ಬೆಂಗಳೂರು | 30 ಲಕ್ಷ ರೂ. ಮೌಲ್ಯದ ನಿಷೇಧಿತ ಇ-ಸಿಗರೇಟ್ ಜಪ್ತಿ : ಮೂವರ ಬಂಧನ
Update: 2024-08-21 14:35 GMT
ಬೆಂಗಳೂರು: ನಿಷೇಧಿತ ಇ-ಸಿಗರೇಟ್‍ಗಳನ್ನು ಶೇಖರಿಸಿಟ್ಟುಕೊಂಡು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಕೈಸರ್ ಪಾಷಾ(29), ರಬಿಲ್ ಷರೀಫ್(20) ಹಾಗೂ ಮೊಹಮ್ಮದ್ ಅದ್ನಾನ್(20) ಎಂಬುವರು ಬಂಧಿತರು ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 30 ಲಕ್ಷ ರೂ. ಮೌಲ್ಯದ 1 ಸಾವಿರಕ್ಕೂ ಅಧಿಕ ಇ-ಸಿಗರೇಟ್‍ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿಗಳು ಇ-ಸಿಗರೇಟ್‍ಗಳನ್ನು ದಾಸ್ತಾನು ಮಾಡಿಟ್ಟುಕೊಂಡು ಮಾರಾಟ ಮಾಡುತ್ತಿದ್ದುದರ ಕುರಿತು ಖಚಿತ ಮಾಹಿತಿ ಪಡೆದು ದಾಳಿ ನಡೆಸಿರುವುದಾಗಿ ಸಿಸಿಬಿ ಪೊಲೀಸರು ವಿವರಿಸಿದ್ದಾರೆ. ಈ ಸಂಬಂಧ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.