ಇಸ್ರೇಲ್ ಪ್ರತಿನಿಧಿಗಳೊಂದಿಗೆ ಕೃಷಿ ಸಚಿವರ ಚರ್ಚೆ
ಬೆಂಗಳೂರು : ಇಸ್ರೇಲ್ ದೇಶದ ಪ್ರತಿನಿಧಿಗಳೊಂದಿಗೆ ಕೃಷಿಯಲ್ಲಿ ಹೊಸ ಸಂಭಾವ್ಯ ಸುಧಾರಣೆಗಳ ಬಗ್ಗೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸಮಾಲೋಚನೆ ನಡೆಸಿದರು.
ಶುಕ್ರವಾರ ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಅವರು ಹವಾಮಾನ ಬದಲಾವಣೆ, ನೀರಿನ ಮಿತ ಬಳಕೆ, ವೈಜ್ಞಾನಿಕ ಕೃಷಿ ಮತ್ತಿತರ ವಿಷಯಗಳ ಕುರಿತು ಚರ್ಚೆ ನಡೆಸಿ, ರಾಜ್ಯದ ಕೃಷಿ ಪದ್ದತಿಯಲ್ಲಿ ಪರಿಣಾಕಾರಿ ಹಾಗೂ ಗುಣಾತ್ಮಕ ಬದಲಾವಣೆಗೆ ಸಲಹೆ, ಸಹಕಾರ ನೀಡುವಂತೆ ಕೋರಿದರು.
ಇಸ್ರೇಲ್‍ನ ಕೃಷಿ ಸಂಸ್ಕೃತಿ, ತಳಿ ಸಂರಕ್ಷಣೆ ಹಾಗೂ ಅಭಿವೃದ್ಧಿ, ಕೃಷಿ ಇಲಾಖೆ, ವಿಶ್ವವಿದ್ಯಾಲಯಗಳ ಪಾತ್ರದ ಬಗ್ಗೆ ಮಾಹಿತಿ ಪಡೆದ ಸಚಿವರು, ರಾಜ್ಯದಲ್ಲಿನ ಪರಿಸ್ಥಿತಿ, ನಡೆಸಲಾಗುತ್ತಿರುವ ನಿರಂತರ ಸಂಶೋಧನೆಗಳು ಕೃಷಿ ಭೂಮಿಗೆ ಅದರ ವರ್ಗಾವಣೆ, ಸರಕಾರದ ಯೋಜನೆ, ಪ್ರೊತ್ಸಾಹ ಕ್ರಮಗಳ ಬಗ್ಗೆಯೂ ಚರ್ಚೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇಸ್ರೇಲ್ ದೇಶದ ಡೆಪ್ಯೂಟಿ ಕಾನ್ಸಲೇಟ್ ಜನರಲ್ ಲೈಮೋರ್ ಬ್ಲೆಟರ್ ಸೇರಿದಂತೆ ಪ್ರಮುಖರಿದ್ದರು.