7ನೇ ವೇತನ ಜಾರಿಗೆ ತಂದ ಸರಕಾರಕ್ಕೆ ಆ.17ರಂದು ನೌಕರರ ‘ಅಭಿಮಾನದ ಅಭಿನಂದನೆ’

Update: 2024-08-14 16:53 GMT

ಬೆಂಗಳೂರು : ಸರಕಾರಿ ನೌಕರರಿಗೆ 7ನೇ ವೇತನ ಆಯೋಗ ಜಾರಿಗೊಳಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಗೌರವಿಸಲು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವತಿಯಿಂದ ಆ.17ರಂದು `ನಮ್ಮ ಅಭಿಮಾನದ ಅಭಿನಂದನಾ ಸಮಾರಂಭ' ಆಯೋಜಿಸಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ತಿಳಿಸಿದ್ದಾರೆ.

ಬುಧವಾರ ನಗರದ ಕಬ್ಬನ್ ಉದ್ಯಾನವನದಲ್ಲಿರುವ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಅಭಿನಂದನಾ ಸಮಾರಂಭದ ಜೊತೆಗೆ ಆ.17, 18 ಮತ್ತು 19ರಂದು ನಗರದ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಸರಕಾರಿ ನೌಕರರಿಗಾಗಿ ರಾಜ್ಯ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಯನ್ನೂ ಹಮ್ಮಿಕೊಳ್ಳಲಾಗಿದೆ. ಆ.17ರಂದು ಬೆಳಗ್ಗೆ 10 ಗಂಟೆಗೆ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ `ನಮ್ಮ ಅಭಿಮಾನದ ಸಮಾರಂಭ’ವನ್ನು ಉದ್ಘಾಟಿಸಲಾಗುವುದು ಎಂದರು.

7ನೇ ವೇತನ ಆಯೋಗದ ವರದಿ ಜಾರಿಗೆ ನೌಕರರ ಸಂಘವು ಹೋರಾಟ ಮಾಡುವ ಮೂಲಕ ರಾಜ್ಯ ಸರಕಾರವನ್ನು ಒತ್ತಾಯಿಸಿತ್ತು. ನೌಕರರ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 7ನೇ ವೇತನ ಆಯೋಗದ ವರದಿ ಜಾರಿ ಮಾಡುವುದಾಗಿ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಆಯೋಗದ ಶಿಫಾರಸ್ಸನ್ನು ಯಥಾವತ್ ಜಾರಿಗೊಳಿಸಿ ಸರಕಾರ ಆದೇಶ ಹೊರಡಿಸಿದೆ. ಇದು ನಮ್ಮ ಹೋರಾಟಕ್ಕೆ ಸಂದ ಜಯ ಎಂದು ಅವರು ಹೇಳಿದರು.

ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಲಿದ್ದಾರೆ, ಸಮಾರಂಭದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಹಕಾರ ಸಚಿವ ಕೆ.ಎನ್.ರಾಜಣ್ಣ, ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಭಾಗವಹಿಸಲಿದ್ದಾರೆ ಎಂದು ಸಿ.ಎಸ್.ಷಡಾಕ್ಷರಿ ತಿಳಿಸಿದರು.

ಸಮಾರಂಭದ ನಂತರ `ಒಪಿಎಸ್ ಯೋಜನೆಯನ್ನು ಮರು ಸ್ಥಾಪಿಸುವಲ್ಲಿ ರಾಷ್ಟ್ರ ಮಟ್ಟದ ಬೆಳವಣಿಗೆಗಳು', `ಒಪಿಎಸ್ ಯೋಜನೆಯ ಪುನರ್ ಸ್ಥಾಪನೆಯ ಸಾಧ್ಯತೆಗಳು' ಮತ್ತು `ಪಿಟಿಎಸ್ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಿ ಮತ್ತು ಆರ್ ನಿಯಮಗಳ ತಿದ್ದುಪಡಿ’ ಬಗ್ಗೆ ಕಾರ್ಯಾಗಾರ ನಡೆಯಲಿದೆ. ಸುಮಾರು 40 ಸಾವಿರ ನೌಕರರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಸಿ.ಎಸ್.ಷಡಾಕ್ಷರಿ ಹೇಳಿದರು.

ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದ 11 ಸಾವಿರ ನೌಕರರು ರಾಜ್ಯ ಮಟ್ಟದಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸುವರು. ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲರಿಗೂ ಮೂರು ದಿನಗಳ ಕಾಲ ಸಾಂದರ್ಭಿಕ ರಜೆಯನ್ನು ಸರಕಾರ ನೀಡಿದೆ. ಕ್ರೀಡೆಯಲ್ಲಿ ವಿಜೇತರಾದವರಿಗೆ ಟ್ರೋಫಿ, ಬ್ಯಾಗ್ ಮತ್ತು ಪ್ರಮಾಣ ಪತ್ರ ನೀಡಲಾಗುವುದು. ಕ್ರೀಡಾಪಟುಗಳಿಗೆ ಟ್ರ್ಯಾಕ್‍ಸೂಟ್ ನೀಡಲಾಗುವುದು. ಮೂರು ದಿನಗಳ ಸಂಜೆ ಖ್ಯಾತ ಕಲಾವಿದರಿಂದ ಸಂಗೀತ ರಸಸಂಜೆ ಹಾಗೂ ಜನಪದೋತ್ಸವ ಕಾರ್ಯಕ್ರಮ ಇರಲಿದೆ ಎಂದು ಸಿ.ಎಸ್.ಷಡಾಕ್ಷರಿ ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಒಪಿಎಸ್ ಜಾರಿ ಭರವಸೆ..!

ಎನ್‍ಪಿಎಸ್ ಮತ್ತು ಒಪಿಎಸ್‍ಗೆ ಸಂಬಂಧಿಸಿದಂತೆ ಮೂರು ರಾಜ್ಯಗಳಲ್ಲಿ ಅಧ್ಯಯನ ಮಾಡಿ ವರದಿ ನೀಡಲು ರಾಜ್ಯ ಸರಕಾರ ಮೂವರು ಐಎಎಸ್ ಅಧಿಕಾರಿಗಳನ್ನು ನಿಯೋಜಿಸಿದ್ದು, ಒಂದು ತಿಂಗಳಲ್ಲಿ ವರದಿ ನೀಡಲು ತಿಳಿಸಲಾಗಿದೆ. ವರದಿ ಬಂದ ನಂತರ ಪರಿಶೀಲಿಸಿ ಒಪಿಎಸ್ ಜಾರಿ ಮಾಡುವುದಾಗಿ ರಾಜ್ಯ ಸರಕಾರ ಭರವಸೆ ನೀಡಿದೆ ಎಂದು ಸಿ.ಎಸ್.ಷಡಾಕ್ಷರಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News