ಬೆಂಗಳೂರು | ರೇವ್ ಪಾರ್ಟಿ ಮೇಲೆ ಸಿಸಿಬಿ ದಾಳಿ : ಐವರ ಬಂಧನ, 78 ಮಂದಿ ವಶಕ್ಕೆ

Update: 2024-05-20 13:45 GMT

ಬೆಂಗಳೂರು: ನಗರದ ಹೊರವಲಯದ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಜಿ.ಆರ್.ಫಾರ್ಮ್ ಹೌಸ್‍ನಲ್ಲಿ ಅವಧಿ ಮೀರಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರ ತಂಡ ದಾಳಿ ನಡೆಸಿ ಐವರನ್ನು ಬಂಧಿಸಿದ್ದು, ತೆಲುಗಿನ ಕಿರುತೆರೆ ನಟ, ನಟಿಯರು ಸೇರಿ 78 ಜನರನ್ನು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.

ಮೇ 20ರ ರವಿವಾರ ಸಂಜೆಯಿಂದ ನಡೆಯುತ್ತಿದ್ದ ಪಾರ್ಟಿಯ ಕುರಿತು ಮಾಹಿತಿ ತಿಳಿದ ಸಿಸಿಬಿ ಪೊಲೀಸರು, ನಸುಕಿನಜಾವ 3 ಗಂಟೆ ಸುಮಾರಿಗೆ ದಾಳಿ ನಡೆಸಿದ್ದು, ದಾಳಿ ವೇಳೆ ಪಾರ್ಟಿಯಲ್ಲಿ ಮಾದಕ ಪದಾರ್ಥ ಪತ್ತೆಯಾಗಿದ್ದು, ತೆಲುಗು ನಟ ನಟಿಯರು ಸಹ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ.

ಉದ್ಯಮಿಯೊಬ್ಬರ ಒಡೆತನದ ಜಿ.ಆರ್.ಫಾರ್ಮ್ ಹೌಸ್‍ನಲ್ಲಿ ಹೈದರಾಬಾದ್ ಮೂಲದ ವಾಸು ಎಂಬಾತ ತನ್ನ ಹುಟ್ಟುಹಬ್ಬದ ಪಾರ್ಟಿ ಆಯೋಜಿಸಿದ್ದ. ಅವಧಿ ಮುಗಿದ ಬಳಿಕವೂ ಪಾರ್ಟಿ ಮುಂದುವರೆಯುತ್ತಿದ್ದ ಹಿನ್ನೆಲೆಯಲ್ಲಿ ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಸುಮಾರು 17 ಗ್ರಾಂನಷ್ಟು ಎಂಡಿಎಂಎ ಮಾತ್ರೆ, ಕೊಕೇನ್ ಪತ್ತೆಯಾಗಿದೆ. ಪಾರ್ಟಿಯಲ್ಲಿ ಆಂಧ್ರ, ಬೆಂಗಳೂರು ಮೂಲದ 100ಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು ಎಂಬುದು ಪೊಲೀಸರ ಮೂಲಗಳಿಂದ ತಿಳಿದುಬಂದಿದೆ.

ಮತ್ತೊಂದೆಡೆ ಪಾರ್ಟಿಗೆ ಬಂದಿದ್ದವರೊಬ್ಬರ ಕಾರಿನಲ್ಲಿ ಆಂಧ್ರದ ಶಾಸಕರೊಬ್ಬರ ಪಾಸ್ ಅಂಟಿಸಿರುವುದು ಪತ್ತೆಯಾಗಿದೆ. ಪಾರ್ಟಿಯಲ್ಲಿದ್ದವರ ಮರ್ಸಿಡಿಸ್-ಬೆನ್ಝ್, ಜಾಗ್ವಾರ್, ಆಡಿ ಕಾರ್ ಸೇರಿದಂತೆ 15ಕ್ಕೂ ಹೆಚ್ಚು ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಲಾಗಿದೆ.

ಪಾರ್ಟಿಯಲ್ಲಿ ಭಾಗಿಯಾಗಿದ್ದವರ ಪೈಕಿ ತೆಲುಗು ಚಿತ್ರರಂಗದ ನಟಿಯೊಬ್ಬರ ಸಹಿತ, ಕಿರುತೆರೆ ನಟ-ನಟಿಯರು, ಮಾಡೆಲ್‍ಗಳು ಹಾಗೂ ಟೆಕ್ಕಿಗಳನ್ನು ವಶಕ್ಕೆ ಪಡೆಯಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಪ್ರಕರಣ ಸಂಬಂಧ ಹೆಚ್ಚುವರಿ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಅವರು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ್ದು, ಜಿ.ಆರ್.ಫಾರ್ಮ್ ಹೌಸ್ ಹೆಸರಿನ ಸ್ಥಳ, ಅದರ ಮಾಲಕರ ಮಾಹಿತಿಯನ್ನು ಕಲೆ ಹಾಕಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಸದ್ಯ ಫಾರ್ಮ್ ಹೌಸ್‍ನಲ್ಲಿ ರೇವ್ ಪಾರ್ಟಿ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ. ಉಳಿದಂತೆ ಪಾರ್ಟಿಯಲ್ಲಿ ಭಾಗಿಯಾಗಿದ್ದವರನ್ನು ವಶಕ್ಕೆ ಪಡೆಯಲಾಗಿದ್ದು, ವೈದ್ಯಕೀಯ ತಪಾಸಣೆಗೊಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News