36 ಲಕ್ಷ ರೈತರಿಗೆ 27 ಸಾವಿರ ಕೋಟಿ ರೂ.ಸಾಲ ವಿತರಿಸುವ ಗುರಿ : ಸಿಎಂ ಸಿದ್ದರಾಮಯ್ಯ

Update: 2024-02-16 14:43 GMT

ಬೆಂಗಳೂರು: 2023-24ನೆ ಸಾಲಿನಲ್ಲಿ ಬಡ್ಡಿ ರಹಿತ ಅಲ್ಪಾವಧಿ ಸಾಲವನ್ನು 5 ಲಕ್ಷ ರೂ.ಗಳಿಗೆ ಹಾಗೂ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲವನ್ನು ಶೇ.3ರ ಬಡ್ಡಿ ದರದಲ್ಲಿ 10ಲಕ್ಷ ರೂ.ಗಳಿಂದ 15 ಲಕ್ಷ ರೂ.ಗಳಿಗೆ ಏರಿಸುವ ಕ್ರಮ ತೆಗೆದುಕೊಂಡಿದ್ದು, ಪ್ರಸಕ್ತ ಸಾಲಿನಲ್ಲಿ ರಾಜ್ಯದ 36ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ 27 ಸಾವಿರ ಕೋಟಿ ರೂ.ಗಳಷ್ಟು ದಾಖಲೆಯ ಸಾಲ ವಿತರಿಸುವ ಗುರಿ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ರೈತರ ಬೆಳೆ ಸಾಲ ಮನ್ನಾ ಯೋಜನೆಯಡಿ ಡಿಸಿಸಿ ಬ್ಯಾಂಕುಗಳಿಗೆ ಬಾಕಿ ಇರುವ 132 ಕೋಟಿ ರೂ.ಮೊತ್ತ ಬಿಡುಗಡೆ. ಡಿಸಿಸಿ, ಪಿಕಾರ್ಡ್ ಬ್ಯಾಂಕುಗಳಿಗೆ 496 ಕೋಟಿ ರೂ.ಗಳಷ್ಟು ಸಾಲ ಮರುಪಾವತಿಯಾಗುವ ನಿರೀಕ್ಷೆಯಿರುವುದರಿಂದ ಬ್ಯಾಂಕುಗಳ ಆರ್ಥಿಕ ಪರಿಸ್ಥಿತಿಯಲ್ಲಿ ಗಣನೀಯ ಸುಧಾರಣೆಯಾಗಲಿದೆ. ಈ ಉದ್ದೇಶಕ್ಕಾಗಿ 450 ಕೋಟಿ ರೂ. ಅನುದಾನ ಒದಗಿಸಲಾಗಿದೆ.

ಅಡಿಕೆ, ಈರುಳ್ಳಿ, ದ್ರಾಕ್ಷಿ, ಮಾವು, ಬಾಳೆ ಮತ್ತು ಇತರ ತೋಟಗಾರಿಕಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ಘೋಷಿಸುವಂತೆ ಹಾಗೂ ಎಂ.ಎಸ್.ಸ್ವಾಮಿನಾಥನ್ ಸಮಿತಿ ವರದಿ ಶಿಫಾರಸು ಮಾಡಿದಂತೆ ಕನಿಷ್ಠ ಬೆಂಬಲ ಬೆಲೆಯನ್ನು ವ್ಯವಸಾಯಕ್ಕೆ ತಗಲುವ ವೆಚ್ಚ ಮತ್ತು ಶೇ.50 ರಷ್ಟು ಲಾಭಾಂಶ ಆಧಾರದಡಿ ನಿಗದಿ ಮಾಡುವಂತೆ ಕೇಂದ್ರ ಸರಕಾರಕ್ಕೆ ಒತ್ತಾಯಿಸಲು ನಿರ್ಧರಿಸಲಾಗಿದೆ.

ಮಾಧ್ಯಮಿಕ, ಫೆಡರಲ್ ಹಾಗೂ ಅಪೆಕ್ಸ್ ಸಹಕಾರ ಸಂಘಗಳ ಆಡಳಿತ ಮಂಡಳಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಮಹಿಳೆಯರಿಗೆ ಮೀಸಲಾತಿ ತರಲು ಅಧಿನಿಯಮಗಳಿಗೆ ತಿದ್ದುಪಡಿ. ಯಲಬುರ್ಗಾ, ಬಸವನಬಾಗೇವಾಡಿ, ರಾಣೆಬೆನ್ನೂರು, ಬಳ್ಳಾರಿ ಹಾಗೂ ಗದಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಒಟ್ಟು 50 ಕೋಟಿ ರೂ. ವೆಚ್ಚದಲ್ಲಿ ಹಾಗೂ ರಾಯಚೂರು ಮತ್ತು ಮೈಸೂರಿನಲ್ಲಿ ತಲಾ 40 ಕೋಟಿ ರೂ. ವೆಚ್ಚದಲ್ಲಿ ಶೀತಲಗೃಹಗಳ ನಿರ್ಮಾಣ.

ರಾಯಚೂರಿನಲ್ಲಿ 25 ಕೋಟಿ ರೂ.ವೆಚ್ಚದಲ್ಲಿ ಸುಸಜ್ಜಿತ ಒಣಮೆಣಸಿನಕಾಯಿ ಮಾರುಕಟ್ಟೆ ಸ್ಥಾಪನೆ. ರಾಣೆಬೆನ್ನೂರಿನಲ್ಲಿ 112 ಕೋಟಿ ರೂ.ವೆಚ್ಚದಲ್ಲಿ 222 ಎಕರೆ ಮೆಗಾ ಮಾರುಕಟ್ಟೆ ಪ್ರಾಂಗಣದಲ್ಲಿ ಒಣಮೆಣಸಿನಕಾಯಿ ಮಾರುಕಟ್ಟೆ ಪ್ರಾರಂಭ. ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿರುವ ಮಾರುಕಟ್ಟೆಯಲ್ಲಿ 35 ಕೋಟಿ ರೂ.ವೆಚ್ಚದಲ್ಲಿ ಅತ್ಯಾಧುನಿಕ ಕೃಷಿ ಸಂಕೀರ್ಣವನ್ನು ಸ್ಥಾಪನೆ.

10 ಕೋಟಿ ರೂ.ವೆಚ್ಚದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಎಲ್ಲ ಕಾರ್ಯ ಚಟುವಟಿಕೆಗಳ ಡಿಜಿಟೈಝ್. ಬೆಂಗಳೂರಿನ ದಾಸನಪುರ, ಮೈಸೂರು, ಹುಬ್ಬಳ್ಳಿ, ಬಳ್ಳಾರಿ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಳಗಾವಿಯ ಮಾರುಕಟ್ಟೆಗಳಲ್ಲಿ ಪಿಪಿಪಿ ಸಹಭಾಗಿತ್ವದಲ್ಲಿ ಜೈವಿಕ ಸಿಎನ್‍ಜಿ ಘಟಕ ಸ್ಥಾಪಿಸುವ ಮೂಲಕ ಶೂನ್ಯ ತ್ಯಾಜ್ಯ ತರಕಾರಿ ಮಾರುಕಟ್ಟೆಗಳನ್ನಾಗಿ ಪರಿವರ್ತನೆ.

ಎ.ಪಿ.ಎಂ.ಸಿ ಗಳಲ್ಲಿ ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್ ಕೇಂದ್ರಗಳು ಹಾಗೂ ಪೆಟ್ರೋಲ್ ಬಂಕ್‍ಗಳನ್ನು ಪಿಪಿಪಿ ಮಾದರಿಯಲ್ಲಿ ಸ್ಥಾಪನೆಗೆ ಒತ್ತು. ರೈತ ವಿರೋಧಿ ಎ.ಪಿ.ಎಂ.ಸಿ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯುವ ವಿಧೇಯಕಕ್ಕೆ ಶೀಘ್ರದಲ್ಲಿಯೆ ವಿಧಾನಪರಿಷತ್ತಿನಲ್ಲಿ ಅಂಗೀಕಾರ ಪಡೆಯಲು ಕ್ರಮ.

ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ ಮಾರುಕಟ್ಟೆ ಸಮಿತಿಗಳಿಂದ ವಂತಿಗೆ ಪಡೆಯುವ ಮೂಲಕ ಮಾರುಕಟ್ಟೆ ಅಭಿವೃದ್ಧಿ ಸಹಾಯ ನಿಧಿ ಸ್ಥಾಪಿಸಲು ಕಾನೂನು ರಚನೆ. ಬೆಂಬಲ ಬೆಲೆ ಯೋಜನೆ ಜಾರಿಗೆ ಶಾಸನಾತ್ಮಕ ಬೆಂಬಲ ನೀಡಲು ಕ್ರಮ. ಕಬ್ಬು ಬೆಳೆಗಾರರ ಹಿತ ಕಾಯಲು ಎಲ್ಲ  ಸಕ್ಕರೆ ಕಾರ್ಖಾನೆಗಳ ಬಳಿ ಎಪಿಎಂಸಿಗಳ ಮೂಲಕ ವೇಬ್ರಿಡ್ಜ್ ಸ್ಥಾಪನೆ. ಬಳಕೆಯಾಗದೆ ಇರುವ ಉಗ್ರಾಣಗಳ ಸಾಮಥ್ರ್ಯ ಬಳಸಿ ಪಿಪಿಪಿ ಮಾದರಿಯಲ್ಲಿ ಶೀತಲಗೃಹಗಳ ಸ್ಥಾಪನೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News