಸ್ವತ್ತು ಜಪ್ತಿ
ಬೆಂಗಳೂರು: ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ವಿಶೇಷ ಕಾರ್ಯಾಚರಣೆ ಕೈಗೊಂಡಿರುವ ಆದಾಯ ತೆರಿಗೆ ಅಧಿಕಾರಿಗಳು ಕಳೆದ ಎರಡು ದಿನದಲ್ಲಿ 10ಕ್ಕೂ ಅಧಿಕ ಕಡೆಗಳಲ್ಲಿ ದಾಳಿ ನಡೆಸಿ, ಒಟ್ಟು 16 ಕೋಟಿ 10 ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿರುವುದಾಗಿ ವರದಿಯಾಗಿದೆ.
ಈ ಸ್ವತ್ತುಗಳಲ್ಲಿ 22 ಕೆ.ಜಿ. 923 ಗ್ರಾಂ ಚಿನ್ನ, 6 ಕೋಟಿ 45 ಲಕ್ಷ ರೂ. ಮೌಲ್ಯದ ವಜ್ರ ಹಾಗೂ 1.33 ಕೋಟಿ ರೂ. ನಗದು ಸಹ ಸೇರಿದೆ. ಬೆಂಗಳೂರಿನ ದಕ್ಷಿಣ ಲೋಕಸಭಾ ಕ್ಷೇತ್ರದ ವಿವಿಧೆಡೆ ದಾಳಿ ನಡೆಸಲಾಗಿದ್ದು, ಅನೇಕರ ಆಸ್ತಿ-ಪಾಸ್ತಿ ಹಾಗೂ ಬ್ಯಾಂಕ್ ಖಾತೆಗಳಲ್ಲಿರುವ ಕೆಜಿಗಟ್ಟಲೆ ಚಿನ್ನ ಮತ್ತು ನಗದನ್ನು ವಶಕ್ಕೆ ಪಡೆಯಲಾಗಿದೆ ಎಂದು ಐಟಿ ಇಲಾಖೆ ಮಾಹಿತಿ ನೀಡಿದೆ.
ಶಂಕರಪುರಂನಲ್ಲಿ 3.10 ಕೋಟಿ ರೂ.ಗೂ ಅಧಿಕ ಮೌಲ್ಯದ 4ಕೆ.ಜಿ. 400 ಗ್ರಾಂ ಚಿನ್ನಾಭರಣ, ಮಾತಾ ಶಾರದಾದೇವಿ ರಸ್ತೆ ಸಮೀಪದಲ್ಲಿ 3.39 ಕೋಟಿ ರೂ. ಮೌಲ್ಯದ 4 ಕೆ.ಜಿ. 800 ಗ್ರಾಂ ಚಿನ್ನ, ಮಕೈರ್ಂಟಲ್ ಬ್ಯಾಂಕ್ ಲಾಕರ್‍ನಲ್ಲಿ 2.13 ಕೋಟಿ ರೂ. ಮೌಲ್ಯದ 3 ಕೆ.ಜಿ. 400 ಗ್ರಾಂ ಚಿನ್ನ, ಜಯನಗರ 3ನೇ ಬ್ಲಾಕ್‍ನಲ್ಲಿ 5.33 ಕೋಟಿ ರೂ. ಮೌಲ್ಯದ 7 ಕೆ.ಜಿ. 598 ಗ್ರಾಂ ಚಿನ್ನ, ಚಾಮರಾಜಪೇಟೆ ಸಾರಸ್ವತ್ ಬ್ಯಾಂಕ್‍ನಲ್ಲಿ 84.31 ಲಕ್ಷ ರೂ. ಮೌಲ್ಯದ 1 ಕೆ.ಜಿ. 200 ಗ್ರಾಂ ಚಿನ್ನದ ಗಟ್ಟಿ, ಬಸವನಗುಡಿ ಅಂಚೆ ಕಚೇರಿ ಹತ್ತಿರ 3.34 ಲಕ್ಷ ರೂ. ಮೌಲ್ಯದ 6.38 ಕ್ಯಾರೆಟ್ ವಜ್ರ, ಮಾತಾ ಶಾರದಾ ದೇವಿ ರಸ್ತೆ ಸಮೀಪ 3.14 ಲಕ್ಷ ರೂ. ಮೌಲ್ಯದ 5.99 ಕ್ಯಾರೆಟ್ ವಜ್ರ ಪತ್ತೆಯಾಗಿದೆ ಎಂದು ಐಟಿ ಇಲಾಖೆ ತಿಳಿಸಿದೆ.
ಜಯನಗರದಲ್ಲಿ 6.40 ಕೋಟಿ ರೂ. ಮೌಲ್ಯದ 202.83 ಕ್ಯಾರೆಟ್ ವಜ್ರ, ಬಸವನಗುಡಿ ಅಂಚೆ ಕಚೇರಿ ಸಮೀಪ 18 ಲಕ್ಷ ರೂ. ನಗದು, ಶಂಕರಪುರಂ 3ನೇ ಕ್ರಾಸ್ ಹತ್ತಿರ 55 ಲಕ್ಷ ರೂ. ನಗದು, ಮಾತಾ ಶಾರದಾದೇವಿ ರಸ್ತೆ ಹತ್ತಿರ 16 ಲಕ್ಷ ರೂ. ನಗದು, ಜಯನಗರ 3ನೇ ಬ್ಲಾಕ್ ಹತ್ತಿರ 8.77 ಲಕ್ಷ ನಗದು, ವಿ.ವಿ.ಪುರಂ ವಾಣಿವಿಲಾಸ ರಸ್ತೆ ಹತ್ತಿರ 37 ಲಕ್ಷ ನಗದು, ಬಸವನಗುಡಿ ಅಂಚೆ ಕಚೇರಿ ಹತ್ತಿರ 1.29 ಕೋಟಿ ರೂ. ಮೌಲ್ಯದ 1 ಕೆಜಿ 800 ಗ್ರಾಂ ಚಿನ್ನ ಪತ್ತೆಯಾಗಿದೆ ಎಂದು ಐಟಿ ಇಲಾಖೆ ಮಾಹಿತಿ ನೀಡಿದೆ.