ಬೆಂಗಳೂರು| ವಂಚನೆ ಆರೋಪ ಪ್ರಕರಣ: ಸಿನಿಮಾ ನಿರ್ಮಾಪಕರ ಪುತ್ರನಿಗೆ ಪೊಲೀಸರಿಂದ ನೋಟಿಸ್

Update: 2023-12-24 14:00 GMT

ಬೆಂಗಳೂರು: ವೃದ್ಧೆಯೋರ್ವರಿಗೆ ಸಂಬಂಧಿಸಿದ ಆಸ್ತಿಗಳ ನಕಲಿ ದಾಖಲಾತಿ ಸೃಷ್ಟಿಸಿ ಬ್ಯಾಂಕ್ ಖಾತೆ ತೆರೆದು ವಂಚಿಸಿರುವ ಆರೋಪ ಪ್ರಕರಣ ಸಂಬಂಧ ಚಲನಚಿತ್ರ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಪುತ್ರ ಅಭಿಲಾಷ್ ಒಡೆತನದ ಕಂಪೆನಿಯೊಂದಕ್ಕೆ ಹಣ ವರ್ಗಾವಣೆಯಾಗಿರುವುದು ಸಿಸಿಬಿ ತನಿಖೆಯಲ್ಲಿ ತಿಳಿದು ಬಂದಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಂಬುಜಾಕ್ಷಿ (75) ಎಂಬ ವೃದ್ಧೆಯ ಜಮೀನಿನ ದಾಖಲೆಗಳನ್ನು ನಕಲುಗೊಳಿಸಿ 3 ಬ್ಯಾಂಕ್‍ಗಳಿಂದ ಸುಮಾರು 3.85 ಕೋಟಿ ರೂ.ಗೂ ಅಧಿಕ ಸಾಲ ಪಡೆದು ವಂಚಿಸಿದ್ದ ಆರೋಪದಡಿ ಭಾಸ್ಕರ್, ಮಹೇಶ, ಅಭಿಷೇಕ್ ಗೌಡ, ಡಿ.ಆರ್ ಅರುಣ್, ಟಿ.ಪಿ ಶಿವಕುಮಾರ್ ಎಂಬುವರನ್ನು ಸಿಸಿಬಿಯ ಆರ್ಥಿಕ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದರು. ಜೆ.ಪಿ ನಗರದ ನಿವಾಸಿಯಾಗಿರುವ ಅಂಬುಜಾಕ್ಷಿ ಅವರು ಬಿಡಿಎ ನಿವೇಶನದಲ್ಲಿ ಎರಡು ಅಂತಸ್ತಿನ ಸ್ವಂತ ಡೂಪ್ಲೆಕ್ಸ್ ಮನೆ ಹೊಂದಿದ್ದಾರೆ. ಅಂಬುಜಾಕ್ಷಿಯವರ ಮಕ್ಕಳು ವಿದೇಶದಲ್ಲಿದ್ದು, ಇವರೂ ಸಹ ವಿದೇಶಕ್ಕೆ ಹೋಗಿ ನೆಲೆಸಲು ಚಿಂತಿಸಿದ್ದರು.

ಈ ಸಂಬಂಧ ತಮ್ಮ ಮನೆ ಮಾರಾಟ ಮಾಡುವ ವಿಚಾರವನ್ನು ರಿಯಲ್ ಎಸ್ಟೇಟ್ ಬ್ರೋಕರ್ ಗಳಾಗಿದ್ದ ಆರೋಪಿಗಳಿಗೆ ತಿಳಿಸಿದ್ದರು. ಇದೇ ನೆಪದಲ್ಲಿ ಅಂಬುಜಾಕ್ಷಿಯವರ ನಿವೇಶನದ ದಾಖಲೆಗಳನ್ನು ಪಡೆದುಕೊಂಡಿದ್ದ ಆರೋಪಿಗಳು, ಅಸಲಿ ದಾಖಲೆಗಳ ರೀತಿಯಲ್ಲೇ ನಿವೇಶನಗಳ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅವರ ಸಹಿ ಫೋರ್ಜರಿ ಮಾಡಿ, 3 ಬ್ಯಾಂಕ್‍ಗಳಿಗೆ ನೀಡಿ, 3.85 ಕೋಟಿ ರೂ. ಸಾಲ ಪಡೆದುಕೊಂಡಿದ್ದರು. ಸಾಲದ ವಿಚಾರವಾಗಿ ಬ್ಯಾಂಕ್ ಸಿಬ್ಬಂದಿ ಅಂಬುಜಾಕ್ಷಿಯವರನ್ನು ಸಂಪರ್ಕಿಸಿದಾಗ ಆರೋಪಿಗಳ ಕೃತ್ಯ ಬೆಳಕಿಗೆ ಬಂದಿತ್ತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News