ಬೆಂಗಳೂರು | ಪೊಲೀಸ್ ಇನ್‍ಸ್ಪೆಕ್ಟರ್ ಎಂದು ನಂಬಿಸಿ ವಂಚನೆ : ಬೆಸ್ಕಾಂ ಸಹಾಯಕ ಇಂಜಿನಿಯರ್ ಬಂಧನ
ಬೆಂಗಳೂರು : ಪೊಲೀಸ್ ಇನ್‍ಸ್ಪೆಕ್ಟರ್ ಎಂದು ನಂಬಿಸಿ ವಂಚನೆ ಮಾಡುತ್ತಿದ್ದ ಪ್ರಕರಣದಡಿ ಬೆಸ್ಕಾಂನ ಸಹಾಯಕ ಇಂಜಿನಿಯರ್ ಒಬ್ಬರನ್ನು ಇಲ್ಲಿನ ಪೀಣ್ಯ ಠಾಣೆಯ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಮಲ್ಲೇಶ್ವರಂ ಬೆಸ್ಕಾಂ ಸಹಾಯಕ ಇಂಜಿನಿಯರ್ ಗಂಗಾಧರ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಕೆಐಎಡಿಬಿಯಿಂದ ರೈತರಿಗೆ ಹಣ ಕೊಡಿಸುವುದಾಗಿ ನಂಬಿಸಿದ್ದ ಆರೋಪಿ, ಇದಕ್ಕೆ ಪ್ರತಿಯಾಗಿ ಕಮಿಷನ್ ಎಂದು ಲಕ್ಷಾಂತರ ರೂಪಾಯಿ ಹಣ ಪಡೆಯುತ್ತಿದ್ದ. ಅದರ ಜೊತೆಗೆ ತನ್ನ ಕಾರಿಗೆ ಪೊಲೀಸ್ ಜಾಗೃತದಳದ ಸ್ಟಿಕರ್ ಅಂಟಿಸಿಕೊಂಡಿದ್ದ ಆರೋಪಿಯು, ಹೆದ್ದಾರಿಯಲ್ಲಿ ಟೋಲ್ ಫ್ರೀ ಹಾಗೂ ಪ್ರವಾಸಿ ಸ್ಥಳಗಳಲ್ಲಿ ವಿಐಪಿ ಆದ್ಯತೆ ಪಡೆದುಕೊಳ್ಳುತ್ತಿದ್ದ ಎನ್ನಲಾಗಿದೆ.
ಬೆಸ್ಕಾಂ ಇಲಾಖೆ ನೀಡಿದ್ದ ವಾಕಿಟಾಕಿಯನ್ನು ಬಳಸಿಕೊಳ್ಳುತ್ತಿದ್ದ ಆರೋಪಿ ಗಂಗಾಧರ್, ತಾನು ಪೊಲೀಸ್ ಇನ್‍ಸ್ಪೆಕ್ಟರ್ ಎಂಬ ಐಡಿ ಕಾರ್ಡ್ ಸಹ ಇಟ್ಟುಕೊಂಡಿದ್ದನು. ವಂಚನೆಗೊಳಗಾದ ವ್ಯಕ್ತಿಯೊಬ್ಬರು ನೀಡಿದ್ದ ದೂರಿನನ್ವಯ ಆರೋಪಿಯ ವಿರುದ್ಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಆತನನ್ನ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.