ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ | ಸೂರಜ್ ರೇವಣ್ಣ ಮತ್ತೆ ಎರಡು ದಿನ ಕಸ್ಟಡಿಗೆ
Update: 2024-07-01 15:12 GMT
ಬೆಂಗಳೂರು : ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಬಂಧನದಲ್ಲಿರುವ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರ ಸಿಐಡಿ ಪೊಲೀಸ್ ಕಸ್ಟಡಿ ಅವಧಿಯನ್ನು ಮತ್ತೆ ಎರಡು ದಿನ ವಿಸ್ತರಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಸೂರಜ್ ರೇವಣ್ಣ ಅವರ ಸಿಐಡಿ ಪೊಲೀಸ್ ಕಸ್ಟಡಿ ಅವಧಿ ಜು.1ಕ್ಕೆ ಕೊನೆಗೊಂಡಿತ್ತು. ಹೀಗಾಗಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅವರನ್ನು ಹಾಜರುಪಡಿಸಿದ ಪೊಲೀಸರು, ಹೆಚ್ಚಿನ ವಿಚಾರಣೆಗಾಗಿ ಮತ್ತೆ ಐದು ದಿನ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ಆದರೆ, ನ್ಯಾಯಾಧೀಶರು ಜು.3ರವರೆಗೆ ಕಸ್ಟಡಿ ವಿಸ್ತರಿಸಿ ಆದೇಶಿಸಿದ್ದಾರೆ.
ಯುವಕನೊಬ್ಬನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಅರೋಪದಡಿ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಜೂ.22ರಂದು ಸೂರಜ್ ರೇವಣ್ಣ ಅವರನ್ನು ಪೊಲೀಸರು ಬಂಧಿಸಿದ್ದರು. ನಂತರ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ 8 ದಿನ ಸಿಐಡಿ ಕಸ್ಟಡಿಗೆ ಒಪ್ಪಿಸಲಾಗಿತ್ತು.