ಬೆಂಗಳೂರು | ಅನುಮಾನಾಸ್ಪದವಾಗಿ ಯುವಕನ ಮೃತದೇಹ ಪತ್ತೆ ಪ್ರಕರಣ : ಇಬ್ಬರ ಬಂಧನ

Update: 2024-05-17 13:16 GMT

ಬೆಂಗಳೂರು : ಅನುಮಾನಾಸ್ಪದವಾಗಿ ಯುವಕನೊಬ್ಬನ ಮೃತದೇಹ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಸಂಪಂಗಿರಾಮನಗರ ಠಾಣಾ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಬಂಧಿತರನ್ನು ರಂಜಿತ್ ಪ್ರಧಾನ್ ಹಾಗೂ ರಮೇಶ್ ಎಂದು ಗುರುತಿಸಲಾಗಿದೆ. ಒಡಿಶಾ ಮೂಲದ ಈ ಇಬ್ಬರು ಒಂದು ವರ್ಷದಿಂದ ನಗರದಲ್ಲಿ ಗಾರೆ ಕೆಲಸ ಮಾಡುತ್ತಿದ್ದರು. ಮಿಷನ್ ರಸ್ತೆಯಲ್ಲಿ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಕೆಲಸ ಮಾಡಿ ಅಲ್ಲಿಯೇ ವಾಸ್ತವ್ಯ ಹೂಡಿದ್ದರು. ಮೇ 9ರಂದು ಸತ್ಯ ಎಂಬಾತ ಅಲ್ಲಿಗೆ ಬಂದಿದ್ದಾನೆ. ಅಪರಿಚಿತ ವ್ಯಕ್ತಿ ಬಂದಿರುವುದನ್ನು ನೋಡಿ ಆರೋಪಿಗಳು ಪ್ರಶ್ನಿಸಿದ್ದರು.

ಈ ನಡುವೆ ಮಾತಿನ ಚಕಮಕಿ, ತಳ್ಳಾಟವಾಗಿ ಸತ್ಯ ಎಂಬಾತನ್ನು ನೂಕಿದ್ದಾರೆ. ಆಗ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಾಕಿ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಆತ ಸಾವನ್ನಪ್ಪಿದ್ದ ಎನ್ನಲಾಗಿದೆ. ಇದರಿಂದ ಆತಂಕಗೊಂಡ ಆರೋಪಿಗಳು ಶವವನ್ನು ಪಕ್ಕದ ಕಟ್ಟಡಕ್ಕೆ ಶಿಫ್ಟ್ ಮಾಡಿ ಸುಮ್ಮನಾಗಿದ್ದರು. ಮೇ 10ರಂದು ಶವ ಪತ್ತೆಯಾಗಿರುವುದು ಬೆಳಕಿಗೆ ಬರುತ್ತಿದ್ದಂತೆ ಪೋಲೀಸರು ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದರು.

ಮೃತನ ಕುಟುಂಬಸ್ಥರು ಸತ್ಯ ಪ್ರೀತಿಸುತ್ತಿದ್ದ ಅಪ್ರಾಪ್ತೆಯ ಕುಟುಂಬಸ್ಥರ ವಿರುದ್ಧ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು ಮೃತದೇಹ ಪತ್ತೆಯಾಗಿದ್ದ ಕಾಂಪ್ಲೆಕ್ಸ್ ಪಕ್ಕದ ನಿರ್ಮಾಣ ಹಂತದ ಕಟ್ಟಡದಲ್ಲಿರುವ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾರೆ. ಈ ಸಂಬಂಧ ಉದ್ದೇಶಪೂರ್ವಕವಲ್ಲದ ಕೊಲೆ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಮೃತ ಸತ್ಯ ಪೋಕ್ಸೊ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿ ಕೆಲದಿನಗಳ ಹಿಂದೆ ಜಾಮೀನು ಪಡೆದು ಹೊರಬಂದು ಪ್ಲಂಬರ್ ಆಗಿ ಕೆಲಸ ಮಾಡುತ್ತಿದ್ದ. ಸಂಪಂಗಿರಾಮನಗರದಲ್ಲಿ ವಾಸವಾಗಿದ್ದ ಅಪ್ರಾಪ್ತೆಯನ್ನು ಪ್ರೀತಿಸುತ್ತಿದ್ದ. ಹುಡುಗಿ ಕುಟುಂಬಸ್ಥರು ಸತ್ಯ ವಿರುದ್ಧ ದೂರು ನೀಡಿದ್ದರು. ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸತ್ಯನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News