ಮನೆಯೂಟ, ಹಾಸಿಗೆಗೆ ಅನುಮತಿ ಕೋರಿ ನಟ ದರ್ಶನ್ ಅರ್ಜಿ : ಜು.25ಕ್ಕೆ ಆದೇಶ ಕಾಯ್ದಿರಿಸಿದ ನ್ಯಾಯಾಲಯ
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ಅವರು ಮನೆ ಊಟ ಕೋರಿ ಸಲ್ಲಿಸಿದ್ದ ಅರ್ಜಿಯ ಆದೇಶವನ್ನು ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಜುಲೈ 25ಕ್ಕೆ ಕಾಯ್ದಿರಿಸಿದೆ.
ದರ್ಶನ್ ಸಲ್ಲಿಸಿದ್ದ ಅರ್ಜಿಯ ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ, ತೀರ್ಪನ್ನು ಜುಲೈ 25ಕ್ಕೆ ಕಾಯ್ದಿರಿಸಿದೆ. ದರ್ಶನ್ ಪರ ವಕೀಲ ರಾಘವೇಂದ್ರ ಹಾಗೂ ಪೊಲೀಸರ ಪರ ಸರಕಾರಿ ವಿಶೇಷ ಅಭಿಯೋಜಕ ಪ್ರಸನ್ನ ಕುಮಾರ್ ಅವರು ವಾದ ಮಂಡಿಸಿದ್ದರು.
‘ಜೈಲಿನಲ್ಲಿ ನೀಡುತ್ತಿರುವ ಆಹಾರವನ್ನು ತಮ್ಮಿಂದ ಜೀರ್ಣಿಸಿಕೊಳ್ಳಲಾಗದೇ, ಅತಿಸಾರ ಉಂಟಾಗಿದೆ. ಪದೇ ಪದೆ ಭೇದಿಯಾಗುತ್ತಿದೆ. ಪರಿಣಾಮ ದೇಹದ ತೂಕ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಮನೆ ಊಟದೊಂದಿಗೆ ಹಾಸಿಗೆ ಹಾಗೂ ಪುಸ್ತಕಗಳನ್ನು ತರಿಸಿಕೊಳ್ಳಲು ಜೈಲು ಅಧಿಕಾರಿಗಳಿಗೆ ಮೌಖಿಕವಾಗಿ ಮನವಿ ಮಾಡಿದ್ದೆ. ಆದರೆ, ಅವರು ಇದಕ್ಕೆ ಒಪ್ಪಿರಲಿಲ್ಲ' ಎಂದು ದರ್ಶನ್, ಅನುಮತಿ ಕಲ್ಪಿಸುವಂತೆ ತಮ್ಮ ವಕೀಲರ ಮೂಲಕ ಹೈಕೋರ್ಟ್‍ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವಂತೆ ಹೈಕೋರ್ಟ್ ಸೂಚನೆ ನೀಡಿತ್ತು.