ಬೆಂಗಳೂರಿನಲ್ಲಿ ಫೆ.3ರಿಂದ ಎರಡು ದಿನ ವ್ಯಾಪಾರ ಶೃಂಗಸಭೆ
ಬೆಂಗಳೂರು: ಮುಸ್ಲಿಂ ಇಂಡಸ್ಟ್ರೀಯಲ್ ಅಸೋಸಿಯೇಷನ್(ಎಂಐಎ) ವತಿಯಿಂದ ಫೆ.3ರಿಂದ ಎರಡು ದಿನಗಳ ಕಾಲ ನಗರದ ಶೃಂಗಾರ್ ಪ್ಯಾಲೇಸ್‍ನಲ್ಲಿ ಎರಡನೇ ಆವೃತ್ತಿಯ ವ್ಯಾಪಾರ ಶೃಂಗಸಭೆ(ಬಿಸಿನೆಸ್ ಸಮ್ಮಿಟ್) ನಡೆಯಲಿದೆ ಎಂದು ಅಸೋಸಿಯೇಷನ್‍ನ ಅಧ್ಯಕ್ಷ ಅಫ್ಸರ್ ಪಾಷಾ ತಿಳಿಸಿದ್ದಾರೆ.
ಶನಿವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಶೃಂಗಸಭೆಯಲ್ಲಿ 20ಕ್ಕೂ ಹೆಚ್ಚು ಭಾಷಣಕಾರರು, 500ಕ್ಕಿಂತ ಅಧಿಕ ಸಮ್ಮೇಳನ ಪ್ರತಿನಿಧಿಗಳು, 2000ಕ್ಕೂ ಅಧಿಕ ವ್ಯಾಪಾರ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. 200ಕ್ಕೂ ಅಧಿಕ ಮಳಿಗೆಗಳಲ್ಲಿ ಉದ್ಯಮಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲಿದ್ದಾರೆ ಎಂದರು.
ಮುಸ್ಲಿಂ ಇಂಡಸ್ಟ್ರೀಯಲ್ ಅಸೋಸಿಯೇಷನ್‍ಗೆ 19 ವರ್ಷಗಳ ಇತಿಹಾಸವಿದ್ದು, 600ಕ್ಕೂ ಅಧಿಕ ಮಂದಿ ಸದಸ್ಯರಿದ್ದಾರೆ. 80ಕ್ಕೂ ಅಧಿಕ ಮಂದಿ ಮಹಿಳಾ ಉದ್ಯಮಿಗಳು ಸಂಘದಲ್ಲಿದ್ದಾರೆ. ಸ್ಟಾರ್ಟ್ ಅಫ್ ಅನ್ನು ತೆರೆಯಲು ಯುವ ವಾಣಿಜ್ಯೋದ್ಯಮಿಗಳಿಗೆ ಅಗತ್ಯ ನೆರವನ್ನು ಸಂಘವು ನೀಡಲಿದೆ. ವಿದ್ಯಾರ್ಥಿಗಳಿಗೆ ಇಂಟರ್ನ್‍ಶಿಪ್ ಮತ್ತು ಪ್ಲೇಸ್‍ಮೆಂಟ್ ಅನ್ನು ಒದಗಿಸಲು ಸಂಸ್ಥೆಗಳೊಂದಿಗೆ ಒಪ್ಪಂದವನ್ನು ಮಾಡಿಕೊಂಡು, ವಿದ್ಯಾರ್ಥಿ ಸಮುದಾಯಕ್ಕೆ ಸಹಾಯ ಮಾಡುತ್ತಿದೆ ಎಂದರು.
ಸಂಘದ ಸದಸ್ಯರ ಅಭಿವೃದ್ಧಿ ಮತ್ತು ಬೆಳವಣಿಗೆಗೆ ಪೂರಕ ಅವಕಾಶಗಳನ್ನು ಕಲ್ಪಿಸುವುದು. ಸಮಾಜದ ಒಳಿತಿಗಾಗಿ ಕಾರ್ಪೋರೇಟ್ ಸೋಶಿಯಲ್ ರೆಸ್ಪಾನ್ಸಿಬಲ್ ಫಂಡ್(ಸಿಎಸ್‍ಆರ್)ಗಳನ್ನು ಸದ್ಭಳಕೆ ಮಾಡಲು ಸಂಘವು ಸಹಕಾರವನ್ನು ನೀಡಲಿದೆ. ಮಹಿಳಾ ಉದ್ಯಮಿಗಳನ್ನು ವ್ಯಾಪಾರದಲ್ಲಿ ತೊಡಗುವಂತೆ ಮಾಡಲು ಸಂಘವು ಶ್ರಮಿಸುತ್ತಿದೆ ಎಂದು ಅವರು ಹೇಳಿದರು.
ಎಂಐಎನ ಪ್ರಧಾನ ಕಾರ್ಯದರ್ಶಿ ತಾಹಿರ್ ಶರೀಫ್ ಮಾತನಾಡಿ, ವ್ಯಾಪಾರ ಶೃಂಗಸಭೆಯಲ್ಲಿ 200ಕ್ಕೂ ಅಧಿಕ ಮಳಿಗೆಗಳಿಗೆ ಅವಕಾಶವನ್ನು ಕಲ್ಪಿಸಲಾಗಿದ್ದು, ಅವನ್ನು ಮೂರು ಬಗೆಯಲ್ಲಿ ವಿಂಗಡಿಸಲಾಗಿದೆ. ಕಾರ್ಖಾನೆಗಳು ತಯಾರು ಮಾಡಿರುವ ಉತ್ಪನ್ನಗಳನ್ನು ಪ್ರಶದರ್ಶಿಸಲು ಕೈಗಾರಿಕೋದ್ಯಮಿಗಳಿಗೆ, ತಮ್ಮ ವ್ಯಾಪಾರದ ಅಭಿವೃದ್ದಿಗೆ ನೆರವಾಗಲು ವ್ಯಾಪಾರಿಗಳಿಗೆ ಮತ್ತು ಸೇವಾಧಾರಿತ ಮಳಿಗೆಗಳಿಗೆ ಅವಕಾಶ ನೀಡಲಾಗುವುದು ಎಂದರು.
ಎಂಐಎನ ಕೌನ್ಸಿಲ್ ಸದಸ್ಯ ಝಬೈರ್ ಮಾತನಾಡಿ, ಸಮುದಾಯದ ಉದ್ಯಮಿಗಳನ್ನು ಮುಖ್ಯವಾಹಿನಿಗೆ ಕರೆ ತರುವುದು ಶೃಂಗಸಭೆಯ ಮುಖ್ಯ ಉದ್ದೇಶವಾಗಿದೆ. ಶೃಂಗಸಭೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಲಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಕೈಗಾರಿಕೆ ಹಾಗೂ ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಅತೀಕ್ ಉಲ್ಲಾ ಮಾತನಾಡಿ, ಇಲಾಖೆಯ ಯೋಜನೆಗಳ ಬಗ್ಗೆ ತುಂಬ ಜನರಿಗೆ ತಿಳಿದಿಲ್ಲ. ನಮ್ಮ ಇಲಾಖೆಯ ವೆಬ್‍ಸೈಟ್‍ನಲ್ಲಿ ಉದ್ಯಮಗಳಿಗೆ ಸಿಗುವ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. ಸರಕಾರದೊಂದಿಗೆ ಸಂಘ-ಸಂಸ್ಥೆಗಳು ಈ ಯೋಜನೆಗಳ ಬಗ್ಗೆ ಪ್ರಚಾರ ನೀಡಬೇಕು ಎಂದರು.
ಸಭೆಯಲ್ಲಿ ಎಂಐಎನ ಉಪಾಧ್ಯಕ್ಷ ಮೀರ್ ಅಬ್ದುಲ್ ಹಫೀಝ್, ಜಂಟಿ ಕಾರ್ಯದರ್ಶಿ ತನ್ವೀರ್ ಅಹ್ಮದ್ ಡಿ., ಕೆಪಿಸಿಸಿಯ ಪ್ರಧಾನ ಕಾರ್ಯದರ್ಶಿ ನಿಝಾಮ್ ಫೌಝ್‍ದಾರ್, ಸೇರಿದಂತೆ ಎಫ್‍ಕೆಸಿಸಿಐ, ಕಾಸಿಯಾ, ಪಿಐಎ ಮತ್ತು ಡಿಐಎನ ಪದಾಧಿಕಾರಿಗಳು ಭಾಗವಹಿಸಿದ್ದರು.