ಬೆಂಗಳೂರು| ಉದ್ಯಮಿ ಮನೆಯಲ್ಲಿ ಚಿನ್ನಾಭರಣ ದೋಚಿದ್ದ ಪ್ರಕರಣ: 10ಕ್ಕೂ ಹೆಚ್ಚು ಆರೋಪಿಗಳು ಬಂಧನ
ಬೆಂಗಳೂರು: ಪೊಲೀಸರ ಸೋಗಿನಲ್ಲಿ ಉದ್ಯಮಿ ಮನೆಗೆ ನುಗ್ಗಿ ಚಿನ್ನಾಭರಣ, ನಗದು ದೋಚಿದ್ದ ಪ್ರಕರಣ ಸಂಬಂಧ 10ಕ್ಕೂ ಅಧಿಕ ಆರೋಪಿಗಳನ್ನು ಇಲ್ಲಿನ ಪೀಣ್ಯ ಠಾಣಾ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಡಿ.4ರಂದು ರಾತ್ರಿ ಎಚ್ಎಂಟಿ ಲೇಔಟ್ ನಲ್ಲಿರುವ ಎಸ್.ಎನ್.ಆರ್ ಪಾಲಿಫಿಲ್ಟ್ ಪ್ಯಾಕೇಜಿಂಗ್ ಕಂಪೆನಿಯ ಮಾಲಕ ಮನೋಹರ್ ಎಂಬುವರ ಮನೆಗೆ ನುಗ್ಗಿದ್ದ ದುಷ್ಕರ್ಮಿಗಳು, 700 ಗ್ರಾಂ ಚಿನ್ನ ಹಾಗೂ 60 ಲಕ್ಷ ರೂಪಾಯಿ ನಗದು ದೋಚಿ ಪರಾರಿಯಾಗಿದ್ದರು.
ರಾತ್ರಿ 7.30ರ ಸುಮಾರಿಗೆ ಮನೋಹರ್ ಮನೆಯಲ್ಲಿರಲಿಲ್ಲ. ಪತ್ನಿ ಸುಜಾತ ಹಾಗೂ ಮಗ ರೂಪೇಶ್ ಮಾತ್ರ ಇದ್ದರು. ಈ ವೇಳೆ ಪೊಲೀಸ್ ಸಿಬ್ಬಂದಿ ಸಮವಸ್ತ್ರ ಧರಿಸಿದ್ದ ಆರೋಪಿಗಳ ತಂಡ ಮನೆಗೆ ಬಂದಿತ್ತು. ಮನೋಹರ್ ಮತ್ತವರ ಸಹೋದರರ ನಡುವೆ ಕೌಟುಂಬಿಕ ಕಲಹ ನಡೆಯುತ್ತಿದ್ದುದರಿಂದ ಅದೇ ವಿಚಾರವಾಗಿ ಪೊಲೀಸರು ಬಂದಿರಬಹುದು ಎಂದು ಮನೆಮಂದಿ ಭಾವಿಸಿದ್ದರು. ಆದರೆ ಮನೆಯೊಳಗೆ ಬರುತ್ತಿದ್ದಂತೆ ಪೊಲೀಸರ ವೇಷದಲ್ಲಿದ್ದ ಆರೋಪಿಗಳು, ಏಕಾಏಕಿ ಡ್ಯಾಗರ್ ಹಾಗೂ ಮಚ್ಚುಗಳನ್ನು ತೋರಿಸಿ ಹೆದರಿಸಿದ್ದರು. ರೂಪೇಶ್ ಮೇಲೆ ಹಲ್ಲೆ ಮಾಡಿ, ಸುಜಾತಾ ಅವರ ಮಾಂಗಲ್ಯ ಸರ ಸಹಿತ ಚಿನ್ನಾಭರಣ ಹಾಗೂ ನಗದು ದೋಚಿದ್ದರು. ಮನೆಯಲ್ಲಿನ ಸಿಸಿಟಿವಿ ಡಿವಿಆರ್ ಸಮೇತ ಪರಾರಿಯಾಗಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಪೀಣ್ಯ ಠಾಣಾ ಪೊಲೀಸರು, ನಾಗರಾಜ್ ಎಂಬಾತ ಸೇರಿ 10ಕ್ಕೂ ಅಧಿಕ ಆರೋಪಿಗಳನ್ನು ಬಂಧಿಸಿದ್ದಾರೆ. ಒಂದು ವರ್ಷದ ಹಿಂದೆ ಕಂಪೆನಿಯಲ್ಲಿ ಎರಡು ತಿಂಗಳುಗಳ ಕಾಲ ಕೆಲಸ ಮಾಡಿದ್ದ ನಾಗರಾಜ್, ಇತ್ತೀಚೆಗೆ ಸಂಚು ರೂಪಿಸಿ ಇತರೆ ಆರೋಪಿಗಳೊಂದಿಗೆ ಸೇರಿ ದರೋಡೆ ಮಾಡಿರುವುದು ವಿಚಾರಣೆಯಲ್ಲಿ ಬಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.