ಮಾರ್ಫಿಂಗ್ ವಿಡಿಯೋ ಹರಿಬಿಟ್ಟ ಆರೋಪ | ಡಿ.ಕೆ.ಶಿವಕುಮಾರ್ ಸೇರಿ ಇತರರ ವಿರುದ್ಧ ಅಶೋಕ್ ದೂರು
Update: 2025-01-04 17:28 GMT
ಬೆಂಗಳೂರು : ಬಸ್ ಪ್ರಯಾಣ ದರ ಹೆಚ್ಚಳ ಮಾಡಿರುವ ಸರಕಾರದ ಕ್ರಮವನ್ನು ವಿರೋಧಿಸಿ ನಗರದ ಕೆಂಪೇಗೌಡ ಕೇಂದ್ರ (ಮೆಜೆಸ್ಟಿಕ್) ಬಸ್ ನಿಲ್ದಾಣದಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ಕೈಗೊಂಡಿದ್ದರು. ಈ ಸಂದರ್ಭದಲ್ಲಿ ವಿಪಕ್ಷನಾಯಕ ಆರ್.ಅಶೋಕ್ ಮತ್ತು ಪೊಲೀಸರ ಮಧ್ಯೆ ವಾಗ್ವಾದ ಉಂಟಾಗಿತ್ತು. ಈ ವೇಳೆ ಪೊಲೀಸರಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಕಾಂಗ್ರೆಸ್ ವಿಡಿಯೋವೊಂದನ್ನು ಹಂಚಿಕೊಂಡಿತ್ತು. ಸದ್ಯ ಈ ವಿಚಾರವಾಗಿ ಮಾರ್ಫಿಂಗ್ ವಿಡಿಯೋವನ್ನು ಕೆಪಿಸಿಸಿ ಎಕ್ಸ್, ಫೇಸ್‌ಬುಕ್ ಖಾತೆಗಳಲ್ಲಿ ಹಂಚಿರುವುದಾಗಿ ಆರೋಪಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ದೂರು ನೀಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಂವಹನ ಅಧ್ಯಕ್ಷ ರಮೇಶ್ ಬಾಬು, ಐಶ್ವರ್ಯ ಮಹದೇವ್, ಇ.ಸತ್ಯಪ್ರಕಾಶ್, ಜಯ್ ಮತ್ತಿಕಟ್ಟಿ ಮತ್ತು ನಿಕೇತ್ ರಾಜ್ ಮೌರ್ಯ ವಿರುದ್ಧ ದೂರು ನೀಡಿ, ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಆರ್.ಅಶೋಕ್ ಆಗ್ರಹಿಸಿದ್ದಾರೆ.