ಬೆಂಗಳೂರು| ಪ್ರತಿಷ್ಠಿತ ಹೋಟೆಲ್ ನ ಊಟದಲ್ಲಿ ಜಿರಳೆ ಪತ್ತೆ ಆರೋಪ: ಪ್ರಕರಣ ದಾಖಲು

Update: 2024-01-05 13:04 GMT

ಬೆಂಗಳೂರು: ನಗರದ ಪ್ರತಿಷ್ಠಿತ ಹೋಟೆಲ್‍ವೊಂದರ ಊಟದಲ್ಲಿ ಜಿರಳೆ ಪತ್ತೆಯಾದ ಆರೋಪದಡಿ ಇಲ್ಲಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿರುವುದಾಗಿ ವರದಿಯಾಗಿದೆ.

ವಕೀಲೆಯೊಬ್ಬರು ನೀಡಿದ ದೂರಿನನ್ವಯ ನಗರದ ವಿಧಾನಸೌಧ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದಾರೆ.

ವಕೀಲೆಯೊಬ್ಬರು ಜ.4ರ ಗುರುವಾರ ಸಂಜೆ ನಗರದ ರಾಜಭವನ ರಸ್ತೆಯಲ್ಲಿರುವ ಪ್ರತಿಷ್ಠಿತ ಹೋಟೆಲ್‍ಗೆ ತೆರಳಿದ್ದಾರೆ. ಅವರು ಊಟಕ್ಕೆ ರೊಟ್ಟಿ ಹಾಗೂ ಪನ್ನೀರ್ ಗ್ರೇವಿ ಆರ್ಡರ್ ಮಾಡಿದ್ದರು. ಈ ವೇಳೆ, ಒಂದೆರಡು ತುತ್ತು ತಿಂದ ಬಳಿಕ ಪನ್ನೀರ್ ಗ್ರೇವಿಯಲ್ಲಿ ಸತ್ತ ಜಿರಳೆ ಪತ್ತೆಯಾಗಿದೆ ಎಂದು ವಕೀಲೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಜಿರಳೆ ಪತ್ತೆಯಾದ ಕೂಡಲೇ ಹೊಟೆಲ್ ಸಿಬ್ಬಂದಿಯನ್ನು ವಕೀಲೆ ಪ್ರಶ್ನಿಸಿದ್ದಾರೆ. ಈ ವೇಳೆ ಹೋಟೆಲ್ ಸಿಬ್ಬಂದಿ ‘ಬೇರೆ ಊಟ ನೀಡುವುದಾಗಿ' ಮನವರಿಕೆ ಮಾಡಿಕೊಂಡಿದ್ದಾರೆ. ಆಗ ದೂರುದಾರೆ ಸ್ವತಃ ತಾವೇ ಅಡುಗೆ ಕೋಣೆಗೆ ತೆರಳಿ ವಿಡಿಯೋ ಚಿತ್ರೀಕರಿಸಿದ್ದಾರೆ. ಬಳಿಕ ವಕೀಲೆ ಈ ಘಟನೆಗೆ ಸಂಬಂಧಿಸಿದಂತೆ ವಿಧಾನಸೌಧ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪರಿಶೀಲನೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.

ಪ್ರಕರಣದ ಸಂಬಂಧ ಪ್ರತಿಕ್ರಿಯಿಸಿರುವ ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಎಚ್.ಟಿ., ವಿಧಾನಸೌಧ ಠಾಣಾ ವ್ಯಾಪ್ತಿಯ ತಿಮ್ಮಯ್ಯ ಸರ್ಕಲ್ ಬಳಿಯಿರುವ ಹೋಟೆಲ್ ವಿರುದ್ದ ಆರೋಪ ಕೇಳಿ ಬಂದಿದೆ. ಊಟ ಮಾಡುವಾಗ ಜಿರಳೆ ಕಂಡು ಬಂದಿದ್ದರಿಂದ ವಕೀಲೆಯೊಬ್ಬರು ಕೂಡಲೇ ಪೊಲೀಸರು, ಫುಡ್ ಇನ್ಸ್‍ಪೆಕ್ಟರ್ ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಇದಾದ ಬಳಿಕ ಊಟದ ತಯಾರಿ ಬಗ್ಗೆ ಅಡುಗೆ ಕೋಣೆಗೆ ಹೋಗಿ ಮೊಬೈಲ್ ಚಿತ್ರೀಕರಣ ಮಾಡಲು ಮುಂದಾದಾಗ ಹೋಟೆಲ್ ಸಿಬ್ಬಂದಿ ಅವರನ್ನು ತಳ್ಳಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಹೋಟೆಲ್‍ನ ಇಬ್ಬರು ಸಿಬ್ಬಂದಿ ವಿರುದ್ಧ ಎಫ್‍ಐಆರ್ ದಾಖಲಿಸಿದ್ದೇವೆ. ಅಲ್ಲದೆ, ಫುಡ್ ಇನ್ಸ್‍ಪೆಕ್ಟರ್ ಗೆ ಮಾಹಿತಿ ನೀಡಿದ್ದು, ತನಿಖೆ ಮುಂದುವರೆಸಿದ್ದೇವೆ ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News