ಬೆಂಗಳೂರು | ನಿರ್ಬಂಧಿತ ಪ್ರದೇಶದಲ್ಲಿ ಡ್ರೋಣ್ ಬಳಕೆ: ವಿಡಿಯೋಗ್ರಾಫರ್ ಬಂಧನ
ಬೆಂಗಳೂರು: ನಿರ್ಬಂಧಿತ ಪ್ರದೇಶದಲ್ಲಿ ಡ್ರೋಣ್ ಹಾರಿಸಿದ್ದ ವಿಡಿಯೋಗ್ರಾಫರ್ ಒಬ್ಬರನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಬಳ್ಳಾರಿ ರಸ್ತೆಯಲ್ಲಿರುವ ಭಾರತೀಯ ವಾಯುಪಡೆ (ಐಎಎಫ್) ಮಾಸ್ಟರ್ ವಾರೆಂಟ್ ಆಫೀಸರ್ ಮೊಹಾಪಾತ್ರ ಎಂಬುವರು ನೀಡಿದ ದೂರಿನ ಮೇರೆಗೆ ಆಡುಗೋಡಿ ನಿವಾಸಿ ಚಂದನ್ ಕುಮಾರ್ ಎಂಬಾತನನ್ನು ಬಂಧಿಸಲಾಗಿದೆ.
ವೃತ್ತಿಯಲ್ಲಿ ವಿಡಿಯೋಗ್ರಾಫರ್ ಆಗಿರುವ ಚಂದನ್ ಕುಮಾರ್, ಜ.27ರಂದು ಸಂಜಯನಗರ ಬಳಿ ಮದುವೆ ವಿಡಿಯೋಗ್ರಾಫ್ ನಡೆಸಿದ್ದರು. ವೈಮಾನಿಕವಾಗಿ ವಿಡಿಯೊ ತೆಗೆಯುವ ಉದ್ದೇಶದಿಂದ ಡ್ರೋಣ್ ಹಾರಿಸಿದ್ದರು. ಮೇಖ್ರಿ ವೃತ್ತದಲ್ಲಿರುವ ಐಎಎಫ್ ಭದ್ರತಾ ಕಚೇರಿಯಲ್ಲಿ ಡ್ರೋಣ್ ಹಾರಾಟ ಮಾಡುತ್ತಿರುವ ಸಿಗ್ನಲ್ ಕಂಡು ಬಂದಿದ್ದರಿಂದ ಕೂಡಲೇ ಪೊಲೀಸ್ ಕಂಟ್ರೋಲ್ ರೂಮ್‍ಗೆ ಕರೆ ಮಾಡಿ ಈ ಬಗ್ಗೆಮಾಹಿತಿ ನೀಡಲಾಗಿತ್ತು.
ಈ ಮಾಹಿತಿ ಆಧರಿಸಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಸಿಗ್ನಲ್ ದೊರೆತ ಜಾಗದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಡ್ರೋಣ್ ಹಾರಾಟ ನಡೆಸಿದ್ದ ಸಿಗ್ನಲ್ ಬಳಿ ತೆರಳಿದಾಗ ಮದುವೆ ಕಾರ್ಯಕ್ರಮದ ವಿಡಿಯೊಗಾಗಿ ಡ್ರೋಣ್ ಹಾರಿಸಿರುವುದು ಗೊತ್ತಾಗಿದೆ.
ಆನಂತರ, ಕೂಡಲೇ ಆತನನ್ನು ಬಂಧಿಸಿ ಆತನ ಡ್ರೋಣ್ ಹಾಗೂ ವಿಡಿಯೋ ಕ್ಯಾಮರಾ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ಮಾಹಿತಿ ನೀಡಿದ್ದಾರೆ.