ಪ್ರವಾಹ, ಬರಗಾಲಕ್ಕೆ ಕಾರಣ ತಿಳಿಯಲು ಸಂಶೋಧನೆ ಅಗತ್ಯ : ಸಿಎಂ ಸಿದ್ದರಾಮಯ್ಯ

Update: 2024-07-03 13:22 GMT

Screengrab : x/@CMofKarnataka

ಬೆಂಗಳೂರು : ಕಳೆದ 20 ವರ್ಷಗಳಲ್ಲಿ ಪ್ರವಾಹ ಹಾಗೂ ಬರಗಾಲವನ್ನು ನಾವು ಎದುರಿಸುತ್ತಿದ್ದು, ಇದರ ಕಾರಣಗಳ ಕುರಿತು ಸಂಶೋಧನೆಗಳು ಅಗತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬುಧವಾರ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ನಡೆದ ವಿಶ್ವ ಪರಿಸರ ದಿನಾಚರಣೆ-ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಪರಿಸರ ಸಂರಕ್ಷಣೆ ಕುರಿತು ಸಂಶೋಧನೆಗಳು ಸರಿಯಾದ ದಿಕ್ಕಿನಲ್ಲಿ ನಡೆಯಬೇಕು. ಹಾಗೂ ಸಂಶೋಧನಾ ಕೇಂದ್ರಗಳೂ ಹೆಚ್ಚಾಗಬೇಕು. ಯಾವ ಭಾಗದಲ್ಲಿ ಯಾವ ರೀತಿ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಬೇಕು ಎನ್ನುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಗಮನ ಹರಿಸಬೇಕು" ಎಂದು ಸೂಚಿಸಿದರು.

ನಿಸರ್ಗವನ್ನು ಪ್ರೀತಿಸುವ ಮನಸ್ಸು ಎಲ್ಲರೂ ಬೆಳೆಸಿಕೊಳ್ಳಬೇಕು.ನಿಸರ್ಗ ಕಾಪಾಡುವುದು ಕಷ್ಟವಲ್ಲ. ಅದನ್ನು ಪ್ರೀತಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಒಂದು ಮರ ಕಡಿದರೆ ಮತ್ತೊಂದು ನೆಡಬೇಕು. ಪ್ರತಿದಿನವೂ ಪರಿಸರ ದಿನವನ್ನಾಗಿ ಆಚರಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ತಾಜ್ಯಗಳ ಸೂಕ್ತ ವಿಲೇವಾರಿ, ಮಳೆ ನೀರು ಕೊಯ್ಲು ಮುಂತಾದ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ಇದರಿಂದ ನಮ್ಮ ಆರೋಗ್ಯವನ್ನೂ ಕಾಪಾಡಿಕೊಳ್ಳಲು ಅನುಕೂಲ. ಎಲ್ಲರೂ ಪರಿಸರ ಪ್ರೇಮಿಗಳಾಗಿ ನೈರ್ಮಲ್ಯ ಕಾಪಾಡಿಕೊಳ್ಳೋಣ ಎಂದು ಹೇಳಿದರು.

ಶುದ್ಧ ನೀರು ಒದಗಿಸುವುದು ಸರಕಾರದ ಕರ್ತವ್ಯ:

ಶುದ್ಧ ಕುಡಿಯುವ ನೀರು ಸರಬರಾಜು ಮಾಡುವುದು ಸರಕಾರದ ಕರ್ತವ್ಯವಾಗಿದೆ. ಆರೋಗ್ಯಕ್ಕೂ ನೈರ್ಮಲ್ಯಕ್ಕೂ ನೇರವಾದ ಸಂಬಂಧವಿದ್ದು, ಸ್ವಚ್ಛತೆ ಇದ್ದಾಗ ಮಾತ್ರ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯ. ಇತ್ತೀಚೆಗೆ ಕಲುಷಿತ ನೀರಿನಿಂದ ಹಲವು ಅನಾಹುತ ಆಗಿರುವುದನ್ನು ನಾವು ನೋಡಿದ್ದೇವೆ. ಅನೇಕರು ಸಾವಿಗೀಡಾಗಿದ್ದು, ಕಾಯಿಲೆಗಳಿಗೂ ಒಳಗಾಗಿದ್ದಾರೆ. ಶುದ್ಧ ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯವಾದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಜರುಗಿಸುವ ಎಚ್ಚರಿಕೆ ನೀಡಲಾಗಿದೆ. ಶುದ್ಧ ಕುಡಿಯುವ ನೀರಿನ ಸರಬರಾಜು ಮಾಡುವಲ್ಲಿ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

9ನೇ ತರಗತಿ ವಿದ್ಯಾರ್ಥಿಯಿಂದ ಸಿಎಂಗೆ ಮನವಿ

ಆರೋಗ್ಯ ಮತ್ತು ನೈರ್ಮಲ್ಯ ಒಂದಕ್ಕೊಂದು ಸಂಬಂಧ ಹೊಂದಿವೆ. ಎಲ್ಲಿ ನೈರ್ಮಲ್ಯ ಇರುವುದಿಲ್ಲವೋ ಅಲ್ಲಿ ಆರೋಗ್ಯ ಇರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಅಶುದ್ಧ ನೀರು ಕುಡಿದು ಸಾವುಗಳು ಸಂಭವಿಸುತ್ತಿವೆ. ಆದ್ದರಿಂದ ಸರಕಾರ ಕಲುಷಿತ ನೀರನ್ನು ವೈಜ್ಞಾನಿಕವಾಗಿ ಶುದ್ಧೀಕರಿಸಿ ಮರುಬಳಕೆ ಮಾಡಬೇಕು. ಹಾಗೂ ಘನ ತ್ಯಾಜ್ಯವನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಿ ಗೊಬ್ಬರವಾಗಿ ಪರಿವರ್ತಿಸಲು, ಆರೋಗ್ಯಕ್ಕಾಗಿ ಮೀಸಲಿಟ್ಟರುವ ಅನುದಾನದಲ್ಲಿ ಸ್ವಲ್ಪ ಪರಿಸರ ಮತ್ತು ನೈರ್ಮಲ್ಯಕ್ಕಾಗಿ ಬಳಸಬೇಕು ಎಂದು 9ನೇ ತರಗತಿ ವಿದ್ಯಾರ್ಥಿ ಲಿಖಿತ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ಡೆಂಗಿ ನಿಯಂತ್ರಣಕ್ಕೆ ಸರಕಾರದಿಂದ ಅಗತ್ಯ ಕ್ರಮ :

ಡೆಂಗಿ ಜ್ವರ ಸೊಳ್ಳೆಗಳಿಂದ ಬರುತ್ತಿದೆ. ಇತ್ತೀಚೆಗೆ ಡೆಂಗಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದರ ನಿಯಂತ್ರಣಕ್ಕೆ ಸರಕಾರ ಅಗತ್ಯ ಕ್ರಮ ವಹಿಸಿಸುತ್ತಿದೆ. ಈ ಕುರಿತು ನಗರಪಾಲಿಕೆ, ಆರೋಗ್ಯ ಇಲಾಖೆ, ಪೌರಾಡಳಿತ ಇಲಾಖೆಗಳು ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ. ಸಾರ್ವಜನಿಕರೂ ಕೂಡ ಸರಕಾರದೊಂದಿಗೆ ಕೈಜೋಡಿಸಿದಾಗ ಮಾತ್ರ ಡೆಂಗಿ ನಿರ್ಮೂಲನೆ ಸಾಧ್ಯ. ತ್ಯಾಜ್ಯವನ್ನು ಉಂಟುಮಾಡುವವರು ನಾವೇ ಆದ್ದರಿಂದ ನಾವೇ ತ್ಯಾಜ್ಯವನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಸಾರ್ವಜನಿಕರು ಮಳೆನೀರು ಕೋಯ್ಲು ಮಾಡಿ, ನೀರು ಸಂಗ್ರಹ ಮಾಡಬೇಕು. ಇದರಿಂದ ಹಲವು ಸಮಸ್ಯೆಗಳನ್ನು ಪರಿಹರಿಸಬಹುದು ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News