ಬೆಂಗಳೂರು | ‘49 ರೂ.ಗೆ 48 ಮೊಟ್ಟೆಗಳು’ ಇಮೇಲ್ ಸಂದೇಶ ; ಬ್ಯಾಂಕ್ ವಿವರ ನೀಡಿ 48 ಸಾವಿರ ರೂ.ಕಳೆದುಕೊಂಡ ಮಹಿಳೆ!
ಬೆಂಗಳೂರು: ‘ಸುಮಾರು 49 ರೂಪಾಯಿಗೆ 48 ಮೊಟ್ಟೆ ಸಿಗಲಿದೆ’ ಎಂದು ಇಮೇಲ್‍ಗೆ ಬಂದ ಸಂದೇಶದ ಲಿಂಕ್ ಒತ್ತಿ ಗ್ರಾಹಕರೊಬ್ಬರು 48,199 ರೂ.ಕಳೆದುಕೊಂಡಿರುವ ಪ್ರಕರಣ ಇಲ್ಲಿನ ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಬೆಂಗಳೂರಿನ ವಸಂತನಗರದ ನಿವಾಸಿಯಾಗಿರುವ ಮಹಿಳೆಯೊಬ್ಬರ ಇ-ಮೇಲ್‍ಗೆ ಫೆ.17ರಂದು ಆನ್‍ಲೈನ್ ಶಾಪಿಂಗ್ ಕಂಪೆನಿಯೊಂದರಿಂದ ಸಂದೇಶ ಬಂದಿತ್ತು. ಮಹಿಳೆ ಕ್ಲಿಕ್ ಮಾಡಿ ನೋಡಿದಾಗ 48 ಮೊಟ್ಟೆಗಳಿಗೆ ಕೇವಲ 49 ರೂಪಾಯಿ ಆಫರ್ ಇರುವುದನ್ನು ಕಂಡು ಬುಕ್ ಮಾಡಲು ಮುಂದಾಗಿದ್ದರು ಎನ್ನಲಾಗಿದೆ.
ಡೆಲಿವರಿ ವಿಳಾಸ ಹಾಗೂ ಮೊಬೈಲ್ ನಂಬರ್ ಸೇರಿ ಎಲ್ಲ ವಿವರಗಳನ್ನು ಭರ್ತಿ ಮಾಡಿ ಕೊನೆಗೆ ಪೇಮೆಂಟ್ ಆಪ್ಶನ್‍ನಲ್ಲಿ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸುವಂತೆ ಸೂಚಿಸಿತ್ತು. ಹೀಗಾಗಿ ಹಣ ಪಾವತಿಸಲು ಕ್ರೆಡಿಟ್ ಕಾರ್ಡ್‍ನ ಡಿಟೇಲ್ಸ್ ಭರ್ತಿ ಮಾಡಿ ಬಳಿಕ ಮೊಬೈಲ್‍ಗೆ ಬಂದ ಒಟಿಪಿ ನಂಬರ್ ನಮೂದಿಸಿ 49 ರೂ.ಪಾವತಿಸಿದ್ದರು. ಇದಾದ ಕೆಲ ಕ್ಷಣಗಳಲ್ಲಿ ಮಹಿಳೆಯ ಬ್ಯಾಂಕ್ ಖಾತೆಯಿಂದ 48,199 ರೂಪಾಯಿ ಕಡಿತಗೊಂಡಿರುವ ಸಂದೇಶ ಮೊಬೈಲ್‍ಗೆ ಬಂದಿತ್ತು ಎಂದು ಹೇಳಲಾಗಿದೆ.
ಮಹಿಳೆ ಆಶ್ಚರ್ಯಗೊಂಡು ಪರಿಶೀಲಿಸಿದಾಗ 48,199 ಸಾವಿರ ರೂ.ಹಣ ಕಡಿತವಾಗಿರುವುದು ದೃಢವಾಗಿತ್ತು. ವಂಚನೆಗೊಳಗಾಗಿರುವುದು ಗೊತ್ತಾಗಿ ತಕ್ಷಣವೇ ಬ್ಯಾಂಕ್‍ಗೆ ಮಾಹಿತಿ ನೀಡಿ ಕ್ರೆಡಿಟ್ ಕಾರ್ಡ್ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿದ್ದರು. ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದು, ಈ ಸಂಬಂಧ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ಎಂದು ತಿಳಿಸಿದ್ದಾರೆ.