ರಾಜ್ಯದ ಪಾಲು ಕೇಳುವುದು ಕೇಂದ್ರದ ವಿರುದ್ಧ ಸಂಘರ್ಷವಲ್ಲ: ಸಿಎಂ ಸಿದ್ದರಾಮಯ್ಯ

Update: 2024-02-20 14:51 GMT

ಬೆಂಗಳೂರು: ನಾವು ಕೇಂದ್ರ ಸರಕಾರದ ವಿರುದ್ಧ ಸಂಘರ್ಷ ಮಾಡುತ್ತಿಲ್ಲ. ಆದರೆ, ರಾಜ್ಯದ ಪಾಲಿನ ಸಂವಿಧಾನಬದ್ದ ಹಕ್ಕನ್ನು, ಅನುದಾನವನ್ನು ಕೇಳುವುದು ಸಂಘರ್ಷ ಹೇಗಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಮಂಗಳವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ಪ್ರಸ್ತಾಪಿಸಿದ ಅವರು, ಜೆಡಿಎಸ್ ನಾಯಕ ಕುಮಾರಸ್ವಾಮಿ ಕೇಂದ್ರದ ಜತೆ ಸಂಘರ್ಷಕ್ಕೆ ಇಳಿಯಬಾರದು ಎಂದಿದ್ದಾರೆ. ಆದರೆ ನಾವು ಸಂಘರ್ಷಕ್ಕೆ ಇಳಿದಿಲ್ಲ. ರಾಜ್ಯದ ಪಾಲಿನ ಸಂವಿಧಾನಬದ್ದ ಹಕ್ಕನ್ನು, ಅನುದಾನವನ್ನು ಕೇಳುವುದು ಸಂಘರ್ಷ ಆಗುವುದಿಲ್ಲ ಎಂದರು.

ರಾಜ್ಯಕ್ಕೆ ತೀವ್ರ ಬರಗಾಲ ಬಂದಿದೆ. ಕೇಂದ್ರದಿಂದ ಬರ ಪರಿಹಾರ ಕೇಳಿ 17 ಬಾರಿ ಕೇಂದ್ರಕ್ಕೆ ಬರೆದೆವು. ಇದರಲ್ಲಿ ಒಂದು ಪತ್ರಕ್ಕೆ ಮಾತ್ರ, ‘ನಿಮ್ಮ ಪತ್ರ ತಲುಪಿದೆ’ ಎನ್ನುವ ಉತ್ತರ ಕೇಂದ್ರದಿಂದ ಬಂತು. ಆದರೆ ಉಳಿದ 16 ಪತ್ರಗಳಿಗೆ ಉತ್ತರವೂ ಬರಲಿಲ್ಲ. ಕೇಂದ್ರದ ಅನುದಾನ ರಾಜ್ಯಕ್ಕೆ ಇವತ್ತಿನವರೆಗೂ ಒಂದು ಪೈಸೆಯೂ ಬಂದಿಲ್ಲ. ಇದು ನಿಯಮಬದ್ದವಾಗಿ ರಾಜ್ಯದ ಹಕ್ಕು. ರಾಜ್ಯದ ಪಾಲು. ಇದನ್ನೂ ಕೇಂದ್ರ ಕೊಡುತ್ತಿಲ್ಲ. , ರಾಜ್ಯದ ಪಾಲನ್ನು ಕೇಳುವುದು ತಪ್ಪಾ? ಎಂದು ಪ್ರಶ್ನಿಸಿದರು.

ರಾಜ್ಯಕ್ಕೆ ಬರಗಾಲ ಬಂದಾಗ ನರೇಗಾ ಮಾನವ ದಿನಗಳನ್ನು ನಿಯಮ ಬದ್ದವಾಗಿ 100 ರಿಂದ 150 ದಿನಗಳಿಗೆ ಏರಿಕೆ ಮಾಡಬೇಕಿತ್ತು. ಇದಕ್ಕಾಗಿ ನಾವು ಪದೇ ಪದೇ ಮನವಿ ಮಾಡಿದರೂ ಮಾನವ ದಿನಗಳನ್ನು ಏರಿಕೆ ಮಾಡಲೇ ಇಲ್ಲ. ಇದು ರಾಜ್ಯದ ಜನರಿಗೆ ಮಾಡಿದ ಅನ್ಯಾಯ ಅಲ್ಲವೇ? . ರಾಜ್ಯದ ಜನರಿಗೆ ಅನ್ನ ಕೊಡುವ ಉದ್ದೇಶದಿಂದ ಕೆಜಿಗೆ 34 ರೂ.ಕೊಡುತ್ತೇವೆ, ಈ ಹಣಕ್ಕೆ ಅಕ್ಕಿ ಕೊಡಿ ಎಂದು ಕೇಂದ್ರಕ್ಕೆ ಮನವಿ ಮಾಡಿದ್ದೆವು. ಆದರೆ ರಾಜ್ಯಕ್ಕೆ, ರಾಜ್ಯದ ಜನರಿಗೆ ಅಕ್ಕಿ ಕೊಡಲು ಕೇಂದ್ರ ಒಪ್ಪಲಿಲ್ಲ. ಈಗ 29 ರೂ.ಗೆ ಅಕ್ಕಿ ಕೊಡುವುದಾಗಿ ಹೇಳುತ್ತಿದ್ದಾರೆ. ಈಗಲೂ ನಮಗೆ ಅದೇ ಬೆಲೆಗೆ ಅಕ್ಕಿ ಕೊಡಿಸಿ. ಅದನ್ನು ನಾವು ಕೇಂದ್ರದಿಂದ ಖರೀದಿಸಿ ರಾಜ್ಯದ ಜನರಿಗೆ ಕೊಡಲು ಸಿದ್ದರಿದ್ದೇವೆ. ನೀವು ಕೇಂದ್ರದ ಜತೆ ಮಾತನಾಡಿ ನಮಗೆ ಅಕ್ಕಿ ಕೊಡಿಸಿ ಎಂದು ಬಿಜೆಪಿ ಸದಸ್ಯರಿಗೆ ಸವಾಲು ಹಾಕಿದರು.

ಕೇಂದ್ರದ ಬಜೆಟ್‍ನಲ್ಲಿ ಫೆರಿಫೆರಲ್ ರಿಂಗ್ ರೋಡ್ ಹಾಗೂ ಬೆಂಗಳೂರಿನ ಕೆರೆಗಳ ಅಭಿವೃದ್ಧಿಗೆ ಘೋಷಿಸಿದ್ದ 6000 ಕೋಟಿ ರೂ.ಗಳನ್ನೂ ನೀಡಿಲ್ಲ. ಇನ್ನೂ, ಕೇಂದ್ರದಲ್ಲಿ ಮೋದಿ ಪ್ರಧಾನಿಯಾದ ಮೇಲೆ ಕಾರ್ಪೊರೇಟ್ ತೆರಿಗೆಯನ್ನು ಶೇ.30ರಿಂದ ಶೇ.22.5ಕ್ಕೆ ಇಳಿಸಿದರು. ಆದರೆ ಜನಸಾಮಾನ್ಯರು ಕಟ್ಟುವ ತೆರಿಗೆಯ ಪಾಲು ಏರಿಕೆಯಾಗಿದೆ. ಗ್ಯಾಸ್, ಪೆಟ್ರೋಲ್, ಡೀಸೆಲ್, ರಸಗೊಬ್ಬರ ದರ ಏರಿಕೆಯಾಗಿದೆ. ಜತೆಗೆ ತೆರಿಗೆಯೂ ಹೆಚ್ಚಾಗಿದೆ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News