ಬಸ್ ಪ್ರಯಾಣ ದರ ಏರಿಕೆ ಹಿಂಪಡೆಯಲು ಆಮ್ ಆದ್ಮಿ ಪಕ್ಷ ಆಗ್ರಹ
ಬೆಂಗಳೂರು : ರಾಜ್ಯ ಸರಕಾರ ಸಾರಿಗೆ ಬಸ್‍ಗಳ ದರ ಶೇ.15ರಷ್ಟು ಏರಿಕೆ ನಿರ್ಧಾರವನ್ನು ಕೂಡಲೆ ಹಿಂಪಡೆಯಬೇಕೆಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.
ಶನಿವಾರ ನಗರದ ಫ್ರೀಡಂಪಾರ್ಕ್‌ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿ ಜಗದೀಶ್ ಚಂದ್ರ ಮಾತನಾಡಿ, ಕಾಂಗ್ರೆಸ್ ಸರಕಾರ ಆಮ್ ಆದ್ಮಿ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ನಕಲು ಮಾಡಿ ಅಧಿಕಾರ ಹಿಡಿದಿದೆ. ಆದರೆ ಅವರು ಭ್ರಷ್ಟಾಚಾರ ನಿಲ್ಲಿಸದೆ ಗ್ಯಾರೆಂಟಿ ಯೋಜನೆಗಳನ್ನು ಸಮರ್ಪಕವಾಗಿ ನೀಡುತ್ತಿಲ್ಲ ಎಂದು ದೂರಿದರು.
ಗ್ಯಾರೆಂಟಿ ಯೋಜನೆಗಳನ್ನು ನೀಡುವುದಕ್ಕಾಗಿ ದರ ಏರಿಕೆ ಮಾಡುತ್ತಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎರಡು ಬಜೆಟ್‍ಗಳಲ್ಲಿ 2ಲಕ್ಷ ಕೋಟಿ ರೂ.ಸಾಲ ಮಾಡಿದ್ದಾರೆ. ಈ ದುಡ್ಡು ಯಾರ ಜೇಬುಗೆ ಸೇರುತ್ತಿದೆ ಎಂಬುದನ್ನು ಜನತೆಗೆ ತಿಳಿಸಬೇಕು. ಈಗಾಗಲೇ ಸ್ಟ್ಯಾಂಪ್ ಡ್ಯೂಟಿ, ಅಬಕಾರಿ ಸುಂಕ, ವಿದ್ಯುತ್ ದರ, ಹಾಲಿನ ದರ ಎಲ್ಲವನ್ನು ಗಗನಕ್ಕೆ ಮುಟ್ಟಿಸಿದ್ದಾರೆ. ಮುಂದಿನ ದಿನಗಳಲ್ಲಿ ನೀರಿನ ದರವನ್ನು ಏರಿಸುತ್ತಾರೆ. ಜನಪರ ಕಾಳಜಿ ಇಲ್ಲದ ಸರಕಾರ ಆರ್ಥಿಕ ದಿವಾಳಿಯಾಗುವ ಹಂತಕ್ಕೆ ತಲುಪಿರುವ ಅನುಮಾನ ಜನತೆಯಲ್ಲಿ ಕಾಡುತ್ತಿದೆ ಎಂದು ಜಗದೀಶ್ ಚಂದ್ರ ಟೀಕಿಸಿದರು.