ಬೆಂಗಳೂರು | ರೈಲು ಬೋಗಿಯ ಕಸದ ಬುಟ್ಟಿಯಲ್ಲಿ ಮಗುವಿನ ಮೃತದೇಹ ಪತ್ತೆ

Update: 2024-06-29 14:37 GMT

Photo : Meta AI

ಬೆಂಗಳೂರು: ರೈಲು ಬೋಗಿಯಲ್ಲಿರುವ ಕಸದ ಬುಟ್ಟಿಯಲ್ಲಿ ನವಜಾತ ಶಿಶುವಿನ ಮೃತದೇಹವೊಂದು ಪತ್ತೆಯಾಗಿರುವ ಘಟನೆ ಇಲ್ಲಿನ ಯಲಹಂಕ ರೈಲು ನಿಲ್ದಾಣದಲ್ಲಿ ವರದಿಯಾಗಿದೆ.

ಜೂ.26ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಭುವನೇಶ್ವರದಿಂದ ಬೆಂಗಳೂರಿಗೆ ಬಂದ ಪ್ರಶಾಂತಿ ಎಕ್ಸ್‌ ಪ್ರೆಸ್ ರೈಲಿನ ಕಸದ ಬುಟ್ಟಿಯಲ್ಲಿ ನವಜಾತ ಗಂಡು ಮಗುವಿನ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಮಹಿಳೆಗೆ ರೈಲಿನಲ್ಲಿಯೇ ಹೆರಿಗೆಯಾಗಿದ್ದು, ಬಿಳಿ ಬಟ್ಟೆಯಲ್ಲಿ ನವಜಾತ ಗಂಡು ಮಗುವನ್ನು ಸುತ್ತಿ ಕಸದ ಬುಟ್ಟಿಗೆ ಹಾಕಿ ಪರಾರಿಯಾಗಿದ್ದಾಳೆ. ಮಗು ಜನಿಸಿದ ನಾಲ್ಕೈದು ಗಂಟೆಯಲ್ಲೇ ಪ್ರಾಣಬಿಟ್ಟಿದೆ ಎನ್ನಲಾಗಿದೆ.

ಕಸದ ಬುಟ್ಟಿಯಲ್ಲಿ ಮಗುವಿನ ಮೃತದೇಹವನ್ನು ಕಂಡ ಪ್ರಯಾಣಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಯಶವಂತಪುರ ರೈಲ್ವೆ ಪೊಲೀಸರು  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಶವಾಗಾರಕ್ಕೆ ರವಾನಿಸಿ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.

ಯಾರು ಈ ಕೃತ್ಯ ಎಸಗಿದ್ದರೂ ತಕ್ಷಣಕ್ಕೆ ಗುರುತಿಸುವುದು ತುಂಬಾ ಕಷ್ಟ. ನಾವು ರೈಲು ಕಾರ್ಯಾಚರಣೆಯನ್ನು ತಡೆಹಿಡಿಯಲಾಗುವುದಿಲ್ಲ. ಇದರಿಂದ ಉಳಿದ ರೈಲುಗಳ ಕಾರ್ಯಾಚರಣೆಗೆ ಸಮಸ್ಯೆ ಎದುರಾಗಲಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News