ಬೆಂಗಳೂರು| ಕಾಲೇಜಿನ ಆಡಳಿತ ಮಂಡಳಿ ಕಿರುಕುಳ ಆರೋಪ: ಮಾತ್ರೆ ಸೇವಿಸಿ ವಿದ್ಯಾರ್ಥಿ ಆತ್ಮಹತ್ಯೆ

Update: 2023-12-29 15:17 GMT

ಬೆಂಗಳೂರು: ಕಾಲೇಜು ವಿದ್ಯಾರ್ಥಿಯೊಬ್ಬ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ವರದಿಯಾಗಿದೆ.

ನಿಖಿಲ್ ಸುರೇಶ್ ಎಂಬುವನನ್ನು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಎಎಂಸಿ ಕಾಲೇಜಿನಲ್ಲಿ ಪ್ರಥಮ ವರ್ಷದ ಹೋಟೆಲ್ ಮ್ಯಾನೇಜ್ ಮೆಂಟ್ ವಿಭಾಗದಲ್ಲಿ ಓದುತ್ತಿದ್ದ ನಿಖಿಲ್‍ಗೆ ಒಂದು ತಿಂಗಳಿಂದ ಕಾಲೇಜು ಡೀನ್ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ಇವೆಲ್ಲದರಿಂದ ಬೇಸತ್ತಿದ್ದ ನನ್ನ ಮಗ ಮನೆಯಲ್ಲಿದ್ದ ಮಾತ್ರೆಗಳನ್ನು ಸೇವಿಸಿದ್ದ. ಕೂಡಲೇ ನಾಗರಬಾವಿಯ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದೆವು ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ಪೋಷಕರು ಕಾಲೇಜು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾಲೇಜು ಆಡಳಿತ ಮಂಡಳಿ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

ಮಗನನ್ನು ಕಳೆದುಕೊಂಡು ಆಕ್ರೋಶ ವ್ಯಕ್ತಪಡಿಸಿದ ಮೃತನ ತಾಯಿ ‘ಈ ರೀತಿ ಯಾರಿಗೂ ಆಗಬಾರದು, ತನ್ನ ಮಗನನ್ನು ಕಾಲೇಜಿನವರೇ ಕೊಂದರು. ಈ ಹಿಂದೆ ಬೇರೆ ರಾಜ್ಯದ ಒಂದು ಹುಡುಗಿಯನ್ನು ಇವನ ಜೊತೆಗೆ ಹಾಕಿದ್ದರು. ಅವಳಿಗೂ ನಮ್ಮ ಹುಡುಗನಿಗೂ ವ್ಯತ್ಯಾಸ ಆಗಿದೆ. ಈ ವಿಚಾರಕ್ಕೆ ನನ್ನ ಮಗನನ್ನು ಅಮಾನತು ಮಾಡಿದ್ದರು. ಹದಿನೈದು ದಿನ ಬಿಟ್ಟು ಕರೆದುಕೊಂಡು ಬನ್ನಿ ಎಂದಿದ್ದರು. ಮತ್ತೆ ಹೋದಾಗ ಅವಮಾನ ಮಾಡಿ, ನನ್ನ ಮುಂದೆಯೇ ಮಗನಿಗೆ ಹೊಡೆದರು. ಅದಕ್ಕೆ ತನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

ಅಶಿಸ್ತಿನ ವರ್ತನೆ ಮೇರೆಗೆ ಅಮಾನತು: ಮೃತ ನಿಖಿಲ್ ಸುರೇಶ್ ವರ್ತನೆಯಿಂದಲೇ ಆತನನ್ನು ಕಾಲೇಜಿನಿಂದ ಅಮಾನತು ಮಾಡಲಾಯಿತು ಎಂಬುದಾಗಿ ಎಎಂಸಿ ಕಾಲೇಜಿನ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ. ವಿದ್ಯಾರ್ಥಿಯ ವರ್ತನೆ, ಅಶಿಸ್ತು ಮತ್ತು ಕಾಲೇಜಿಗೆ ಗೈರುಹಾಜರಾದ ಕಾರಣ ಅವರನ್ನು ಸುಮಾರು ಒಂದು ತಿಂಗಳ ಹಿಂದೆ ಅಮಾನತುಗೊಳಿಸಲಾಗಿದೆ. ಇದರಿಂದ ಅಸಮಾಧಾನಗೊಂಡ ಆತ ಗುರುವಾರ ಕೆಲವು ಮಾತ್ರೆಗಳನ್ನು ಸೇವಿಸಿದ್ದಾರೆ, ಅದು ಅವರ ಸಾವಿಗೆ ಕಾರಣವಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಸ್ಪಷ್ಟಣೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News