ಕಮಿಷನ್ ದುರಾಸೆ ಬಿಟ್ಟು ಗುತ್ತಿಗೆದಾರನನ್ನು ರಕ್ಷಿಸಿ: ಎಚ್.ಡಿ.ಕುಮಾರಸ್ವಾಮಿ

Update: 2025-01-06 13:58 GMT

ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ‘ಶೇ.60ರಷ್ಟು ಕಮಿಷನ್, ಆಧಾರವಿಲ್ಲದೆ ಆರೋಪದ ಮಾತೆಲ್ಲಿ ಬಂತು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ? ನಿಮ್ಮ ಪಕ್ಷದ ಪರವೇ ಇರುವ ಗುತ್ತಿಗೆದಾರರು, ತುಮಕೂರಿನ ನಿಮ್ಮ ಕಾಂಗ್ರೆಸ್ ಪಕ್ಷದ ಮುಖಂಡರೇ ಮಾಡಿದ ಆರೋಪ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಸೋಮವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ನಮ್ಮ ಪಕ್ಷದ ಸರಕಾರಕ್ಕಿಂತ ಹಿಂದಿನ ಬಿಜೆಪಿ ಸರಕಾರವೇ ವಾಸಿ ಇತ್ತು ಎಂದು ಅಲವತ್ತುಕೊಂಡಿದ್ದರು ನಿಮ್ಮ ಪಕ್ಷದ ಗುತ್ತಿಗೆದಾರರು! ಕಾಂಗ್ರೆಸ್ ಸರಕಾರದಲ್ಲೂ ಶೇ.40ರಷ್ಟು ಕಮೀಶನ್ ಸುಲಿಗೆ ಮಾಡಲಾಗುತ್ತಿದೆ ಎಂಬುದು ಅವರ ನೇರವಾಗಿ ಆರೋಪ ಎಂದು ಉಲ್ಲೇಖಿಸಿದ್ದಾರೆ.

‘ಕಮೀಶನ್ ವ್ಯವಹಾರ ಇಲ್ಲ ಎಂದಾದರೆ, ‘ಯಾಕಪ್ಪಾ ಹಾಗೆ ಹೇಳಿದಿರಿ?' ಎಂದು ಅವರನ್ನೇ ಕರೆದು ಕೇಳಬೇಕಿತ್ತು. ಕೇಳಲಿಲ್ಲ ಯಾಕೆ?. ಪ್ರತಿ ಆರೋಪಕ್ಕೂ ಈಗ ದಾಖಲೆ ಕೇಳುವ ನೀವು, ಬಿಜೆಪಿ ಸರಕಾರದ ಮೇಲೆ ಶೇ.40ರಷ್ಟು ಕಮೀಶನ್ ಆರೋಪ ಮಾಡಿ, ಪುಟಗಟ್ಟಲೇ ಜಾಹೀರಾತು ಕೊಟ್ಟರಲ್ಲಾ.. ಆಗ ಎಷ್ಟು ದಾಖಲೆ ನೀಡಿದ್ದೀರಿ? ನಿಮ್ಮ ರಾಜಕೀಯ ಜೀವನದಲ್ಲಿ ಎಂದಾದರೂ ದಾಖಲೆ ಇಟ್ಟು ಆರೋಪ ಮಾಡಿದ್ದೀರಾ?’ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

‘ದಾವಣಗೆರೆ ಗುತ್ತಿಗೆದಾರನೊಬ್ಬ ದಯಾಮರಣ ಕರುಣಿಸಿ ಎಂದು ನಿಮ್ಮ ಘನ ಸನ್ನಿಧಾನಕ್ಕೆ ಹಾಗೂ ಮಾನ್ಯ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಅವರಿಗೆ ಬಾಕಿ ಹಣ ಕೊಡಿಸುತ್ತೀರೋ ಅಥವಾ ದಯಾಮರಣ ಕರುಣಿಸುತ್ತೀರೋ?. ಕಮೀಶನ್ ದುರಾಸೆ ಬಿಟ್ಟು ಮೊದಲು ಆ ಗುತ್ತಿಗೆದಾರನನ್ನು ರಕ್ಷಿಸಿ’ ಎಂದು ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News