ಬೆಂಗಳೂರು | ಸುಲಿಗೆ, ದರೋಡೆ ಸಹಿತ 42 ಪ್ರಕರಣಗಳಲ್ಲಿ ಬೇಕಾಗಿದ್ದ ರೌಡಿಶೀಟರ್ ಬಂಧನ
ಬೆಂಗಳೂರು : ಸುಲಿಗೆ, ಕಳ್ಳತನ, ದರೋಡೆ ಸೇರಿದಂತೆ 42 ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ರೌಡಿಶೀಟರ್ ನನ್ನು ಸಿಸಿಬಿ ಪೊಲೀಸರು ಬಂಧಿಸಿರುವುದು ವರದಿಯಾಗಿದೆ.
ಬಾಣಸವಾಡಿ ಠಾಣೆಯ ರೌಡಿಶೀಟರ್ ಅಜೀಜ್ ಆಸೀಫ್ ಎಂಬಾತ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
2015ರಿಂದ ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 36, ತುಮಕೂರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 07 ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಆರೋಪಿ ವಿರುದ್ಧ 2 ಪ್ರಕರಣಗಳು ಸೇರಿದಂತೆ ಗೋವಾ ರಾಜ್ಯದಲ್ಲಿಯೂ ಸಹ ಆರೋಪಿ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು ಎಂದು ಹೇಳಲಾಗಿದೆ.
ಭಾರತಿನಗರ ಹಾಗೂ ಯಲಹಂಕ ಪೊಲೀಸ್ ಠಾಣೆಯಲ್ಲಿ ತಲಾ 1 ಕಳವು ಪ್ರಕರಣ ಮತ್ತು ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ 2 ರಾಬರಿ ಪ್ರಕರಣ, ತುಮಕೂರು ಜಿಲ್ಲೆಯ ತಿಲಕ್‍ನಗರ ಪೊಲೀಸ್ ಠಾಣೆಯಲ್ಲಿ 1 ದ್ವಿ-ಚಕ್ರ ವಾಹನ ಕಳವು ಪ್ರಕರಣ ಮತ್ತು ತುಮಕೂರು ಟೌನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ 2 ದರೋಡೆ ಪ್ರಕರಣಗಳು ಪ್ರಸ್ತುತ ತನಿಖಾ ಹಂತದಲ್ಲಿದ್ದವು ಎನ್ನಲಾಗಿದೆ.
ಆದರೂ ಸಹ ನ್ಯಾಯಾಲಯಕ್ಕೆ ಹಾಜರಾಗದ ಆರೋಪಿ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಯಾಗಿತ್ತು. ಆರೋಪಿಯ ಕುರಿತು ಮಾಹಿತಿ ಸಂಗ್ರಹಿಸಿದ್ದ ಸಿಸಿಬಿ ಪೊಲೀಸರು ಭಾರತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಆರ್ಮ್ ಸ್ಟ್ರಾಂಗ್ ರಸ್ತೆಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತನ ಬಳಿ 12 ಮೊಬೈಲ್ ಫೋನ್‍ಗಳು, 4 ಚಿನ್ನದ ಕಾಸಿನ ತಾಳಿಗಳು, 1 ಮಾಂಗಲ್ಯ 2 ಚಿನ್ನದ ಗುಂಡುಗಳು, ಕೊಳವೆ ಆಕಾರದ ಗುಂಡುಗಳಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿತನ ವಿರುದ್ಧ ಬಾಕಿ ಇರುವ ಜಾಮೀನು ರಹಿತ ವಾರಂಟ್ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳಲು ಪೊಲೀಸರು ಸಿದ್ಧತೆ ನಡೆಸಿರುವುದಾಗಿ ಮಾಹಿತಿ ನೀಡಿದ್ದಾರೆ.