ಆನೇಕಲ್: ರಸ್ತೆಯಲ್ಲೇ ಮಾರಕಾಸ್ತ್ರದಿಂದ ಕೊಚ್ಚಿ ಯುವಕನ ಕೊಲೆ
ಆನೇಕಲ್, ಫೆ.25: ಯುವಕನೋರ್ವನನ್ನು ರಸ್ತೆಯಲ್ಲೇ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆಗೈದ ಘಟನೆ ಇಂದು ಮುಂಜಾನೆ ಆನೇಕಲ್ ತಾಲೂಕಿನ ಮರಸೂರು ಎಂಬಲ್ಲಿ ನಡೆದಿದೆ. ಹಳೆ ವೈಷ್ಯಮ್ಯದಿಂದ ಈ ಹತ್ಯೆ ನಡೆದಿರುವ ಬಗ್ಗೆ ಪೊಲೀಸರು ಶಂಕಿಸಿದ್ದಾರೆ.
ಮರಸೂರು ನಿವಾಸಿ ವಿಜಯ್ ಕುಮಾರ್(27) ಕೊಲೆಯಾದ ಯುವಕ. ಈತ 2017ರಲ್ಲಿ ನಡೆದ ಮನೋಜ್ ಎಂಬಾತನ ಕೊಲೆ ಪ್ರಕರಣದ ಆರೋಪಿಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಜೈಲು ಸೇರಿದ್ದನು. ಏಳು ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಗೊಂಡಿದ್ದ ಎಂದು ತಿಳಿದುಬಂದಿದೆ.
ಇಂದು ಮುಂಜಾನೆ 4 ಗಂಟೆ ಸುಮಾರಿಗೆ ದುಷ್ಕರ್ಮಿಗಳು ವಿಜಯ ಕುಮಾರ್ ನನ್ನು ಮನೆಯಿಂದ ಹೊರಗೆ ಕರೆದು ರಸ್ತೆ ಮಧ್ಯದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.
ಮನೋಜ್ ಕೊಲೆಗೆ ಪ್ರತೀಕಾರವಾಗಿ ಈ ಕೊಲೆ ನಡೆದಿದೆ ಎಂಬ ಆರೋಪ ಕೇಳಿಬರುತ್ತಿದೆ.
ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.